ಕುಕನೂರಿನಲ್ಲಿ ನಡೆದ ಪಟ್ಟಣ ಪಂಚಾಯಿತಿ ಸಭೆಯಲ್ಲಿ, ಸಂಜಯ ನಗರದ ಚರಂಡಿ ಮತ್ತು ನೀರಿನ ಸಮಸ್ಯೆಗೆ ಸದಸ್ಯೆ ಲಕ್ಷ್ಮೀ ಸಬರದ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೊಪ್ಪಳ: ನಮ್ಮ ಸಂಜಯ ನಗರದಾಗ ಗಟಾರ್ ತುಂಬಿದಾವು, ಸರಿಯಾಗಿ ನೀರು ಬಿಡುತ್ತಿಲ್ಲ. ಗಟಾರ ತುಂಬಿದ ಕೂಡ್ಲೆ ಮಂದಿ ಮನೀಗೆ ಬಂದು ಏನ್ ಮಾಡಕತ್ತೀ ಮೆಂಬರವ್ವ ಅಂತಾ ಬಂದು ಕೂಡ ತಾರಾ, ನಾವು ಮನೆಯಲ್ಲಿ ಇರಬೇಕಾ, ಬೇಡ್ವಾ ಎಂದು 13ನೇ ವಾರ್ಡ್‌ನ ಸಂಜನಗರದ ಪಪಂ ಸದಸ್ಯೆ ಲಕ್ಷ್ಮೀ ಸಬರದ ಮುಖ್ಯಾಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ಪ್ರಸಂಗ ನಡೆಯಿತು.

Add Asianetnews Kannada as a Preferred SourcegooglePreferred

ಸ್ಥಳೀಯ ಪ್ರವಾಸಿ ಮಂದಿರಲ್ಲಿ ಪಪಂದಿಂದ ಮಂಗಳವಾರ ಜರುಗಿದ ಪಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಇಷ್ಟು ದಿನಗಳಾಯಿತು ಕುಡಿವ ನೀರು, ಚರಂಡಿ ಸ್ವಚ್ಛತೆ ಬಿಟ್ಟು ನಾವು ಏನು ಕೇಳೊದಿಲ್ಲ. ಚರಂಡಿ ತುಂಬಿದರೆ ನಿವಾಸಿಗಳು ಮೆಂಬರ್ ಏನು ಮಾಡಕತಿಯವ್ವ ಗಟಾರು ತುಂಬಿದಾವು ಅಂತಾರಾ. ಅದನ್ನಾ ನಾವು ಬಳಿಬೇಕಾ, ನೀವು ಅಧಿಕಾರಿಗಳು ಮತ್ತು ಪೌರಕಾರ್ಮಿಕರು ಏನು ಮಾಡುತ್ತೀರಿ.ಲೆಬರ್ ಕಡಿಮೆ ಇದ್ದರೆ ಮತ್ತಷ್ಟು ಜನರವನ್ನು ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಬರಿ ಸುಳ್ಳು ಹೇಳಿದರ ಹೇಂಗ, ಜನರಿಗೆ ನಾವು ಏನ್ ಉತ್ತರ ಕೊಡೋಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೂಲ ಸೌಕರ್ಯಕ್ಕೆ ಆದ್ಯತೆ ನೀಡುವಂತೆ ಒತ್ತಾಯ

ಪಪಂ ಸದಸ್ಯ ಸಿರಾಜ್ ಕರಮುಡಿ ಮಾತನಾಡಿ, ಜನರಿಗೆ ಕುಡಿವ ನೀರು, ಬೆಳಕು ಮತ್ತು ಸ್ವಚ್ಛತೆ ನೀಡಿದರೆ ಮತ್ತೆ ಜನರು ಏನು ಕೇಳುವದಿಲ್ಲ. ಮೊದಲು ಮೂಲ ಸೌಕರ್ಯಕ್ಕೆ ಆದ್ಯತೆ ನೀಡಬೇಕು. ತೆರಿಗೆ ಹೆಚ್ಚಿಗೆ ಮಾಡಬಾರದು ಎಂದರು.

ಅಮೃತ 2.0 ಕುಡಿವ ನೀರಿನ ಎಇಇ ಸುಕುಮುನಿ ನಾಯಕ ಮಾತನಾಡಿ, ಅಮೃತ 2.0 ಕುಡಿವ ನೀರಿನ ಯೋಜನೆ ಸಂಬಂಧಿಸಿದಂತೆ ಪಟ್ಟಣದಲ್ಲಿ ಮೂರು ಟ್ಯಾಂಕರ ನಿರ್ಮಿಸಲಾಗುತ್ತಿದೆ. ತುಂಗಭದ್ರಾ ಜಲಾಯಶದಿಂದ ಭಾನಾಪೂರ, ಕೌಶಲ್ಯ ಕೇಂದ್ರ, ಇಂಜಿನಿಯರಿಂಗ್ ಕಾಲೇಜ್, ತಳಬಾಳ ಕಾಲೇಜ, ಕುಕನೂರು ಮತ್ತು ಯಲಬುರ್ಗಾ ಟೌನ್‌ಗೆ ಕುಡಿವ ನೀರಿನ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದು, ಒಬ್ಬ ವ್ಯಕ್ತಿಗೆ 135 ಲೀಟರ್ ಕುಡಿವ ನೀರು ನೀಡುವ ಯೋಜನೆಯಾಗಿದೆ. 15 ತಿಂಗಳಿಂದ ಕೆಲಸ ಪ್ರಗತಿಯಲ್ಲಿದ್ದು ಜೂನ್ ಜುಲೈಗೆ ಕಾಮಗಾರಿ ಮುಗಿಸುತ್ತೇವೆ ಎಂದರು.

ಶೇ..3 ರಷ್ಟು ತೆರಿಗೆ ಹೆಚ್ಚಳ

ಪಪಂ ಮುಖ್ಯಾಧಿಕಾರಿ ನಾಗೇಶ ಮಾತನಾಡಿ, ಪಟ್ಟಣದಲ್ಲಿ ಕುಡಿವ ನೀರು, ಚರಂಡಿ ಸ್ವಚ್ಛತೆಯನ್ನು ಪೌರಕಾರ್ಮಿಕರೊಂದಿಗೆ ಸಭೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವದು. ಕೇಂದ್ರ ಸರ್ಕಾರ ಪ್ರಮುಖ ವೃತ್ತಗಳಲ್ಲಿ ಮೂರ್ತಿ ನಿರ್ಮಿಸಬಾರದು ಎಂದು ತೀರ್ಪು ನೀಡಿದೆ. ಪಟ್ಟಣದಲ್ಲಿ ಪಾದಚಾರಿಗಳ ರಸ್ತೆ ತೆರವುಗೊಳಿಸಲು ಕೇಲವು ದಿನ ಬೀದಿ ಬದಿ ವ್ಯಾಪಾರಸ್ಥರು ಸಮಯ ಕೇಳಿದ್ದರು. ಸೋಮವಾರದ ಒಳಗಾಗಿ ಚರಂಡಿ ಮೇಲೆ ಇರುವಂತಹ ಅಂಗಡಿ ತೆರವುಗೊಳಿಸಲಾಗುವದು. ಸರ್ಕಾರವು ತೆರಿಗೆ ಹೆಚ್ಚು ಮಾಡಲು ನಿರ್ದೇಶನ ನೀಡಿದೆ. ಶೇ..3 ರಷ್ಟು ತೆರಿಗೆ ಹೆಚ್ಚು ಮಾಡಲಾಗುವದು ಎಂದರು.

ಪ.ಪಂ ಅಧ್ಯಕ್ಷೆ ಲೀಲಾವತಿ ಮುಧೋಳ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಸದಸ್ಯರಾದ ಸಿರಾಜ್ ಕರಮುಡಿ, ಗುದ್ನೇಪ್ಪ ನೋಟಗಾರ, ರಾಧಾ ದೊಡ್ಡಮನಿ, ಲಲಿತಮ್ಮ ಯಡಿಯಾಪೂರ, ಪ್ರಶಾಂತ ಆರುಬೆಳಿನ, ಮಂಜುನಾಥ ಕೋಳೂರು, ನೂರುದ್ದೀನ್‌ಸಾಬ ಗುಡಿಹಿಂದಲ್, ನಾಮನಿರ್ದೇಶಿತ ಸದಸ್ಯರಾದ ರಫೀ ಹಿರೇಹಾಳ, ಶರಣಯ್ಯ, ಈರಣ್ಣ ಯಲಬುರ್ಗಿ ಎಇ ವಿರೇಶ ಬೇಲಿ, ಕೆಇಬಿ ಸೆಕ್ಷನ್ ಅಧಿಕಾರಿ ವಿರೇಶ ಹಾಗೂ ಸಿಬ್ಬಂಧಿಗಳು ಇದ್ದರು.

ಇದನ್ನೂ ಓದಿ: ಕೌಟುಂಬಿಕ ಕಲಹದ ಬಳಿಕ ಸನ್ಯಾಸಿಯಾದ ಪತಿಗೆ ಬೀದಿಯಲ್ಲೇ ಥಳಿಸಿದ ಮಹಿಳೆ: ವೀಡಿಯೋ

ಬಿಜೆಪಿ ಬೆಂಬಲಿತ ಸದಸ್ಯರಿಂದ ಸಭೆ ಬಹಿಷ್ಕಾರ

ಪಟ್ಟಣ ಪಂಚಾಯತಿ ಬಿಜೆಪಿ ಬೆಂಬಲಿತ ಸದಸ್ಯರು ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಪಪಂ ಮುಖ್ಯಾಧಿಕಾರಿ ನಾಗೇಶ ಅವರಿಗೆ ಪತ್ರವನ್ನು ಬರೆದರು. ನಾವು ಸಭೆಯಲ್ಲಿ ಕೇಳಿದ ಮಾಹಿತಿ ಮತ್ತು ಕೆಲಸ ಸರಿಯಾಗಿ ಮಾಡುತ್ತಿಲ್ಲ ಎಂದು ಪತ್ರ ಬರೆದ್ದಾರೆ. ಸಭೆಗೆ ಬಿಜೆಪಿ ಬೆಂಬಲಿತ ಸದಸ್ಯರು ಗೈರಾಗಿದ್ದರು. ಸದಸ್ಯೆ ಲಕ್ಷ್ಮೀ ಸಹ ಆಕ್ರೋಶ ವ್ಯಕ್ತಪಡಿಸಿ ಹೊರ ನಡೆದರು. ನಂತರ, ಮುಖ್ಯಾಧಿಕಾರಿಗಳ ಸಮ್ಮುಖದಲ್ಲಿ ನಾನಾ ವಿಷಯ ಚರ್ಚಿಸಲಾಯಿತು.

ಇದನ್ನೂ ಓದಿ: ಮೈಸೂರು ದಳಪತಿಗಳ ಅಂಗಳದಲ್ಲಿ ಸಂಚಲನ; ಹೊಸ ದಾಳ ಉರುಳಿಸಿದ JDS ಶಾಸಕ ಜಿಟಿ ದೇವೇಗೌಡ