Shankaracharya controversy In Udupi Mutt: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಆಚಾರ್ಯ ಶಂಕರರ ನಿಂದನೆ ಮಾಡಲಾಗಿದೆ ಎಂದು ಆರೋಪ ಹೊರಿಸಲಾಗಿತ್ತು. ಈ ಬಗ್ಗೆ ಹರಿಕಥೆ ನಡೆಸಿದ ಮಹಿಳೆ ಕ್ಷಮೆ ಕೇಳಿದ್ದು, ಮಠವೂ ಕೂಡ ಸ್ಪಷ್ಟನೆ ನೀಡಿದೆ.
Shankaracharya controversy In Udupi Mutt: ಉಡುಪಿ ಮಠದಲ್ಲಿ ಹರಿಕಥೆ ನಡೆದಿದೆ. ಹರಿಕಥೆ ನಡೆಸುವ ವೇಳೆ ಯುವತಿಯರಿಂದ ಶಂಕರಾಚಾರ್ಯರ ಅವಹೇಳನ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಆಚಾರ್ಯ ಮಧ್ವರ ಕಥೆ ಹೇಳುವ ಸಂದರ್ಭದಲ್ಲಿ, ಶಂಕರಾಚಾರ್ಯರ ಅವಹೇಳನ ಮಾಡಲಾಗಿದೆ ಎಂದು ಆರೋಪ ಹೊರಿಸಲಾಗಿದೆ. ಈಗ ಮಠದವರು, ಆ ಯುವತಿ ಕೂಡ ಕ್ಷಮೆ ಕೇಳಿದ್ದಾರೆ.
ಏಕವಚನದಲ್ಲಿ ಆಚಾರ್ಯ ಶಂಕರರನ್ನು ಉಲ್ಲೇಖಿಸಿ ಮಾತು ಆಡಲಾಗಿದೆ. ಕಟ್ಟುಕಥೆಗಳನ್ನು ಪ್ರಸ್ತಾಪಿಸಿ ಶಂಕರಾಚಾರ್ಯರ ಬಗ್ಗೆ ಕೀಳು ಮಾತನಾಡಿರುವುದಾಗಿ ಆರೋಪ ಹೊರಿಸಲಾಗಿತ್ತು.
ಬೆಳಗಾವಿಯಿಂದ ಬಂದ ಯುವತಿಯರ ತಂಡದ ಧಾರ್ಮಿಕ ಕಾರ್ಯಕ್ರಮ ನೀಡಿದೆ. ಉಡುಪಿಯ ರಾಜಾಂಗಣ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವಹೇಳನ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಆಚಾರ್ಯ ಶಂಕರರ ಅನುಯಾಯಿಗಳು ಆಕ್ರೋಶ ವ್ಯಕ್ತಪಡಿಸಿದ್ದರು, ಕ್ಷಮೆ ಕೇಳುವಂತೆ ಒತ್ತಾಯ ಮಾಡಿದ್ದು, ಇಲ್ಲವಾದರೆ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದರು.
ಆ ಹುಡುಗಿ ಹರಿಕಥೆಯಲ್ಲಿ ಏನು ಹೇಳಿತ್ತು?
“ಹಿಂದೆ ಭೀಮಸೇನನಿಂದ ಪರಾಜಿತರಾದ ದೈತ್ಯರು ಕಲಿಯುಗದಲ್ಲಿ ತಮ್ಮ ಸ್ವಭಾವಕ್ಕೆ ತಕ್ಕಂತೆ ಭಗವಂತನು ನಿರ್ಗುಣನೆಂದು ಪ್ರತಿಪಾದಿಸಲು ಹುಟ್ಟಿ ಬರುತ್ತಾರೆ. ಮಣಿಮಂತ ಎಂಬ ದೈತ್ಯನು ರುದ್ರದೇವರ ವರ ಪಡೆದು ಕಲಾಡಿ ಗ್ರಾಮದಲ್ಲಿ ಶಂಕರ ಎಂಬ ಹೆಸರಿನಿಂದ ಜನಿಸುತ್ತಾನೆ. ವೇದವ್ಯಾಸರಿಗೆ ವಿರುದ್ಧವಾದ ದುಶ್ಶಾಸ್ತ್ರಗಳನ್ನು ರಚಿಸಿ, ಜಗತ್ತು ಮಿಥ್ಯ, ಜೀವ-ಬ್ರಹ್ಮರಿಗೆ ಭೇದವಿಲ್ಲ ಎಂದು ಪ್ರತಿಪಾದಿಸಿ ಸಜ್ಜನರ ಮನಸ್ಸನ್ನು ಕೆಡಿಸುತ್ತಾನೆ. ಆಗ ದೇವತೆಗಳು ಮುಕುಂದನನ್ನು ಪ್ರಾರ್ಥಿಸಿದಾಗ, ಭಗವಂತನು ತನ್ನ ಪುತ್ರನಾದ ಹನುಮಂತನನ್ನು ಮಧ್ವಾಚಾರ್ಯರನ್ನಾಗಿ ಕಲಿಯುಗಕ್ಕೆ ಕಳುಹಿಸಿಕೊಡುತ್ತಾನೆ" ಎಂದು ಹರಿಕಥೆಯಲ್ಲಿ ಹೇಳಿದ್ದರು.
ಈ ಕಥಾ ಪ್ರಸಂಗದ ನಿರೂಪಣೆಯಲ್ಲಿ ಶಂಕರಾಚಾರ್ಯರನ್ನು ನಿಂದಿಸಿದ ರೀತಿ ಇಡೀ ಹಿಂದೂ ಸಮಾಜದ ಹಾಗೂ ಶಂಕರ ಅನುಯಾಯಿಗಳ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ಉಂಟುಮಾಡಿತ್ತು
ಕಲಾವಿದೆಯಿಂದ ಕ್ಷಮೆಯಾಚನೆ
“ಯಾರನ್ನು ನಿಂದನೆ ಮಾಡುವ ಉದ್ದೇಶ ನಮಗೆ ಇರಲಿಲ್ಲ. ಮಧ್ವ ಮಠದವರೂ ನಮಗೆ ಇದನ್ನು ಹೇಳಿಕೊಟ್ಟಿಲ್ಲ. ಪುಸ್ತಕವನ್ನು ರೆಫರ್ ಮಾಡಿ ನಾವು ಓದಿದೆವು, ನಮ್ಮಿಂದ ಬೇರೆ ಮತದವರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇವೆ. ಉಡುಪಿ ಮಠ ಅಥವಾ ಶಿರೂರು ಮಠಕ್ಕೂ ನಮ್ಮ ಮಾತಿಗೂ ಸಂಬಂಧವಿಲ್ಲ. ನಮ್ಮಿಂದ ಮಠದವರಿಗೆ ತೊಂದರೆಯಾಗಿದ್ದರೆ ನಾವು ಕ್ಷಮೆಯನ್ನು ಕೇಳುತ್ತೇವೆ. ಶ್ರೀ ಶಂಕರಾಚಾರ್ಯರನ್ನು ಏಕವಚನದಲ್ಲಿ, ಮಾನಹಾನಿಯಾಗುವಂತೆ ಮಾತನಾಡಿದ್ದ ಕಲಾವಿದೆ ವಿಡಿಯೋ ಮೂಲಕ ಕ್ಷಮೆಯಾಚನೆ ಮಾಡಿದ್ದಾರೆ.
ಮಠದವರು ಏನು ಹೇಳಿದರು?
ಅಂದಹಾಗೆ ಪರ್ಯಾಯ ಶಿರೂರು ಮಠದಿಂದಲೂ ಸ್ಪಷ್ಟೀಕರಣ ನೀಡಿದೆ. “ಮಠದ ಸುಪರ್ದಿಗೊಳಪಟ್ಟ ರಾಜಾಂಗಣದಲ್ಲಿ ಕಾರ್ಯಕ್ರಮ ನಡೆದಿದೆ. ಅಂಕಿತಾ ನಾಯಕ್ ಮತ್ತು ಗೌರಿ ಪಾಂಡುರಂಗಿ ಎನ್ನುವರು ಭರತನಾಟ್ಯಕ್ಕಾಗಿ ಅನುಮತಿ ಕೇಳಿದ್ದರು. ಕಾರ್ಯಕ್ರಮದ ನಡುವೆ ಭಕ್ತ ಪ್ರಹ್ಲಾದ ಎಂಬ ಹರಿಕಥೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಜಗದ್ಗುರು ಶಂಕರಾಚಾರ್ಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಈ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಇಬ್ಬರೂ ಕೂಡ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಿದ್ದು ಸೂಚಿಸಿದ್ದೇವೆ. ಈ ಅನಪೇಕ್ಷಿತ ಘಟನೆಯ ಬಗ್ಗೆ ಮಠ ವಿಷಾದಿಸುತ್ತದೆ” ಎಂದು ಶಿರೂರು ಮಠದ ದಿವಾನರಾದ ಡಾ.ಉದಯಕುಮಾರ ಸರಳತಾಯ ಅವರು ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.


