ಬೆಂಗಳೂರಿನ ಹರಳೂರು ಗ್ರಾಮದಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ 6 ಕೋಟಿ ರೂ. ಮೌಲ್ಯದ ರಾಜಕಾಲುವೆ ಜಾಗವನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ. ನ್ಯಾಯಾಲಯದ ಆದೇಶದ ಮೇರೆಗೆ ಕಾಂಪೌಂಡ್ ಮತ್ತು ಶೆಡ್‌ಗಳನ್ನು ಧ್ವಂಸಗೊಳಿಸಿ ಜಾಗವನ್ನು ಪಾಲಿಕೆ ವಶಕ್ಕೆ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಒತ್ತುವರಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರು (ಅ.02): ಬೆಂಗಳೂರಿನಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗಿದ್ದ ರಾಜಕಾಲುವೆ ಒತ್ತುವರಿದಾರರ ವಿರುದ್ಧ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಸಮರ ಮುಂದುವರಿಸಿದೆ. ಬೊಮ್ಮನಹಳ್ಳಿ ವಲಯ ವ್ಯಾಪ್ತಿಯ ಹರಳೂರು ಗ್ರಾಮದಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಬರೋಬ್ಬರಿ 6 ಕೋಟಿ ರೂಪಾಯಿ ಮೌಲ್ಯದ 6 ಗುಂಟೆ (ಸುಮಾರು 6,534 ಚದರ ಅಡಿ) ‘ಬಿ-ಖರಾಬು’ ರಾಜಕಾಲುವೆ ಜಾಗವನ್ನು ಅಧಿಕಾರಿಗಳು ಯಶಸ್ವಿಯಾಗಿ ತೆರವುಗೊಳಿಸಿ ಪಾಲಿಕೆಯ ವಶಕ್ಕೆ ಪಡೆದಿದ್ದಾರೆ.
ನ್ಯಾಯಾಲಯದ ಆದೇಶದ ಬೆನ್ನಲ್ಲೇ ಕಾರ್ಯಾಚರಣೆ:
ಹರಳೂರು ಗ್ರಾಮದ ಸರ್ವೆ ನಂ. 2/1ರಲ್ಲಿನ ರಾಜಕಾಲುವೆ ಹಾಗೂ ಹಳ್ಳದ ಖರಾಬು ಜಾಗವನ್ನು ಕೆಲವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರು. ಈ ಸಂಬಂಧ ವಿಶೇಷ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ (NCR(E) CR/121/2024-25) ವಿಚಾರಣೆ ನಡೆದಿತ್ತು. ಜಾಗವನ್ನು ತಕ್ಷಣ ತೆರವು ಮಾಡುವಂತೆ ನ್ಯಾಯಾಲಯವು ಒತ್ತುವರಿದಾರರಿಗೆ ಸೂಚಿಸಿತ್ತು. ತಪ್ಪಿದಲ್ಲಿ ಪಾಲಿಕೆಯೇ ತೆರವುಗೊಳಿಸಲು ನಿರ್ದೇಶನ ನೀಡಿತ್ತು.
ಕಾಂಪೌಂಡ್, ಶೆಡ್‌ಗಳು ಧ್ವಂಸ:
ನ್ಯಾಯಾಲಯದ ಕಟ್ಟುನಿಟ್ಟಿನ ಆದೇಶದ ಹಿನ್ನೆಲೆಯಲ್ಲಿ, ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಕೂಡ್ಲು ಉಪವಿಭಾಗದ ಎಂಜಿನಿಯರ್‌ಗಳು, ಸರ್ವೇಯರ್‌ಗಳು ಸ್ಥಳೀಯ ಪೊಲೀಸರ ಬಿಗಿ ಭದ್ರತೆಯೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದರು. ರಾಜಕಾಲುವೆ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಬೃಹತ್ ಕಾಂಪೌಂಡ್ ಗೋಡೆಗಳು ಹಾಗೂ ಶೆಡ್‌ಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿ, ಸಾರ್ವಜನಿಕ ಆಸ್ತಿಯನ್ನು ಮರಳಿ ಪಡೆಯಲಾಯಿತು ಎಂದು ಪಾಲಿಕೆ ಆಯುಕ್ತ ಶ್ರೀ ಕೆ. ಎನ್. ರಮೇಶ್ ತಿಳಿಸಿದ್ದಾರೆ.
ಒತ್ತುವರಿದಾರರಿಗೆ ಕಠಿಣ ಎಚ್ಚರಿಕೆ:
ನಗರದಲ್ಲಿ ಮಳೆಗಾಲದ ಸಂದರ್ಭದಲ್ಲಿ ಕೃತಕ ಪ್ರವಾಹ ಉಂಟಾಗದಂತೆ ತಡೆಯಲು ಹಾಗೂ ರಾಜಕಾಲುವೆಗಳ ನೈಸರ್ಗಿಕ ಹರಿವನ್ನು ಕಾಪಾಡಿಕೊಳ್ಳಲು ಈ ಕಠಿಣ ಕ್ರಮ ಅನಿವಾರ್ಯವಾಗಿದೆ. ಸಾರ್ವಜನಿಕ ರಾಜಕಾಲುವೆ ಮತ್ತು ಸರ್ಕಾರಿ ಜಾಗಗಳನ್ನು ಕಾನೂನುಬಾಹಿರವಾಗಿ ಒತ್ತುವರಿ ಮಾಡುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.


