ಬೆಂಗಳೂರು: ವಿಧಾನಸೌಧದೆದುರು ನ.1 ರೊಳಗೆ ಭುವನೇಶ್ವರಿ ಪ್ರತಿಮೆ ಅನಾವರಣ?
ಅಂದಾಜು 10ರಿಂದ 12 ಕೋಟಿ ರು. ವೆಚ್ಚದಲ್ಲಿ 25 ಅಡಿಯ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಸಿದ್ಧತೆ ನಡೆಲಾಗಿದ್ದು ಈಗಾಗಲೇ ನಾಲ್ಕೈದು ಬಾರಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಸಭೆಗಳು ನಡೆದಿವೆ.
ಸಂಪತ್ ತರೀಕೆರೆ
ಬೆಂಗಳೂರು(ಜ.13): ‘ಕರ್ನಾಟಕ 50’ ಸುವರ್ಣ ಸಂಭ್ರಮ ವರ್ಷಾಚರಣೆ ಸಂದರ್ಭದಲ್ಲಿ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ನಾಡದೇವತೆ ಭುವನೇಶ್ವರಿ ದೇವಿಯ 25 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ಪ್ರತಿಷ್ಠಾಪಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.
ಮೈಸೂರು ರಾಜ್ಯವು ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಲಾಗುತ್ತಿದೆ. ಈ ಐತಿಹಾಸಿಕ ಸಂದರ್ಭದಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ ಸಾರುವಂತಹ ವಿಶೇಷ ಕಾರ್ಯಕ್ರಮ ರೂಪಿಸಿ ವರ್ಷವಿಡೀ ಆಯೋಜಿಸಲು ರೂಪುರೇಷೆಗಳನ್ನು ಸಿದ್ಧಪಡಿಸಿದ್ದು 25 ಅಡಿಯ ಕಂಚಿನ ಪ್ರತಿಮೆ ಸ್ಥಾಪನೆಯೂ ಈ ಯೋಜನೆಯಲ್ಲಿ ಒಳಗೊಂಡಿದೆ.
Karnataka Nada Devate: ಸರ್ಕಾರದಿಂದ ಅಧಿಕೃತ 'ನಾಡದೇವಿಯ' ಚಿತ್ರ
ಅಂದಾಜು 10ರಿಂದ 12 ಕೋಟಿ ರು. ವೆಚ್ಚದಲ್ಲಿ 25 ಅಡಿಯ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಸಿದ್ಧತೆ ನಡೆಲಾಗಿದ್ದು ಈಗಾಗಲೇ ನಾಲ್ಕೈದು ಬಾರಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಸಭೆಗಳು ನಡೆದಿವೆ. ಭುವನೇಶ್ವರಿ ದೇವಿಯ ಪ್ರತಿಮೆಯನ್ನು ಜೆ.ಸಿ.ರಸ್ತೆಯಲ್ಲಿರುವ ಕನ್ನಡ ಭವನ ಮತ್ತು ರವೀಂದ್ರ ಕಲಾಕ್ಷೇತ್ರದ ಮಧ್ಯೆ ಅಥವಾ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಷ್ಠಾಪಿಸಬೇಕೇ ಎನ್ನುವ ಕುರಿತು ಚರ್ಚೆ ಮುಂದುವರೆದಿದೆ. ಆದರೆ, ವಿಧಾನಸೌಧದ ಮುಂಭಾಗದಲ್ಲೇ ಭುವನೇಶ್ವರಿ ಪ್ರತಿಮೆ ಅನಾವರಣಗೊಳ್ಳುವುದು ಬಹುತೇಕ ಖಚಿತ ಎಂದು ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶೀಘ್ರದಲ್ಲೇ ಪ್ರತಿಮೆ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಲು ಸಿದ್ಧತೆಗಳನ್ನು ಮಾಡಿಕೊಂಡಿದೆ. ನವೆಂಬರ್ 1ರೊಳಗೆ ಕಂಚಿನ ಪ್ರತಿಮೆ ನಿರ್ಮಾಣ ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು ಈಗಾಗಲೇ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ನೇತೃತ್ವದಲ್ಲಿ ಹಿರಿಯ ತಜ್ಞ ಕಲಾವಿದರೊಂದಿಗೆ ಚರ್ಚಿಸಲಾಗಿದೆ. ಭುವನೇಶ್ವರಿ ದೇವಿಯ ಕಂಚಿನ ಪ್ರತಿಮೆ ಹೇಗಿರಬೇಕು, ಎಷ್ಟು ಸುತ್ತಳತೆ ಹೊಂದಿರಬೇಕು ಎಂಬಿತ್ಯಾದಿ ಚರ್ಚೆಗಳು ಕೂಡ ಅಂತಿಮವಾಗಿದ್ದು ಟೆಂಡರ್ ಕರೆಯುವುದೊಂದು ಬಾಕಿ ಉಳಿದಿದೆ.
ಪ್ರತಿಮೆ ಹೇಗಿರಲಿದೆ?:
ರಾಜ್ಯ ಸರ್ಕಾರ 2022ರಲ್ಲಿ ನಾಡದೇವಿಯ ಪ್ರಮಾಣಿತ ಹಾಗೂ ಅಧಿಕೃತ ಚಿತ್ರ ರಚಿಸಬೇಕೆಂದು ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಿ.ಮಹೇಂದ್ರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿ ಕಲಾವಿದರಾದ ಕೆ.ಸೋಮಶೇಖರ್ ಅವರು ರಚಿಸಿದ ಚಿತ್ರವನ್ನು ಅಧಿಕೃತವಾಗಿ ಜಾರಿಗೆ ತರುವಂತೆ ಶಿಫಾರಸು ಸಲ್ಲಿಸಿತ್ತು. ಕರ್ನಾಟಕದ ಕಲೆ, ಸಂಸ್ಕೃತಿ, ಪ್ರಕೃತಿ ಒಳಗೊಂಡ ಭುವನೇಶ್ವರಿ ಕಲಾಕೃತಿಗೆ ರಾಜ್ಯ ಸರ್ಕಾರ ಕೂಡ ಒಪ್ಪಿಗೆ ಸೂಚಿಸಿತ್ತು.
ಕಲಾವಿದ ಕೆ.ಸೋಮಶೇಖರ್ ಅವರ ಕಲಾಕೃತಿಯಲ್ಲಿ ನಾಡದೇವತೆಯು ಕುಳಿತಿರುವ ಭಂಗಿಯಲ್ಲಿ ಇದ್ದು ದೇವಿಯ ಹಿನ್ನೆಲೆಯಲ್ಲಿ ಕರ್ನಾಟಕದ ನಕ್ಷೆ, ಮುಖದಲ್ಲಿ ಸ್ವಾಭಾವಿಕ ಸೌಂದರ್ಯ ಮತ್ತು ದೈವಿ ಭಾವ ಇದೆ. ದ್ವಿಭುಜ ಅಂದರೆ ಎರಡು ಕೈಗಳಿದ್ದು, ಬಲಗೈಯಲ್ಲಿ ಅಭಯ ಮುದ್ರೆ ( ರಕ್ಷಣೆ), ಎಡಗೈಯಲ್ಲಿ ತಾಳೆಗರಿ (ಕನ್ನಡ ಭಾಷಾ ಸಂಪತ್ತು, ಜ್ಞಾನ ಸಮೃದ್ಧಿ) ಇರುವಂತೆ ಚಿತ್ರಿಸಲಾಗಿದೆ. ದೇವಿಯ ಎಡ ಭುಜದ ಮೇಲೆ ಕನ್ನಡ ಧ್ವಜ ರಾರಾಜಿಸುತ್ತಿದೆ.
ಚಾಲುಕ್ಯರ ಕಾಲದ ಕರಂಡ ಮುಕುಟೋಪಾದಿಯಲ್ಲಿ ಕಿರೀಟ, ಕಿವಿಯಲ್ಲಿ ಸುಂದರ-ಕೌಶಲ್ಯ ಕರ್ಣಪರ್ಯಗಳು, ಭುಜದ ಮೇಲೆ ಕರ್ನಾಟಕ ವೈಶಿಷ್ಟ್ಯದ ಸಿಂಹ ಲಾಂಛನ ಭುಜಕೀರ್ತಿಗಳು, ಕುತ್ತಿಗೆಯಲ್ಲಿ ಕಂಠಿ, ಕಟ್ಟಾಣಿ, ಹಾರಗಳು, ಕರ್ನಾಟಕ ಲಾಂಛನ – ಗಂಡ ಭೇರುಂಡ ಪದಕ, ಕಟಿಯ ಆಭರಣವಾದ ಬೆಳ್ಳಿಯ ಡಾಬು, ಕಟಿಯಲ್ಲಿ ಕೀರ್ತಿಮುಖ ಲಾಂಛನದ ವಡ್ಯಾಣ, ಉದ್ದನೆಯ ವೈಜಯಂತಿ ಹಾರ, ನಡುವೆ ಹೊಯ್ಸಳ ಲಾಂಛನದ ಪದಕ ನಾಡದೇವತೆಯನ್ನು ಅಲಂಕರಿಸಿರುತ್ತದೆ.
ತೆಳುವಾದ-ಮೃದುವಾದ ಹೂವಿನ ತೋಮಾಲೆಯು ನಾಡದೇವತೆಯ ಸಂಪೂರ್ಣ ಅಲಂಕಾರಕ್ಕೆ ಮೆರಗು ನೀಡಿದೆ. ಕಾಲಿನಲ್ಲಿ ಕಡಗ, ಋಳಿ ಮತ್ತು ಕಾಲುಂಗುರಗಳು, ಹಣೆಯ ಲಲಾಟ ತಿಲಕ, ಶಿರದಲ್ಲಿ ಮುಡಿದಿರುವ ಹೂವು ಸೌಭಾಗ್ಯದ್ಯೋತಕವಾಗಿದೆ. ಕೆಳಗೆ ಸುಂದರ ಸದೃಢ ತಾವರೆ ಹೂವು(ಕಮಲ) ದೇವಿಯ ಮೃದುವಾದ ಕಾಲುಗಳಿಗೆ ಆಸರೆ ನೀಡಿದೆ. ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟ, ಸಸ್ಯಕಾಶಿಯ ಸೊಬಗನ್ನು ಚಿತ್ರಿಸಲಾಗಿದೆ. ಈ ಕಲಾಕೃತಿಯಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭುವನೇಶ್ವರಿಯ ಕಂಚಿನ ಪ್ರತಿಮೆ ನಿರ್ಮಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಸರಕಾರದಿಂದ ನಿರ್ಲಕ್ಷ್ಯಕ್ಕೊಳಗಾಗಿದೆ ರಾಜ್ಯದಲ್ಲಿರುವ ಏಕೈಕ ಭುವನೇಶ್ವರಿಯ ದೇಗುಲ!
ತಜ್ಞರಿಂದಲೇ ಪ್ರತಿಮೆ ನಿರ್ಮಾಣ
ವಿಧಾನಸೌಧ ಮತ್ತು ವಿಕಾಸಸೌಧದ ನಡುವೆ ನಿರ್ಮಿಸಿರುವ ಮಹಾತ್ಮಗಾಂಧೀಜಿ ಅವರ ಪ್ರತಿಮೆ ಮಾದರಿಯಲ್ಲಿ ಭುವನೇಶ್ವರಿ ದೇವಿಯ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಬೇಕೆಂಬ ಉದ್ದೇಶವಿದೆ. ನ.1ರೊಳಗೆ ಪ್ರತಿಮೆ ನಿರ್ಮಾಣ ಪೂರ್ಣಗೊಳಿಸಬೇಕೆಂಬ ಗುರಿಯಿದ್ದು, ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು. ಪ್ರತಿಮೆ ಪ್ರತಿಷ್ಠಾಪನೆ ಎಲ್ಲಿ ಎನ್ನುವ ಬಗ್ಗೆ ಇನ್ನೂ ಸ್ಥಳ ನಿರ್ಧಾರವಾಗಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
ಸ್ವಾಗತಾರ್ಹ
ಈ ಹಿಂದಿನ ಸರ್ಕಾರದಲ್ಲಿ 8ರಿಂದ 11 ಕೋಟಿ ರು. ವೆಚ್ಚದಲ್ಲಿ ಪ್ರತಿಮೆಯನ್ನು ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ನಿರ್ಮಿಸಬೇಕೆಂದು ಯೋಜಿಸಲಾಗಿತ್ತು. ರಾಜ್ಯ ಸರ್ಕಾರ ಅಂಗೀಕರಿಸಿರುವ ಅಧಿಕೃತ ಭುವನೇಶ್ವರಿ ಕಲಾಕೃತಿ ಮಾದರಿಯಲ್ಲೇ ಪ್ರತಿಮೆ ನಿರ್ಮಿಸುವ ಉದ್ದೇಶವಿತ್ತು. ಈಗಿನ ಸರ್ಕಾರ ಪ್ರತಿಮೆ ನಿರ್ಮಿಸಲು ಹೊರಟಿರುವುದು ಸ್ವಾಗತಾರ್ಹ ಎಂದು ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಿ. ಮಹೇಂದ್ರ ಹೇಳಿದ್ದಾರೆ.