ಕೊಪ್ಪಳ: ಕಲುಷಿತ ನೀರಿಗೆ 4ನೇ ಬಲಿ, ಕನಕಗಿರಿಯಲ್ಲಿ 5 ವರ್ಷದ ಮಗು ಸಾವು

ಮುಖ್ಯಮಂತ್ರಿಗಳ ಕಟ್ಟುನಿಟ್ಟಿನ ಎಚ್ಚರಿಕೆ ಹಾಗೂ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುವುದಕ್ಕೆ ಯತ್ನಿಸಿದ ಬಳಿಕವೂ ಕೊಪ್ಪಳ ಜಿಲ್ಲೆಯಲ್ಲಿ ವಾಂತಿಭೇದಿಗೆ ಸೋಮವಾರ ಮತ್ತೊಂದು ಮಗು ಬಲಿಯಾಗಿದೆ

4th death to contaminated water 5-year-old child dies in Kanakagiri at koppal rav

ಕನಕಗಿರಿ/ಕೊಪ್ಪಳ (ಜೂ.20) :  ಮುಖ್ಯಮಂತ್ರಿಗಳ ಕಟ್ಟುನಿಟ್ಟಿನ ಎಚ್ಚರಿಕೆ ಹಾಗೂ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುವುದಕ್ಕೆ ಯತ್ನಿಸಿದ ಬಳಿಕವೂ ಕೊಪ್ಪಳ ಜಿಲ್ಲೆಯಲ್ಲಿ ವಾಂತಿಭೇದಿಗೆ ಸೋಮವಾರ ಮತ್ತೊಂದು ಮಗು ಬಲಿಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಕಲುಷಿತ ನೀರಿಗೆ ಬಲಿಯಾದವರ ಸಂಖ್ಯೆ ನಾಲ್ಕಕ್ಕೇರಿದೆ. ಆದರೆ, ಇದು ಕಲುಷಿತ ನೀರಿನಿಂದ ಉಂಟಾದ ಸಾವಲ್ಲ ಎಂದು ಜಿಲ್ಲಾಡಳಿತ ಹೇಳಿಕೊಂಡಿದ್ದರೆ, ಮಗುವಿನ ಸಾವಿಗೆ ಕಲುಷಿತ ನೀರೇ ಕಾರಣ ಎಂದು ಕುಟುಂಬದವರು ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.

ಕಲುಷಿತ ನೀರು ಸೇವನೆಯಿಂದ ಇನ್ನೊಂದು ಸಾವು ಸಂಭವಿಸಿದರೆ ಸಹಿಸಲು ಸಾಧ್ಯವಿಲ್ಲ, ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್‌ ಎಚ್ಚರಿಕೆ ನೀಡಿದ್ದರಲ್ಲದೆ, ಜಿ.ಪಂ. ಸಿಇಒ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇಷ್ಟಾದರೂ ಸೋಮವಾರ ಕನಕಗಿರಿ ಪಟ್ಟಣದ 1ನೇ ವಾರ್ಡ್‌ನ ಕನಕರಾಯ ಪರಶುರಾಮ ಹರಿಜನ (5) ಎಂಬ ಮಗು ಮೃತಪಟ್ಟಿದೆ. ಕಲುಷಿತ ನೀರು ಸೇವಿಸಿ ಬಳಿಕ ವಾಂತಿ ಭೇದಿಯಿಂದ ಕೊನೆಯುಸಿರೆಳೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕುಷ್ಟಗಿ: ಕಲುಷಿತ ನೀರು ಸೇವಿಸಿ ಮಗು ಸಾವು, ಮೃತರ ಸಂಖ್ಯೆ 2ಕ್ಕೇರಿಕೆ

ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದ ಹೊನ್ನಮ್ಮ ನಟೇಗುಡ್ಡ (55) ಮೇ 31 ರಂದು ವಾಂತಿ ಭೇದಿಯಿಂದ ಸಾವಿಗೀಡಾಗಿದ್ದರು. ಜೂ.5ರಂದು ಅದೇ ಗ್ರಾಮದ ಒಂದೂವರೆ ವರ್ಷದ ಬಾಲಕಿ ಶ್ರುತಿ, ಜೂ.8ರಂದು ಕುಷ್ಟಗಿ ತಾಲೂಕಿನ ಬಿಜಕಲ್‌ ಗ್ರಾಮದ ನಿರ್ಮಲಾ (10 ವರ್ಷ) ಮೃತಪಟ್ಟಿದ್ದಳು. ಇದೀಗ ಐದು ವರ್ಷದ ಮಗುವಿನ ಸಾವಿನೊಂದಿಗೆ ಇಪ್ಪತ್ತು ದಿನಗಳಲ್ಲಿ ನಾಲ್ವರು ಬಲಿಯಾದಂತಾಗಿದೆ.

ಆಗಿದ್ದೇನು?: ಕನಕರಾಯ ಸೋಮವಾರ ಮುಂಜಾನೆ ವಾಂತಿ ಭೇದಿಯಿಂದ ಅಸ್ವಸ್ಥಗೊಂಡಿದ್ದಾನೆ. ಈ ವೇಳೆ ಪಾಲಕರು ಆತನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಮಗು ಚೇತರಿಸಿಕೊಳ್ಳದಿರುವ ಹಿನ್ನೆಲೆಯಲ್ಲಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಮೂರ್ನಾಲ್ಕು ಗಂಟೆ ಚಿಕಿತ್ಸೆ ಕೊಡಿಸಿದ್ದಾರೆ. ಮಗು ಚೇತರಿಸಿಕೊಳ್ಳುತ್ತಿದೆ, ಗುಣಮುಖವಾಗಿದೆ ಎಂದು ಆಸ್ಪತ್ರೆಯವರು ಹೇಳಿ ಮಧ್ಯಾಹ್ನದ ಹೊತ್ತಿಗೆ ಮನೆಗೆ ಕಳುಹಿಸಿದ್ದಾರೆ. ಮನೆಗೆ ಹೋದ ನಂತರ ಪುನಃ ವಾಂತಿಭೇದಿ ಆರಂಭವಾಗಿದ್ದು, ಸಂಜೆ ವೇಳೆಗೆ ಪುನಃ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿದೆ. ಆದರೆ ಅಷ್ಟೊತ್ತಿಗಾಗಲೇ ಮಗು ಸಾವಿಗೀಡಾಗಿದೆ. ಇಲ್ಲಿನ 30 ಹಾಸಿಗೆ ಆಸ್ಪತ್ರೆ ಭರ್ತಿಯಾಗಿರುವುದರಿಂದ ಮಗು ಗುಣಮುಖವಾಗಿದೆ ಎಂದು ವಾಪಸ್‌ ಕಳುಹಿಸಲಾಗಿದೆ ಎಂದು ಪೋಷಕರು ಆರೋಪಿಸಿದ್ದು, ಮಗು ಚೇತರಿಸಿಕೊಳ್ಳದಿದ್ದರೂ ಕಳುಹಿಸಲಾಗಿದೆ ಎಂದು ದೂರಿದ್ದಾರೆ.

ಮನೆಯಲ್ಲಿ ವಾಂತಿ ಮಾಡಿಕೊಂಡ ಸಂದರ್ಭದಲ್ಲಿ ಸರಿಯಾದ ನಿರ್ವಹಣೆ ಮಾಡಲಿಲ್ಲ. ಆ ಸಂದರ್ಭದಲ್ಲಿ ವಾಂತಿ ಶ್ವಾಶಕೋಶಕ್ಕೆ ಹೋಗಿದ್ದರಿಂದ ಉಸಿರಾಟದ ತೊಂದರೆ ಆಗಿ ಮಗು ಮೃತಪಟ್ಟಿದೆ ಎಂದು ವೈದ್ಯರು ಹೇಳುತ್ತಾರೆ.

ಆಸ್ಪತ್ರೆಯಲ್ಲಿದ್ದರೆ ಉಳಿಯುತ್ತಿತ್ತು: ಬಾಲಕನಿಗೆ ಚಿಕಿತ್ಸೆ ನೀಡಿ ತಕ್ಷಣ ವಾಪಸ್‌ ಕಳುಹಿಸಿದ್ದರಿಂದ ಮಗು ಸಾವಿಗೀಡಾಗುವಂತಾಯಿತು ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗ ಪಾಲಕರು ವಾಂತಿಯನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎನ್ನುವವರು, ತಾವೇ ದಾಖಲಿಸಿಕೊಂಡು ಚಿಕಿತ್ಸೆ ಮುಂದುವರೆಸಿದ್ದರೆ ನಮ್ಮ ಮಗು ಉಳಿಯುತ್ತಿತ್ತು ಎಂದು ಕಿಡಿಕಾರಿದ್ದಾರೆ.

ನೀರಿನ ಸಮಸ್ಯೆ: ಸ್ಥಳೀಯರು ಹೇಳುವ ಪ್ರಕಾರ ಒಂದನೇ ವಾರ್ಡ್‌ನಲ್ಲಿ ಪೂರೈಕೆಯಾಗುವ ನೀರು ಕಲುಷಿತವಾಗಿದೆ. ಚರಂಡಿಯಲ್ಲಿ ಪೈಪ್‌ ಒಡೆದಿರುವುದರಿಂದ ಚರಂಡಿ ನೀರು ಕುಡಿವ ನೀರು ಪೂರೈಕೆಯಲ್ಲಿ ಮಿಶ್ರಣ ಆಗುತ್ತಿರುವುದರಿಂದ ಸಮಸ್ಯೆಯಾಗುತ್ತಿವೆ. ಈ ಬಗ್ಗೆ ಸಾಕಷ್ಟುಬಾರಿ ಹೇಳಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಯಚೂರು ಆಯ್ತು, ಈಗ ಕೊಪ್ಪಳದಲ್ಲಿ ಕಲುಷಿತ ನೀರು ಸೇವನೆಗೆ ಮಹಿಳೆ ಬಲಿ: 10 ಮಂದಿ ಅಸ್ವಸ್ಥ

ಈಗಾಗಲೇ ಈ ವಾರ್ಡ್‌ನಲ್ಲಿ ಪೂರೈಕೆಯಾಗುತ್ತಿರುವ ನೀರು ಕುಡಿಯಲು ಯೋಗ್ಯವಾಗಿಲ್ಲ ಎನ್ನುವ ವರದಿ ಬಂದ ಮೇಲೆಯೂ ಇಲ್ಲಿ ಅದೇ ನೀರು ಪೂರೈಕೆ ಮಾಡಲಾಗುತ್ತದೆ ಎಂದು ಪ.ಪಂ. ಸದಸ್ಯರು ಆರೋಪಿಸಿದ್ದಾರೆ.

ಮೇ 31

ಕನಕಗಿರಿ ತಾಲೂಕಿನ ಬಸರಿಹಾಳದ ನಟೇಗುಡ್ಡ ಸಾವು

ಜೂನ್‌ 5

ಕನಕಗಿರಿ ತಾಲೂಕಿನ ಬಸರಿಹಾಳದ ಬಾಲಕಿ ಶ್ರುತಿ ಸಾವು

ಜೂನ್‌ 8

ಕುಷ್ಟಗಿ ತಾಲೂಕಿನ ಬಿಜಕಲ್‌ನ ಬಾಲಕಿ ನಿರ್ಮಲಾ ಸಾವು

ಜೂನ್‌ 19

ಕನಕಗಿರಿ ಪಟ್ಟಣದ ಬಾಲಕ ಕನಕರಾಯ ಹರಿಜನ ಸಾವು

Latest Videos
Follow Us:
Download App:
  • android
  • ios