ದಕ್ಷಿಣ ಕನ್ನಡ ಜಿಲ್ಲೆಯ ಶಿರಾಡಿ ಘಾಟ್ ಗಡಿಯಲ್ಲಿ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್ ಮತ್ತು ಸ್ವಿಫ್ಟ್ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ದಕ್ಷಿಣ ಕನ್ನಡ (ಮಾ.13): ಜಿಲ್ಲೆಯ ಕಡಬ ತಾಲೂಕಿನ ಗುಂಡ್ಯ ಸಮೀಪದ ಶಿರಾಡಿ ಘಾಟ್ ಗಡಿ ಭಾಗದಲ್ಲಿ ಇಂದು ಸಂಜೆ ಅತ್ಯಂತ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಕೆಎಸ್‌ಆರ್‌ಟಿಸಿ ರಾಜಹಂಸ ಬಸ್ ಹಾಗೂ ಸ್ವಿಫ್ಟ್ ಡಿಸೈರ್ ಕಾರಿನ ನಡುವೆ ನಡೆದ ಈ ರಕ್ತಸಿಕ್ತ ಮುಖಾಮುಖಿ ಡಿಕ್ಕಿಯಲ್ಲಿ ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ವಿವರ:
ಶಿಶಿಲ ಗ್ರಾಮದ ಧರ್ಮದಕಳ ನಿವಾಸಿ ಚಂದ್ರಶೇಖರ ಗೌಡ ಅವರಿಗೆ ಸೇರಿದ ಸ್ವಿಫ್ಟ್ ಡಿಸೈರ್ ಕಾರು ಬೆಂಗಳೂರಿನಿಂದ ಕೊಕ್ಕಡದ ಕಡೆಗೆ ಪ್ರಯಾಣಿಸುತ್ತಿತ್ತು. ಇತ್ತ ಧರ್ಮಸ್ಥಳದಿಂದ ಬೆಂಗಳೂರು ಮಾರ್ಗವಾಗಿ ತಿರುಪತಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್ ಗುಂಡ್ಯ ಸಮೀಪದ ತಿರುವಿನಲ್ಲಿ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರು ಮತ್ತು ಬಸ್ ನಡುವಿನ ಡಿಕ್ಕಿಯ ಭೀಕರತೆಗೆ ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತದೇಹಗಳು ವಾಹನದೊಳಗೆ ಸಿಲುಕಿಕೊಂಡಿದ್ದು, ಸ್ಥಳೀಯರು ಮತ್ತು ಪೊಲೀಸರು ಹರಸಾಹಸ ಪಟ್ಟು ಹೊರತೆಗೆದಿದ್ದಾರೆ. ಮೃತಪಟ್ಟವರನ್ನು ಚಂದ್ರಶೇಖರ ಗೌಡ ಅವರ ಕುಟುಂಬಸ್ಥರು ಅಥವಾ ಸಂಬಂಧಿಕರು ಎಂದು ಶಂಕಿಸಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನು ಲಭ್ಯವಾಗಬೇಕಿದೆ.
ನಜ್ಜುಗುಜ್ಜಾದ ಕಾರು, ರಸ್ತೆಯಲ್ಲಿ ಟ್ರಾಫಿಕ್
ಅಪಘಾತದ ಭೀಕರತೆಯನ್ನು ಕಾರಿನ ಸ್ಥಿತಿಯೇ ವಿವರಿಸುತ್ತಿತ್ತು. ವೇಗವಾಗಿ ಬಂದ ಬಸ್ ಕಾರಿಗೆ ಗುದ್ದಿದ ಪರಿಣಾಮ, ಕಾರಿನ ಮುಂಭಾಗ ಸಂಪೂರ್ಣ ಜಜ್ಜಲ್ಪಟ್ಟಿದೆ. ರಾಜಹಂಸ ಬಸ್‌ನ ಮುಂಭಾಗಕ್ಕೂ ಹಾನಿಯಾಗಿದ್ದು, ಬಸ್ಸಿನಲ್ಲಿದ್ದ ಕೆಲವು ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ. ಗುಂಡ್ಯ ಮತ್ತು ಶಿರಾಡಿ ಘಾಟ್ ಗಡಿ ಭಾಗದಲ್ಲಿ ಈ ಅಪಘಾತ ಸಂಭವಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಘಟನಾ ಸ್ಥಳಕ್ಕೆ ಕಡಬ ಪೊಲೀಸರು ಧಾವಿಸಿದ್ದು, ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಕ್ರಮ ಕೈಗೊಂಡಿದ್ದಾರೆ. ಮೃತದೇಹಗಳನ್ನು ಶವ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: ಬಸ್ ನಿಲ್ಲಿಸಿದ್ದೇ ತಡ, ಮಂತ್ರಾಲಯದಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ನಲ್ಲಿ 90 ಲಕ್ಷ ಮೌಲ್ಯದ ಒಡವೆ ಬ್ಯಾಗ್ ರಾಬರಿ!
ಹೆಚ್ಚುತ್ತಿರುವ ಅಪಘಾತಗಳು:
ಶಿರಾಡಿ ಘಾಟ್ ಮತ್ತು ಗುಂಡ್ಯ ವ್ಯಾಪ್ತಿಯ ತಿರುವುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವುದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಅತಿಯಾದ ವೇಗ ಮತ್ತು ಅಜಾಗರೂಕ ಚಾಲನೆಯೇ ಇಂತಹ ಅವಘಡಗಳಿಗೆ ಪ್ರಮುಖ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಸದ್ಯ ಕಡಬ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಒಂದು ಕ್ಷಣದ ಅಜಾಗರೂಕತೆ ಮೂರು ಜೀವಗಳನ್ನು ಬಲಿಪಡೆದಿದ್ದು, ಚಂದ್ರಶೇಖರ ಗೌಡ ಅವರ ಕುಟುಂಬಸ್ಥರಲ್ಲಿ ಶೋಕ ಸಾಗರ ಮುಳುಗಿಸಿದೆ.


