ಮತ್ತೆ ಡೆಡ್ಲಿ ವೈರಸ್ ಅಟ್ಟಹಾಸ: ಮರುಕಳಿಸಿದ 2020..!
ವಿಕೇಂಡ್ ಕರ್ಫ್ಯೂನಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಹೊರ ಪ್ರದೇಶಗಳಲ್ಲಿ ತರಕಾರಿ ಮಾರುಕಟ್ಟೆಗೆ ವ್ಯವಸ್ಥೆ| ಚಪ್ಪಲಿ, ಟಿವಿ, ಬಟ್ಟೆ, ಶೋ ರೂಮ್, ಮಾಲ್‌ಗಳು ಬಂದ್ ಆಗಿದ್ದರಿಂದಾಗಿ ಭಾರಿ ಪ್ರಮಾಣದಲ್ಲಿ ನಷ್ಟ ಅನುಭವಿಸಿದ ವ್ಯಾಪಾರಸ್ಥರು| ತುತ್ತಿನ ಚೀಲ ತುಂಬಿಕೊಳ್ಳಲು ಪ್ರಯಾಸ ಪಡಬೇಕಾದ ಪರಿಸ್ಥಿತಿ|
ವಿಜಯಪುರ(ಏ.24): ಕೊರೋನಾ ನಿಯಂತ್ರಣ ಬಿಗಿ ಕ್ರಮದ ಹಿನ್ನೆಲೆಯಲ್ಲಿ ವಿಜಯಪುರ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಬಹುತೇಕ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.
ವಿಜಯಪುರದಲ್ಲಿ ಗುರುವಾರ ಸಂಜೆಯೇ ಪೊಲೀಸರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದರು. ಶುಕ್ರವಾರ ಇಡೀ ದಿನವೂ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಔಷಧ ಅಂಗಡಿ, ಬೇಕರಿ, ಹೂವು, ಹಣ್ಣಿನ ಅಂಗಡಿ, ದಿನಸಿ ಅಂಗಡಿ ಮಾತ್ರ ಎಂದಿನಂತೆ ಚಾಲೂ ಸ್ಥಿತಿಯಲ್ಲಿ ಇದ್ದವು. ಹೋಟೆಲ್‌ಗಳು ಪಾರ್ಸಲ್‌ಗಳಿಗೆ ಮಾತ್ರ ಸೀಮಿತವಾಗಿವೆ.
ಜನರು ಅಗತ್ಯವಿರುವ ಸಾಮಾನು ಸರಂಜಾಮುಗಳನ್ನು ಖರೀದಿಸಲು ಆಗಲಿಲ್ಲ. ಜನರು ಮಾರುಕಟ್ಟೆಗೆ ತೆರಳಿದ ವೇಳೆ ಚಿನ್ನದ ಅಂಗಡಿ, ಚಪ್ಪಲಿ, ಮೊಬೈಲ್, ಜನರಲ್ ಸ್ಟೋರ್, ಬಟ್ಟೆಅಂಗಡಿಗಳು ಮುಚ್ಚಿದ್ದರಿಂದಾಗಿ ತೀವ್ರ ತೊಂದರೆ ಅನುಭವಿಸಬೇಕಾಯಿತು.
ಸೂಕ್ತ ಚಿಕಿತ್ಸೆ ಸಿಗದೇ ಆಸ್ಪತ್ರೆಯಲ್ಲೇ ನರಳಾಡಿ ವೃದ್ಧ ಸಾವು
ವಿಜಯಪುರದಲ್ಲಿ ಸಿದ್ದೇಶ್ವರ ರಸ್ತೆ, ಸರಾಫ ಬಜಾರ, ಕೆಸಿ ಮಾರುಕಟ್ಟೆ, ಲಾಲ್‌ಬಹದ್ದೂರ ಮಾರುಕಟ್ಟೆ ಸಂಪೂರ್ಣವಾಗಿ ಬಂದ್ ಆಗಿವೆ. ಜನರ ಸಂಚಾರ ಮಾತ್ರ ಎಂದಿನಂತಿತ್ತು. ಕಾರ್, ಬೈಕ್, ಬಸ್ ಮುಂತಾದ ವಾಹನಗಳು ಸಂಚರಿಸಿದವು. ಸಂಜೆಯಾಗುತ್ತಿದ್ದಂತೆಯೇ ವೀಕೆಂಡ್ ಕರ್ಫ್ಯೂ ಜಾರಿಗೆ ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪೊಲೀಸರು ಬಿಜಿಯಾಗಿದ್ದರು.
ವೀಕೆಂಡ್ ಕರ್ಫ್ಯೂ ಜಾರಿಯಾಗುತ್ತದೆ ಜನರು ತಮ್ಮ ಮನೆಗಳನ್ನು ಸೇರಿಕೊಳ್ಳುವಂತೆ ತಿಳಿವಳಿಕೆ ನೀಡುವುದು ಕಂಡು ಬಂತು. ಜನರು ಗಡಿಬಿಡಿಯಿಂದ ತಮ್ಮ ಮನೆ ಕಡೆಯತ್ತ ಬೈಕ್, ವಾಹನ, ಆಟೋಗಳಲ್ಲಿ ತೆರಳುವುದು ಕಂಡು ಬಂತು.
ವಿಜಯಪುರದಲ್ಲಿ ದಿನಸಿ, ಹೋಟೆಲ್, ಔಷಧ ಅಂಗಡಿ, ಹೂವು, ಹಣ್ಣು ಅಂಗಡಿಗಳ ಮುಂದೆ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ವಹಿವಾಟು ನಡೆಸಲಾಯಿತು. ವಿಜಯಪುರದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದರಿಂದಾಗಿ ಜನ ಸಂಚಾರ ವಿರಳವಾಗಿತ್ತು. ಸದಾ ಜನದಟ್ಟನೆಯಿಂದ ತುಂಬಿ ತುಳುಕುತ್ತಿದ್ದ ಲಾಲ್‌ಬಹದ್ದೂರ ಶಾಸ್ತ್ರಿ ಮಾರುಕಟ್ಟೆಯಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿತ್ತು.
ಭರ್ಜರಿ ವ್ಯಾಪಾರ:
ನಗರದಲ್ಲಿ ಔಷಧ, ಬೇಕರಿ, ದಿನಸಿ, ಹೂ, ಹಣ್ಣು ಅಂಗಡಿ ಮುಂಗಟ್ಟುಗಳ ಮುಂದೆ ಜನರ ಸಾಲು ಅಲ್ಲಲ್ಲಿ ಕಂಡು ಬಂತು. ಅಗತ್ಯ ವಸ್ತುಗಳ ಮಾರಾಟ ಎಲ್ಲೆ ಮೀರಿತ್ತು. ಇದರಿಂದಾಗಿ ಅಗತ್ಯ ವಸ್ತುಗಳ ಮಾರಾಟಗಾರರಿಗೆ ಶುಕ್ರದೆಸೆ ಚಾಲೂ ಆಗಿದೆ. ವ್ಯಾಪಾರ ವಹಿವಾಟು ಉತ್ತಮವಾಗಿ ನಡೆದು ಹೆಚ್ಚಿನ ಆದಾಯ ಗಳಿಸಿದ್ದಾರೆ. ರೋಗ ನಿರೋಧಕ ಶಕ್ತಿ ವರ್ಧಿಸಿಕೊಳ್ಳಲು ಜನರು ಹಣ್ಣು ಹಂಪಲು ಹೆಚ್ಚಿನ ಪ್ರಮಾಣದಲ್ಲಿ ಪಡೆಯುತ್ತಿರುವುದು ಬಲು ಜೋರಾಗಿತ್ತು. ಇದರಿಂದಾಗಿ ವ್ಯಾಪಾರ ವಹಿವಾಟು ಗಣನೀಯ ಪ್ರಮಾಣದಲ್ಲಿ ಹೆಚ್ಚಳದಿಂದ ಅಗತ್ಯ ವಸ್ತುಗಳ ಮಾಲೀಕರು ಖುಷಿಯಾಗಿದ್ದಾರೆ. ಚಪ್ಪಲಿ, ಟಿವಿ, ಬಟ್ಟೆ, ಶೋ ರೂಮ್, ಮಾಲ್‌ಗಳು ಬಂದ್ ಆಗಿದ್ದರಿಂದಾಗಿ ಭಾರಿ ಪ್ರಮಾಣದಲ್ಲಿ ವ್ಯಾಪಾರಸ್ಥರು ಹಾನಿ ಅನುಭವಿಸಿದ್ದಾರೆ. ಮುಂದೆ 15 ದಿನಗಳವರೆಗೆ ಇದೇ ಪರಿಸ್ಥಿತಿ ಮುಂದುವರೆಯುವುದು. ಇನ್ನು ಮುಂದೆ ನಮ್ಮ ಗತಿ ಏನು? ಎಂದು ಚಿಂತೆಗೀಡಾಗಿದ್ದಾರೆ. ಬೀದಿ ಬದಿ ವ್ಯಾಪಾರಿಗಳು ಅಂಗಡಿ ಬಂದ್ ಆಗಿದ್ದರಿಂದಾಗಿ ಉಪವಾಸ ಬೀಳುವ ಪ್ರಸಂಗ ಬಂದಿದೆ. ತುತ್ತಿನ ಚೀಲ ತುಂಬಿಕೊಳ್ಳಲು ಪ್ರಯಾಸ ಪಡಬೇಕಾಗಿದೆ.
ಕೊರೋನಾ ಕಾಟ: ಲಾಕ್‌ಡೌನ್‌ನಿಂದ ಪ್ರಯೋಜನವಿಲ್ಲ ಎಂದ ಬಿಜೆಪಿ ಸಂಸದ
ಆಟೋಗಳಲ್ಲಿ ಇಲ್ಲ ಸಾಮಾಜಿಕ ಅಂತರ:
ಹೊಸ ನಿಯಮದ ಪ್ರಕಾರ ಬಸ್‌ಗಳಲ್ಲಿ ಶೇ. 50ರಷ್ಟು ಮಂದಿಗೆ ಮಾತ್ರ ಪ್ರಯಾಣಿಸಲು ಅವಕಾಶವಿದೆ. ಅದೇ ಪ್ರಕಾರ ಬಸ್‌ಗಳಲ್ಲಿ ಗುರುವಾರದಿಂದಲೇ ಶೇ. 50ರಷ್ಟು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ದುರ್ದೈವವೆಂದರೆ ಪ್ರಯಾಣಿಕರೇ ಬರುತ್ತಿಲ್ಲ. ಶೇ. 25ರಷ್ಟು ಪ್ರಯಾಣಿಕರು ಬರುತ್ತಿಲ್ಲ.
ವಿಜಯಪುರ ನಗರದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಆಟೋಗಳು ಸಂಚರಿಸುತ್ತವೆ. ಆದರೆ ಈ ಆಟೋಗಳಲ್ಲಿ ಸಾಮಾಜಿಕ ಅಂತರವಿಲ್ಲ. ಆಟೋ ಚಾಲಕರು ಲಾಭದ ಆಸೆಗೆ ಕೋವಿಡ್ ನಿಯಂತ್ರಣ ನಿಯಮಗಳನ್ನು ಪಾಲಿಸುತ್ತಿಲ್ಲ. ಎಂದಿನಂತೆ ನಾಲ್ಕೈದು ಜನರನ್ನು ಕೂರಿಸಿ ಸಂಚರಿಸುತ್ತಿದ್ದಾರೆ. ಕಳೆದ ವಷÜರ್‍ದ ಲಾಕ್‌ಡೌನ್ ವೇಳೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಇಬ್ಬರು ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಅವಕಾಶ ನೀಡಲಾಗಿತ್ತು. ಹೀಗಾಗಿ ಆಗ ಆಟೋ ಚಾಲಕರು ಒಂದು ಸೀಟಿಗೆ 20 ಪ್ರಯಾಣ ದರ ನಿಗದಿಪಡಿಸಿದರು. ಅದೇ ದರವನ್ನು ಇದುವರೆಗೆ ಪಡೆಯುತ್ತಿದ್ದಾರೆ. 20 ಪಡೆದರೂ ಕೇವಲ ಎರಡು ಸೀಟುಗಳನ್ನು ತುಂಬದೆ ಲಾಭದ ಆಸೆಗಾಗಿ ಮೂವರು ನಾಲ್ವರನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಆಟೋದಲ್ಲಿ ಇಬ್ಬರಿಗಿಂತ ಹೆಚ್ಚು ಜನರು ಪ್ರಯಾಣಿಸುವುದರ ಮೇಲೆ ಪೊಲೀಸರು, ಆರ್‌ಟಿಒ ಅಧಿಕಾರಿಗಳು ಕಡಿವಾಣ ಹಾಕದಿದ್ದರೆ ಕೊರೋನಾ ಮತ್ತೆ ಒಬ್ಬರಿಂದ ಒಬ್ಬರಿಗೆ ಹರಡುತ್ತಲೇ ಹೋಗುವ ಸಾಧ್ಯತೆ ಇದೆ.
ವಿಕೇಂಡ್ ಕರ್ಫ್ಯೂನಲ್ಲಿ ಪರ್ಯಾಯ ತರಕಾರಿ ಮಾರುಕಟ್ಟೆ:
ಇಂದು(ಶನಿವಾರ), ಭಾನುವಾರ ವಿಧಿಸಲಿರುವ ವಿಕೇಂಡ್ ಕರ್ಫ್ಯೂನಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಹೊರ ಪ್ರದೇಶಗಳಲ್ಲಿ ತರಕಾರಿ ಮಾರುಕಟ್ಟೆಗೆ ವ್ಯವಸ್ಥೆ ಮಾಡಲಾಗಿದೆ. ಇಬ್ರಾಹಿಂಪುರ ಹೊರ ವಲಯ ರಿಂಗ್ ರೋಡ್, ಜಲ ನಗರ, ಎಂ.ಬಿ. ಪಾಟೀಲ ಮನೆ ಹತ್ತಿರ ಹಾಗೂ ರಾಜಕುಮಾರ ಲೇಔಟ್ ನಾಲ್ಕು ಕಡೆಗಳಲ್ಲಿ ಪರ್ಯಾಯ ಮಾರುಕಟ್ಟೆ ಸ್ಥಾಪಿಸಲಾಗಿದೆ. ಕಳೆದ ವರ್ಷ ಕೊರೋನಾ ಸಂದರ್ಭದಲ್ಲಿ ಗುರುತಿಸಿದ ಮೇಲ್ಕಾಣಿಸಿದ ಸ್ಥಳಗಳಲ್ಲಿಯೇ ಪರ್ಯಾಯ ಸಂತೆ ವಿಕೇಂಡ್ ಕರ್ಫ್ಯೂನಲ್ಲಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಸಂತೆ ನಡೆದಿದ್ದು ಅನಂತರ ಮಾರುಕಟ್ಟೆ ಬಂದ್ ಆಗಿದೆ.