ಕರ್ನಾಟಕ ಸಚಿವ ಸಂಪುಟವು 'ಕರ್ನಾಟಕ ಸರ್ಕಾರಿ ಆವರಣ ಮತ್ತು ಸಾರ್ವಜನಿಕ ಆಸ್ತಿಗಳ ಬಳಕೆ ನಿಯಂತ್ರಣ ವಿಧೇಯಕ-2026'ಕ್ಕೆ ಅನುಮೋದನೆ ನೀಡಿದೆ. ಈ ಮೂಲಕ, ಆರ್‌ಎಸ್‌ಎಸ್‌ ಸೇರಿದಂತೆ ಯಾವುದೇ ಖಾಸಗಿ ಸಂಘ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಲು ಕಾನೂನುಬದ್ಧ ಅನುಮತಿ ಪಡೆಯುವುದು ಕಡ್ಡಾಯ.

ಬೆಂಗಳೂರು (ಆ.14): ಖಾಸಗಿ ಸಂಘ ಸಂಸ್ಥೆಗಳು, ಸಂಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆಗಳನ್ನು ಕಾನೂನುಬದ್ಧವಾಗಿ ನಡೆಸಲು ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸುವ ‘ಕರ್ನಾಟಕ ಸರ್ಕಾರಿ ಆವರಣ ಮತ್ತು ಸಾರ್ವಜನಿಕ ಆಸ್ತಿಗಳ ಬಳಕೆ ನಿಯಂತ್ರಣ ವಿಧೇಯಕ-2026’ಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಆ ಮೂಲಕ ಆರ್‌ಎಸ್‌ಎಸ್‌ ಸೇರಿದಂತೆ ಯಾವುದೇ ಸಂಘ ಸಂಸ್ಥೆಗಳು ಶಾಲಾ, ಕಾಲೇಜು, ಸರ್ಕಾರಿ ಹಾಗೂ ಸಾರ್ವಜನಿಕ ಆಸ್ತಿಗಳ ಆವರಣದಲ್ಲಿ ಕಾರ್ಯಕ್ರಮ ನಡೆಸಲು ಕಾನೂನು ಬದ್ಧ ಅನುಮತಿ ಕಡ್ಡಾಯ ಎಂಬ ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ.

ಇದೇ ಮಳೆಗಾಲದ ಅಧಿವೇಶನದಲ್ಲಿ ಈ ವಿಧೇಯಕ ಮಂಡನೆಯಾಗುವ ಸಾಧ್ಯತೆಯಿದೆ.

2025ರಲ್ಲೇ ರಾಜ್ಯ ಸರ್ಕಾರವು ಖಾಸಗಿ ಸಂಘ ಸಂಸ್ಥೆಗಳು, ಸಂಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆಗಳನ್ನು ಕಾನೂನುಬದ್ಧವಾಗಿ ನಡೆಸಲು ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ಸ್ಪಷ್ಟ ಮಾರ್ಗಸೂಚಿ ಪ್ರಕಟಿಸಿತ್ತು.

ಇದನ್ನು ಪುನಶ್ಚೇತನ ಸೇವಾ ಸಂಸ್ಥೆ ಎಂಬ ಸಂಘಟನೆಯು ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಈ ನಿರ್ಧಾರವು ನಾಗರಿಕರ ಸಭೆ ಸೇರುವ ಮತ್ತು ಸಂಘ ಕಟ್ಟುವ ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸಿದೆ ಎಂದು ವಾದಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ಸರ್ಕಾರದ ಆದೇಶಕ್ಕೆ ತಡೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಇದಕ್ಕೆ ಪ್ರತ್ಯೇಕ ಕಾಯಿದೆ ಜಾರಿಗೆ ಸರ್ಕಾರ ನಿರ್ಧರಿಸಿದೆ.

ಏನಿದು ವಿವಾದ?:

2025ರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸರ್ಕಾರಿ ಸ್ಥಳಗಳು, ಶಾಲೆಗಳು ಹಾಗೂ ಸರ್ಕಾರದ ಅನುದಾನಿತ ಶಾಲೆಗಳು ಮತ್ತು ಮೈದಾನಗಳು, ಉದ್ಯಾನವನಗಳು, ಮುಜರಾಯಿ ಇಲಾಖೆಯ ದೇವಸ್ಥಾನಗಳು, ಪುರಾತತ್ವ ಇಲಾಖೆಯ ಸ್ಥಳಗಳು ಸೇರಿದಂತೆ ಯಾವುದೇ ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಸಂಘಟನೆಯು ಶಾಖೆ, ಸಾಂಘಿಕ ಅಥವಾ ಬೈಠಕ್ ಹೆಸರಲ್ಲಿ ನಡೆಸುವ ಎಲ್ಲಾ ಬಗೆಯ ಚಟುವಟಿಕೆಗಳಿಗೆ ನಿರ್ಬಂಧ ಹೇರಬೇಕು ಎಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು.

ಇದರ ಬೆನ್ನಲ್ಲೇ ಸಚಿವ ಸಂಪುಟ ಸಭೆಯಲ್ಲಿ ಸಾರ್ವಜನಿಕ ಸ್ಥಳ, ಸರ್ಕಾರಿ ಶಾಲೆಗಳ ಮೈದಾನಗಳ ಸದ್ಬಳಕೆ ಮಾಡುವ ಸಂಬಂಧ ಸ್ಪಷ್ಟ ನೀತಿ ನಿಯಮ ಉಳ್ಳ ಸರ್ಕಾರ ಆದೇಶ ಹೊರಡಿಸಿದ್ದರು.

ಪೊಲೀಸ್ ಮಹಾನಿರ್ದೇಶಕರು 2025ರ ಅ.15ರಂದು ತಮ್ಮ ಪತ್ರದಲ್ಲಿ, ಹಲವಾರು ಖಾಸಗಿ ಸಂಸ್ಥೆಗಳು, ಸಂಘಗಳು ತಮ್ಮ ಚಟುವಟಿಕೆಗಳು, ಪ್ರಚಾರ, ತರಬೇತಿ, ಉತ್ಸವಗಳು ಹಾಗೂ ಸದಸ್ಯರ ಮತ್ತು ಬೆಂಬಲಿಗರ ಸಭೆಗಳು ನಡೆಸುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳು ಹಾಗೂ ಸರ್ಕಾರದ ಆಸ್ತಿಗಳು, ಜಮೀನುಗಳು, ಆಟದ ಮೈದಾನಗಳು, ಸಾರ್ವಜನಿಕ ರಸ್ತೆಗಳನ್ನು ಬಳಸಿಕೊಳ್ಳುತ್ತಿವೆ. ಇದಕ್ಕೆ ಸರ್ಕಾರ ಅಥವಾ ಸಂಬಂಧಿತ ಇಲಾಖೆಯಿಂದ ಮುಂಚಿತವಾಗಿ ಅನುಮತಿ ಪಡೆಯುತ್ತಿಲ್ಲ. ಇಂತಹ ಕ್ರಿಯೆಗಳನ್ನು ಅಕ್ರಮ ಪ್ರವೇಶ ಎಂದು ಪರಿಗಣಿಸಲಾಗುವುದು ಎಂದು ಹೇಳಿದ್ದರು.

ಇದೀಗ ಪ್ರತ್ಯೇಕ ಕಾಯಿದೆ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆ ನಡೆಸಲು ಸಂಘಟನೆ, ಸಂಘ ಸಂಸ್ಥೆಗಳು ಪೂರ್ವಾನುಮತಿ ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಆರ್‌ಎಸ್‌ಎಸ್ ಅಧಿಕೃತವಾಗಿ ನೋಂದಾಯಿತ ಅಲ್ಲದ ಸಂಸ್ಥೆ ಆಗಿರುವುದರಿಂದ ಅನುಮತಿ ಕೋರಲು ಕಷ್ಟವಾಗಬಹುದು. ಆ ಮೂಲಕ ಆರ್‌ಎಸ್‌ಎಸ್‌ ಚಟುವಟಿಕೆಗೆ ನಿರ್ಬಂಧ ಹೇರಬಹುದು ಎಂಬ ಉದ್ದೇಶ ಸರ್ಕಾರದ್ದು ಎನ್ನಲಾಗಿದೆ.

ವಿಧೇಯಕದಲ್ಲಿ ಯಾವುದೇ ಚಟುವಟಿಕೆಗಳು ಸಾರ್ವಜನಿಕರಿಗೆ ಅನಾನುಕೂಲ ಉಂಟು ಮಾಡಿದರೆ ಸಂಸ್ಥೆಗಳ ಆವರಣ ಅಥವಾ ಜಾಗದಲ್ಲಿ ನಡೆಯುವ ಚಟುವಟಿಕೆಗಳಿಂದ ಆ ಸಂಸ್ಥೆಗಳ ಮೂಲ ಧ್ಯೇಯಕ್ಕೆ ಧಕ್ಕೆ ಉಂಟಾಗುವುದಾದರೆ ಅಂತಹ ಚಟುವಟಿಕೆಗಳ ಆಯೋಜನೆಗೆ ಸಕ್ಷಮ ಪ್ರಾಧಿಕಾರಗಳು ಅನುಮತಿಯನ್ನು ನಿರಾಕರಿಸಬೇಕು ಎಂದು ನಿಯಮ ಜಾರಿಗೆ ತರುವ ಸಾಧ್ಯತೆಯಿದೆ.

ಜತೆಗೆ ಯಾವ್ಯಾವ ಆಸ್ತಿಗಳಲ್ಲಿ ಕಾರ್ಯಕ್ರಮ ನಡೆಸಲು ಯಾವ್ಯಾವ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು ಎಂಬುದನ್ನೂ ಸ್ಪಷ್ಟವಾಗಿ ತಿಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.