Armed Robbery in Vijayapura: Gunshots Fired at Bhumika Jewellery ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿರುವ ಭೂಮಿಕಾ ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿದ ದರೋಡೆಕೋರರು, ಮಾಲೀಕನಿಗೆ ಗನ್‌ ತೋರಿಸಿ 205 ಗ್ರಾಂ ಚಿನ್ನ ಹಾಗೂ 1 ಕೆಜಿ ಬೆಳ್ಳಿ ದೋಚಿದ್ದಾರೆ.

ವಿಜಯಪುರ (ಜ.27): ರಾಜ್ಯದಲ್ಲಿ ದರೋಡೆ ಪ್ರಕರಣಗಳು ನಿಲ್ಲುವಂತೆ ಕಾಣುತ್ತಿಲ್ಲ. ಬೀದರ್‌, ಮಂಗಳೂರು, ಬೆಂಗಳೂರಿನಲ್ಲಿ ಕಂಡುಕೇಳರಿಯದ ದರೋಡೆ ಪ್ರಕರಣಗಳು ವರದಿಯಾಗಿದ್ದವು. ಕೆಲ ದಿನಗಳ ಹಿಂದೆ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಗಡಿಯ ಚೋರ್ಲಾ ಘಾಟ್‌ನಲ್ಲಿ ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಮೊತ್ತವಾದ 400 ಕೋಟಿ ರೂಪಾಯಿ ದರೋಡೆಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. ಇದರ ನಡುವೆ ವಿಜಯಪುರದಲ್ಲಿ ಗನ್‌ಪಾಯಿಂಟ್‌ನಲ್ಲಿ ಚಿನ್ನದಂಗಡಿಯ ಭಾರೀ ದರೋಡೆ ಮಾಡಲಾಗಿದೆ

ಭೀಮಾತೀರದಲ್ಲಿ ಭಯಾನಕ ದರೋಡೆ ನಡೆದಿದ್ದು, ದರೋಡೆ ನಡೆಸಿರುವ ರೀತಿಯೇ ಬೆಚ್ಚಿಬೀಳಿಸುವಂತಿದ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಚಿನ್ನದಂಗಡಿ ದರೋಡೆ ನಡೆದಿದೆ. ಈ ವೇಳೆ ವಿಡಿಯೋ ಸೆರೆ ಹಿಡಿಯಲು ಹೋದವನ ಮೇಲೂ ಫೈರಿಂಗ್‌ ನಡೆದಿದೆ.

ದರೋಡೆ ಮಾಡುವ ವೇಳೆ ಅನಿಲ್‌ ಎಂಬಾತ ವಿಡಿಯೋ ಸೆರೆ ಹಿಡಿಯಲು ಹೋದಾಗ ಆತನ ಮೇಲೆಯೇ ಫೈರಿಂಗ್‌ ಮಾಡಲಾಗಿದೆ. ಈ ಸಮಯದಲ್ಲಿ ಅನಿಲ್‌ ಜೊತೆಗಿದ್ದ ಆತ್ಮಲಿಂಗ ಹೂಗಾರ ಎನ್ನುವವನ ಕಾಲಿಗೆ ಗುಂಡು ಬಿದ್ದಿದೆ.

ಇದರ ಬಗ್ಗೆ ಏಷ್ಯಾನೆಟ್‌ ಸುವರ್ಣನ್ಯೂಸ್‌ ಜೊತೆ ಮಾತನಾಡಿರುವ ಅನಿಲ್‌, ಫೈರಿಂಗ್‌ ಆದಾಗ ನನಗೆ ತುಂಬಾನೇ ಭಯವಾಯಿತು. ದರೋಡೆಕೋರರು ಕನ್ನಡದಲ್ಲಿಯೇ ಮಾತನಾಡುತ್ತಿದ್ದರು ಎಂದಿದ್ದಾರೆ. ಇನ್ನು ಆತ್ಮಲಿಂಗ ಅವರಿಗೆ ಬಿಎಲ್ಡಿಇ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.

ಭೂಮಿಕಾ ಜ್ಯುವೆಲ್ಲರಿ ಶಾಪ್‌ ದರೋಡೆ

ಹಲಸಂಗಿ ಗ್ರಾಮದ ಭೂಮಿಕಾ ಜ್ಯುವೆಲ್ಲರಿ ಶಾಪ್‌ನಲ್ಲಿ ದರೋಡೆ ನಡೆದಿದ್ದು, ಇಬ್ಬರು ಅಪರಿಚಿತರು ಕಪ್ಪು ಬಣ್ಣದ ಜಾಕೆಟ್ , ಕಪ್ಪು ಬಣ್ಣದ ಹೆಲ್ಮೆಟ್ ಧರಿಸಿದ್ದರು ಎನ್ನಲಾಗಿದೆ. ಕಪ್ಪು ಬಣ್ಣದ ಹೋಂಡಾ ಯೂನಿಕಾರ್ನ್ ಬೈಕ್ ನಲ್ಲಿ ಬಂದಿದ್ದರು. ಶಾಪ್ ನ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಮಾಲೀಕ ಮಹಾರುದ್ರ ಎನ್ನುವವರಿಗೆ ಗನ್ ತೋರಿಸಿ ಕೃತ್ಯ ಎಸಗಿದ್ದಾರೆ. ಅಂಗಡಿಯಲ್ಲಿ ಇದ್ದ ಸುಮಾರು 205 ಗ್ರಾಂ ಬಂಗಾರದ ಆಭರಣ ಮತ್ತು 1 ಕೆಜಿ ಬೆಳ್ಳಿ ದರೋಡೆ ಮಾಡಿದ್ದಾರೆ.