ಮೈಷುಗರ್‌ ಕಾರ್ಯಾಚರಣೆ ಆರಂಭಿಸಲು ಇದುವರೆಗೆ 19.6 ಕೋಟಿ ರು. ಹಣ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ಮಂಡ್ಯ ಮಂಜುನಾಥ

ಮಂಡ್ಯ(ಜು.29): ನಾಲ್ಕು ವರ್ಷಗಳಿಂದ ಕಬ್ಬು ಅರೆಯುವಿಕೆ ಕಾರ್ಯಾಚರಣೆ ಸ್ಥಗಿತಗೊಂಡಿದ್ದ ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿ ಮತ್ತೆ ಕಬ್ಬು ಅರೆಯುವಿಕೆ ಪ್ರಕ್ರಿಯೆ ಸದ್ಯದಲ್ಲೇ ಆರಂಭಗೊಳ್ಳಲಿದೆ. ಆ.8ರಂದು ಬಾಯ್ಲರ್‌ಗೆ ಬೆಂಕಿ ಹಾಕಲು ನಿರ್ಧರಿಸಿರುವ ಆಡಳಿತ ಮಂಡಳಿ, ಆ.15ರೊಳಗೆ ಕಬ್ಬು ಅರೆಯುವಿಕೆ ಪ್ರಕ್ರಿಯೆನ್ನು ಅಧಿಕೃತವಾಗಿ ಪ್ರಾರಂಭಿಸಲು ತೀರ್ಮಾನಿಸಿದೆ. ನಿತ್ಯ 3500 ಟನ್‌ನಿಂದ 4000 ಟನ್‌ವರೆಗೆ ಕಬ್ಬು ನುರಿಸುವಂತೆ ಬಿ-ಮಿಲ್‌ನ್ನು ಸಜ್ಜುಗೊಳಿಸಲಾಗಿದೆ. ಇದುವರೆಗೆ 4 ಲಕ್ಷ ಟನ್‌ ಕಬ್ಬನ್ನು ಒಪ್ಪಿಗೆ ಮಾಡಿಕೊಂಡಿದ್ದು, ಹೆಚ್ಚುವರಿಯಾಗಿ ಇನ್ನಷ್ಟುಕಬ್ಬು ಸಿಗುವ ನಿರೀಕ್ಷೆಯಿದೆ ಎನ್ನಲಾಗಿದೆ.

ರಾಜ್ಯ ಸರ್ಕಾರ ಮೈಷುಗರ್‌ ಕಾರ್ಯಾಚರಣೆ ಆರಂಭಿಸಲು ಇದುವರೆಗೆ 19.6 ಕೋಟಿ ರು. ಹಣ ಬಿಡುಗಡೆ ಮಾಡಿದೆ. ಇದರಲ್ಲಿ 2.25 ಕೋಟಿ ರು. ಹಣವನ್ನು ಕಾರ್ಮಿಕರ ವಿಆರ್‌ಎಸ್‌ಗೆ, 2.35 ಕೋಟಿ ರು. ಹಣವನ್ನು ಕಬ್ಬು ಕಟಾವು ಮಾಡುವವರನ್ನು ಕರೆತರುವುದಕ್ಕಾಗಿ ಉಳಿದ 15 ಕೋಟಿ ರು. ಹಣವನ್ನು ಯಂತ್ರೋಪಕರಣಗಳ ದುರಸ್ತಿ ಕಾರ್ಯಕ್ಕೆ ಖರ್ಚು ಮಾಡಲಾಗಿದೆ. ಕಾರ್ಖಾನೆ ಆರಂಭಕ್ಕೆ ಇನ್ನೂ 10 ಕೋಟಿ ರು.ಗಳ ಅಗತ್ಯವಿದೆ ಎಂದು ತಿಳಿದುಬಂದಿದೆ.

ಪ್ರವಾಸೋದ್ಯಮ ಅಭಿವೃದ್ಧಿಗೆ ಹೂಡಿಕೆದಾರರ ಸಮಾವೇಶ: ಸಚಿವ ಅ​ಶ್ವತ್ಥ ನಾರಾ​ಯಣ

ಯಂತ್ರೋಪಕರಣ ದುರಸ್ತಿ ಪೂರ್ಣ:

ಪುಣೆಯ ಆರ್‌.ಬಿ.ಟೆಕ್ನೋಕ್ರೇಟ್ಸ್‌ ಅಂಡ್‌ ರೀ-ಕ್ಲೈಮ​ರ್‍ಸ್ ಲಿಮಿಟೆಡ್‌್ನವರು ಮೈಷುಗರ್‌ನ ಸಕ್ಕರೆ ಘಟಕ ಮಿಲ್‌ ವಿಭಾಗ, ಸಂಸ್ಕರಣಾ ವಿಭಾಗ, ಸಹ ವಿದ್ಯುತ್‌ ಘಟಕದ ಬಾಯ್ಲರ್‌ ಈ ಮೂರು ವಿಭಾಗಗಳಿಗೆ 13.92 ಕೋಟಿ ರು. ಹಾಗೂ ಹೈದರಾಬಾದ್‌ನ ಎಸ್ಸೆನ್ನಾರ್‌ ಪವರ್‌ಟೆಕ್‌ ಸವೀರ್‍ಸ್‌ನವರು ಸಹ ವಿದ್ಯುತ್‌ ಘಟಕದ ಟರ್ಬೈನ್‌, ವಿದ್ಯುತ್‌ ಉತ್ಪಾದನೆ, ವಿತರಣೆ ಮತ್ತು ಪ್ರಸರಣ ಕಾರ್ಯಕ್ಕೆ 2.80 ಕೋಟಿ ರು.ಗೆ ಒಪ್ಪಿ ದುರಸ್ತಿ ಕಾರ್ಯ ಮಾಡಿದ್ದಾರೆ.

ಸುಮಾರು 300 ಮಂದಿ ಕೆಲಸಗಾರರು ಎರಡು ತಿಂಗಳುಗಳ ಕಾಲ ಯಂತ್ರೋಪಕರಗಣಗಳ ದುರಸ್ತಿ, ಓವರ್‌ಹಾಲಿಂಗ್‌ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆ. ಮೊದಲ ಹಂತದಲ್ಲಿ 3.75 ಕೋಟಿ ರು. ಬಿಡುಗಡೆ ಮಾಡಿದ್ದ ರಾಜ್ಯಸರ್ಕಾರ ನಂತರದಲ್ಲಿ 11.25 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ. ನಿಗದಿತ ಸಮಯಕ್ಕೆ ಯಂತ್ರೋಪಕರಣಗಳ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಹೆಚ್ಚುವರಿಯಾಗಿ ಇನ್ನೂ 10 ಕೋಟಿ ರು. ವೆಚ್ಚ ಬೀಳುತ್ತಿರುವುದರಿಂದ ಗುರುವಾರ (ಜು.28) ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಖಾನೆ ಆಡಳಿತ ಮಂಡಳಿ ಸಭೆಯಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಮೈಷುಗರ್‌ ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ ಪಾಟೀಲ್‌ ಕನ್ನಡಪ್ರಭಕ್ಕೆ ತಿಳಿಸಿದರು.

ಆದೇಶ ಬದಲಿಸಬೇಕಿದೆ:

ಮೈಷುಗರ್‌ ಕಾರ್ಯಾಚರಣೆಗೊಳಿಸಿದ್ದ ಸಮಯದಲ್ಲಿ ಮೈಷುಗರ್‌ ವ್ಯಾಪ್ತಿಯ ಕಬ್ಬನ್ನು ಮಂಡ್ಯ ಸೇರಿದಂತೆ ಹೊರ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳಿಗೂ ಹಂಚಿಕೆ ಮಾಡಲಾಗಿತ್ತು. ಕಾರ್ಖಾನೆ ವ್ಯಾಪ್ತಿಯಲ್ಲಿ ಸುಮಾರು 7 ಲಕ್ಷ ಟನ್‌ ಕಬ್ಬು ಇದ್ದರೂ ಇದುವರೆಗೂ ಲಕ್ಷ ಟನ್‌ ಕಬ್ಬು ಮಾತ್ರ ಒಪ್ಪಿಗೆಯಾಗಿದೆ. ಉಳಿದ ಕಬ್ಬನ್ನು ರೈತರು ತಮಗಿಷ್ಟಬಂದ ಕಾರ್ಖಾನೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಮೈಷುಗರ್‌ ಕಾರ್ಖಾನೆ ಕಬ್ಬು ಅರೆಯುವಿಕೆಗೆ ಸಿದ್ಧಗೊಂಡಿರುವುದರಿಂದ ರಾಜ್ಯಸರ್ಕಾರ ಖಾಸಗಿ ಕಾರ್ಖಾನೆಗಳಿಗೆ ಹಂಚಿಕೆ ಮಾಡಿ ಹೊರಡಿಸಿರುವ ಆದೇಶವನ್ನು ರದ್ದುಪಡಿಸಿ ರೈತರು ಮೈಷುಗರ್‌ಗೆ ಕಬ್ಬು ಪೂರೈಕೆ ಮಾಡುವಂತೆ ಹೊಸ ಆದೇಶ ಹೊರಡಿಸಬೇಕಿದೆ ಎಂದು ಮೈಷುಗರ್‌ ಅಧಿಕಾರಿಗಳು ತಿಳಿಸಿದ್ದಾರೆ.

105 ಕೋಟಿ ರು.ಗೆ ಪ್ರಸ್ತಾವನೆ

ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆಗೆ ದುಡಿಯುವ ಬಂಡವಾಳವಾಗಿ 105 ಕೋಟಿ ರು. ಬಿಡುಗಡೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಈ ವಿಷಯದಲ್ಲಿ ಕಾರ್ಖಾನೆ ಇಡುವ ಹೆಜ್ಜೆ ಹೇಗಿರಲಿದೆ ಎನ್ನುವುದು ಕುತೂಹಲ ಮೂಡಿಸಿದೆ. ಇನ್ನೂ ಕಾರ್ಖಾನೆಯೊಳಗೆ ಬಗ್ಗಾಸ್‌ ಹಾಗೂ ಬೆಲ್ಟ್‌ ಕನ್ವೇಯರ್‌, ಸ್ವಾಕರ್‌ ಖರೀದಿ, ಮುಖ್ಯ ಯಂತ್ರೋಪಕರಣದ ಕಟ್ಟಡ ಮತ್ತು ಗೋದಾಮು ಮೇಲ್ಛಾವಣಿ ಶೀಟುಗಳ ಬದಲಾವಣೆ ಕೆಲಸಗಳಿಗೆ ಟೆಂಡರ್‌ ಕರೆಯುವ ಅವಶ್ಯಕತೆ ಇದೆ ಎಂದು ತಿಳಿದುಬಂದಿದೆ.

5ಜಿ ಸ್ಪೆಕ್ಟ್ರಮ್ ಗೆ ಭಾರೀ ಬೇಡಿಕೆ; ಎರಡನೇ ದಿನ 1.49 ಲಕ್ಷ ಕೋಟಿ ರೂ. ಬಿಡ್ ಸಲ್ಲಿಕೆ

ಈಗಾಗಲೇ ದುರಸ್ತಿಗೊಂಡಿರುವ ಮಿಲ್‌, ಬಾಯ್ಲರ್‌ ಸೇರಿದಂತೆ ಇತರೆ ವಿಭಾಗಗಳನ್ನು ಪ್ರಾಯೋಗಿಕ ಪರೀಕ್ಷೆಗೊಳಪಡಿಸಿದ್ದು, ಎಲ್ಲಿಯೂ ನ್ಯೂನತೆಗಳು ಕಂಡುಬಂದಿಲ್ಲ. ಬಿ-ಮಿಲ್‌ ನಿತ್ಯ 4000 ಟನ್‌ ಕಬ್ಬು ಅರೆಯುವಷ್ಟು ಸಾಮರ್ಥ್ಯವನ್ನು ಹೊಂದಿದೆ. ಮೈಷುಗರ್‌ ಆರಂಭದ ಜೊತೆಯಲ್ಲೇ ಸಹ ವಿದ್ಯುತ್‌ ಘಟಕಕ್ಕೂ ಚಾಲನೆ ನೀಡಿ ಕಾರ್ಖಾನೆ ಮೇಲಲಿನ ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

ಮೈಷುಗರ್‌ ಕಾರ್ಖಾನೆಯಲ್ಲಿ ಆ.8ರಂದು ಬಾಯ್ಲರ್‌ಗೆ ಬೆಂಕಿ ಹಾಕಲಾಗುವುದು. ಯಂತ್ರೋಪಕರಣಗಳ ದುರಸ್ತಿ, ಓವರ್‌ ಹಾಲಿಂಗ್‌ ಮುಗಿದಿದೆ. ರಾಜ್ಯ ಸರ್ಕಾರ ಇದುವರೆಗೆ 19.6 ಕೋಟಿ ರು. ಬಿಡುಗಡೆ ಮಾಡಿದೆ. ಇನ್ನೂ 10 ಕೋಟಿ ರು. ಹಣದ ಅಗತ್ಯವಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೂ ತರಲಾಗಿದೆ ಅಂತ ಮೈಷುಗರ್‌ ವ್ಯವಸ್ಥಾಪಕ ನಿರ್ದೇಶಕ ಅಪ್ಪಾರಾವ್‌ ಸಾಹೇಬ ತಿಳಿಸಿದ್ದಾರೆ.