ಕೊಪ್ಪಳ: ವಾಂತಿಬೇಧಿ: ಸರ್ಕಾರದ ದಿಕ್ಕು ತಪ್ಪಿಸಿದರೇ ಡಿಎಚ್‌ಒ?

ಜೂ. 19ರ ವಾಂತಿಭೇದಿ ಪ್ರಕರಣ ಸಂಬಂಧಪಟ್ಟಂತೆ ಆಸ್ಪತ್ರೆಗೆ ಬಾರದೆ ಜಿಲ್ಲಾ ಕೇಂದ್ರದಲ್ಲಿ ಇದ್ದುಕೊಂಡು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ವರದಿ ಸಲ್ಲಿಸಿರುವ ಕುರಿತು ವ್ಯಾಪಕ ಚರ್ಚೆಯಾಗುತ್ತಿದೆ.

Vomiting case: Did DHO mislead the government?

ಎಂ. ಪ್ರಹ್ಲಾದ

ಕನಕಗಿರಿ (ಜೂ.25) : ಜೂ. 19ರ ವಾಂತಿಭೇದಿ ಪ್ರಕರಣ ಸಂಬಂಧಪಟ್ಟಂತೆ ಆಸ್ಪತ್ರೆಗೆ ಬಾರದೆ ಜಿಲ್ಲಾ ಕೇಂದ್ರದಲ್ಲಿ ಇದ್ದುಕೊಂಡು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ವರದಿ ಸಲ್ಲಿಸಿರುವ ಕುರಿತು ವ್ಯಾಪಕ ಚರ್ಚೆಯಾಗುತ್ತಿದೆ.

ಬುದ್ಧಿಮಾಂದ್ಯ ಐದು ವರ್ಷದ ಮಗು ಕನಕರಾಯ ಹರಿಜನ (5) ಜೂ. 19ರಂದು ಮಧ್ಯಾಹ್ನದ ಸಮಯದಲ್ಲಿ ಮೃತಪಟ್ಟಿರುವ ಸ್ಥಳಕ್ಕೆ ಡಿಎಚ್‌ಒ ಅಲಕಾನಂದ ಮಳಗಿ ಭೇಟಿ ನೀಡದೆ ಆಸ್ಪತ್ರೆಯ ವೈದ್ಯರಿಂದ ಸಲಹೆ ಪಡೆದು ತಾವಿರುವ ಸ್ಥಳದಿಂದಲೇ ಪ್ರಕಟಣೆ ಹೊರಡಿಸಿರುವುದು ಎಷ್ಟರ ಮಟ್ಟಿಗೆ ಸರಿ? ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ನಡೆದ ವಾಂತಿ-ಭೇದಿ ಪ್ರಕರಣದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಮಾಸುವ ಮುನ್ನವೇ ಕನಕಗಿರಿ ಪಟ್ಟಣದಲ್ಲಿ ಜೂ. 19ರಂದು ಮತ್ತೊಂದು ಮಗು ಬಲಿಯಾಗಿರುವ ಬಗ್ಗೆ ಮಾಹಿತಿ ಇದ್ದರೂ ಸ್ಥಳಕ್ಕೆ ಬಾರದ ಡಿಎಚ್‌ಒ ನಿರ್ಲಕ್ಷ್ಯ ವಹಿಸಿದ್ದಲ್ಲದೇ ವಾಂತಿಯು ಶ್ವಾಸಕೋಶದೊಳಗೆ ಹೋಗಿ ಉಸಿರಾಟ ನಿಂತು ಮಗು ಮೃತಪಟ್ಟಿದೆ ಎಂಬ ಲಿಖಿತ ಹೇಳಿಕೆಗೆ ಕುಟುಂಬಸ್ಥರು ಹಾಗೂ ದಲಿತ ಸಂಘಟನೆಗಳು ಖಂಡಿಸಿವೆ.

 

ಕನಕಗಿರಿಯಲ್ಲಿ ಬಾಲಕ ಸಾವು ಪ್ರಕರಣ: ಆರೋಗ್ಯ ಇಲಾಖೆಯಿಂದ ಪತ್ರಿಕಾ ಪ್ರಕಟಣೆ

ಜೂ. 19ರಂದು ಕನಕರಾಯನಿಗೆ ವಾಂತಿಭೇದಿ ಕಾಣಿಸಿಕೊಂಡ ಹಿನ್ನೆಲೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿದ್ದೇವು. ಮಧ್ಯಾಹ್ನದ ಅವಧಿಗೆಲ್ಲ ಕನಕರಾಯನ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದು, ವೈದ್ಯರು ಮಗುವನ್ನು ಮನೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಇದಕ್ಕೆ ಕುಟುಂಬಸ್ಥರು ನಿರಾಕರಿಸಿದ್ದು, ಗುಣಮುಖವಾಗುವ ವರೆಗೂ ಇಲ್ಲಿಯೇ ಇರಲಿ ಎಂದಿದ್ದಾರೆ. ಆಸ್ಪತ್ರೆಯಲ್ಲಿ ಬೆಡ್‌ ಖಾಲಿ ಇಲ್ಲ. ಮಗುವಿನ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ಏನಾದರೂ ಸಮಸ್ಯೆ ಇದ್ದರೆ ಮತ್ತೆ ಬನ್ನಿ ಎಂದು ವೈದ್ಯರು ಏರುಧ್ವನಿಯಲ್ಲಿ ತಿಳಿಸಿದಾಗ ಮೊಮ್ಮಗನನ್ನು ನಮ್ಮ ಮನೆಗೆ ಕರೆದುಕೊಂಡು ಬಂದಿದ್ದೇವೆ. ಇಡ್ಲಿ ತಿಂದು ಮಲಗಿದಾತ ಮತ್ತೆ ಎದ್ದೇಳಲಿಲ್ಲ ಎಂದು ಅಜ್ಜಿ ಸಣ್ಣಶಿವಮ್ಮ ಮೊಮ್ಮಗನ ನೆನೆದು ಕಣ್ಣೀರಿಟ್ಟಳು.

ಮೃತ ಮಗುವಿನ ತಂದೆ ಅಂಗವಿಲಕನಾದರೂ ಕೂಲಿ ಕೆಲಸ ಮಾಡಿಕೊಂಡು ಕುಟುಂಬ ನಡೆಸುತ್ತಿದ್ದಾರೆ. ಅವರ ಪತ್ನಿ ಕಮಲಾಕ್ಷಿ ಮನೆ ಕೆಲಸ ಮಾಡಿಕೊಂಡಿದ್ದು, ಅಜ್ಜಿ ಸಣ್ಣಶಿವಮ್ಮ ಕನಕಾಚಲಪತಿ ದೇವಸ್ಥಾನದಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ತಿಂಗಳ ಪರ್ಯಂತ ದುಡಿದರೂ ಮನೆ ಖರ್ಚಿಗೆ ಸಾಕಾಗುವುದಿಲ್ಲ. ಕನಕರಾಯ ಬುದ್ಧಿಮಾಂದ್ಯ ಆಗಿದ್ದರಿಂದ ಸರ್ಕಾರದಿಂದ ಪ್ರತಿ ತಿಂಗಳು .2 ಸಾವಿರ ಮಾಸಾಶನ ಬರುತ್ತಿತ್ತು. ಇದರಿಂದ ನಮ್ಮ ಕುಟುಂಬಕ್ಕೆ ಅನುಕೂಲವಾಗಿತ್ತು. ಮನೆಯವರೆಲ್ಲರೂ ದುಡಿದರೂ ಕುಟುಂಬ ನಿರ್ವಹಣೆ ಕಷ್ಟಸಾಧ್ಯವಾಗಿದ್ದು, ವಾಂತಿ-ಭೇದಿ ಪ್ರಕರಣದಡಿ ಜಿಲ್ಲಾಡಳಿತ .2 ಲಕ್ಷ ಪರಿಹಾರ ನೀಡಿ,ನೆರವಾಗಬೇಕು ಎಂದು ಗ್ರಾಪಂ ಮಾಜಿ ಸದಸ್ಯ ಲಿಂಗಪ್ಪ ಪೂಜಾರಿ ಮನವಿ ಮಾಡಿದರು.

ಸಂಸದರನ್ನೂ ದಾರಿ ತಪ್ಪಿಸಿದ್ರಾ ಡಿಎಚ್‌ಒ?

ವಾಂತಿ-ಭೇದಿ ಪ್ರಕರಣ ಹಿನ್ನೆಲೆಯಲ್ಲಿ ಜೂ. 19ರಂದು ಬಸರಿಹಾಳ ಹಾಗೂ ಬಿಜಕಲ್‌ ಗ್ರಾಮಕ್ಕೆ ಸಂಸದ ಸಂಗಣ್ಣ ಕರಡಿ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಧನ ಸಹಾಯ ನೀಡಿದ್ದರು. ಇದೇ ವೇಳೆ ಕನಕಗಿರಿಯಲ್ಲಿ ವಾಂತಿ-ಭೇದಿಗೆ ಐದು ವರ್ಷದ ಮಗು ಬಲಿಯಾಗಿದೆ ಎನ್ನುವ ಸುದ್ದಿ ಸಂಸದರ ಗಮನಕ್ಕೆ ಬಂದಾಗ ಡಿಎಚ್‌ಒಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳುತ್ತಾರೆ. ಆದರೆ ಡಿಎಚ್‌ಒ ಅವರು ಸಹಜ ಸಾವು ಎಂದು ಉತ್ತರಿಸುತ್ತಲೇ ಸಂಸದರ ದಾರಿ ತಪ್ಪಿಸಿದ್ದಾರೆನ್ನಲಾಗಿದೆ. ಇದರಿಂದ ಕನಕಗಿರಿಗೆ ಬರುವುದನ್ನು ರದ್ದುಪಡಿಸಿದ ಸಂಸದರು ನೇರವಾಗಿ ಕೊಪ್ಪಳಕ್ಕೆ ಹೋಗಿರುವ ಮಾಹಿತಿ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.

ಕೊಪ್ಪಳ: ಕಲುಷಿತ ನೀರಿಗೆ 4ನೇ ಬಲಿ, ಕನಕಗಿರಿಯಲ್ಲಿ 5 ವರ್ಷದ ಮಗು ಸಾವು

ವಾಂತಿ-ಭೇದಿಯಿಂದ ಕನಕರಾಯ ಮೃತಪಟ್ಟಿದ್ದಾನೆ. ನಾಲ್ವರು ವೈದ್ಯರು ಅಸ್ಪಷ್ಟಮಾಹಿತಿ ನೀಡಿರುವುದನ್ನು ಡಿಎಚ್‌ಒ ಊಹಿಸಿ ಕೊಪ್ಪಳ ಕಚೇರಿಯಿಂದ ಪತ್ರಿಕಾ ಪ್ರಕಟಣೆ ನೀಡಿರುವುದು ತಪ್ಪು. ಸ್ಥಳಕ್ಕೆ ಭೇಟಿ ನೀಡದೆ, ಕುಟುಂಬಸ್ಥರೊಡನೆ ಮಾತನಾಡದೆ ಏಕಾಏಕಿ ಉಸಿರಾಟ ತೊಂದರೆಯಿಂದ ಮಗು ಮೃತಪಟ್ಟಿದೆ ಎಂದಿರುವ ಡಿಎಚ್‌ಒ ನಡೆ ಖಂಡನೀಯ. ಈ ಬಗ್ಗೆ ಮರು ಪರಿಶೀಲಿಸಿ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಬೇಕು.

ಪಾಮಣ್ಣ ಅರಳಿಗನೂರು, ದಲಿತ ಮುಖಂಡ

ಮೃತ ಕನಕರಾಯನ ಮರಣೋತ್ತರ ಪರೀಕ್ಷೆ ನಡೆಸಿದ್ದು, ಗಂಟಲು ಸೇರಿ ದೇಹದ ಕೆಲವು ಭಾಗದಲ್ಲಿ ಪರಿಶೀಲಿಸಲಾಗಿ ನೀರು, ಊಟದ ಅಂಶ ದೊರಕಿದೆ. ಇದನ್ನು ಪೊಲೀಸ್‌ ಠಾಣೆಗೆ ನೀಡಿದ್ದು, ಇದರ ವರದಿಗಾಗಿ ಪೊಲೀಸರು ಬಳ್ಳಾರಿಗೆ ಕಳುಹಿಸಿದ್ದಾರೆ. ಪೂರ್ಣ ಪ್ರಮಾಣದ ವರದಿ ಬರಲು 15 ದಿನ ಸಮಯಾವಕಾಶ ತೆಗೆದುಕೊಳ್ಳಲಿದೆ.

ಸತೀಶಕುಮಾರ, ಆಸ್ಪತ್ರೆ ಆಡಳಿತಾಧಿಕಾರಿ

ತಂಗಡಗಿ ಸಾಹೇಬರು ನಮ್ಮ ಮನೆಗೆ ಬಂದು ನಮ್ಮ ಕುಟುಂಬದ ಕಷ್ಟನೋಡಿ ಭಾವುಕರಾದರು. ನನ್ನ ಮಗ ವಾಂತಿ-ಭೇದಿಯಿಂದ ತೀರಿಕೊಂಡಿದ್ದರಿಂದ ಸಚಿವರು ಪರಿಹಾರ ಕೊಡಿಸುವುದಾಗಿ ಹೇಳಿ ಹೋಗಿದ್ದಾರೆ. ಡಿಎಚ್‌ಒ ಮೇಡಂ ಅವರು ನಮ್ಮ ಜತೆ ಮಾತಾಡಿಲ್ಲ. ಮಗನ ಸಾವಿನ ಬಗ್ಗೆ ಏನೂ ಕೇಳಿಲ್ಲ.

ಪರಶುರಾಮ ಹರಿಜನ, ಮೃತ ಮಗುವಿನ ತಂದೆ

Latest Videos
Follow Us:
Download App:
  • android
  • ios