ಮಣ್ಣಿನ ಮಕ್ಕಳಿಗೆ ಮಹಾವರ್ತಕನಿಂದ ಟೋಪಿ?: ಕಂಗಾಲಾದ ಅನ್ನದಾತ..!

*  ಸಗಟು ವರ್ತಕ ಅಂಬಾದಾಸ ಏಕಾಏಕಿ ನಾಪತ್ತೆ
*  ತಮಗಾದ ಮೋಸದ ಬಗ್ಗೆ ವಿವರಿಸಿ ನರೋಣಾ ಠಾಣೆ ಸುತ್ತಿದರೂ ಕೇಸ್‌ ದಾಖಲಿಸದ ಪೊಲೀಸರು
*  ನೊಂದ ರೈತರು ಎಸ್ಪಿ ಕಚೇರಿಗೆ ದೌಡು
 

Wholesaler Cheat to Farmers in Kalaburagi grg

ಶೇಷಮೂರ್ತಿ ಅವಧಾನಿ

ಕಲಬುರಗಿ(ಜೂ.10):  ಜಿಲ್ಲೆಯ ಆಳಂದ ತಾಲೂಕಿನ ಮುನ್ನಳ್ಳಿ ಮಣ್ಣಿನ ಮಕ್ಕಳು ತಮಗೊದಗಿ ಬಂದಿರುವ ದುರವಸ್ಥೆಗೆ ಅಳುತ್ತಿದ್ದಾರೆ! ತಾವು ಬೆವರು ಸುರಿಸಿ ಬೆಳೆದ ನೂರಾರು ಚೀಲ ತೊಗರಿ, ಕಡಲೆ, ಸೋಯಾಬೀನ್‌ ಎಲ್ಲವನ್ನು ತಮ್ಮ ಮನೆ ಬಾಗಿಲಿಗೇ ಬಂದು ಖರೀದಿಸುತ್ತಿದ್ದ ಅಕ್ಕಲಕೋಟೆ ಮೂಲದ ಸಗಟು ವರ್ತಕ ಅಂಬಾದಾಸನಿಗೆ ಮಾರಿದ್ದಾರೆ. ಈ ವಹಿವಾಟಿಗೆ ಪ್ರತಿಯಾಗಿ ಲಕ್ಷಾಂತರ ರುಪಾಯಿ ಹಣ ಕೈ ಸೇರಬೇಕಿದ್ದ ಗಳಿಗೆಯಲ್ಲೇ ಅಂಬಾದಾಸ ಕಳೆದ ಮೇ ತಿಂಗಳ 16 ರಿಂದ ಈ ರೈತ ಸಮೂಹದ ಸಂಪರ್ಕದಲ್ಲಿಲ್ಲ, ಅಂಬಾದಾಸನ ನಿಗೂಢ ಕಣ್ಮರೆ ಮುನ್ನಳ್ಳಿ ರೈತರ ಕಣ್ಣೀರಿಗೆ ಕಾರಣವಾಗಿದೆ.

ತಮ್ಮಿಂದ ದವಸ ದಾನ್ಯ ಖರೀದಿಸಿರೋ ಅಂಬಾದಾಸನಿಗೆ ಏನಾಗಿದೆ, ಅದೆಲ್ಲಿದ್ದಾನೆಂದು ಚಿಂತೆಯಲ್ಲಿರುವ ರೈತರು ತಾವು ಮೋಸ ಹೋಗಿದ್ದೇವೆಂದು ಹೇಳಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಎಸ್ಪಿ ಇಶಾ ಪಂತ್‌ ಅವರಲ್ಲಿ ಕೋರಲು ಕಲಬುರಗಿಗೆ ಆಗಮಿಸಿದ್ದಾರೆ.

ಕಲಬುರಗಿ: ಫೋನ್ ಪೇ ಮೂಲಕ ಲಂಚ ಸ್ವೀಕಾರ, ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ

ವರ್ತಕ ಅಂಬಾದಾಸನದ್ದು ನಾಟಕವೆ:

ಕಳೆದ 12 ವರ್ಷದಿಂದ ಮುನ್ನಳ್ಳಿ ರೈತರೊಂದಿಗೆ ಧಾನ್ಯದ ವಹಿವಾಟು ಮಾಡುತ್ತ ಎಲ್ಲಾ ರೈತರ ವಿಶ್ವಾಸ ಗಳಿಸಿದ್ದ ಅಂಬಾದಾಸನ ನಿಗೂಢ ಕಣ್ಮರೆಯೇ ಈ ರೈತರಿಗೆ ಚಿಂತೆಯಾಗಿದೆ. ವರ್ತಕ ಅಂಬಾದಾಸ ಈ ರೈತರೊಂದಿಗೆ ಮೇ 16 ರಂದು ಆತ ಮಾತನಾಡಿದ್ದೆ ಕೊನೆ, ಮೇ 17 ರಂದು ಆತ ಆತ್ಮಹತ್ಯೆ ಮಾಡಿಕೊಂಡದ್ದಾನೆಂಬ ಸುದ್ದಿ ಕೇಳಿ ಇವರೂ ಹೌಹಾರಿ ಅಕ್ಕಲಕೋಟೆಗೆ ಹೋಗಿದ್ದಾರೆ. ಆ ಊರಿನ ಹೊರ ವಲಯದಲ್ಲಿರುವ ಭಾರಿ ಗಾತ್ರದ ಬಾವಿಯೊಳಗೆ ಅಂಬಾದಾಸ ಧುಮುಕಿದ್ದಾಗಿ ಹೇಳಲಾಗಿತ್ತು, ಬಾವಿ ನೀರನ್ನೆಲ್ಲ ಖಾಲಿ ಮಾಡಿ ಪೊಲೀಸರು ಹುಡುಕಿದ್ದರೂ ಆತನ ಶವ ಸಿಕ್ಕಿಲ್ಲ, ಬಾವಿಮೇಲೆ ಬೈಕ್‌, ಮೋಬೈಲ್‌, ಬಟ್ಟೆ- ಬರೆ ಇತ್ತಾದರೂ ಆತನ ಶವವಾಗಲಿ, ಯಾವುದೇ ಇತರೆ ಕುರುಹುಗಳಾಗಲಿ ಬಾವಿಯಲ್ಲಿ ಸಿಕ್ಕಿಲ್ಲ, ಅಕ್ಕಲಕೋಟೆ ಪೊಲೀಸರು ಇದನ್ನೇ ರೈತರಿಗೆ ಹೇಳಿದ್ದಾರೆ. ಆತ ಸಾವನ್ನಪ್ಪಿಲ್ಲ, ಅದೆಲ್ಲಿ ರೈತರ ಹಣ ಕೊಡೋದು ಬರುತ್ತದೋ ಎಂದು ಆತ ನಾಟಕ ಮಾಡಿ ಪರಾರಿಯಾಗಿದ್ದಾನೆಂದು ಗೋಳಾಡುತ್ತಿರುವ ರೈತರು ತಮಗಾಗಿರುವ ಮೋಸ ವಿವರಿಸುತ್ತ ಪೊಲೀಸರ ನೆರವು ಕೋರಿದ್ದಾರೆ.

ನರೋಣಾ ಠಾಣೆಯಲ್ಲಿ ಎಫ್‌ಐಆರ್‌ ದಾಖಲೆಗೂ ನಕಾರ

ಅಂಬಾದಾಸನ ವಂಚನೆ ಪ್ರಕರಣ ವಿವರಿಸಿ ಅಕ್ಕಲಕೋಟೆ ಪೊಲೀಸರ ಬಳಿ ಗೋಳು ತೋಡಿಕೊಂಡಾಗ ನೀವು ವಂಚನೆಗೊಳಗಾಗಿರೋದು ಕರ್ನಾಟಕದ ಆಳಂದ ತಾಲೂಕಿನಲ್ಲಿ, ಅಲ್ಲಿರೋ ನಿಮ್ಮ ವಾಪ್ತಿಯ ಠಾಣೆಯಲ್ಲಿ ದೂರು ದಾಖಲಿಸಿರೆಂಬ ಮಾಹಿತಿ ಮೇರೆಗೆ ರೈತರೆಲ್ಲರೂ ತಾವಿರೋ ಮುನ್ನಳ್ಳಿ ವ್ಯಾಪ್ತಿಯ ನರೋಣಾ ಠಾಣೆಗೆ 4 ಬಾರಿ ಹೋಗಿ ತಮಗಾಗಿರುವ ಮೋಸ ವಿವರಿಸಿ ದೂರು ನೋಂದಣಿಗೆ ಕೋರಿದರೂ ನರೋಣಾ ಠಾಣೆ ಪೊಲೀಸರಿಂದ ಸ್ಪಂದನೆ ದೊರಕಿಲ್ಲ!

ನಾಲ್ಕು ಬಾರಿ ನರೋಣಾ ಠಾಣೆಗೆ ಅಲೆದಾಡಿ ಸುಸ್ತಾಗಿರೋ ರೈತರೆಲ್ಲರೂ ಗುರುವಾರ ಕಲಬುರಗಿಯಲ್ಲಿರೋ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂತ್‌ ಅವರನ್ನು ಕಂಡು ತಮಗೊದಗಿರುವ ದುರವಸ್ಥೆ ವಿವರಿಸಲು ಮುಂದಾಗಿದ್ದಾರೆ.
‘ಕನ್ನಡಪ್ರಭ’ ಜೊತೆ ಮಾತನಾಡಿದ ರೈತರಾದ ಶಿವಪುತ್ರ ಕಣಗಿ, ಮಹಾದೇವ ಜಾನೆ, ಸುಭಾಷ ಇಂಗಳೆ, ಸೋಮನಾಥ ಹಾಗೂ ಮಲ್ಲಪ್ಪ ವಾಲೆ ತಮ್ಮೂರಲ್ಲಿ ಎಲ್ಲಾ ರೈತರು ಅಂಬಾದಾಸನಿಂದ ಮೋಸ ಹೋಗಿದ್ದಾರೆ. ನಾವು ಕೊಡೋ ಮಾಲಿಗೆ ಪ್ರತಿಯಾಗಿ ಸ್ವಲ್ಪ ಹಣ ಪಾವತಿಸಿದ್ದಾನೆ, ಉಳಿಕೆ ಹಣ ಪಾವತಿಸುವ ಕಾಲ ಬಂದಾಗ ಕಣ್ಮರೆಯಾಗಿದ್ದಾನೆ. ಮತ್ತೊಂದು ಮುಂಗಾರು ಹಂಗಾಮು ಬಂತು. ಬೀಜ, ಗೊಬ್ಬರ ಖರೀದಿಗೂ ನಮ್ಮ ಬಳಿ ಹಣವಿಲ್ಲ, ಕಷ್ಟಪಟ್ಟು ದುಡಿದು ಬೆಳೆದ ಬಂಗಾರದಂತಹ ಧಾನ್ಯ ಮಾರಿದ್ದೇವು. ಅದರಿಂದ ಹಣ ಜೇಬು ತುಂಬ ಹಣ ಬರುತ್ತದೆ, ನಾವು ಹಸನಾದ ಬದುಕು ಕಟ್ಟಬಹುದು ಅಂದುಕೊಂಡಿದ್ವಿ, ಈಗ ನಮ್ಮೆಲ್ಲ ಕನಸು ಉಲ್ಟಾಆಗಿದೆ ಎಂದು ಗೋಳಾಡಿದರು.

ಬಹುಕೋಟಿ ರುಪಾಯಿ ವಹಿವಾಟು!

ಕನ್ನಡಪ್ರಭ ಜೊತೆ ಸಂಪರ್ಕಕ್ಕೆ ಬಂದಿರುವ ಮುನ್ನಳ್ಳಿಯ 27 ರೈತರೊಂದಿಗೆ ಮಾತನಾಡಿ ಪಡೆದ ಮಾಹಿತಿಯಲ್ಲೇ 500 ಚೀಲ ತೊಗರಿ, 300 ಚೀಲ ಕಡಲೆ, 100 ಚೀಲ ಕುಸುಬಿ, ಅಷ್ಟೇ ಪ್ರಮಾಣದ ಸೋಯಾಬೀನ್‌ ಅಕ್ಕಲಕೋಟೆ ಸಗಟು ವರ್ತಕ ಅಂಬಾದಾಸನ ಪಾಲಾಗಿದೆ. ಈತ ಮುನ್ನೊಳ್ಳಿಯಲ್ಲಿ ಹೆಚ್ಚುಕಮ್ಮಿ 2 ಕೋಟಿ ರುಪಾಯಿ ಮೊತ್ತದ ದವಸ ಧಾನ್ಯ ರೈತರಿಂದ ಖರೀದಿಸಿ ಅದರಲ್ಲಿ 1 ಕೋಟಿ ರು ನಷ್ಟುಹಣ ಸಂದಾಯ ಮಾಡಿದ್ದಾನೆ. ಆದರೆ ಇನ್ನೂ 1 ಕೋಟಿಗೂ ಹೆಚ್ಚು ಮೊತ್ತದ ಹಣ ರೈತರಿಗೆ ಸಂದಾಯವಾಗಬೇಕಿದ್ದಾಗಲೇ ಆತನ ನಿಗೂಢ ಕಣ್ಮರೆ ರೈತರನ್ನು ಚಿಂತೆಗೆ ತಳ್ಳಿದೆ. ಕಳೆದ ದಶಕದಿಂದ ಈತ ಮುನ್ನೊಳ್ಳಿ ರೈತರೊಂದಿಗೆ ವಹಿವಾಟು ಕುದುರಿಸಿ ಎಲ್ಲರ ವಿಶ್ವಾಸ ಗಳಿಸಿದ್ದ. ಈ ಬಾರಿ ಆತನ ಈ ನಡೆಯೇ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ.

ಪಿಎಸ್‌ಐ ಅಕ್ರಮ: ಆರ್‌ಡಿಪಿ ಬಲಗೈ ಬಂಟರ ಕೊಡುಗೆಯೇ ಅಪಾರ..!

ನಮ್ಮ ವರ್ಷದ ಗಂಜೀನೇ ನಮ್ಮ ಬೆಳೆ ಆಗಿತ್ತು. ಬೆಳದದ್ದನ್ನೆಲ್ಲ ಅಂಬಾದಾಸಗಿ ಕೊಟ್ಟು ಕುಂತೀವಿ. ಹತ್ತಿಪ್ಪತ್ತು ಸಾವಿರ ರುಪಾಯಿ ಕೊಟ್ಟು ಮಾಲು ಹೊತ್ತೊಯ್ದಿರೋ ಅಂಬಾದಾಸ ನಮ್ಮೊಂದಿಗೆ ಸಂಪರ್ಕಕ್ಕೆ ಸಿಗದೆ 1 ತಿಂಗಳಾಯ್ತು. ಮುಂದೇನು ಎಂಬುದೇ ನಮ್ಮ ಚಿಂತೆಯಾಗಿದೆ. 2 ಲಕ್ಷಕ್ಕಿಂತ ಹೆಚ್ಚಿನ ಹಣ ಆತನಿಂದಬರಬೇಕು. ಈ ಬಾರಿ ಒಕ್ಕಲುತನಕ್ಕೂ ದುಡ್ಡಿಲ್ಲದಂತಾಗಿದೆ ಅಂತ ಮುನ್ನಳ್ಳಿ ಗ್ರಾಮದ ವಂಚಿತ ರೈತ ಸೋಮಶೇಖರ ಹಿರೇಮಠ ಹೇಳಿದ್ದಾರೆ. 

ಹಳ್ಳಿಯೊಳಗ ವ್ಯವಹಾರ ಎಲ್ಲಾನೂ ವಿಶ್ವಾಸದ ಮ್ಯಾಗೆ ನಡೆಯೋದು. ದಾಖಲೆ ಇಲ್ಲ, ಅದ್ಕೇ ಕೇಸ್‌ ದಾಖಲು ಮಾಡಲಾಗದು ಅಂತ ನರೋಣಾ ಪೊಲೀಸರು ಹೇಳಿ ನಮ್ಮನ್ನ ಕಳುಹಿಸಿದ್ದಾರೆ. ಇದು ಸರಿಯೆ? ನಮ್ಮ ಗೋಳು ಕೇಳಿ ಅವರೇ ತನಿಖೆ ಮಾಡಲಿ, ಎಲ್ಲವೂ ಅವರಿಗೆ ಗೊತ್ತಾಗುತ್ತದೆ. ಪೊಲೀಸರು ಈ ಪ್ರಕರಣದಲ್ಲಿ ರೈತರಿಗೆ ನೆರವು ನೀಡಬೇಕು ಅಂತ ಆಳಂದ ತಾಲೂಕಿನ ಮುನ್ನಳ್ಳಿ ಗ್ರಾಮದ ನೊಂದ ರೈತರು ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios