ವಿಷ್ಣು ಸ್ಮಾರಕ ಲೋಕಾರ್ಪಣೆ: ಅಭಿಮಾನಿಗಳಿಂದ ಅದ್ದೂರಿ ಮೆರವಣಿಗೆ

ಮೈಸೂರಿನ ಹಾಲಾಳು ಗ್ರಾಮದ ಬಳಿ ನಿರ್ಮಿಸಲಾಗಿರುವ ಹೆಸರಾಂತ ಚಿತ್ರನಟ ದಿವಂಗತ ಡಾವಿಷ್ಣುವರ್ಧನ್‌ ಅವರ ಸ್ಮಾರಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಲೋಕಾರ್ಪಣೆಗೊಳಿಸಿದರು.

Vishnu Memorial Lokarpana by cm bommai  in mysuru rav

ಮೈಸೂರು (ಜ.30) : ಮೈಸೂರಿನ ಹಾಲಾಳು ಗ್ರಾಮದ ಬಳಿ ನಿರ್ಮಿಸಲಾಗಿರುವ ಹೆಸರಾಂತ ಚಿತ್ರನಟ ದಿವಂಗತ ಡಾವಿಷ್ಣುವರ್ಧನ್‌ ಅವರ ಸ್ಮಾರಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಲೋಕಾರ್ಪಣೆಗೊಳಿಸಿದರು. ಇದೇ ಸಂದರ್ಭ ವಿಷ್ಣುವರ್ಧನ್‌ ಅವರ 7 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದರು. ವಿಷ್ಣು ಅವರ ಪತ್ನಿ ಭಾರತಿ ವಿಷ್ಣುವರ್ಧನ್‌, ಕುಟುಂಬ ಸದಸ್ಯರು ಈ ವೇಳೆ ಇದ್ದರು. 3 ಎಕರೆಯಲ್ಲಿ ನಿರ್ಮಿಸಲಾಗಿರುವ ಈ ಸ್ಮಾರಕ ಡಾ ವಿಷ್ಣು ಅವರು ಧರಿಸುತ್ತಿದ್ದ ಕಡಗದ ಆಕೃತಿಯಲ್ಲಿರುವುದು ವಿಶೇಷ.

ವಿಷ್ಣುಗೆ ಕರ್ನಾಟಕರತ್ನ: ಬೊಮ್ಮಾಯಿ ಭರವಸೆ

ಅಭಿಮಾನಿಗಳ ಒತ್ತಾಸೆಯಂತೆ ವಿಷ್ಣುವರ್ಧನ್‌ ಅವರಿಗೆ ‘ಕರ್ನಾಟಕ ರತ್ನ’ ನೀಡುವ ಕುರಿತು ಮುಂದಿನ ದಿನಗಳಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು.ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ವಿಷ್ಣು ಸ್ಮಾರಕ ಉದ್ಘಾಟನೆ ಕೇವಲ ಕಾಟಚಾರಕ್ಕೆ ಆಗ್ತಿದೆ: ಸರ್ಕಾರದ ವಿರುದ್ಧ ಅಭಿಮಾನಿಗಳ ಆಕ್ರೋಶ

ವಿಷ್ಣು ಸ್ಮಾರಕ ವೀಕ್ಷಿಸಲು ನೂಕುನುಗ್ಗಲು

ಖ್ಯಾತ ನಟ ಡಾ.ವಿಷ್ಣುವರ್ಧನ್‌(Dr Vishnuvardan) ಅವರ ಸ್ಮಾರಕವನ್ನು ಅಭಿಮಾನಿಗಳ ಹರ್ಷೋದ್ಘಾರದ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಅವರು ಭಾನುವಾರ ಲೋಕಾರ್ಪಣೆಗೊಳಿಸಿದರು. ಸೋಮವಾರದಿಂದ ಸ್ಮಾರಕ ವೀಕ್ಷಣೆಗೆ ಮುಕ್ತವಾಗಲಿದೆ ಎಂದು ಹೇಳಿದರೂ ಪಟ್ಟು ಬಿಡದ ಅಭಿಮಾನಿಗಳು ಮುಗಿಬಿದ್ದು ಸ್ಮಾರಕ ವೀಕ್ಷಿಸಿದರು.

ಎಚ್‌.ಡಿ.ಕೋಟೆ ರಸ್ತೆಯ ಉದ್ಭೂರು ಗೇಟ್‌ ಹಾಲಾಳು ಗ್ರಾಮದ ಬಳಿ ನಿರ್ಮಿಸಿದ ಸ್ಮಾರಕವನ್ನು ಟೇಪು ಕತ್ತರಿಸುವ ಮೂಲಕ ಹಾಗೂ ವಿಷ್ಣುವರ್ಧನ್‌ ಅವರ 7 ಅಡಿ ಎತ್ತರದ ಪ್ರತಿಮೆಯನ್ನು ತೆರೆ ಸರಿಸುವ ಮೂಲಕ ಉದ್ಘಾಟಿಸಿದರು. 5 ಎಕರೆ ಪ್ರದೇಶದ ಪೈಕಿ ಸುಮಾರು 3 ಎಕರೆಯಲ್ಲಿ ನಿರ್ಮಿಸಲಾದ ಸ್ಮಾರಕವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಹಲವು ತಿಂಗಳಿಂದ ಕಾಯುತ್ತಿದ್ದರು. ಆ ಕನಸೀಗ ಇದೀಗ ನನಸಾಗಿದ್ದು, ಕಾರ್ಯಕ್ರಮ ಮುಗಿಯುತ್ತಿದ್ದಂತೆ ಮುಗಿಬಿದ್ದ ಅಭಿಮಾನಿಗಳು ಸ್ಮಾರಕ ವೀಕ್ಷಿಸಿ, ಫೋಟೋ ಕ್ಲಿಕ್ಕಿಸಿಕೊಂಡು ಧನ್ಯತಾ ಭಾವ ತಾಳಿದರು.

ಸ್ಮಾರಕದ ಆವರಣದಲ್ಲಿನ ಕಡಗ, ವಿಷ್ಣುವರ್ಧನ್‌ ಪ್ರತಿಮೆ, ವಿವಿಧ ಛಾಯಾಚಿತ್ರಗಳನ್ನು ವೀಕ್ಷಿಸಿದ ಅಸಂಖ್ಯಾತ ಸಾರ್ವಜನಿಕರು. ವಿಷ್ಣುಪರ ಘೋಷಣೆ ಕೂಗಿದರು.

ನೂಕು ನುಗ್ಗಲು: ಇದಕ್ಕೂ ಮುನ್ನ ವಿಷ್ಣು ಸ್ಮಾರಕ ಉದ್ಘಾಟನೆಯಾದ ಬೆನ್ನಲ್ಲೇ ಅಭಿಮಾನಿಗಳು ತಮ್ಮನ್ನು ಒಳಗೆ ಬಿಡುವಂತೆ ಪಟ್ಟು ಹಿಡಿದರು. ಆದರೆ, ಟ್ರಸ್ಟ್‌ನವರು ನಾವು ಯಾವುದೇ ರೀತಿಯ ಸಿದ್ಧತೆ ಮಾಡಿಕೊಂಡಿಲ್ಲ. ಸೋಮವಾರದಿಂದ ಸ್ಮಾರಕ ವೀಕ್ಷಣೆಗೆ ಅವಕಾಶ ಕಲ್ಪಿಸುವುದಾಗಿ ಹೇಳಿದರೂ ಒಮ್ಮೆಲೆ ಸ್ಮಾರಕಕ್ಕೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಸಾರ್ವಜನಿಕರು ಮತ್ತು ಅಭಿಮಾನಿಗಳನ್ನು ಒಂದು ಗಂಟೆಗಳ ಕಾಲ ತಡೆ ಹಿಡಿದರು. ಇದರಿಂದಾಗಿ ಅಭಿಮಾನಿಗಳ ಸಹನೆ ಕಟ್ಟೆಯೊಡೆಯುತ್ತಿದ್ದಂತೆ ಪೊಲೀಸರು ತಳ್ಳಿ ಕೆಲವರಿಗೆ ಲಾಠಿ ಬೀಸಿ ಹಿಮ್ಮೆಟ್ಟಿಸಿದರು.

ಈ ವೇಳೆ ಶಾಸಕ ಜಿ.ಟಿ. ದೇವೇಗೌಡರು ಅಭಿಮಾನಿಗಳನ್ನು ಸಮಾಧಾನಪಡಿಸಿದರು. ನಂತರ ಭಾರತಿ ವಿಷ್ಣುವರ್ಧನ್‌ ಅವರ ಜೊತೆ ಮಾತನಾಡಿ, ಚಿಕ್ಕ ಗೇಟ್‌ ಮೂಲಕ ಅಭಿಮಾನಿಗಳು ಸ್ಮಾರಕ ನೋಡಲು ಅವಕಾಶ ಮಾಡಿಕೊಟ್ಟರು.

ಅಭಿಮಾನಿಗಳಿಂದ ಅದ್ಧೂರಿ ಮೆರವಣಿಗೆ: ಸಾಹಸಸಿಂಹ ಡಾ.ವಿಷ್ಣುವರ್ಧನ್‌ ಸ್ಮಾರಕ ಅನಾವರಣ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಮಂದಿ ಅಭಿಮಾನಿಗಳು ಮೆರವಣಿಗೆ ಹಮ್ಮಿಕೊಂಡಿದ್ದರು.

ಮೈಸೂರಿನಿಂದ ಎಚ್‌.ಡಿ.ಕೋಟೆ ರಸ್ತೆಯಲ್ಲಿರುವ ವಿಷ್ಣುವರ್ಧನ್‌ ಸ್ಮಾರಕದವರೆಗೆ ದ್ವಿಚಕ್ರವಾಹನ, ಕಾರು, ಆಟೋ, ಗೂಡ್‌್ಸ ಆಟೋ, ಟೆಂಪೋಗಳು, ಬಸ್‌ಗಳಲ್ಲಿ ಸಾವಿರಾರು ಮಂದಿ ತೆರಳಿದರು. ಈ ವೇಳೆ ಅಭಿಮಾನಿಗಳಿಂದ ಡಾ.ವಿಷ್ಣು ಅವರ ಪಲ್ಲಕ್ಕಿ ಮೆರವಣಿಗೆಯೂ ನಡೆಯಿತು. ಸಾವಿರಾರು ಮಂದಿ ಸಾಹಸಸಿಂಹನ ಅಭಿಮಾನಿಗಳು ಹೆಜ್ಜೆ ಹಾಕಿ ವಿಷ್ಣುದಾದ ಪರ ಘೋಷಣೆ ಕೂಗಿದರು. ವಿಷ್ಣು ಸೇನಾ ಸಮಿತಿ: ಡಾ. ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷ ವೀರಕಪುತ್ರ ಎಂ. ಶ್ರೀನಿವಾಸ್‌ ಅವರ ನೇತೃತ್ವದಲ್ಲಿ ಬೃಹತ್‌ ಮೆರವಣಿಗೆ ಸಹ ನಡೆಯಿತು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ವಿಷ್ಣು ಅಭಿಮಾನಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಡಾ.ವಿಷ್ಣುವರ್ಧನ್‌ ಅವರ ಬೃಹತ್‌ ಪಲಕ್ಕಿ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಬೆಳ್ಳಿ ರಥದ ಸಾರೋಟ್‌ನಲ್ಲಿ ವಿಷ್ಣುವರ್ಧನ್‌ ಅವರ ಭಾವಚಿತ್ರವಿಟ್ಟು ಮೆರವಣಿಗೆ ನಡೆಯುತ್ತಿದ್ದರೆ, ಅಭಿಮಾನಿಗಳು ವಿಷ್ಣುವರ್ಧನ್‌ ವೇಷಭೂಷಣದಲ್ಲಿ ಕಡಗ ಧರಿಸಿ ವಿಷ್ಣುವರ್ಧನ್‌ ಭಾವಚಿತ್ರವಿರುವ ಕನ್ನಡ ದೊಡ್ಡ ದೊಡ್ಡ ಭಾವುಟಗಳನ್ನು ಹಾರಿಸಿ ಜೈಕಾರಗಳನ್ನು ಕೂಗಿ ಸಂಭ್ರಮಿಸಿದರು.

13 ವರ್ಷಗಳ ಹೋರಾಟದ ಫಲ: ಸಿಎಂ ಬೊಮ್ಮಾಯಿ ಅವರಿಂದ ಇಂದು ವಿಷ್ಣು ಸ್ಮಾರಕ ಉದ್ಘಾಟನೆ

ಮೆರವಣಿಗೆಯುದ್ದಕ್ಕೂ ವಿಷ್ಣು ತಮ್ಮ ನೆಚ್ಚಿನ ನಟನ ನೆನೆದು ತಮ್ಮದೇ ಆದ ದಾಟಿಯಲ್ಲಿ ವಿವಿಧ ಘೋಷವಾಕ್ಯಗಳನ್ನು ಕೂಗಿ ವಿಷ್ಣುವರ್ಧನ್‌ ಮೇಲಿನ ಅಭಿಮಾನ ಮೆರೆದರು. ಡೊಳ್ಳು ಕುಣಿತ, ಗಾರುಡಿ ಗೊಂಬೆ, ನಾಸಿಕ್‌ ಡೋಲ್‌, ತಮಟೆ ಮತ್ತಿತ್ತರ ಕಲಾ ತಂಡಗಳು ಮೆರವಣಿಗೆ ಮೆರುಗು ಹೆಚ್ಚಿಸಿದವು.

Latest Videos
Follow Us:
Download App:
  • android
  • ios