ಮೂಡುಬಿದಿರೆಯ ಆಳ್ವಾಸ್ ಶಾಲೆಯ 15 ವರ್ಷದ ವಿದ್ಯಾರ್ಥಿನಿ ವಿಷ್ಣುಪ್ರಿಯಾ ಪೈ ಕೇವಲ 15 ದಿನಗಳಲ್ಲಿ 4,500 ವಿದ್ಯಾರ್ಥಿಗಳಿಗೆ ಒತ್ತಡ ನಿಯಂತ್ರಣ ತರಬೇತಿ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ್ದಾಳೆ. ಈ ಸಾಧನೆಗಾಗಿ ಆಕೆಗೆ ಪ್ರಮಾಣ ಪತ್ರ ಹಾಗೂ ಪದಕ ಪ್ರದಾನ ಮಾಡಲಾಯಿತು.

ಮಂಗಳೂರು (ಅ.2): ಸಾಧನೆಗೆ ವಯಸ್ಸಿನ ಮಿತಿಯಿಲ್ಲ ಎಂಬುದಕ್ಕೆ ಇಲ್ಲೊಬ್ಬ ಬಾಲಕಿ ತಾಜಾ ಉದಾಹರಣೆಯಾಗಿ ನಮ್ಮ ಕಣ್ಮುಂದೆ ಇದ್ದಾಳೆ. ಮೂಡುಬಿದಿರೆಯ ಆಳ್ವಾಸ್ ಸೆಂಟ್ರಲ್ ಶಾಲೆಯ 10 ನೇ ತರಗತಿಯ ಓದುತ್ತಿರುವ ಈ ವಿದ್ಯಾರ್ಥಿನಿ ವಿಷ್ಣುಪ್ರಿಯಾ ಪೈಗೆ ಈಗಿನ ಹದಿನೈದು ವರ್ಷ ಪ್ರಾಯ. ಇಂತಹ ಚಿಕ್ಕ ವಯಸಿನಲ್ಲೂ ದೊಡ್ಡ ಸಾಧನೆ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ಮಾಡಿದ್ದಾಳೆ.

ಚಿಕ್ಕ ವಯಸ್ಸಿನಲ್ಲಿ 51 ಶಾಲೆಗಳಿಗೆ ಸಹಾಯ ಮಾಡಿದ ಬಾಲಕಿ!

ಆಳ್ವಾಸ್ ಸೆಂಟ್ರಲ್ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ವಿಷ್ಣುಪ್ರಿಯಾ ಪೈ ಕೇವಲ15 ದಿನಗಳಲ್ಲಿ ಕರ್ನಾಟಕ 54 ವಿದ್ಯಾಸಂಸ್ಥೆಗಳ ಸುಮಾರು 4,500 ವಿದ್ಯಾರ್ಥಿಗಳಿಗೆ ಒತ್ತಡ ನಿಯಂತ್ರಣದ ಕುರಿತು ತರಬೇತಿ ನೀಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ವಿಶ್ವದಾಖಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ವತಿಯಿಂದ ಪ್ರಮಾಣ ಪತ್ರ, ಪದಕ ಪ್ರದಾನ ಹಾಗೂ ಆಳ್ವಾಸ್ ಅಭಿನಂದನಾ ಕಾರ್ಯಕ್ರಮ ಗುರುವಾರ ಸಂಜೆ ವಿದ್ಯಾಗಿರಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆಯಿತು.

ಸಾಹಸಸಿಂಹ ಡಾ ವಿಷ್ಣುವರ್ಧನ್ ಪುತ್ರಿ ಕೀರ್ತಿ ವಿಷ್ಣುವರ್ಧನ್ ಮುಖ್ಯ ಅತಿಥಿಯಾಗಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ ತನ್ನ ಆಸಕ್ತಿ ಮತ್ತು ಪರಿಶ್ರಮಕ್ಕೆ ಹೆತ್ತವರು ಮತ್ತು ಕುಟುಂಬದ ಅಪೂರ್ವ ಬೆಂಬಲ ಇವೆಲ್ಲದರ ಕಾರಣದಿಂದ ಹದಿನೈದರ ಹರೆಯದಲ್ಲೇ ವಿಷ್ಣು ಪ್ರಿಯಾ ಪೈ ಇದೀಗ ವಿಶ್ವ ದಾಖಲೆ ತನ್ನದಾಗಿಸಿಕೊಂಡಿದ್ಧಾಳೆ. ಇದು ದೇವರ ಅನುಗ್ರಹವೂ ಹೌದು. ಈ ಗುಣಮಟ್ಟವನ್ನು ಕಾಯ್ದುಕೊಂಡು ಮುಂದೆ ದೊಡ್ಡ ಸಾಧಕಿಯಾಗಿ ಬೆಳೆಯಲಿ ಬೆಳಗಲಿ ಎಂದು ಹಾರೈಸಿದರು.

ವಿಷ್ಣುಪ್ರಿಯಾ ಹೆಸರಿನ ಹಿಂದಿದೆ ಆ ನಟನ ಜೊತೆಗಿನ ಕುಟುಂಬದ ಬಾಂಧವ್ಯ

ಪೈ ಪರಿವಾರದ ಜತೆ ವಿಷ್ಣು ಕುಟುಂಬದ ದೀಘ ಕಾಲದ ಬಾಂಧವ್ಯ ಸ್ಮರಿಸಿಕೊಂಡ ಅವರು ಬಾಲಕಿಗೆ ವಿಷ್ಣು ಪ್ರಿಯಾ ಎಂದು ನಾಮಕರಣ ಮಾಡಿದ್ದ ಭಾರತೀ ವಿಷ್ಣುವರ್ಧನ್ ಅಂದು ವಿಷ್ಣು ಪ್ರಿಯ ವಿಶ್ವ ಪ್ರಿಯಳಾಗಲಿ ಎಂದು ಹಾರೈಸಿದನ್ನು ಸ್ಮರಿಸಿಕೊಂಡರು.

ವಿಷ್ಟು ಪ್ರಿಯಾಗೆ ದಾಖಲೆ ಗೌರವ

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಏಷ್ಯಾ ವಿಭಾಗದ ಮುಖ್ಯಸ್ಥ ಡಾ. ಮನೀಷ್ ಬಿಷ್ಣೋಯಿ ವಿಷ್ಣು ಪ್ರಿಯಾ ಅವರಿಗೆ ವಿಶ್ವ ದಾಖಲೆಯ ಪ್ರಮಾಣ ಪತ್ರ ಪದಕ ವನ್ನು ಹಸ್ತಾಂತರಿಸಿ ಮಾತನಾಡಿ, ಭಾರತೀಯರಲ್ಲಿ ಅದರಲ್ಲೂ ಕರಾವಳಿಯ ದಕ್ಷಿಣ ಕನ್ನಡ ದಲ್ಲಿ ಶ್ರೇಷ್ಠ ಪ್ರತಿಭೆಗಳಿವೆ. ವಿಷ್ಣು ಪ್ರಿಯಾಳಿಗೆ ಉಜ್ವಲ ಭವಿಷ್ಯ ಮತ್ತು ಅವಕಾಶಗಳು ಒದಗಿ ಬರಲಿ ಎಂದು ಹಾರೈಸಿದರು.