ವಿಜಯಪುರದ ಕೋಟ್ಯಾಳ ಗ್ರಾಮದಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಸಿ.ಎಸ್.ಆರ್ ಅನುದಾನದಡಿ ₹3.25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಸರ್ಕಾರಿ ಪ್ರೌಢಶಾಲಾ ಕಟ್ಟಡವನ್ನು ಸಚಿವ ಎಂ.ಬಿ. ಪಾಟೀಲರು ಲೋಕಾರ್ಪಣೆಗೊಳಿಸಿದರು. ಈ ಸುಸಜ್ಜಿತ ಶಾಲೆಯು ಗ್ರಾಮೀಣ ಪ್ರತಿಭೆಗಳಿಗೆ, ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ವರದಾನವಾಗಲಿದೆ ಎಂದು ಅವರು ಹೇಳಿದರು.

ವಿಜಯಪುರ: ಕೋಟ್ಯಾಳ ಗ್ರಾಮದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿ. ಸಂಸ್ಥೆಗಳ ಸಿ.ಎಸ್.ಆರ್‌ ಅನುದಾನದಡಿ ₹3.25 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣಗೊಂಡಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ನಿರ್ಮಿಸಿದ ನೂತನ ಸರ್ಕಾರಿ ಪ್ರೌಢಶಾಲಾ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ದೊಡ್ಡದಾದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತನ್ನ ಆದಾಯದ ಮರುಹೂಡಿಕೆ ಮಾಡಿದ ಏಕೈಕ ವಿಮಾನ ನಿಲ್ದಾಣವಾಗಿದೆ. ಈ ಸಂಸ್ಥೆ, ಕೋಟ್ಯಾಳದಲ್ಲಿ ಗುಣಮಟ್ಟದ ಹಾಗೂ ಸುಂದರ ಶಾಲಾ ಕಟ್ಟಡ ನಿರ್ಮಿಸಿಕೊಟ್ಟಿದೆ. ಗ್ರಾಮೀಣ ಪ್ರತಿಭೆಗಳಿಗೆ ಈ ಶಾಲಾ ಕಟ್ಟಡ ಅನುಕೂಲವಾಗಲಿದ್ದು, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೂ ಹೆಚ್ಚು ಒತ್ತು ನೀಡಿದರೆ, ಗ್ರಾಮೀಣ ಬಾಲಕಿಯರಿಗೆ ಈ ಶಾಲೆ ಭವಿಷ್ಯದ ದಿನಗಳಲ್ಲಿ ವರದಾನವಾಗಲಿದೆ. ಹೆಣ್ಣು ಮಕ್ಕಳನ್ನು ಪೋಷಕರು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು ಎಂದು ಸಲಹೆ ನೀಡಿದರು.

₹3.25 ಕೋಟಿ ವೆಚ್ಚದಲ್ಲಿ, 7,000 ಚದರ ಅಡಿ ವಿಸ್ತೀರ್ಣ

ಈ ಸುಸಜ್ಜಿತ ಶಾಲಾ ಕಟ್ಟಡವನ್ನು ₹3.25 ಕೋಟಿ ವೆಚ್ಚದಲ್ಲಿ, 7,000 ಚದರ ಅಡಿ ವಿಸ್ತೀರ್ಣದಲ್ಲಿ ಅತ್ಯಾಧುನಿಕವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕಟ್ಟಡ ನಿರ್ಮಿಸಲಾಗಿದೆ. ಇದರೊಂದಿಗೆ 800 ಚದರ ಅಡಿಯ ಹಳೆಯ ಕಟ್ಟಡದ ಪುನರುಜ್ಜೀವನ ಕಾರ್ಯವನ್ನು ಸಹ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಶಾಲೆಯಲ್ಲಿ 1 ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಏಳು ಸುಸಜ್ಜಿತ ಕೊಠಡಿ ಸಿದ್ಧಪಡಿಸಿದ್ದು, ಸ್ಟೇಮ್‌ಲ್ಯಾಬ್ ಹಾಗೂ ನಲಿಕಲಿ ಕೊಠಡಿಗಳನ್ನು ವಿಶೇಷವಾಗಿ ಸ್ಥಾಪಿಸಲಾಗಿದೆ. 135 ಹೊಸ ಪೀಠೋಪಕರಣ, ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ 10 ಸುಸಜ್ಜಿತ ಶೌಚಾಲಯ ಸೇರಿದಂತೆ ಆಧುನಿಕ ಸೌಲಭ್ಯವುಳ್ಳ ಅಡುಗೆ ಕೊಠಡಿ ಹಾಗೂ ವಿಶಾಲವಾದ ಊಟದ ಸಭಾಂಗಣ ನಿರ್ಮಿಸಲಾಗಿದೆ ಎಂದರು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿ. ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಹರಿ ಮರಾರ ಮಾತನಾಡಿ, ಈ ಸುಂದರ ಕಟ್ಟಡ ವಿದ್ಯಾರ್ಥಿಗಳ ಭವಿಷ್ಯ ಬೆಳಗುವ ಜ್ಞಾನ ದೇಗುಲವಾಗಿದೆ. ನೀರಾವರಿಯಿಂದ ಈ ಭಾಗದ ರೈತರ ಬಾಳು ಸಮೃದ್ಧಗೊಳಿಸಿದ ಡಾ.ಎಂ.ಬಿ. ಪಾಟೀಲರು ಶೈಕ್ಷಣಿಕ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ. ಅವರ ಶ್ರಮದ ಫಲವಾಗಿ ಈ ಕಟ್ಟಡ ಮೈದಳೆದಿದೆ ಎಂದರು.

ಮುಖ್ಯ ಹಣಕಾಸು ಅಧಿಕಾರಿ ಭಾಸ್ಕರ ಆನಂದರಾವ, ಭೂಮಿ ದಾನ ಮಾಡಿದ ಕಮಲಾ ಮುರುಗೇಶ ನಿರಾಣಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಮಾತನಾಡಿದರು. ಶಾಲಾ ಕಟ್ಟಡಕ್ಕೆ ಭೂಮಿ ದಾನ ನೀಡಿರುವ ಆನಂದರಾವ ಕುಲಕರ್ಣಿ, ಅನೀಲಕುಮಾರ ಪಾಟೀಲ, ವಿ.ಎಸ್. ಪಾಟೀಲ ಹಲವು ಗಣ್ಯರು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಹೊನವಾಡದಲ್ಲೂ ಹೈಸ್ಕೂಲ್ ಕಟ್ಟಡ ಕಟ್ಟಿಕೊಡುತ್ತಿದ್ದಾರೆ. ಸಿಎಸ್‌ಆರ್ ಅನುದಾನದಲ್ಲಿ ಶಾಲಾ ಕಾಲೇಜಿಗೂ ಜಿಲ್ಲಾದ್ಯಂತ ಶಾಲಾ ಕಟ್ಟಡ ಸ್ಮಾರ್ಟ್‌ ಕ್ಲಾಸ್ ಕಟ್ಟಡ, ಪಾಠೋಪಕರಣ, ಮೈದಾನ, ಪೀಠೋಪಕರಣ ಒದಗಿಸಲಾಗುವುದು. ಅಂಗನವಾಡಿ ಕಟ್ಟಡಗಳು, ನೀರಾವರಿ, ಕೆರೆ ಅಭಿವೃದ್ಧಿ, ಹೈನುಗಾರಿಕೆಗೆ ಒತ್ತು ನೀಡಲಾಗಿದೆ.ಹೈನುಗಾರಿಕೆ ಇಡೀ ಜಿಲ್ಲೆಗೆ ವಿಸ್ತರಣೆ ಮಾಡಲಾಗುವುದು. ಬಾಬಾನಗರದಲ್ಲಿ ಡ್ಯಾಂ ನಿರ್ಮಾಣ ಮಾಡಿ, ಮಳೆಗಾಲದಲ್ಲಿ ತುಂಬಿಸಿ ಬೇಸಿಗೆ ಸಂದರ್ಭದಲ್ಲಿ ಬಳಸಿಕೊಳ್ಳಲು ಅನುಕೂಲವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ: ವಿಜಯಪುರ ಉಪ ನೋಂದಣಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ; ಯಾವುದೇ ದಾಖಲೆಗಳಿಲ್ಲದ ₹50,000 ನಗದು ಜಪ್ತಿ!