Asianet Suvarna News Asianet Suvarna News

ನಾಳೆಯಿಂದ ವೀರರಾಣಿ ಕಿತ್ತೂರು ಚೆನ್ನಮ್ಮನ ಮೆಗಾ ನಾಟಕ ಶುರು

ರಂಗಾಯಣ ಹಾಗೂ ಧಾರವಾಡದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಕರ್ನಾಟಕ ಕಾಲೇಜು ಆವರಣದಲ್ಲಿ ಮೆಗಾ ನಾಟಕವೊಂದು ಪ್ರದರ್ಶನಗೊಳ್ಳಲು ಕೊನೆ ಹಂತದ ಸಿದ್ಧತೆಯಲ್ಲಿದೆ. ವೀರರಾಣಿ ಕಿತ್ತೂರು ಚೆನ್ನಮ್ಮಳ ಜೀವನ ಆಧಾರಿತ ಮೆಗಾ ನಾಟಕಕ್ಕಾಗಿ ಈಗಾಗಲೇ ಮೈದಾನದಲ್ಲಿ ಬೃಹತ್‌ ಕೋಟೆಯ ಸೆಟ್‌ ಹಾಕಿದ್ದು ಎಲ್ಲರ ಗಮನ ಸೆಳೆಯುತ್ತಿದೆ.

Veerarani Kittoor Chennammas mega drama starts tomorrow at dharwad
Author
First Published Dec 23, 2022, 9:21 AM IST

ಧಾರವಾಡ (ಡಿ.23) : ರಂಗಾಯಣ ಹಾಗೂ ಧಾರವಾಡದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಕರ್ನಾಟಕ ಕಾಲೇಜು ಆವರಣದಲ್ಲಿ ಮೆಗಾ ನಾಟಕವೊಂದು ಪ್ರದರ್ಶನಗೊಳ್ಳಲು ಕೊನೆ ಹಂತದ ಸಿದ್ಧತೆಯಲ್ಲಿದೆ. ವೀರರಾಣಿ ಕಿತ್ತೂರು ಚೆನ್ನಮ್ಮಳ ಜೀವನ ಆಧಾರಿತ ಮೆಗಾ ನಾಟಕಕ್ಕಾಗಿ ಈಗಾಗಲೇ ಮೈದಾನದಲ್ಲಿ ಬೃಹತ್‌ ಕೋಟೆಯ ಸೆಟ್‌ ಹಾಕಿದ್ದು ಎಲ್ಲರ ಗಮನ ಸೆಳೆಯುತ್ತಿದೆ.

ಡಿ. 24 ಹಾಗೂ ಡಿ. 25ರಂದು ಎರಡು ದಿನ ಸಂಜೆ 6ರಿಂದ ಮೂರುವರೆ ಗಂಟೆ ಕಾಲ ಸಾವಿರಾರು ಜನರು ವೀಕ್ಷಿಸಲಿರುವ ಈ ನಾಟಕವನ್ನು ಸುಮಾರು 250 ಜನ ಕಲಾವಿದರು ಮೂರು ತಿಂಗಳು ಶ್ರಮವಹಿಸಿ ಕಟ್ಟಿದ್ದಾರೆ. ಅವರ ಶ್ರಮದ ಫಲವಾಗಿ ಅದ್ಭುತವಾದ ಐತಿಹಾಸಿಕ ನಾಟಕವೊಂದು ಸಿದ್ಧವಾಗಿದ್ದು, ಈಗಾಗಲೇ ಕಾಲೇಜು ಮೈದಾನದಲ್ಲಿ ಕಲಾವಿದರು ಸೇರಿದಂತೆ ಆನೆ, ಒಂಟೆ ಹಾಗೂ ಕುದುರೆಗಳು ಪೂರ್ವ ತಯಾರಿ ನಡೆಸಿವೆ.

ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ರಾಣಿ ಝಾನ್ಸಿ ಲಕ್ಷ್ಮಿಬಾಯಿ ಅಲ್ಲ, ಕಿತ್ತೂರು ಚೆನ್ನಮ್ಮ: ಸಿಎಂ ಬೊಮ್ಮಾಯಿ

ಮೆಗಾ ನಾಟಕದ ಮುಖ್ಯ ವೇದಿಕೆಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ರಂಗಾಯಣದ ನಿರ್ದೇಶಕ ರಮೇಶ ಪರವೀನಾಯ್ಕರ, ಕನ್ನಡ ರಂಗಭೂಮಿಯಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಅಂತಹ ಐತಿಹಾಸಿಕ ನಾಟಕದ ಮೆಗಾ ಪ್ರದರ್ಶನವನ್ನು ಎರಡೂ ದಿನ ಮಾಡಲಾಗುತ್ತಿದೆ. ಚೆನ್ನಮ್ಮನ ಕುರಿತು ವಾಸ್ತವ ಸಂಗತಿಗಳನ್ನು ಆಧರಿಸಿ ಅನೇಕ ವಿದ್ವಾಂಸರು, ಸಂಶೋಧಕರು ಮತ್ತು ರಂಗ ತಜ್ಞರ ನಿರ್ದೇಶನದಂತೆ 250 ಕಲಾವಿದರು ಪ್ರಸ್ತುತ ಪಡಿಸುತ್ತಿದ್ದಾರೆ. ಎರಡು ದಿನಗಳ ಪ್ರದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲು ತೀರ್ಮಾನಿಸಲಾಗಿದೆ. ಜತೆಗೆ ಮೊದಲ ದಿನದ ನಾಟಕಕ್ಕೆ ಪ್ರೋತ್ಸಾಹದಾಯಕವಾಗಿ ಆರ್ಥಿಕ ನೆರವಾಗಲು ಟಿಕೆಟ್‌ ಮಾಡಲಾಗಿದ್ದು ವಿವಿಧ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ನೀಡಲಾಗಿದೆ. ಸಾರ್ವಜನಿಕರು ನಾಟಕ ಪ್ರದರ್ಶನವನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕೆಂದರು.

ಈ ಪ್ರದರ್ಶನವು ಸಂಗೀತ-ಬೆಳಕಿನ ಸಂಯೋಜನೆಯಲ್ಲಿ ನಡೆಯಲಿದ್ದು ಸಂಗೀತವನ್ನು ಅರುಣ ಭಟ್‌ ಹಾಗೂ ರಾಘವ ಕಮ್ಮಾರ ನಿರ್ವಹಿಸಿದ್ದಾರೆ. ಬೆಳಕನ್ನು ವಿನಯ ಅವರು ನಿರ್ವಹಿಸಿದ್ದು, 300 ಲೈಟ್‌ಗಳನ್ನು ಆಧುನಿಕ ತಂತ್ರಜ್ಞಾನ ಬಳಸಿ ಬೆಳಕಿನ ಸಂಯೋಜನೆ ಮಾಡಲಾಗುತ್ತಿದೆ. ಕಿತ್ತೂರು ಮಾದರಿಯಲ್ಲಿಯೇ ಕೋಟೆಯನ್ನು ಸ್ಟೀಲ್‌, ಫೋಮ್‌ ಹಾಗೂ ಫ್ಲೈವುಡ್‌ ಬಳಸಿ ಬೃಹತ್‌ ಸೆಟ್‌ ಅನ್ನು ವಿಶ್ವನಾಥ ಮಂಡಿ ಎಂಬುವರು ರಚಿಸಿದ್ದಾರೆ. ಯಾವುದೇ ಮಳೆ-ಗಾಳಿಗೂ ಈ ಸೆಟ್‌ ಅಲುಗಾಡುವುದಿಲ್ಲ. ರಂಗ ಪರಿಕರವನ್ನು ಮಹೇಶ ಆಚಾರ‍್ಯ ನೋಡಿಕೊಂಡಿದ್ದಾರೆ. ಸಹ ನಿರ್ದೇಶಕರಾಗಿ ಕಲ್ಲಪ್ಪ ಪೂಜಾರ, ಸೂರ್ಯಕಲಾ ಕೆಲಸ ಮಾಡಿದ್ದಾರೆ ಎಂಬ ಮಾಹಿತಿಯನ್ನು ಪರವೀನಾಯ್ಕರ್‌ ನೀಡಿದರು.

ನಾಳೆ ಸಿಎಂ ಉದ್ಘಾಟನೆ:

ಗದಗ-ಡಂಬಳ ತೋಂಟದಾರ್ಯ ಮಠದ ಜಗದ್ಗುರು ತೋಂಟದ ಡಾ. ಸಿದ್ಧರಾಮ ಸ್ವಾಮೀಜಿ, ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೇಂದ್ರರು ಸಾನ್ನಿಧ್ಯ ವಹಿಸುವರು ಎಂದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಿ. 24ರಂದು ಸಂಜೆ 6ಕ್ಕೆ ಕಾರ್ಯಕ್ರಮ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಪ ಸಭಾಪತಿ ಬಸವರಾಜ ಹೊರಟ್ಟಿಉಪಸ್ಥಿತರಿರುವರು. ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್‌ ಕುಮಾರ್‌, ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಕೈಗಾರಿಕಾ ಸಚಿವ ಡಾ. ಮುರುಗೇಶ ನಿರಾಣಿ ವಿಶೇಷ ಅತಿಥಿಗಳಾಗಿ ಭಾಗವಹಿಸುವರು ಎಂದರು. ವಿಶೇಷ ಆಹ್ವಾನಿತರಾಗಿ ಆರ್‌ಎಸ್ಸೆಸ್‌ ಪ್ರಾಂತ್ಯ ಸಹಸಂಘ ಚಾಲಕ ಅರವಿಂದರಾವ್‌ ದೇಶಪಾಂಡೆ ಭಾಗವಹಿಸುತ್ತಾರೆ ಎಂದು ಪರಿವೀನಾಯ್ಕರ ಮಾಹಿತಿ ನೀಡಿದರು.

ಸಂಶೋಧಕ ಹಾಗೂ ಕನ್ನಡ ವಿದ್ವಾಂಸ ಡಾ. ವೀರಣ್ಣ ರಾಜೂರ ಮಾತನಾಡಿ, ರಂಗಾಯಣದ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ಪ್ರದರ್ಶನ ಇದಾಗಲಿದೆ. ಗುಬ್ಬಿ-ವೀರಣ್ಣರ ನಾಟಕದಲ್ಲಿ ಆಗಾಗ ಪ್ರಾಣಿಗಳನ್ನು ನೋಡುತ್ತಿದ್ದ ನಮಗೆ ಇದೀಗ ನಮ್ಮೂರಿನ ನಾಟಕದಲ್ಲಿ ಆನೆ, ಒಂಟೆ ಹಾಗೂ ಕುದುರೆಗಳನ್ನು ನೋಡುವ ಭಾಗ್ಯ ದೊರೆತಿದೆ. ಅದ್ಭುತವಾದ ರಂಗ ಸಜ್ಜಿಕೆಯಲ್ಲಿ ಅದ್ಧೂರಿ ಪ್ರಯೋಗ ನಡೆಯುತ್ತಿದ್ದು, ಕಿತ್ತೂರ ಚೆನ್ನಮ್ಮನ ತ್ಯಾಗ, ಬಲಿದಾನ ಮತ್ತು ಸಾಹಸಗಳನ್ನು ಇಂದಿನ ಯುವ ಪಿಳಿಗೆಗೆ ಪ್ರೇರಣೆ ಆಗುವಂತೆ ನಾಟಕವನ್ನು ಹೆಣೆಯಲಾಗಿದೆ. ಉಹಾಪೋಹಗಳ ಹೊರತಾಗಿಯೂ ಸಂಶೋಧಕರು, ವಿದ್ವಾಂಸರು ಶಿಫಾರಸು ಮಾಡಿದ ವಾಸ್ತವ ಅಂಶಗಳನ್ನು ಮೆಗಾ ನಾಟಕದಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದರು.

ರಂಗಸ್ಥಳದಲ್ಲೇ ಹೃದಯಾಘಾತವಾಗಿ ಕಟೀಲು ಮೇಳದ ಕಲಾವಿದ ಗುರುವಪ್ಪ ಬಾಯಾರು ನಿಧನ

ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಅರುಣ ಜೋಶಿ, ನಾಟಕದ ವಿವಿಧ ವಿಭಾಗಗಳ ಸಂಯೋಜಕರಾದ ವಿಶ್ವನಾಥ ಮಂಡಿ, ಕಲ್ಲಪ್ಪ ಮಿರ್ಜಿ, ಮಹೇಶ ಆಚಾರಿ, ವಿನಯ ಚಹ್ವಾಣ, ಭೀಮನಗೌಡ ಪಾಟೀಲ, ಕಲ್ಲಪ್ಪ ಪೂಜಾರ ಇದ್ದರು.

Follow Us:
Download App:
  • android
  • ios