ಜಂಕ್ಷನ್‌ಗಳಲ್ಲಿ ಪೊಲೀಸರಿಲ್ಲ ಎಂದು ಭಾವಿಸಿ ಸಿಗ್ನಲ್‌ ಜಂಪ್‌, ಹೆಲ್ಮೆಟ್‌ ಇಲ್ಲದೆ ಚಾಲನೆ ಹೀಗೆ ಸಂಚಾರ ನಿಯಮ ಉಲ್ಲಂಘಿಸುವ ಮುನ್ನ ಜಾಗ್ರತೆವಹಿಸಿ. ಈಗ ನಗರದ 50 ಪ್ರಮುಖ ಜಂಕ್ಷನ್‌ಗಳಲ್ಲಿ ಅತ್ಯಾಧುನಿಕ ಕ್ಯಾಮರಾ ಅಳವಡಿಸಿ ಕಾನೂನು ಮೀರಿದವರ ಮೇಲೆ ಪೊಲೀಸರು ಕಣ್ಗಾವಲಿಟ್ಟಿದ್ದಾರೆ. 

ಬೆಂಗಳೂರು (ಡಿ.08): ಜಂಕ್ಷನ್‌ಗಳಲ್ಲಿ ಪೊಲೀಸರಿಲ್ಲ ಎಂದು ಭಾವಿಸಿ ಸಿಗ್ನಲ್‌ ಜಂಪ್‌, ಹೆಲ್ಮೆಟ್‌ ಇಲ್ಲದೆ ಚಾಲನೆ ಹೀಗೆ ಸಂಚಾರ ನಿಯಮ ಉಲ್ಲಂಘಿಸುವ ಮುನ್ನ ಜಾಗ್ರತೆವಹಿಸಿ. ಈಗ ನಗರದ 50 ಪ್ರಮುಖ ಜಂಕ್ಷನ್‌ಗಳಲ್ಲಿ ಅತ್ಯಾಧುನಿಕ ಕ್ಯಾಮರಾ ಅಳವಡಿಸಿ ಕಾನೂನು ಮೀರಿದವರ ಮೇಲೆ ಪೊಲೀಸರು ಕಣ್ಗಾವಲಿಟ್ಟಿದ್ದಾರೆ. ತಪ್ಪು ಮಾಡಿದರೆ ನಿಮ್ಮ ಮೊಬೈಲ್‌ಗೆ ವಿಡಿಯೋ ಸಾಕ್ಷ್ಯ ಸಮೇತ ದಂಡ ಪಾವತಿ ನೋಟಿಸ್‌ ಬರಲಿದೆ. ಈ ನೂತನ ವ್ಯವಸ್ಥೆಯಾದ ‘ಇಂಟೆಲಿಜೆಂಟ್‌ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ’ಗೆ (ಐಟಿಎಂಎಸ್‌) ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಸಿರು ನಿಶಾನೆ ತೋರಲಿದ್ದಾರೆ.

ಇದು ಜಂಕ್ಷನ್‌ಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ ಆ ವಾಹನಗಳಿಗೆ ಸ್ವಯಂ ಚಾಲಿತ ದಂಡ ವಿಧಿಸುವ ವ್ಯವಸ್ಥೆ ಇದಾಗಿದೆ. ಇದಕ್ಕೆ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಮತ್ತು ಮಷಿನ್‌ ಲರ್ನಿಂಗ್‌ ತಂತ್ರಜ್ಞಾನ ಬಳಸಿ ವಾಹನ ಮಾಲಿಕರ ಮೊಬೈಲ್‌ಗೆ ಎಸ್‌ಎಂಎಸ್‌ ಮೂಲಕ ಇ-ಚಲನ್‌ ರವಾನೆಯಾಗಲಿದೆ. ಪ್ರಮುಖ ಜಂಕ್ಷನ್‌ಗಳಲ್ಲಿ ಸಂಚಾರ ನಿರ್ವಹಣೆಗೆ ಪೊಲೀಸರಿಗೆ ಸವಾಲಾಗಿದೆ. ಆ ವೇಳೆ ಕೆಲವರು ಹೆಲ್ಮೆಟ್‌ ರಹಿತ, ತ್ರಿಬಲ್‌ ರೈಡಿಂಗ್‌ ಹಾಗೂ ಸಿಗ್ನಲ್‌ ಜಂಪ್‌ ಹೀಗೆ ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ನಿಗಾವಹಿಸುವುದು ಕಷ್ಟದ ಕೆಲಸವಾಗಿದೆ. ಕಾನೂನು ಮೀರಿದವರನ್ನು ಅಡ್ಡಗಟ್ಟಿದಂಡ ವಿಧಿಸಲು ಮುಂದಾದರೆ ಮತ್ತೆ ಇತರೆ ವಾಹನಗಳ ಓಡಾಟಕ್ಕೆ ಅಡ್ಡಿಯಾಗುತ್ತದೆ. 

ರೆಡ್ಡಿ ಸ್ನೇಹ, ಪಕ್ಷ ಸರಿದೂಗಿಸಿಕೊಂಡು ಹೋಗುತ್ತೇನೆ: ಸಚಿವ ಶ್ರೀರಾಮುಲು

ಇನ್ನೊಂದೆಡೆ ಟ್ರಾಫಿಕ್‌ ಪೊಲೀಸರ ಬಗ್ಗೆ ಸಾರ್ವಜನಿಕರು ಸಹ ಟೀಕೆ ಮಾಡುತ್ತಾರೆ. ಈ ತಾಪತ್ರಯಗಳ ಅಂತ್ಯಕ್ಕೆ ಈಗ ಸ್ವಯಂ ಚಾಲಿತ ದಂಡ ವಿಧಿಸುವ ವ್ಯವಸ್ಥೆ ರೂಪಿಸಿದ್ದೇವೆ. ತಪ್ಪು ಮಾಡಿದರೆ ವಿಡಿಯೋ ಲಿಂಕ್‌ ಸಮೇತ ನೋಟಿಸ್‌ ರವಾನೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ತಂತ್ರಜ್ಞಾನ ಒಳಗೊಂಡ 250 ಆಟೋಮ್ಯಾಟಿಕ್‌ ನಂಬರ್‌ ಪ್ಲೇಟ್‌ ರೆಕಗ್ನಿಷನ್‌ (ಎಎನ್‌ಪಿಆರ್‌) ಕ್ಯಾಮರಾಗಳು ಮತ್ತು 80 ರೆಡ್‌ಲೈಟ್‌ ವಯೋಲೇಷನ್‌ ಡಿಟೆಕ್ಷನ್‌ (ಆರ್‌ಎಲ್‌ವಿಡಿ) ಕ್ಯಾಮರಾಗಳನ್ನು ನಗರದ ಪ್ರಮುಖ 50 ಜಂಕ್ಷನ್‌ಗಳಲ್ಲಿ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಕ್ಯಾಮರಾಗಳು ಜಂಕ್ಷನ್‌ಗಳಲ್ಲಿ ವೇಗ ಮಿತಿ, ಕೆಂಪು ದೀಪ, ಸ್ಟಾಪ್‌ ಲೇನ್‌, ಹೆಲ್ಮೆಟ್‌ ರಹಿತ, ತ್ರಿಬಲ್‌ ರೈಡಿಂಗ್‌, ವಾಹನ ಚಾಲನೆ ವೇಳೆ ಮೊಬೈಲ್‌ ಬಳಕೆ ಹಾಗೂ ಸೀಟ್‌ ಬೆಲ್ಟ್‌ ಉಲ್ಲಂಘನೆಗಳನ್ನು ಸ್ವಯಂ ಚಾಲಿತವಾಗಿ ಗುರುತಿಸಲಿವೆ. ಅನಂತರ ನಿಯಮ ಮೀರಿದ ವಾಹನದ ನಂಬರ್‌ ಪ್ಲೇಟ್‌ ಗುರುತಿಸಿ ನೋಂದಣಿ ಸಂಖ್ಯೆ ಆಧರಿಸಿ ವಾರಸುದಾರರ ಮೊಬೈಲ್‌ ನಂಬರ್‌ಗೆ ಎಸ್‌ಎಂಎಸ್‌ನಲ್ಲಿ ಇ-ಚಲನ್‌ ಕಳುಹಿಸಲಿವೆ. ಈ ಕ್ಯಾಮರಾಗಳು ದಿನದ 24 ಗಂಟೆ 365 ದಿನಗಳು ಕಾರ್ಯನಿರ್ವಹಿಸಲಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಈ ವ್ಯವಸ್ಥೆಯಿಂದ ಸಂಚಾರ ಪೊಲೀಸರ ಮೇಲಿನ ಕಾರ್ಯದೊತ್ತಡವು ಕಡಿಮೆಯಾಗಲಿದೆ. ಸಂಚಾರ ನಿಯಮ ಪಾಲನೆಯಿಂದ ರಸ್ತೆಗಳಲ್ಲಿ ಶಿಸ್ತು, ಅಪಘಾತಗಳಲ್ಲಿ ಇಳಿಮುಖ, ರಸ್ತೆ ಸುರಕ್ಷತೆ ಕಾಣಬಹುದು ಎಂದು ಪೊಲೀಸರ ಆಶಯವಾಗಿದೆ.

ಯಾವ್ಯಾವ ತಪ್ಪಿಗೆ ಕ್ಯಾಮರಾ ಕಣ್ಣು
* ಅತಿವೇಗದ ಚಾಲನೆ
* ಸಿಗ್ನಲ್‌ ಜಂಪ್‌
* ಸ್ಪಾಪ್‌ ಲೇನ್‌ ಉಲ್ಲಂಘನೆ
* ಹೆಲ್ಮೆಟ್‌ ರಹಿತ ಚಾಲನೆ
* ತ್ರಿಬಲ್‌ ರೈಡಿಂಗ್‌
* ಚಾಲನೆ ವೇಳೆ ಮೊಬೈಲ್‌ ಬಳಕೆ
* ಸೀಟ್‌ ಬೆಲ್ಟ್‌ ಧರಿಸದಿರುವುದು

ತಪ್ಪಿಗೆ 5 ಸೆಕೆಂಡ್‌ ವಿಡಿಯೋ ಸಾಕ್ಷಿ: ನಗರದ ಪ್ರಮುಖ 50 ಜಂಕ್ಷನ್‌ಗಳಲ್ಲಿ ಎಎನ್‌ಪಿಆರ್‌ 250 ಕ್ಯಾಮರಾ ಹಾಗೂ ಆರ್‌ಎಲ್‌ವಿಡಿ 50 ಕ್ಯಾಮರಾಗಳು ಅಳವಡಿಸಲಾಗಿದೆ. ಈ ಜಂಕ್ಷನ್‌ಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ ವಾಹನ ಮಾಲಿಕರಿಗೆ ಕೆಲವೇ ಕ್ಷಣಗಳಲ್ಲಿ ಮೊಬೈಲ್‌ಗೆ ಇ-ಚಲನ್‌ ಒಳಗೊಂಡ ಲಿಂಕ್‌ ಬರಲಿದೆ. ಅದರಲ್ಲಿ ಫೋಟೋ ಮತ್ತು 5 ಸೆಕೆಂಡ್‌ ವಿಡಿಯೋ ಸಾಕ್ಷಿ ಸಮೇತ ಸಂಚಾರ ನಿಯಮ ಉಲ್ಲಂಘಟನೆ ದಂಡ ಪಾವತಿ ನೋಟಿಸ್‌ ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನಾರ್ದನ ರೆಡ್ಡಿಗೆ ಬಿಗ್‌ ರಿಲೀಫ್‌: ಬೇನಾಮಿ ಕೇಸ್‌ ರದ್ದು

ಪ್ರಮುಖ ಜಂಕ್ಷನ್‌ಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ನಾಗರಿಕರ ಜತೆ ಟ್ರಾಫಿಕ್‌ ಪೊಲೀಸರ ವಾಗ್ವಾದ, ಜಗಳಗಳು ಇನ್ಮುಂದೆ ಇರುವುದಿಲ್ಲ. ಕಾನೂನು ಮೀರಿದವರ ಮೇಲೆ ಕ್ಯಾಮೆರಾಗಳೇ ಕಣ್ಣಿಡಲಿದ್ದು, ತಪ್ಪು ಮಾಡಿದರೆ ಸಾಕ್ಷ್ಯ ಸಮೇತ ಸ್ವಯಂ ಚಾಲಿತವಾಗಿ ದಂಡ ವಿಧಿಸುವ ವ್ಯವಸ್ಥ ಜಾರಿಗೊಳಿಸಲಾಗುತ್ತಿದೆ.
-ಸಿ.ಎಚ್‌.ಪ್ರತಾಪ್‌ ರೆಡ್ಡಿ, ನಗರ ಪೊಲೀಸ್‌ ಆಯುಕ್ತ