ಕೊಟ್ಟ ಮಾತು ಉಳಿಸಿಕೊಂಡ ಬಿಜೆಪಿ ಸರ್ಕಾರ : ಮೈಶುಗರ್ ಕಾರ್ಖಾನೆ ಪುನರಾರಂಭಕ್ಕೆ ಕ್ಷಣಗಣನೆ
ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ರಾಜ್ಯದ ಏಕೈಕ ಸರ್ಕಾರಿ ಸ್ವಾಮ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ಚಾಲನೆ ದೊರತಿದೆ. ಕೊಟ್ಟ ಮಾತು ಬಿಜೆಪಿ ಸರ್ಕಾರ ಉಳಿಸಿಕೊಂಡಿದೆ
ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ.
ಮಂಡ್ಯ (ಆ.11) : ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ರಾಜ್ಯದ ಏಕೈಕ ಸರ್ಕಾರಿ ಸ್ವಾಮ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ಚಾಲನೆ ದೊರತಿದೆ. ಪೂಜೆ, ಹೋಮ-ಹವನ ನೆರವೇರಿಸಿ ಬಾಯ್ಲರ್‌ಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಮಂಡ್ಯದ ಮೈಶುಗರ್ ಕಾರ್ಖಾನೆ ಪುನರಾರಂಭಕ್ಕೆ ಮುನ್ನುಡಿ ಬರೆಯಲಾಗಿದೆ. ಒಂದು ಕಾಲದಲ್ಲಿ ಗತವೈಭವಕ್ಕೆ ಕಾರಣವಾಗಿದ್ದ ಈ ಕಾರ್ಖಾನೆ ಕೊಡುವ ದರವೇ ಇಡೀ ರಾಜ್ಯದ ಕಬ್ಬಿನ ದರವನ್ನ ನಿರ್ಧಾರ ಮಾಡ್ತಿತ್ತು. ಅಂತಹ ಇತಿಹಾಸ ಪ್ರಸಿದ್ಧ ಕಾರ್ಖಾನೆ ಅವ್ಯಾಹತ ಭ್ರಷ್ಟಾಚಾರ, ರಾಜಕೀಯ ಹಪಾಹಪಿಗೆ ನಶಿಸುವ ಹಂತ ತಲುಪಿತ್ತು.
Mandya Mysugar: ಮೈಶುಗರ್ ಆರಂಭಕ್ಕೆ ಸರ್ಕಾರ ಬದ್ಧ, ಬಜೆಟ್‌ನಲ್ಲಿ ಭರಪೂರ ಕೊಡುಗೆ
ಕಳೆದ ನಾಲ್ಕು ವರ್ಷಗಳಿಂದ ಈ ಕಾರ್ಖಾನೆ ಸಂಪೂರ್ಣ ಸ್ಥಬ್ಧವಾಗಿತ್ತು. ಕಾರ್ಖಾನೆ ಸ್ಥಗಿತದಿಂದ ಇಡೀ ಮಂಡ್ಯ ಜಿಲ್ಲೆಯ ಆರ್ಥಿಕ ಸ್ಥಿತಿ ಮತ್ತು ರೈತರ ಸಂಕಷ್ಟಕ್ಕೆ ಸಿಲುಕಿದ್ರು. ಈ ಕಾರ್ಖಾನೆ ಆರಂಭಕ್ಕೆ ನಿರಂತರವಾಗಿ, ಸಾಕಷ್ಟು ಹೋರಾಟಗಳು ನಡೆದಿದ್ವು. ಕೆಲವರು ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಆರಂಭಕ್ಕೆ ಪಟ್ಟು ಹಿಡಿದ್ರೆ. ಇನ್ನು ಕೆಲವರು ಖಾಸಗಿಯಾದರೂ ಸರಿ, ಓ ಅಂಡ್ ಎಂ ಆದ್ರೂ ಸರಿ. ಹೇಗಾದ್ರೂ ಆಗ್ಲೀ ಮೊದಲು ಕಾರ್ಖಾನೆ ಆರಂಭವಾಗ್ಲೀ ಅಂತಾ ಒತ್ತಾಯಿಸಿದ್ರು. ಇದು ಸರ್ಕಾರಕ್ಕೂ ತಲೆ ನೋವಾಗಿ ಪರಿಣಮಿಸಿತ್ತು. ಈ ಹಿಂದಿನ ಸಿಎಂ ಆಗಿದ್ದ ಯಡಿಯೂರಪ್ಪ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಪುನರಾರಂಭಿಸುವ ನಿರ್ಧಾರ ಮಾಡಿದ್ರು.
ಸಚಿವ ಸಂಪುಟ ಸಭೆ ನಿರ್ಣಯದಂತೆ ಹಾಗೂ ಸರ್ಕಾರದ ಭರವಸೆಯಂತೆ ಮೈಶುಗರ್ ಕಾರ್ಖಾನೆ ಪುನರಾರಂಭಕ್ಕೆ ಇಂದು ಮುನ್ನುಡಿ ಬರೆಯಲಾಗಿದೆ. ಸಂಪ್ರದಾಯದಂತೆ ಪೂಜೆ, ಗಣಪತಿ ಹೋಮದ ಮೂಲಕ ಕಾರ್ಖಾನೆ ಬಾಯ್ಲರ್ ಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಚಾಲನೆ ನೀಡಲಾಗಿದೆ. ಕಾರ್ಖಾನೆಯನ್ನ ಶುದ್ಧಿ ಮಾಡಿ, ಹೂವು, ತಳಿರು-ತೋರಣ ಕಟ್ಟಿ, ನವ ವಧುವಿನಂತೆ ಸಿಂಗಾರ ಮಾಡಲಾಗಿತ್ತು. ಸಚಿವರಾದ ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣಗೌಡ, ಸಂಸದೆ ಸುಮಲತಾ, ಜಿಲ್ಲಾಡಳಿತದ ಅಧಿಕಾರಿಗಳು, ರೈತರು, ರೈತ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ನೌಕರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.
ಮಂಡ್ಯ: ಮೈಶುಗರ್ ಕಾರ್ಖಾನೆ ಖಾಸಗೀಕರಣ ಆದೇಶ ವಾಪಸ್ ಪಡೆದ ಸಿಎಂ
ಇನ್ನು ಕಾರ್ಖಾನೆ ಪುನರಾರಂಭಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಿತ್ತು. 20 ಕೋಟಿ ವೆಚ್ಚದಲ್ಲಿ ಕಾರ್ಖಾನೆಯ ಯಂತ್ರೋಪಕರಣಗಳನ್ನ ದುರಸ್ತಿ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 4 ಲಕ್ಷ ಟನ್ ಕಬ್ಬು ನುರಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಇನ್ನು 10 ದಿನದೊಳಗೆ ಪ್ರಾಯೋಗಿಕವಾಗಿ ಕಬ್ಬು ನುರಿಸುವ ಕಾರ್ಯ ಆರಂಭಿಸಲಾಗುತ್ತದೆ. ಸಣ್ಣಪುಟ್ಟ ತಾಂತ್ರಿಕ ದೋಷ ಸರಿಪಡಿಸಿಕೊಂಡು 15-20ದಿನಗಳಲ್ಲಿ ಸಿಎಂ ಮೂಲಕವೇ ಅಧಿಕೃತವಾಗಿ ಕಾರ್ಖಾನೆ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ಕೊಟ್ಟು ಪುನರಾರಂಭ ಮಾಡಲಾಗುತ್ತೆ ಎನ್ನಲಾಗ್ತಿದೆ. ಈ ಮೂಲಕ ಮಂಡ್ಯ ಜನರ ಬಹು ದಿನಗಳ ಕನಸು ಈಡೇರುವ ಕಾಲಕ್ಕೆ ಕ್ಷಣಗಣನೆ ಆರಂಭವಾಗಿದೆ. ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಉಳಿದು, ಜಿಲ್ಲೆಯ ರೈತರ ಬಾಳು ಬೆಳಗಲಿದೆ.