ಚಾಮರಾಜನಗರ(ಜು.01): ಹಳ್ಳಿ ಜನರು ಗ್ರಾಮದ ಎಲ್ಲರೊಂದಿಗೂ ಒಡನಾಟ ಹೊಂದಿರುವುದರಿಂದ ಗ್ರಾಮದಲ್ಲಿ ಒಬ್ಬನಿಗೆ ಕೊರೋನಾ ವೈರಸ್‌ ಸೋಂಕು ಕಾಣಿಸಿಕೊಂಡರೆ ಗ್ರಾಮವನ್ನೇ ಸೀಲ್‌ಡೌನ್‌ ಮಾಡುವುದು ಸೂಕ್ತ. ಆದ್ದರಿಂದ ಮನೆ ಬದಲು ಗ್ರಾಮವನ್ನೇ ಸೀಲ್‌ಡೌನ್‌ ಮಾಡಬೇಕು ಎಂದು ತಾಲೂಕು ಪಂಚಾಯಿತಿಯಲ್ಲಿ ಮಂಗಳವಾರ ನಿರ್ಣಯ ಕೈಗೊಳ್ಳಲಾಗಿದೆ.

ನಗರದ ತಾಪಂ ಕಚೇರಿಯಲ್ಲಿ ತಾಪಂ ಅಧ್ಯಕ್ಷೆ ಶೋಭಾ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ದೇಶದಲ್ಲಿ ಲಾಕ್‌ಡೌನ್‌ ಘೋಷಣೆಯಾದಾಗ ನೂರಕ್ಕೂ ಹೆಚ್ಚಿನ ದಿನಗಳ ವರಗೆ ಚಾಮರಾಜನಗರ ಹಸಿರು ವಲಯವಾಗಿತ್ತು. ನಂತರ ಹೊರರಾಜ್ಯದಿಂದ ಬಂದವರಿಗೆ ಸೋಂಕು ಕಾಣಿಸಿತ್ತು. ಈಗ ಎರಡು ಮೂರು ಹಳ್ಳಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತ ಹಳ್ಳಿಯಲ್ಲಿ ಒಡಾಡಿರುವ ಸಾಧ್ಯತೆ ಇರುವುದರಿಂದ ಇಡೀ ಹಳ್ಳಿಯನ್ನೇ ಸೀಲ್‌ಡೌನ್‌ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಎಪಿಎಂಸಿ ಎಲೆಕ್ಷನ್: ಬಿಜೆಪಿಗರಿಂದ ಕಾಂಗ್ರೆಸ್‌ಗೆ ಮತ..!

ಕೊರೋನಾ ವೈರಸ್‌ ಸೋಂಕು ತಡೆಯುವ ನಿಟ್ಟಿನಲ್ಲಿ ಎಚ್ಚರಿಕೆ ಅಗತ್ಯವಾಗಿದ್ದು, ಕಠಿಣವಾದ ಕ್ರಮಗಳನ್ನು ಕೈಗೊಳ್ಳಬೇಕಿದೆ ಈ ನಿಟ್ಟಿನಲ್ಲಿ ಗ್ರಾಮ ಸೀಲ್‌ಡೌನ್‌ ಮಾಡಲು ತಾಪಂನಲ್ಲಿ ನಿರ್ಣಯ ಕೈಗೊಂಡು ಜಿಲ್ಲಾಮಟ್ಟಕ್ಕೆ ನಿರ್ಣಯ ಕಳಿಸಬೇಕು ಎಂದು ತಾಪಂ ಸದಸ್ಯರುಗಳು ಧ್ವನಿ ಎತ್ತಿದರು. ಈ ಹಿನ್ನಲೆ ತಾಪಂ ಅಧ್ಯಕ್ಷೆ ಶೋಭ ಇಓ ಪ್ರೇಮಕುಮಾರ್‌ಗೆ ನಿರ್ಣಯವನ್ನು ಜಿಲ್ಲಾ ಮಟ್ಟಕ್ಕೆ ಕಳುಹಿಸಿ ಎಂದು ಹೇಳಿದರು.

ಚೆಕ್‌ಪೋಸ್ಟ್‌ನಲ್ಲಿ ಬಿಗಿ ತಪಾಸಣೆ ನಡೆಸಿ:

ತಾಲೂಕಿನಲ್ಲಿರುವ ಹರದನಹಳ್ಳಿ ಗ್ರಾಮ ಸೇರಿದಂತೆ ಅಕ್ಕ ಪಕ್ಕದ ಗ್ರಾಮದವರು ತಾಳವಾಡಿ ತಾಲೂಕಿನಲ್ಲಿರುವ ಜಮೀನುಗಳಿಗೆ ಕಬ್ಬು ಕಟಾವು ಸೇರಿದಂತೆ ಕೂಲಿ ಕೆಲಸಗಳಿಗೆ ಹೋಗಿ ಬರುತ್ತಿದ್ದಾರೆ ಚೆಕ್‌ಪೋಸ್ಟ್‌ನಲ್ಲಿ ಇವರನ್ನು ತಪಾಸಣೆ ಮಾಡುತ್ತಿಲ್ಲ. ಚೆಕ್‌ಪೋಸ್ಟ್‌ನಲ್ಲಿ ಬಿಗಿ ತಪಾಸಣೆಯನ್ನು ನಡೆಸಬೇಕು ಎಂದು ತಾಪಂ ಸದಸ್ಯರೋಬ್ಬರು ತಾಲೂಕು ಆರೋಗ್ಯ ಅಧಿಕಾರಿ ಶ್ರೀನಿವಾಸ್‌ಗೆ ಸೂಚನೆ ನೀಡಿದರು.

ವೆಂಟಿಲೇಟರ್‌ ಹೆಚ್ಚಿಸಿ:

ಜಿಲ್ಲಾಸ್ಪತ್ರೆಯಲ್ಲಿ 6 ವೆಂಟಿಲೇಟರ್‌ ಮಾತ್ರ ಇದ್ದು, 6 ಮಂದಿ ಕೊರೋನಾ ವೈರಸ್‌ ಸೋಂಕಿತರಿಗೆ ಮಾತ್ರ ವೆಂಟಿಲೇಟರ್‌ ಸೌಲಭ್ಯ ಕೊಡಿಸಬಹುದು ಎಂದು ತಾಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ್‌ ಸಭೆಗೆ ತಿಳಿಸಿದ ತಕ್ಷಣ ತಾಪಂ ಸದಸ್ಯ ಕುಮಾರ್‌ ಹಾಗೂ ಎಚ್‌.ವಿ. ಚಂದ್ರು ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ 15 ವೆಂಟಿಲೇಟರ್‌ ಹೆಚ್ಚಿಸಲು ಜಿಲ್ಲಾಧಿಕಾರಿಗೆ ಪತ್ರ ಬರೆಯಿರಿ ಎಂದು ಸೂಚನೆ ನೀಡಿದರು.

ಬಿಹಾರಿ, ರಾಜಸ್ಥಾನ, ಓಡಿಶಾ ಕಾರ್ಮಿಕರಿಂದ ಆತಂಕ ಸೃಷ್ಟಿ

ತಾಲೂಕಿನಲ್ಲಿರುವ ಬದನಗುಪ್ಪೆ ಗ್ರಾಮದಲ್ಲಿ ಬಿಹಾರಿ, ರಾಜಸ್ಥಾನ, ಒರಿಸಾ ಕಾರ್ಮಿಕರು ಒಡಾಡುತ್ತಿದ್ದು, ಗ್ರಾಮದ ಜನರಿಗೆ ಆತಂಕ ಹೆಚ್ಚಾಗಿದೆ. ಬದನಗುಪ್ಪೆ ಸಮೀಪದ ಕಾರ್ಖಾನೆಗಳಿಗೆ ಬಿಹಾರಿ, ರಾಜಸ್ಥಾನ, ಒರಿಸಾ ಕಾರ್ಮಿಕರನ್ನು ಕರೆಸಿಕೊಳ್ಳಲಾಗುತ್ತಿದೆ ಕೂಡಲೇ ಇವರಿಂದ ಸೋಂಕು ಹರಡಿದರೆ ಯಾರು ಹೋಣೆ ಅಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಮಾಹಿತಿಯನ್ನು ದಿನ ಸಂಗ್ರಹಿಸಿ ಅಕ್ರಮವಾಗಿ ಬಂದಿರುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದರು. ಸಭೆಯಲ್ಲಿ ತಾಪಂ ಇಓ ಪ್ರೇಮಕುಮಾರ್‌, ತಾಪಂ ಸದಸ್ಯರಾದ ಬಸವಣ್ಣ, ದಯಾನಿಧಿ, ದೊಡ್ಡಮ್ಮ, ಸೇರಿದಂತೆ ತಾಪಂ ಸದಸ್ಯರುಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.