- Home
- Karnataka Districts
- ಮುಳ್ಳಯ್ಯನಗಿರಿ ಮರಗಳಲ್ಲಿ ನೇತಾಡುತ್ತಿವೆ ಮಡಿಕೆ; ಗುಡ್ಡದಲ್ಲಿ ಕಲ್ಲಿನ ಗೋಪುರ ಕಟ್ಟುವ ಬದಲು, ಮರಗಳಿಗೆ ಮಡಿಕೆ ಕಟ್ಟಿ!
ಮುಳ್ಳಯ್ಯನಗಿರಿ ಮರಗಳಲ್ಲಿ ನೇತಾಡುತ್ತಿವೆ ಮಡಿಕೆ; ಗುಡ್ಡದಲ್ಲಿ ಕಲ್ಲಿನ ಗೋಪುರ ಕಟ್ಟುವ ಬದಲು, ಮರಗಳಿಗೆ ಮಡಿಕೆ ಕಟ್ಟಿ!
ಚಿಕ್ಕಮಗಳೂರಿನಲ್ಲಿ ಹೆಚ್ಚುತ್ತಿರುವ ಬೇಸಿಗೆಯ ತಾಪಮಾನದಿಂದ ಬಳಲುತ್ತಿರುವ ಪಕ್ಷಿಗಳಿಗಾಗಿ 'ಪ್ರವಾಸಿ ಮಿತ್ರರು' ಮಾನವೀಯತೆ ಮೆರೆದಿದ್ದಾರೆ. ಮುಳ್ಳಯ್ಯನಗಿರಿ ಮತ್ತು ಸೀತಾಳಯ್ಯನಗಿರಿಯ ಮರಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಮಡಿಕೆಗಳನ್ನು ಕಟ್ಟಿ, ಅವುಗಳಿಗೆ ನೀರು ತುಂಬಿಸಿ ದಾಹ ತಣಿಸುತ್ತಿದ್ದಾರೆ.

ಚಿಕ್ಕಮಗಳೂರು : ಕಾಫಿನಾಡು ಎಂದೇ ಖ್ಯಾತಿ ಪಡೆದಿರುವ ಚಿಕ್ಕಮಗಳೂರಿನಲ್ಲಿ ಬೇಸಿಗೆಯ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮನುಷ್ಯರಷ್ಟೇ ಅಲ್ಲ, ಮೂಕಪ್ರಾಣಿ ಪಕ್ಷಿಗಳೂ ನೀರಿಗಾಗಿ ಹಾಹಾಕಾರ ಮಾಡುತ್ತಿರುವುದು ಕಳವಳಕಾರಿ ಸಂಗತಿ. ಇಂತಹ ಸಂದರ್ಭದಲ್ಲಿ ಪ್ರವಾಸಿಗರ ನೆರವಿಗೆ ಸದಾ ಸಿದ್ಧರಾಗಿರುವ ‘ಪ್ರವಾಸಿ ಮಿತ್ರರು’ ಇದೀಗ ಪಕ್ಷಿಗಳ ದಾಹ ತಣಿಸುವ ಅಪರೂಪದ ಸೇವೆ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಜಿಲ್ಲೆಯ ಜನಪ್ರಿಯ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ ,ಸೀತಾಳಯ್ಯನಗಿರಿಯ ವಿವಿಧ ಭಾಗಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಗುತ್ತಿಗೆ ನೌಕರರಾದ ಗಂಗಾಧರ್, ಹರೀಶ್, ರಾಜು, ರಮೇಶ್ ಮತ್ತು ಯೋಗೇಶ್ ಅವರು ವಿಶಿಷ್ಟ ಕಾರ್ಯಕ್ಕೆ ಕೈ ಹಾಕಿದ್ದಾರೆ.ತಮ್ಮ ಖರ್ಚಿನಲ್ಲಿ ಮಡಿಕೆ ಖರೀದಿಸಿ 70ಕ್ಕೂ ಹೆಚ್ಚು ಮರಗಳಿಗೆ ಕಟ್ಟಿ ನೀರಿನ ವ್ಯವಸ್ಥೆ ಮಾಡಿದ್ದಾರೆ.
ಬೇಸಿಗೆಯ ತಾಪಮಾನದಿಂದ ನೀರಿನ ಮೂಲಗಳು ಒಣಗುತ್ತಿರುವುದನ್ನು ಗಮನಿಸಿದ ಈ ಪ್ರವಾಸಿ ಮಿತ್ರರು ತಮ್ಮ ಸ್ವಂತ ಹಣದಿಂದ ಮಡಿಕೆಗಳನ್ನು ಖರೀದಿಸಿದ್ದಾರೆ. ಗಿರಿಶ್ರೇಣಿಯ ಸುಮಾರು 70ಕ್ಕೂ ಹೆಚ್ಚು ಮರಗಳ ಕೊಂಬೆಗಳಿಗೆ ಆ ಮಡಿಕೆಗಳನ್ನು ಭದ್ರವಾಗಿ ಕಟ್ಟಿ, ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿದ್ದಾರೆ.ಇದು ಕೇವಲ ಒಂದು ದಿನದ ಕಾರ್ಯವಲ್ಲ. ಪ್ರತಿ ಎರಡು ದಿನಕ್ಕೊಮ್ಮೆ ತಪ್ಪದೇ ಮಡಿಕೆಗಳಿಗೆ ನೀರು ತುಂಬಿಸುವ ಜವಾಬ್ದಾರಿಯನ್ನೂ ಇವರು ಹೊತ್ತಿದ್ದಾರೆ. ತಮ್ಮ ನಿಯಮಿತ ಕರ್ತವ್ಯಗಳ ನಡುವೆ ಈ ಸೇವೆಯನ್ನು ನಿರಂತರವಾಗಿ ಮುಂದುವರಿಸುತ್ತಿರುವುದು ವಿಶೇಷ.
ಈ ಶ್ಲಾಘನೀಯ ಕಾರ್ಯಕ್ಕೆ ಸ್ಥಳೀಯ ಜೀಪ್ ಚಾಲಕರು ಕೂಡ ಕೈಜೋಡಿಸಿದ್ದಾರೆ. ನೀರು ಸಾಗಿಸಲು ಹಾಗೂ ಅಗತ್ಯ ಸಹಾಯ ಮಾಡಲು ಅವರು ಸಾಥ್ ನೀಡುತ್ತಿದ್ದಾರೆ. ಪ್ರವಾಸಿಗರ ಸುರಕ್ಷತೆ ಮಾತ್ರವಲ್ಲದೆ, ಪರಿಸರ ಸಂರಕ್ಷಣೆ ಮತ್ತು ಜೀವರಾಶಿಗಳ ಬಗ್ಗೆ ಕಾಳಜಿ ವಹಿಸುವ ಸಂದೇಶವನ್ನು ಈ ಕಾರ್ಯ ನೀಡುತ್ತಿದೆ.
ಇನ್ನು ಇತ್ತೀಚಿನ ದಿನಗಳಲ್ಲಿ ಗುಡ್ಡಗಾಡು ಪ್ರದೇಶದಲ್ಲಿರುವ ದೇವಾಲಗಳಿಗೆ ಹೋದಲ್ಲಿ ಅಲ್ಲಿ ಕಲ್ಲುಗಳನ್ನು ಜೋಡಿಸಿ ಮನೆ ಕಟ್ಟುವ ಸೌಭಾಗ್ಯವನ್ನು ಕರುಣಿಸು ಎಂದು ದೇವರ ಕೇಳುತ್ತೇವೆ. ಅದೇ ರೀತಿ ಚಿಕ್ಕಮಗಳೂರು ಗಿರಿ ಶ್ರೇಣಿಗೆ ಪ್ರವಾಸಕ್ಕೆ ಬರುವವರು ಗಿಡ-ಮರಗಳಿಗೊಂದು ಮಡಿಕೆ ಕಟ್ಟಿ ಅದಕ್ಕೆ ನೀರು ಹಾಕಿ ನಿಮಗೆ ಪುಣ್ಯ ಬರುತ್ತದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಪ್ರವಾಸಿಗರು ಮತ್ತು ಪರಿಸರ ಪ್ರೇಮಿಗಳು ಪ್ರವಾಸಿ ಮಿತ್ರರ ಈ ಕಾರ್ಯವನ್ನು ಸಾರ್ವಜನಿಕರು ಪ್ರಶಂಸಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಇವರ ಕಾರ್ಯದ ಬಗ್ಗೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.ಬೇಸಿಗೆಯ ಕಠಿಣ ಪರಿಸ್ಥಿತಿಯಲ್ಲಿ ಮಾನವೀಯತೆ ಮೆರೆಯುವ ಇಂತಹ ಕಾರ್ಯಗಳು ಸಮಾಜಕ್ಕೆ ಪ್ರೇರಣೆಯಾಗುತ್ತವೆ. ಪ್ರಕೃತಿ ಮತ್ತು ಜೀವಜಗತ್ತಿನ ಜೊತೆಗಿನ ನಮ್ಮ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಈ ‘ಪ್ರವಾಸಿ ಮಿತ್ರ’ರ ಸೇವೆ ನಿಜಕ್ಕೂ ಅಭಿನಂದನೀಯ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

