ಹಲವು ಕಾರ್ಖಾನೆಗಳಿಂದ ನಿಯಮ ಉಲ್ಲಂಘನೆ; ಸರ್ವೇ ವೇಳೆ ಬೆಳಕಿಗೆ!
ಇತ್ತೀಚೆಗೆ ಸಂಬಂವಿಸಿದ ಅಗ್ನಿ ದುರಂತದಲ್ಲಿ ಕೈಗಾರಿಕೆಗಳ ಸಮೀಕ್ಷೆ ನಡೆಸಿದ್ದ ಜಿಲ್ಲಾಡಳಿತ ಶಾಕ್ ಆಗಿದೆ. ಹಲವು ಕಾರ್ಖಾನೆಗಳು ನಿಯಮ ಬಾಹಿರವಾಗಿ ಇರುವುದು ಪತ್ತೆಯಾಗಿದೆ.
ಹುಬ್ಬಳ್ಳಿ (ಆ.18) : ತಾಲೂಕಿನ ತಾರಿಹಾಳದಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದಾಗಿ ಕೈಗಾರಿಕೆಗಳ ಸಮೀಕ್ಷೆ ನಡೆಸಿದ್ದ ಜಿಲ್ಲಾಡಳಿತಕ್ಕೆ ಹಲವು ಕೈಗಾರಿಕೆಗಳು ನಿಯಮ ಬಾಹೀರವಾಗಿ ಇರುವುದು ಗೊತ್ತಾಗಿದೆ. ಹಲವು ಕೈಗಾರಿಕೆಗಳು ವಿವಿಧ ಇಲಾಖೆಗಳ ಪರವಾನಗಿಯನ್ನೇ ಪಡೆಯದೇ ಇರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ 2 ತಿಂಗಳೊಳಗೆ ನ್ಯೂನತೆ ಸರಿಪಡಿಸಿಕೊಳ್ಳುವಂತೆ ಸೂಚಿಸಿರುವ ಜಿಲ್ಲಾಡಳಿತ ನಾಲ್ಕು ಕಾರ್ಖಾನೆಗಳ ಉತ್ಪಾದನಾ ನಿಷೇಧಿಸಿ ಆದೇಶಿಸಿದೆ. 75 ಕಾರ್ಖಾನೆಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ಈ ಮೂಲಕ ತಾರಿಹಾಳದಲ್ಲಿ ನಡೆದ ಅಗ್ನಿ ಅವಘಡದ ನಂತರ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಂತಾಗಿದೆ.
ಮಂಡ್ಯ: ಆ.8ರಂದು ಮೈಷುಗರ್ ಬಾಯ್ಲರ್‌ಗೆ ಬೆಂಕಿ
ಹುಬ್ಬಳ್ಳಿ(Hubballi) ತಾಲೂಕಿನ ತಾರಿಹಾಳ(Taarihaal)ದಲ್ಲಿ ಸ್ಪಾರ್ಕಲ್ ಕ್ಯಾಂಡಲ್ ಉತ್ಪಾದನಾ(sparkle candle factory) ಘಟಕದಲ್ಲಿ ಕಳೆದ ತಿಂಗಳು ನಡೆದ ಅಗ್ನಿ ದುರಂತದಲ್ಲಿ 6 ಜನ ಮೃತಪಟ್ಟು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ಅಗ್ನಿ ಅವಘಡ ಸಂಭವಿಸಿದ ಕಾರ್ಖಾನೆ ಅನಧಿಕೃತವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಕಾರ್ಖಾನೆಗಳ ಸಮೀಕ್ಷೆ(factory survey) ನಡೆಸಲು ಜಿಲ್ಲಾಡಳಿತ ಸೂಚಿಸಿತ್ತು. ಇದಕ್ಕಾಗಿ 10 ತಂಡಗಳನ್ನು ರಚಿಸಲಾಗಿತ್ತು. ಕೆಐಎಡಿಬಿ, ಕೆಎಸ್‌ಎಸ್‌ಐಡಿಸಿ, ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ, ವಿದ್ಯುತ್ ಪರಿವೀಕ್ಷಣಾ ಇಲಾಖೆ, ಕಾರ್ಖಾನೆ ಮತ್ತು ಬಾಯ್ಲರ್‌ಗಳ ಇಲಾಖೆ, ಕಾರ್ಮಿಕ ಇಲಾಖೆ, ಹೆಸ್ಕಾಂ, ಕಂದಾಯ, ಪೊಲೀಸ್ ಮತ್ತು ಅಗ್ನಿ ಶಾಮಕ ದಳದ ಅಧಿಕಾರಿಗಳು ಈ ತಂಡಗಳಲ್ಲಿದ್ದರು.
ಈ 10 ತಂಡಗಳು 10 ಕೈಗಾರಿಕಾ ವಸಾಹತು, 6 ಕೈಗಾರಿಕಾ ಪ್ರದೇಶಗಳಲ್ಲಿ ಆ. 6ರ ವರೆಗೆ 2180 ಕೈಗಾರಿಕಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಹಲವು ಕಾರ್ಖಾನೆಗಳು ನಿಯಮಗಳನ್ನು ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ.
ಕೊಟ್ಟ ಮಾತು ಉಳಿಸಿಕೊಂಡ ಬಿಜೆಪಿ ಸರ್ಕಾರ : ಮೈಶುಗರ್ ಕಾರ್ಖಾನೆ ಪುನರಾರಂಭಕ್ಕೆ ಕ್ಷಣಗಣನೆ
ಕಾನೂನು ಬಾಹೀರ: ವಿವಿಧ ಇಲಾಖೆಗಳು ಅನುಷ್ಠಾನಗೊಳಿಸುವ ಕಾನೂನುಗಳನ್ವಯ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಪರವಾನಗಿಯನ್ನು 647 ಘಟಕಗಳು ಪಡೆದಿಲ್ಲ. ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ಅನ್ವಯ 75 ಘಟಕಗಳು ಪರವಾನಗಿ ಪಡೆದಿಲ್ಲ. ಕಾರ್ಮಿಕ ಇಲಾಖೆ ಪರವಾನಗಿಯನ್ನು 978, ಇನ್ನೂ 15 ಕಾರ್ಖಾನೆಗಳು ಇಎಸ್‌ಐ ಸೌಲಭ್ಯ ಕಲ್ಪಿಸಿಲ್ಲ. ಭವಿಷ್ಯ ನಿಧಿಯನ್ನು 2 ಕಾರ್ಖಾನೆಗಳು ನೀಡುತ್ತಿಲ್ಲ. ವಿದ್ಯುತ್ ಇಲಾಖೆ ಪರವಾನಗಿಯನ್ನು 101 ಕಾರ್ಖಾನೆಗಳು ಪಡೆದಿಲ್ಲ. ಕೆಐಎಡಿಬಿನ ಬೈಲಾವನ್ನು 278 ಘಟಕಗಳು, ಕೆಎಸ್‌ಎಸ್‌ಐಡಿಸಿನ ನಿಯಮಗಳನ್ನು 106 ಕೈಗಾರಿಕೆಗಳು ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ.
ಇವುಗಳ ಪೈಕಿ 4 ಕಾರ್ಖಾನೆಗಳಿಗೆ ಉತ್ಪಾದನಾ ನಿಷೇಧಿಸಿ ಆದೇಶಿಸಲಾಗಿದೆ. 75 ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದೆ. ಇದಲ್ಲದೇ, 22 ಘಟಕಗಳಿಗೆ ಕಾನೂನು ಉಲ್ಲಂಘನೆಯ ಕಠಿಣ ಕ್ರಮ ಕೈಗೊಳ್ಳಲಾಗಿದೆ. ವಿವಿಧ ಇಲಾಖೆಗಳಿಂದ ಪರವಾನಗಿ ಪಡೆಯದೇ ಉಲ್ಲಂಘಿಸಿದ ಕೈಗಾರಿಕಾ ಘಟಕಗಳಿಗೆ ಮೂರು ದಿನಗಳೊಳಗಾಗಿ ಇಲಾಖೆಯ ನಿಯಮಾವಳಿ ಪ್ರಕಾರ ನೋಟಿಸ್ ಜಾರಿ ಮಾಡುವಂತೆ ಇಲಾಖೆ ಮುಖ್ಯಸ್ಥರಿಗೆ ಆದೇಶಿಸಲಾಗಿದೆ. ಎಲ್ಲ ಕೈಗಾರಿಕಾ ಘಟಕಗಳಲ್ಲಿ ಇರುವ ನ್ಯೂನತೆ ಸರಿಪಡಿಸಿಕೊಳ್ಳಲು 2 ತಿಂಗಳು ಕಾಲಾವಕಾಶ ನೀಡಲಾಗಿದೆ. ಒಂದು ವೇಳೆ ತಪ್ಪಿದಲ್ಲಿ ಕಾನೂನು ಉಲ್ಲಂಘನೆ ಮಾಡುತ್ತಿರುವ ಎಲ್ಲ ಘಟಕಗಳ ಮೇಲೆ ಕಾನೂನು ಪ್ರಕಾರ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಎಚ್ಚರಿಕೆ ನೀಡಿದ್ದಾರೆ.