ವಿಜಯಪುರ (ಏ.21): ಸಕಾಲಕ್ಕೆ ಚಿಕಿತ್ಸೆ ದೊರೆಯದೇ ವಿಜಯಪುರ ಜಿಲ್ಲಾ ಕೋವಿಡ್‌ ತಪಾಸಣೆ ಕೇಂದ್ರದ ಎದುರೇ ವೃದ್ಧನೊಬ್ಬ ನರಳಾಡಿ ಪ್ರಾಣ ಬಿಟ್ಟಿರುವ ಹೃದಯ ವಿದ್ರಾವಕ ಘಟನೆ ಸೋಮವಾರ ಸಂಭವಿಸಿದೆ. ವಿಜಯಪುರದ ಗಣೇಶ ನಗರ ಬಡಾವಣೆಯ ಸುರೇಶ ಬಾಪುರಾವ ದೇಶಪಾಂಡೆ (60) ಮೃತಪಟ್ಟವೃದ್ಧ.

 ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧ ಸುರೇಶ್‌ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಚಿಕಿತ್ಸೆಗಾಗಿ ಕುಟುಂಬದ ಸದಸ್ಯರು ವಿಜಯಪುರ ಜಿಲ್ಲಾಸ್ಪತ್ರೆಯ ಕೋವಿಡ್‌ ಸೆಂಟರ್‌ಗೆ ಕರೆತಂದಿದ್ದರು. ಸುಮಾರು 1 ಗಂಟೆ ಕಾದರೂ ಆಸ್ಪತ್ರೆ ವೈದ್ಯರು, ಸಿಬ್ಬಂದಿ ರೋಗಿ ಕಡೆಗೆ ತಿರುಗಿಯೂ ನೋಡಲಿಲ್ಲ. ಕುಟುಂಬದವರು ಗೋಗರೆದರೂ ಬರಲಿಲ್ಲ. 

ಕರ್ನಾಟಕದಲ್ಲಿ ಹೊಸ ರೂಲ್ಸ್ ಜಾರಿ; ಏನಿರುತ್ತೆ? ಏನಿರಲ್ಲ? ಸಂಪೂರ್ಣ ವಿವರ ಇಲ್ಲಿದೆ ..

ಹೀಗಾಗಿ ಖಾಸಗಿ ಆಸ್ಪತ್ರೆಗೆಳಿಗೆ ಹೋಗಿದ್ದಾರೆ. ಅಲ್ಲಿ ಬೆಡ್‌ ಇಲ್ಲ, ಆಕ್ಸಿಜನ್‌ ಇಲ್ಲ ಎಂಬ ಉತ್ತರ ಬಂದಿದೆ. ಇದರಿಂದ ದೇಶಪಾಂಡೆ ಕುಟುಂಬಸ್ಥರು ಮರಳಿ ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. ಆದರೂ ರೋಗಿಗೆ ಚಿಕಿತ್ಸೆ ನೀಡಲಿಲ್ಲ ಎಂದು ಕುಟುಂಬದವರು ದೂರಿದ್ದಾರೆ.

ಹೀಗೆ ಸಕಾಲಕ್ಕೆ ಚಿಕಿತ್ಸೆ ದೊರೆಯದ ವೃದ್ಧ ಜಿಲ್ಲಾ ಕೋವಿಡ್‌ ಕೇಂದ್ರದ ಎದುರು ಭಾರೀ ಸಂಕಟದಿಂದ ಎರಡು ಗಂಟೆ ಕಾಲ ನರಳಾಟ ನಡೆಸಿ ಕೊನೆಯುಸಿರೆಳೆದಿದ್ದಾನೆ ಎಂದು ಕುಟುಂಬದವರು ದೂರಿದ್ದಾರೆ.