Asianet Suvarna News Asianet Suvarna News

ಸರಕಾರದಿಂದ ನಿರ್ಲಕ್ಷ್ಯಕ್ಕೊಳಗಾಗಿದೆ ರಾಜ್ಯದಲ್ಲಿರುವ ಏಕೈಕ ಭುವನೇಶ್ವರಿಯ ದೇಗುಲ!

ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರದ ಬೇಡ್ಕಣಿಯ ಸಮೀಪದ ಭುವನಗಿರಿ ಬೆಟ್ಟದಲ್ಲಿ ನೆಲೆಸಿರುವ ಭುವನೇಶ್ವರಿ ದೇವಸ್ಥಾನ ಇಡೀ ರಾಜ್ಯದಲ್ಲಿರುವ ಏಕೈಕ ಕನ್ನಡಾಂಬೆಯ ದೇವಳವಾಗಿದ್ದು, ಸರಕಾರದಿಂದ ನಿರ್ಲಕ್ಷ್ಯಕ್ಕೊಳಗಾಗಿದೆ  ಎಂಬ ಆರೋಪ ಕೇಳಿಬಂದಿದೆ.

Karnataka  only dedicated temple to Kannada Goddess Bhuvaneshwari  gow
Author
First Published Oct 31, 2022, 10:07 PM IST | Last Updated Oct 31, 2022, 10:07 PM IST

ವರದಿ: ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್ 

ಉತ್ತರಕನ್ನಡ (ಅ.31): ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಸಂಭ್ರಮ. ನಾಡಿನೆಲ್ಲೆಡೆ ಕನ್ನಡ ನಾಡಿನ ಬಾವುಟ ರಾರಾಜಿಸುವುದಲ್ಲದೇ, ರಾಜ್ಯದ ಮೂಲೆ ಮೂಲೆಯಲ್ಲೂ ಕನ್ನಡದ ಕಂಪು ಪಸರಿಸುವ ದಿನ. ಈ ವಿಶೇಷ ದಿನದಂದು ಇಡೀ ರಾಜ್ಯದಲ್ಲಿರುವ ಏಕೈಕ ಕನ್ನಡಾಂಬೆಯ ದೇವಸ್ಥಾನ ಭುವನಗಿರಿಯಲ್ಲಿ ವಿಶೇಷ ಪೂಜೆ, ಪುನಸ್ಕಾರ ಸಲ್ಲಿಸಲಾಗುತ್ತಿದೆ. ಆದರೆ, ಸರಕಾರ ಮಾತ್ರ ಈ ದೇವಳ ಜೀರ್ಣೋದ್ಧಾರವಾಗಲೀ ಅಥವಾ ಇತರ ಯಾವುದೇ ಕಾರ್ಯಕ್ರಮಗಳನ್ನು ನಡೆಸದೆ ಸಾಕಷ್ಟು ನಿರ್ಲಕ್ಷ್ಯ ವಹಿಸಿದೆ. ಅಷ್ಟಕ್ಕೂ ತಾಯಿ ಭುವನೇಶ್ವರಿ ನೆಲೆಸಿಂತಿರುವ ಈ ದೇವಸ್ಥಾನ ಇರೋದಾದ್ರೂ ಎಲ್ಲಿ? ಸರಕಾರ ಯಾವ ಮಟ್ಟದಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ. ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರದ ಬೇಡ್ಕಣಿಯ ಸಮೀಪದ ಭುವನಗಿರಿ ಬೆಟ್ಟದಲ್ಲಿ ನೆಲೆಸಿರುವ ಭುವನೇಶ್ವರಿ ದೇವಸ್ಥಾನ ಇಡೀ ರಾಜ್ಯದಲ್ಲಿರುವ ಏಕೈಕ ಕನ್ನಡಾಂಬೆಯ ದೇವಳವಾಗಿದ್ದು, ಮಲೆನಾಡ ಹಚ್ಚಹಸುರಿನ ಕಾನನದ ನಡುವೆ ಕನ್ನಡ ಬಾವುಟದೊಂದಿಗೆ ಕನ್ನಡ ದೇವತೆ ತಲೆ ಎತ್ತಿ ನಿಂತಿರುವುದು ಕನ್ನಡಿಗರೆಲ್ಲಾ ಭಕ್ತಿ ಭಾವನೆಯ ಹಾಗೂ ಹೆಮ್ಮೆಯ ಸಂಕೇತ. ದೇಶದಲ್ಲಿ ಕರ್ನಾಟಕ ಹೊರತುಪಡಿಸಿ ಇತರ ಬೇರೆ ಯಾವ ರಾಜ್ಯದಲ್ಲೂ ತಮ್ಮ ರಾಜ್ಯದ ಅಧಿದೇವತೆಯ ದೇವಸ್ಥಾನ ಕಾಣಲು ಸಾಧ್ಯವಿಲ್ಲ. ಕನ್ನಡ ಭಾಷೆಯ ನೆಲ, ಜಲ, ನುಡಿಗಾಗಿ ಕದಂಬರ ಅರಸ ವೀರ ಮಯೂರ ವರ್ಮನಿಂದ ಸ್ವಾಭಿಮಾನಿ ರಾಜ್ಯ ನಿರ್ಮಾಣವೇ ನಡೆದು ಹೋದ ಅಪರೂಪದ ಇತಿಹಾಸ ಕನ್ನಡ ನಾಡಿನದ್ದು. ಇಂತಹ ಹೆಮ್ಮೆಯ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿ ನಿಂತಿದೆ ಉತ್ತರ ಕನ್ನಡ ಜಿಲ್ಲೆ.

ಇಂದಿಗೂ ಈ ನೆಲ ಕನ್ನಡದ ಕುಲದೇವಿಯನ್ನ ಮಡಿಲಲ್ಲಿಟ್ಟುಕೊಂಡು, ಕನ್ನಡತನವನ್ನ ಎದೆಯ ಗುಂಡಿಗೆಯಲ್ಲಿ ತುಂಬಿಟ್ಟು ಉಸಿರಾಡುತ್ತಿದೆ. ಅಷ್ಟಕ್ಕೂ ಭುವನಗಿರಿಯಲ್ಲಿರುವ ಈ ಭುವನೇಶ್ವರಿ ದೇಗುಲ ಈಗಿನದ್ದಲ್ಲ. ಈ ದೇಗುಲಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕ್ರಿ.ಶ. 1692ರಲ್ಲಿ ಬೀಳಗಿಯ ಕೊನೆಯ ದೊರೆ ಬಸವೇಂದ್ರ ಭುವನೇಶ್ವರಿಯ ಈ ದೇಗುಲದ ಅಭಿವೃದ್ಧಿ ಕಾರ್ಯವನ್ನು ಪೂರ್ಣಗೊಳಿಸಿ ಕನ್ನಡ ತಾಯಿಗೆ ನೆಲೆ ನೀಡಿದನೆನ್ನಲಾಗುತ್ತದೆ. ಕನ್ನಡಾಂಬೆಯೆಂದೇ ಕರೆಯಲ್ಪಡುವ ಭುವನೇಶ್ವರಿ ಇಲ್ಲಿ ನಿತ್ಯ ಪೂಜಿಸಲ್ಪಡುತ್ತಿದ್ದು, ಪ್ರತಿದಿನವೂ ಸ್ಥಳೀಯರು ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಆದರೆ, ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಮಾತ್ರ ಹೊರ ಊರಿನವರು, ವಿವಿಧ ಜಿಲ್ಲೆಗಳ ಜನರು ಇಲ್ಲಿಗೆ ಭೇಟಿ ನೀಡಿ ತಾಯಿ ಭುವನೇಶ್ವರಿಯನ್ನು ಕಣ್ತುಂಬಿಕೊಳ್ಳುತ್ತಾರೆ. ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಭುವನಗಿರಿಯಲ್ಲಿರುವ ಕನ್ನಡಾಂಬೆಯ ದೇವಾಲಯಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನಡೆಯಲಿದೆ. 

ಅಂದಹಾಗೆ, ವಿಜಯನಗರದ ಅರಸರು ಕೂಡಾ ಭುವನೇಶ್ವರಿಗೆ ವಂದಿಸಿಯೇ ತಮ್ಮ ಕೆಲಸ ಕಾರ್ಯಗಳನ್ನು ಆರಂಭಿಸುತ್ತಿದ್ದರು. ಈ ಕಾರಣಕ್ಕಾಗಿ ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ಕೂಡಾ ಭುವನೇಶ್ವರಿಯ ವಿಗ್ರಹವನ್ನು ಕಾಣಬಹುದಾಗಿದೆ. ಈ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದರೂ, ಮದ್ರಾಸ್ ರೆಸಿಡೆನ್ಸಿಗೆ ಸೇರಿದ್ದ ದಾಖಲೆಯ ಕಡತಗಳು ನಾಪತ್ತೆಯಾಗಿರುವ ಹಿನ್ನೆಲೆ ಕ್ರಿ.ಶ. 1600ರ ನಂತರದ ಇತಿಹಾಸವಿದೆ ಎನ್ನಲಾಗಿದೆ.

ನಾಳೆ ಬೆಳಗಾವಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ: ಹುಕ್ಕೇರಿ ಹಿರೇಮಠದಿಂದ ಹೋಳಿಗೆ ಊಟ

ಕನ್ನಡ ನಾಡಿಗೆ ಸಂಬಂಧಿಸಿದ ಭುವನೇಶ್ವರಿ ದೇಗುಲ ಸರಕಾರದ ಆಡಳಿತದ ದಿವ್ಯ ನಿರ್ಲಕ್ಷಕ್ಕೊಳಗಾಗಿದೆ. ದೇಗುಲದ ಜೀರ್ಣೋದ್ಧಾರ ಕಾರ್ಯಕ್ಕೆ ಈವರೆಗೆ ಸರ್ಕಾರ ಮುಂದಾಗಿಲ್ಲ. ರಾಜ್ಯೋತ್ಸವ ಸಮೀಪಿಸುತ್ತಿದ್ದಾಗ ಮಾತ್ರ ಆಡಳಿತಕ್ಕೆ ಇಲ್ಲಿನ ಗುಡಿ ನೆನಪಾಗುತ್ತದೆಯೇ ಹೊರತು, ಉಳಿದ ದಿನಗಳಲ್ಲಿ ಸ್ಥಳೀಯರೇ ಎಲ್ಲವನ್ನೂ ಮಾಡಿಕೊಳ್ಳಬೇಕಿದೆ. ರಾಜ್ಯ ಸರ್ಕಾರಕ್ಕಂತೂ ಕನ್ನಡಾಂಬೆಗೆ ಇಲ್ಲೊಂದು ದೇಗುಲವಿದೆ ಎನ್ನುವುದೇ ನೆನಪಿದೆಯೋ ಇಲ್ಲವೋ ಎನ್ನುವಂತಾಗಿದೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಒಂದಷ್ಟು ಕನ್ನಡ ಸಂಘಟನೆಗಳು ಇಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತವೆ ಬಿಟ್ಟರೆ ದೇಗುಲದ ಅಭಿವೃದ್ಧಿಯ ದೃಷ್ಟಿಯಿಂದ ದಿವ್ಯ ನಿರ್ಲಕ್ಷ್ಯಕ್ಕೊಳಗಾಗಿದೆ. ಇನ್ನು ಸರಕಾರ ಕನ್ನಡ‌ ರಾಜ್ಯ ಪ್ರಶಸ್ತಿಗಳ‌ ವಿತರಣಾ ಕಾರ್ಯಕ್ರಮವನ್ನು ಬೇರೆಡೆ ನಡೆಸುವ ಬದಲು ತಾಯಿ ಭುವನೇಶ್ವರಿಯ ಕ್ಷೇತ್ರದಲ್ಲಿ ನಡೆಸಿದಲ್ಲಿ ಪ್ರಶಸ್ತಿಗೆ ನೈಜ ಮಾನ್ಯತೆ ದೊರೆಯುತ್ತದಲ್ಲದೇ, ಕ್ಷೇತ್ರವೂ ಅಭಿವೃದ್ಧಿಯಾಗುತ್ತದೆ ಅನ್ನುತ್ತಾರೆ ಸ್ಥಳೀಯರು.

'ಕನ್ನಡತಿ' ಚಿತ್ರೀಕರಣಗೊಂಡ ಕನ್ನಡ ಮಾತೆ ಭುವನೇಶ್ವರಿಯ ಏಕೈಕ ದೇವಾಲಯ ಎಲ್ಲಿದೆ ಗೊತ್ತಾ?

ಒಟ್ಟಿನಲ್ಲಿ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ಭುವನಗಿರಿಯೆಡೆ ಕನ್ನಡಿಗರ ಆಸಕ್ತಿ ಬೆಳೆಯಬೇಕಿದೆ. ಕನ್ನಡ ನಾಡು, ನುಡಿಯ ಸಂಕೇತವಾದ ಭುವನಗಿರಿಯನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ಯಲು ಸರಕಾರದೊಂದಿಗೆ ಪ್ರತಿಯೊಬ್ಬ ಕನ್ನಡಿಗ ಪಣ ತೊಡುವಂತಾಗಬೇಕಿದೆ.

Latest Videos
Follow Us:
Download App:
  • android
  • ios