*  ಬಡ, ಮಧ್ಯಮ ವರ್ಗದ ಜನತೆ ಜೀವನ ನಡೆಸುವುದೇ ದುಸ್ತರ*  ಕೊತ್ತಂಬರಿ, ಪಾಲಕ್‌, ಮೆಂತೆ ಮುಂತಾದ ಸೊಪ್ಪುಗಳ ಬೆಲೆಯಲ್ಲಿಯೂ ಏರಿಕೆ*  ಬೆಲೆಯೇರಿಕೆಗೆ ತತ್ತರಿಸಿದ ಜನತೆ 

ಹಾವೇರಿ(ನ.26): ಅಕಾಲಿಕ ಮಳೆಗೆ(Untimely Rain) ಕೃಷಿ, ತೋಟಗಾರಿಕಾ ಬೆಳೆಗಳು ಹಾನಿಯಾಗಿದ್ದು, ಮಾರುಕಟ್ಟೆಗೆ ತರಕಾರಿ ಆವಕ ಕುಸಿದಿದೆ. ಇದರಿಂದ ಕಾಯಿಪಲ್ಲೆ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರು ಮತ್ತಷ್ಟು ಕಂಗಾಲಾಗುವಂತಾಗಿದೆ.

ಇಂಧನ(Fuel), ದಿನಬಳಕೆ ಸಾಮಗ್ರಿಗಳ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಬಡ ಹಾಗೂ ಮಧ್ಯಮ ವರ್ಗದ ಜನತೆ ಜೀವನ ನಡೆಸುವುದೇ ದುಸ್ತರವಾಗಿದೆ. ಕಳೆದೊಂದು ವಾರದಿಂದ ಜಿಲ್ಲಾದ್ಯಂತ ನಿರಂತರವಾಗಿ ಸುರಿದ ಅಕಾಲಿಕ ಮಳೆಗೆ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ(Crop Damage). ಅತಿಯಾದ ಮಳೆಗೆ ತರಕಾರಿ(Vegetable), ಸೊಪ್ಪು ಕೊಳೆತಿದೆ.

ಟೊಮೆಟೊ, ಮೆಣಸಿನಕಾಯಿ, ಸೌತೆಕಾಯಿ, ಈರುಳ್ಳಿ, ಬೀನ್ಸ್‌, ಕ್ಯಾರೆಟ್‌, ಬದನೆಕಾಯಿ, ಹಾಲಗಕಾಯಿ, ಹಿರೇಕಾಯಿ, ಸೊಪ್ಪು ಸೇರಿದಂತೆ ಹಲವು ತರಕಾರಿ ಬೆಳೆಗಳು ಹಾಳಾಗಿವೆ. ಮಾರುಕಟ್ಟೆಗೆ(MArket) ತರಕಾರಿ ಬಾರದೇ ಇರುವುದರಿಂದ ಬೆಲೆ ಗಗನಮುಖಿಯಾಗಿದ್ದು, ಗ್ರಾಹಕರನ್ನು(Customers) ಕಂಗಾಲಾಗುವಂತೆ ಮಾಡಿದೆ.

Bengaluru ಸುತ್ತಮುತ್ತ ಧಾರಾಕಾರ ಮಳೆ : ಗಗನಕ್ಕೇರಿದ ತರಕಾರಿ, ಹೂ ಬೆಲೆ!

ಕಳೆದ ಒಂದುವಾರದ ಹಿಂದೆ ಕೆಜಿಗೆ 20-30 ಇದ್ದ ಟೊಮೆಟೊ ಈಗ 70 ಆಗಿದೆ. ಕೆಜಿಗೆ 40 ಇದ್ದ ಬೀನ್ಸ್‌ ಈಗ 70-80ಗೆ ಏರಿಕೆಯಾಗಿದೆ. ಕೆಲವು ದಿನಗಳಿಂದ ಬೆಲೆಯಿಲ್ಲದೇ ಎಸೆಯುವಂತಾಗಿದ್ದ ಸೌತೆಕಾಯಿ, ಮುಳಗಾಯಿ ಬೆಲೆಯೂ ಹೆಚ್ಚಳವಾಗಿದೆ. ಪರಿಣಾಮ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದ್ದು, ತರಕಾರಿ ಕೊಳ್ಳುವುದೇ ದುಸ್ತರವಾಗಿದೆ. ಅದರಲ್ಲೂ ಬಡ, ಮಧ್ಯಮ ವರ್ಗದವರಂತೂ ತರಕಾರಿ ಕೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ. 500 ನೋಟು ಇಟ್ಟುಕೊಂಡು ಹೋದರೆ ಪುಟ್ಟಚೀಲದಷ್ಟು ತರಕಾರಿಯೂ ಸಿಗುವುದಿಲ್ಲ.

ಎಲ್ಲ ತರಕಾರಿ ಬೆಲೆ ಏರಿಕೆ

ಟೊಮೆಟೊ ಕೆಜಿಗೆ 70ಗೆ ಏರಿಕೆಯಾಗಿದೆ. ಈರುಳ್ಳಿ 40-50 ಆಗಿದೆ. ಕ್ಯಾರೆಟ್‌ ಕೆಜಿಗೆ 30 ಇದ್ದಿದ್ದು ಈಗ 50, ಹಿರೇಕಾಯಿ ಬೆಲೆ ದುಪ್ಪಟ್ಟಾಗಿದ್ದು, ಕೆಜಿಗೆ 60 ಆಗಿದೆ. ಬೆಂಡೆಕಾಯಿ 50ಗೆ ಏರಿಕೆಯಾಗಿದೆ. ಚವಳಿಕಾಯಿ ಕೆಜಿಗೆ 40 ಇದ್ದಿದ್ದು ಈಗ 60-70ಗೆ ಏರಿಕೆ ಕಂಡಿದೆ. ಹಾಗಲಕಾಯಿ 50, ಕ್ಯಾಪ್ಸಿಕಮ್‌ 70 ಗಡಿದಾಟಿದ್ದು ಕೊಂಡುಕೊಳ್ಳುವುದೇ ಕಷ್ಟವಾಗಿ ಪರಿಣಮಿಸಿದೆ. ಅದರಲ್ಲೂ ಟೊಮೆಟೊ ಬೆಲೆ ಕೇಳಿ ಗ್ರಾಹಕರು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದು, ಕೆಜಿ ಖರೀದಿಸುತ್ತಿದ್ದ ಗ್ರಾಹಕರು ಅರ್ಧ ಕೆಜಿ ಖರೀದಿಸುತ್ತಿದ್ದಾರೆ. ಬೆಲೆಯೇರಿಕೆಗೆ ತತ್ತರಿಸಿರುವ ಕೆಲವರು ಟೊಮೆಟೊ ಖರೀದಿಸುವುದನ್ನೇ ಬಿಟ್ಟು ಹುಣಿಸೆಹಣ್ಣನ್ನೇ ಪರ್ಯಾಯವಾಗಿ ಬಳಕೆ ಮಾಡುತ್ತಿದ್ದಾರೆ.

ಕೊತ್ತಂಬರಿ, ಪಾಲಕ್‌, ಮೆಂತೆ ಮುಂತಾದ ಸೊಪ್ಪುಗಳ ಬೆಲೆಯಲ್ಲಿಯೂ ಏರಿಕೆಯಾಗಿದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ತರಕಾರಿ ಹಾಳಾಗಿದ್ದು, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ, ಮೈಸೂರ, ಬೆಂಗಳೂರು(Bengaluru) ಭಾಗದಿಂದಲೂ ತರಕಾರಿ, ಸೊಪ್ಪು ಮಾರುಕಟ್ಟೆಗೆ ಬರುತ್ತಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಸ್ಥರು.

ಮದುವೆ ಸೀಸನ್‌ ಆರಂಭ

ಕೊರೋನಾದಿಂದ(Coronavirus) ಮುಂದೂಡಿದ್ದ ಮದುವೆಗಳು(Marriage) ಈಗ ಶುರುವಾಗಿವೆ. ಜಿಲ್ಲಾದ್ಯಂತ ಪ್ರಮುಖ ದೇವಸ್ಥಾನ, ಕಲ್ಯಾಣ ಮಂಟಪಗಳು ಮದುವೆ ಕಾರ್ಯಕ್ರಮಕ್ಕೆ ಬುಕ್‌ ಆಗಿವೆ. ತರಕಾರಿ ದರ ಏರಿಕೆಯಿಂದ ಶುಭ ಸಮಾರಂಭಗಳಿಗೆ ಗುಣಮಟ್ಟದ ತರಕಾರಿಯೂ ಸಿಗದಂತಾಗಿದೆ.

ದುಬಾರಿ ದುನಿಯಾ: ಪೆಟ್ರೋಲ್, ಡಿಸೇಲ್ ಹಾಕಿಸಿಕೊಳ್ಳೋಕೆ ಆಗಲ್ಲ, ತರಕಾರಿಗಳು ಮುಟ್ಟೋಕಾಗಲ್ಲ!

ಅಕಾಲಿಕವಾಗಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿನ ತರಕಾರಿ ಬೆಳೆಗಳು ಕೊಳೆತಿವೆ. ಇದರಿಂದ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ತರಕಾರಿ ಬರುತ್ತಿದೆ. ಇದರಿಂದ ಎಲ್ಲ ತರಕಾರಿಗಳ ಬೆಲೆ ಡಬಲ್‌ ಆಗಿವೆ. ನಿನ್ನೆ ಇದ್ದ ದರ ಇಂದು ಇರುವುದಿಲ್ಲ, ನಿತ್ಯ ತರಕಾರಿ, ಸೊಪ್ಪಿನ ಬೆಲೆಗಳು ಏರುತ್ತಲೇ ಇವೆ ಅಂತ ತರಕಾರಿ ವ್ಯಾಪಾರಸ್ಥರಾದ ಪ್ರಶಾಂತ ನಿಂಗಪ್ಪಗೌಡ್ರ ತಿಳಿಸಿದ್ದಾರೆ.

ಒಣಗಿಸಿದ್ದ ಮೆಣಸಿನಕಾಯಿಯಲ್ಲಿ ಮೊಳಕೆ, ರೈತ ಕಂಗಾಲು

ಬಳ್ಳಾರಿ: ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆ ಭಾರೀ ಅವಾಂತರವನ್ನು ಮಾಡಿದೆ. ಬಹುತೇಕ ಕಡೆ ಕಟಾವಿಗೆ ಬಂದಿದ್ದ ಬೆಳೆ (Crop) ಹಾನಿಯಾಗಿದೆ. ಇಲ್ಲಿನ ಕುರುಗೋಡು ತಾಲೂಕಿನ ಸೋಮಲಾಪುರ ತಾಲೂಕಿನಲ್ಲಿ ಒಣಗಿಸಲು ಹಾಕಿದ್ದ ಮೆಣಸಿಕಕಾಯಿಯಲ್ಲಿ ಮೊಳಕೆ ಬಂದಿದೆ. ದೊಡ್ಡ ಪ್ರಮಾಣದಲ್ಲಿ ಮೆಣಸಿನ ಕಾಯಿ ಇರುವುದರಿಂದ ಮುಂದೇನು ಮಾಡುವುದು ಎಂದು ರೈತ ಕಂಗಾಲಾಗಿದ್ದಾನೆ. ಲಕ್ಷಾಂತರ ರೂ ಹಾಕಿ ಮೆಣಸಿನ ಕಾಯಿ ಬೆಳೆದಿದ್ದೇವೆ, ಏನ್ಮಾಡೋದು ಸ್ವಾಮಿ ಎಂದು ಅಳಲು ತೋಡಿಕೊಂಡಿದ್ದಾರೆ.