ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಜಮೀನು ವ್ಯಾಜ್ಯವು ಭೀಕರ ಸ್ವರೂಪ ಪಡೆದಿದೆ. ನಿರಾಳೆ ಮತ್ತು ಗೊಳಗಿ ಕುಟುಂಬಗಳ ನಡುವಿನ ಆಸ್ತಿ ವಿವಾದವು ಗುಂಡಿನ ದಾಳಿ ಹಾಗೂ ಮಾರಕಾಸ್ತ್ರಗಳ ಬಳಕೆಗೆ ಕಾರಣವಾಗಿ, ಒಂದೇ ಕುಟುಂಬದ ಆರು ಮಂದಿ ಬರ್ಬರವಾಗಿ ಹತ್ಯೆಯಾಗಿದ್ದಾರೆ.
ವಿಜಯಪುರ (ಮೇ.29): ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಭೀಕರ ನರಮೇಧ ನಡೆದಿದ್ದು, ಇಡೀ ಭೀಮಾತೀರ ಮತ್ತೊಮ್ಮೆ ರಕ್ತಸಿಕ್ತವಾಗಿದೆ. ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಎದುರಾಳಿಗಳು ನಡೆಸಿದ ದಿಢೀರ್ ಫೈರಿಂಗ್ ಹಾಗೂ ಮಾರಕಾಸ್ತ್ರಗಳ ದಾಳಿಗೆ ಬರೋಬ್ಬರಿ ಆರು ಜನ ಭೀಕರವಾಗಿ ಹತ್ಯೆಗೀಡಾಗಿದ್ದಾರೆ. ಈ ಘಟನೆಯಿಂದಾಗಿ ಇಡೀ ಜಿಲ್ಲೆ ಬೆಚ್ಚಿಬಿದ್ದಿದ್ದು, ಗ್ರಾಮದಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ನಿರಾಳೆ ಹಾಗೂ ಗೊಳಗಿ ಕುಟುಂಬಗಳ ನಡುವಿನ ಜಮೀನು ವ್ಯಾಜ್ಯ!
ಗೋವಿಂದಪುರ ಗ್ರಾಮದ ನಿರಾಳೆ ಮತ್ತು ಗೊಳಗಿ ಕುಟುಂಬಗಳ ನಡುವೆ ಕಳೆದ ಕೆಲವು ಸಮಯದಿಂದ ಜಮೀನಿಗೆ ಸಂಬಂಧಿಸಿದಂತೆ ತೀವ್ರ ಆಸ್ತಿ ವಿವಾದ ನಡೆದುಕೊಂಡು ಬಂದಿತ್ತು. ಇಂದು ಈ ವಿವಾದ ವಿಕೋಪಕ್ಕೆ ತಿರುಗಿದ್ದು, ಗೊಳಗಿ ಕುಟುಂಬದ ಸದಸ್ಯರು ನಿರಾಳೆ ಕುಟುಂಬದವರ ಮೇಲೆ ಏಕಾಏಕಿ ಬಂದೂಕಿನಿಂದ ಗುಂಡಿನ ಸುರಿಮಳೆಗೈದಿದ್ದಾರೆ ಎನ್ನಲಾಗಿದೆ. ಗೊಳಗಿ ಕುಟುಂಬದವರ ಈ ಭೀಕರ ದಾಳಿಗೆ ನಿರಾಳೆ ಕುಟುಂಬದ ಪ್ರಮುಖರು ಹಾಗೂ ಅವರ ಬೆಂಬಲಿಗರು ಸೇರಿ ಒಟ್ಟು ಆರು ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ರೇವಣಸಿದ್ದಪ್ಪ ನಿರಾಳೆ, ದುಂಡಪ್ಪ ರೇವಣಸಿದ್ದಪ್ಪ ನಿರಾಳೆ, ಶಿವಪುತ್ರ ರೇವಣಸಿದ್ದಪ್ಪ ನಿರಾಳೆ, ಚಂದ್ರಶೇಖರ್ ನಿರಾಳೆ, ಶಬ್ಬಿರ್ ನದಾಫ್ (ಇವರೊಂದಿಗೆ ಮತ್ತೊಬ್ಬರ ಹತ್ಯೆಯಾಗಿದ್ದು, ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ).
ಸ್ಥಳಕ್ಕೆ ಧಾವಿಸಿದ ಪೊಲೀಸ್ ಪಡೆ, ಗ್ರಾಮದಲ್ಲಿ ಬಿಗಿಬಂದೋಬಸ್ತ್!
ಒಂದೇ ಗ್ರಾಮದ ಆರು ಜನರ ಭೀಕರ ಹತ್ಯೆಯಿಂದಾಗಿ ಭೀಮಾತೀರದಾದ್ಯಂತ ಹಳೇ ಹಗೆತನದ ನೆರಳು ಮತ್ತೆ ಆವರಿಸಿದ್ದು, ಸಾರ್ವಜನಿಕರಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ದಂಡು ಸಶಸ್ತ್ರ ಪಡೆಗಳೊಂದಿಗೆ ಗೋವಿಂದಪುರ ಗ್ರಾಮಕ್ಕೆ ಧಾವಿಸಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಮುಂದಿನ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಇಡೀ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಘಟನೆಗೆ ಕಾರಣವೇನು?
ಒಟ್ಟು 25 ಏಕರೆ ಜಮೀನಿನ ವಿವಾದ ಇದಾಗಿದ್ದು, ಪ್ರತಿ ಏಕರೆಗೆ 15 ಲಕ್ಷದಂತೆ ನಿರಾಳೆ ಕುಟುಂಬ ಖರೀದಿ ಮಾಡಿತ್ತು. ಪಕ್ಕಾ ಜಮೀನು ಮೌಲ್ಯ ಬಂದು 25 ಲಕ್ಷ ಇತ್ತು. ಆದರೆ, ನಿರಾಳೆ ಕುಟುಂಬ 15 ಲಕ್ಷಕ್ಕೆ ಖರೀದಿ ಮಾಡಿತ್ತು.ಈ ಜಮೀನು ಪಕ್ಕದಲ್ಲಿಯೇ ಅಪ್ಪುಗೌಡ ಗೊಳಗಿ ಜಮೀನು ಕೂಡ ಇತ್ತು. ನಿರಾಳೆ ಕುಟುಂಬ ಖರೀದಿಸಿದ ಜಮೀನು ಮೇಲೆ ಅಪ್ಪುಗೌಡ ಗೊಳಗಿ ಕಣ್ಣಿಟ್ಟಿದ್ದ. ಆ ಜಮೀನು ಖರೀದಿ ಮಾಡದಂತೆ ನಿರಾಳೆ ಕುಟುಂಬಕ್ಕೆ ಅಪ್ಪುಗೌಡ ಗೊಳಗಿ ಧಮ್ಕಿ ಹಾಕಿದ್ದ. ಇದನ್ನು ಮೀರಿ 25 ಏಕರೆ ಜಮೀನನ್ನು ನಿರಾಳೆ ಕುಟುಂಬ ಖರೀದಿ ಮಾಡಿತ್ತು. ಪಕ್ಕದ ಜಮೀನು ಹೋಯ್ತಲ್ಲ ಎಂದು ಇಡೀ ನಿರಾಳೆ ಕುಟುಂಬವನ್ನೆ ಗೊಳಗಿ ಕುಟುಂಬ ಸರ್ವನಾಶ ಮಾಡಿದೆ.
ನಿರಾಳೆ ಚಡಚಣ ಮೂಲದವರು, ಗೊಳಗಿ ಗೋವಿಂದಪುರ ಗ್ರಾಮದವರು. ಚಡಚಣ ಊರಲ್ಲಿ ನಿರಾಳೆ ಫ್ಯಾಮಿಲಿ ಕೂಡು ಕುಟುಂಬ ಹೊಂದಿತ್ತು. ಒಂದೆ ಮನೆಯಲ್ಲಿ 30ಕ್ಕೂ ಅಧಿಕ ಜನ ವಾಸವಿದ್ದರು. ಚಡಚಣದ ಶ್ರೀಮಂತ ಕುಟುಂಬ ಪೈಕಿ ಒಂದಾಗಿತ್ತು. ಹತ್ಯೆಯಾಗಿರುವ ಚಂದು ನಿರಾಳೆ ತಾಲೂಕು ಪಂಚಾಯಿಸಿ ಮಾಜಿ ಸದಸ್ಯ ಕೂಡ ಆಗಿದ್ದ.
10ಕ್ಕೂ ಅಧಿಕ ಜನರಿಂದ ಕೃತ್ಯ
ಅಪ್ಪುಗೌಡ ಗೊಳಗಿ ಸೇರಿ 10ಕ್ಕಿಂತ ಅಧಿಕ ಜನರಿಂದ ನಿರಾಳೆ ಕುಟುಂಬಸ್ಥರನ್ನು ಹತ್ಎ ಮಾಡಲಾಗಿದೆ. ಕಬ್ಬು ಕತ್ತರಿಸುವ ಕತ್ತಿಯಿಂದ ಹತ್ಯೆ ಮಾಡಲಾಗಿದೆ. ತೇಲಿ ಕುಟುಂಬಕ್ಕೆ ಸೇರಿದ 25 ಏಕರೆ ಜಮೀನನ್ನು 1 ವರ್ಷದ ಹಿಂದೆಯೇ ಮಾರಾಟ ಮಾಡಲಾಗಿತ್ತು. 15 ವರ್ಷಗಳಿಂದ ತೇಲಿ ಕುಟುಂಬಕ್ಕೂ ಗೊಳಗಿ ಕುಟುಂಬಕ್ಕೂ ಈ ಕುರಿತಾಗಿ ವಿವಾದವಿತ್ತು. ತೇಲಿ ಕುಟುಂಬದಿಂದ ಕಡಿಮೆ ದರಕ್ಕೆ 25 ಏಕರೆ ಜಮೀನನ್ನು ನಿರಾಳೆ ಕುಟುಂಬ ಖರೀದಿ ಮಾಡಿತ್ತು. ನಿರಾಳೆ ಕುಟುಂಬ ಕಡಿಮೆ ದರಕ್ಕೆ ತೇಲಿ ಕುಟುಂಬದಿಂದ 25 ಏಕರೆ ಖರೀದಿ ಮಾಡಿದ್ದಕ್ಕೆ ಗೊಳಗಿ ಕುಟುಂಬಕ್ಕೆ ಸಿಟ್ಟಾಗಿತ್ತು. ಇದೇ ಕಾರಣಕ್ಕೆ ನಿರಾಳೆ ಕುಟುಂಬಸ್ಥರನ್ನ ಅಟ್ಟಾಡಿಸಿ ಹೊಡೆದು ಗೊಳಗಿ ಕುಟುಂಬ ಹತ್ಯೆ ಮಾಡಿದೆ.



