Asianet Suvarna News Asianet Suvarna News

ಎಪಿಎಂಸಿ ಎಲೆಕ್ಷನ್: ಬಿಜೆಪಿಗರಿಂದ ಕಾಂಗ್ರೆಸ್‌ಗೆ ಮತ..!

ಮೈಸೂರು ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯ ನಾಮನಿರ್ದೇಶಿತ ಇಬ್ಬರು ಸದಸ್ಯರು ಕಾಂಗ್ರೆಸ್‌ಗೆ ಮತ ಹಾಕಿರುವ ವಿಷಯಕ್ಕೆ ಜಿಲ್ಲಾಧ್ಯಕ್ಷ ಎಸ್‌.ಡಿ. ಮಹೇಂದ್ರ ಹಾಗೂ ಪ್ರಧಾನ ಕಾರ್ಯದರ್ಶಿ ನಂದೀಶ್‌ ಬೆಳ್ಳಯ್ಯ ಅವರೇ ಕಾರಣ ಎಂಬ ಆರೋಪ ಕೇಳಿ ಬಂದಿದೆ.

bjp supporters vote for congress in mysore apmc election
Author
Bangalore, First Published Jul 1, 2020, 11:03 AM IST

ಮೈಸೂರು(ಜು.01): ಮೈಸೂರು ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯ ನಾಮನಿರ್ದೇಶಿತ ಇಬ್ಬರು ಸದಸ್ಯರು ಕಾಂಗ್ರೆಸ್‌ಗೆ ಮತ ಹಾಕಿರುವ ವಿಷಯಕ್ಕೆ ಜಿಲ್ಲಾಧ್ಯಕ್ಷ ಎಸ್‌.ಡಿ. ಮಹೇಂದ್ರ ಹಾಗೂ ಪ್ರಧಾನ ಕಾರ್ಯದರ್ಶಿ ನಂದೀಶ್‌ ಬೆಳ್ಳಯ್ಯ ಅವರೇ ಕಾರಣ ಎಂಬ ಆರೋಪ ಕೇಳಿ ಬಂದಿದೆ.

ಇತ್ತೀಚೆಗೆ ನಡೆದ ಎಪಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಬಿಜೆಪಿಯ ನಾಮ ನಿರ್ದೇಶಿತರ ಪೈಕಿ ಜೆ.ಎಸ್‌. ಜಗದೀಶ್‌ ಜೆಡಿಎಸ್‌ ಹಾಗೂ ಉಳಿದಿಬ್ಬರಾದ ಎಂ. ಶಿವಬಸಪ್ಪ ಹಾಗೂ ಮಹದೇವಮ್ಮ ಅವರು ಕಾಂಗ್ರೆಸ್‌ ಬೆಂಬಲಿಸಿದ್ದರಿಂದ ಪರಿಣಾಮ ಕಾಂಗ್ರೆಸ್‌ನ ಬಸವರಾಜು ಹಾಗೂ ಜೆಡಿಎಸ್‌ನ ಕೋಟೆಹುಂಡಿ ಮಹದೇವು ಅವರಿಗೆ ತಲಾ ಏಳು ಮತಗಳು ದೊರೆತಿದ್ದವು. ಲಾಟರಿಯಲ್ಲಿ ಅದೃಷ್ಟಲಕ್ಷ್ಮಿ ಬಸವರಾಜುಗೆ ಒಲಿಯಿತು.

 

ಕೋಟೆಹುಂಡಿ ಮಹದೇವ್‌ ಅವರು ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ.ಟಿ. ದೇವೇಗೌಡರ ಕಟ್ಟಾಬೆಂಬಲಿಗರು. ದೇವೇಗೌಡರು ಪಕ್ಷದಿಂದ ದೂರ ಇದ್ದರೂ ಸಹ ಎಪಿಎಂಸಿಯಲ್ಲಿ ಅಧಿಕಾರ ಹಿಡಿಯುವುದು ಮುಖ್ಯವಾಗಿತ್ತು. ಹೀಗಾಗಿ ಒಂದು ವೇಳೆ ಬಿಜೆಪಿಯ ನಾಮನಿರ್ದೇಶಿತ ಸದಸ್ಯರು ಬೆಂಬಲಿಸಿದರೆ ಸರಿ. ಇಲ್ಲವೇ ತಟಸ್ಥವಾದರೂ ಒಂದು ಮತದ ಅಂತರದಿಂದಲಾದರೂ ತಾವು ಗೆಲ್ಲುತ್ತೇವೆ ಎಂಬ ಲೆಕ್ಕಾಚಾರದಲ್ಲಿದ್ದರು. ಆದರೆ ಬಿಜೆಪಿಯ ನಾಮ ನಿರ್ದೇಶಿತರ ಪೈಕಿ ಇಬ್ಬರು ಕಾಂಗ್ರೆಸ್‌ ಅನ್ನು ಬೆಂಬಲಿಸಿದ್ದರಿಂದ ಸಮ ಮತಗಳು ಬಂದು, ಲಾಟರಿಯಲ್ಲಿ ಸೋಲಾಯಿತು.

ಬಹುಮತ ಇಲ್ಲದಿದ್ದರೂ ಕಾಂಗ್ರೆಸ್‌ ಎಪಿಎಂಸಿ ವಶಕ್ಕೆ ತೆಗೆದುಕೊಂಡಿದ್ದು, ತಮ್ಮ ಪಕ್ಷದ ನಾಮ ನಿರ್ದೇಶಿತರ ಪೈಕಿ ಇಬ್ಬರು ಕಾಂಗ್ರೆಸ್‌ಗೆ ಮತ ಹಾಕಿದ್ದೇ ಕಾರಣ ಎಂಬುದು ಮಾಧ್ಯಮಗಳಲ್ಲಿ ವರದಿಯಾಗಿದ್ದರಿಂದ ಬಿಜೆಪಿ ವರಿಷ್ಠರು ಸ್ಪಷ್ಟನೆ ಕೇಳಿ ನೋಟಿಸ್‌ ಜಾರಿ ಮಾಡಿದ್ದು, ಅದಕ್ಕೆ ಇಬ್ಬರು ಸದಸ್ಯರು ಉತ್ತರ ನೀಡಿದ್ದಾರೆ ಎಂದು ಗೊತ್ತಾಗಿದೆ.

 

ನಂದೀಶ್‌ ಅವರೊಂದಿಗೆ ಜಿಲ್ಲಾಧ್ಯಕ್ಷ ಎಸ್‌.ಡಿ. ಮಹೇಂದ ಅವರನ್ನು ಭೇಟಿ ಮಾಡಿದಾಗ್ರ ಕಾಂಗ್ರೆಸ್‌ನ ಬಸವರಾಜು ಅವರನ್ನು ಬೆಂಬಲಿಸುವಂತೆ ಸೂಚಿಸಿದರು. ಅವರ ಸೂಚನೆಯಂತೆ ಕಾಂಗ್ರೆಸ್‌ಗೆ ಮತ ಹಾಕಿದ್ದೇವೆ. ಮೊಬೈಲ್‌ ಇಲ್ಲದಿದ್ದರಿಂದ ನಮಗೆ ರಾಜ್ಯ ನಾಯಕರ ಸೂಚನೆ ಸಿಗಲಿಲ್ಲ. ಹೀಗಾಗಿ ನಾವು ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ ಎಂದು ತಿಳಿಸಿದ್ದಾರೆ ಎಂದು ಗೊತ್ತಾಗಿದೆ.

ಈ ನಡುವೆ ಜೆಡಿಎಸ್‌ನ ಪರಾಜಿತ ಅಭ್ಯರ್ಥಿ ಕೋಟೆಹುಂಡಿ ಮಹದೇವು ಅವರು, ಮಾಧ್ಯಮಗಳಿಗೆ ಹೇಳಿಕೆ ನೀಡಿ, ಬಿಜೆಪಿಯ ಇಬ್ಬರು ನಾಮ ನಿರ್ದೇಶಿತ ಸದಸ್ಯರು ಕಾಂಗ್ರೆಸ್‌ಗೆ ತಮ್ಮ ಮತಗಳನ್ನು ಮಾರಿಕೊಂಡಿದ್ದು, ಇಬ್ಬರನ್ನು ವಜಾ ಮಾಡುವಂತೆ ಸಿಎಂ ಬಿ.ಎಸ್‌. ಯಡಿಯೂರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರನ್ನು ಆಗ್ರಹಿಸಿದ್ದರು. ನಾಮ ನಿರ್ದೇಶನ ಮಾಡುವಾಗ ನಿಷ್ಠಾವಂತರನ್ನು ಕಡೆಗಣಿಸಿ, ಹಣದ ಆಮಿಷಕ್ಕೆ ಒಳಗಾಗಿದ್ದರಿಂದ ಈ ರೀತಿಯಾಗಿದೆ. ಬಿಜೆಪಿಯು ಕಾಂಗ್ರೆಸ್‌ ಜೊತೆ ಹೊಂದಾಣಿಕೆ ಮಾಡಿಕೊಂಡ ಇತಿಹಾಸವೇ ಇಲ್ಲ ಎಂದಿದ್ದರು.

 

ಇದಕ್ಕೆ ಪ್ರತಿಕ್ರಿಯಿಸಿದ್ದ ಎಪಿಎಂಸಿ ಅಧ್ಯಕ್ಷ, ಕಾಂಗ್ರೆಸ್‌ನ ಬಸವರಾಜು ತಾನು ಸ್ವಂತ ಸಾಮರ್ಥ್ಯದಿಂದ ಚುನಾವಣೆ ಗೆದ್ದಿದ್ದೇನೆ. ಬಿಜೆಪಿಯ ನಾಮ ನಿರ್ದೇಶಿತರು ತಮಗೆ ಮತ ಹಾಕಿಲ್ಲ ಎಂದು ತಿರುಗೇಟು ನೀಡಿದ್ದರು.

ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಈ ಕಾಂಗ್ರೆಸ್‌- ಜೆಡಿಎಸ್‌ ಜಿದ್ದಾಜಿದ್ದಿ ಹೋರಾಟ ಈಗ ಬಿಜೆಪಿಯ ಬುಡಕ್ಕೆ ಬೆಂಕಿ ಬೀಳಲು ಕಾರಣವಾಗಿದೆ. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಪಕ್ಷದ ಮುಖಂಡರು ಹಣ ಪಡೆದು, ಎಪಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂಬ ಆರೋಪ ಬಿಜೆಪಿಯಲ್ಲಿ ಅಲ್ಲೋಲಕಲ್ಲೋಲಕ್ಕೆ ಕಾರಣವಾಗಿದೆ.

 

ಸಂಘಟನೆಯ ಹೆಸರಿನಲ್ಲಿ ಮುಖಂಡರು ಮಾಡಿದ ಶಿಫಾರಸ್‌ಗೆ ವರಿಷ್ಠರು ಒಪ್ಪಿ ನಾಮನಿರ್ದೇಶನ ಮಾಡಿದ್ದಾರೆ.ಆದರೆ ಅದನ್ನು ದೌರ್ಬಲ್ಯ ಎಂದು ತಿಳಿದು ಕೆಲವರು ಹಣಕ್ಕೆ ಮಾರಾಟ ಮಾಡಿಕೊಂಡಿದ್ದಾರೆ ಎಂಬ ಆರೋಪದಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಬಂದಿರುವುದರಿಂದ ವಿಚಾರಣೆ ನಡೆಸಿ, ಕ್ರಮ ವಹಿಸಲು ವರಿಷ್ಠರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ನಂಜನಗೂಡು, ಪಿರಿಯಾಪಟ್ಟಣ, ಕೆ.ಆರ್‌. ನಗರ ಎಪಿಎಂಸಿಗೆ ನೇಮಕ ಮಾಡುವಾಗಲೂ ದೂರುಗಳು ಕೇಳಿ ಬಂದಿವೆ ಎನ್ನಲಾಗಿದೆ.

ಎಸ್‌.ಡಿ. ಮಹೇಂದ್ರ ಅವರು ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಅಲ್ಪಕಾಲ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. 2013ರ ವಿಧಾನಸಭಾ ಚುನಾವಣೆಯಲ್ಲಿ ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, 1,070 ಮತಗಳೊಂದಿಗೆ 10ನೇ ಸ್ಥಾನ ಪಡೆದಿದ್ದರು. ಆಗ ಕೆಜೆಪಿಯಿಂದ ಸ್ಪರ್ಧಿಸಿದ್ದ ಕಾ.ಪು. ಸಿದ್ದಲಿಂಗಸ್ವಾಮಿ ದ್ವಿತೀಯ ಸ್ಥಾನ ಗಳಿಸಿದ್ದರು. ಈಗ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮಾಜಿ ಸಚಿವ ಕೋಟೆ ಎಂ. ಶಿವಣ್ಣ ಅವರ ಸ್ಥಾನದಲ್ಲಿ ಎಸ್‌.ಡಿ. ಮಹೇಂದ್ರ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು.

Follow Us:
Download App:
  • android
  • ios