ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಶುಕ್ರವಾರ ಬೆಳಗ್ಗೆ ಉಡುಪಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ನಂತರ ಉಡುಪಿ ಅಜ್ಜರಕಾಡಿನ ನೂತನ ಎಫ್ಎಂ ರೇಡಿಯೋ ಸ್ಟೇಷನ್ ಬಿಡುಗಡೆ ಮಾಡಿ ನಂತರ ಮಂಗಳೂರಲ್ಲಿ ವಂದೇ ಭಾರತ್ ರೈಲಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಂಗಳೂರು: ಮಂಗಳೂರು ಆಕಾಶವಾಣಿಯ ಉಡುಪಿಯ ಹೊಸ ಎಫ್‌ಎಂ ಟ್ರಾನ್ಸ್‌ಮಿಷನ್ ಕೇಂದ್ರ ಕಾರ್ಯಾರಂಭಕ್ಕೆ ಸಜ್ಜುಗೊಂಡಿದೆ. ಶುಕ್ರವಾರ ಮಂಗಳೂರಿಗೆ ಆಗಮಿಸುವರ ಕೇಂದ್ರ ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರಿಂದ ಮಂಗಳೂರಿನಿಂದ ವರ್ಚುವಲ್ ಮೂಲಕ ಉದ್ಘಾಟಿಸಲು ಸಿದ್ಧತೆ ನಡೆಸಲಾಗಿದೆ.
ಸುಮಾರು 285 ಲಕ್ಷ ರೂ ವೆಚ್ಚ
ಕಳೆದ ವರ್ಷ ಆಕಾಶವಾಣಿಯ 100 ಹೊಸ ಎಫ್‌ಎಂ ಕೇಂದ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದರು. ಅದರಲ್ಲಿ ಉಡುಪಿ ಕೇಂದ್ರವೂ ಸೇರಿತ್ತು. ಇದೀಗ ಒಂದೇ ವರ್ಷದಲ್ಲಿ ದೂರದರ್ಶನ ಹಳೆ ರಿಲೇ ಕೇಂದ್ರದಲ್ಲಿ ಹೊಸ 1 ಕಿಲೋ ವ್ಯಾಟ್ ಸಾಮರ್ಥ್ಯದ (101.9 ಮೆಗಾಹಾಟ್) ಎಫ್‌ಎಂ ಟ್ರಾನ್ಸ್‌ಮಿಷನ್ ಕೇಂದ್ರವನ್ನು ನಿರ್ಮಿಸಲಾಗಿದೆ. ಸುಮಾರು 285 ಲಕ್ಷ ರು.ಗಳಲ್ಲಿ ಈ ಕೇಂದ್ರ ತಲೆ ಎತ್ತಿದೆ. ಸುಮಾರು 30 ಕಿ.ಮೀ. ಏರಿಯಲ್ ವ್ಯಾಪ್ತಿಯಲ್ಲಿ ಇದರ ತರಂಗಾಂತರ ಹೊಂದಿರಲಿದೆ.
ಮಂಗಳೂರು ಆಕಾಶವಾಣಿಯ ಕಾರ್ಯಕ್ರಮಗಳನ್ನು ಈ ಕೇಂದ್ರದ ಮೂಲಕ ಉಡುಪಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೂ ಬಿತ್ತರಿಸಲು ಇದರಿಂದ ಅನುಕೂಲವಾಗಲಿದೆ. ಅಲ್ಲದೆ ಪ್ರಾಕೃತಿಕ ವಿಕೋಪದಂತಹ ಸಂದರ್ಭಗಳಲ್ಲೂ ಸಂವಹನಕ್ಕೆ ಈ ಕೇಂದ್ರದ ಬಳಕೆಯಾಗಲಿದೆ. ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಈ ಕೇಂದ್ರ ಸ್ಥಾಪನೆ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ್ದರು. ಪ್ರಸಕ್ತ ಮಂಗಳೂರು ಆಕಾಶವಾಣಿ ಮಂಗಳೂರು, ಕಾಸರಗೋಡು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪ್ರಸಾರ ವ್ಯಾಪ್ತಿಯನ್ನು ಹೊಂದಿದೆ.
ಮಂಗಳೂರು ಆಕಾಶವಾಣಿಯ ಎಫ್‌ಎಂ ಕೇಂದ್ರವನ್ನು ಉಡುಪಿಯಲ್ಲಿ ಸ್ಥಾಪಿಸುವಂತೆ ಕಳೆದ ವರ್ಷ ಕೇಂದ್ರ ಸರ್ಕಾರವನ್ನು ಕೋರಲಾಗಿತ್ತು. ಅದಕ್ಕೆ ಸ್ಪಂದಿಸಿ 1 ಕಿಲೋ ವ್ಯಾಟ್ ಸಾಮರ್ಥ್ಯದ ಎಫ್‌ಎಂ ಕೇಂದ್ರವನ್ನು ಕೇಂದ್ರ ಮಂಜೂರುಗೊಳಿಸಿದೆ. ಇದನ್ನು 10 ಕಿಲೋ ವ್ಯಾಟ್ ಸಾಮರ್ಥ್ಯಕ್ಕೆ ಹೆಚ್ಚಳಗೊಳಿಸುವಂತೆ ಕೇಂದ್ರವನ್ನು ಕೋರಲಾಗಿದೆ.
-ಕೋಟ ಶ್ರೀನಿವಾಸ ಪೂಜಾರಿ, ಸಂಸದರು, ಉಡುಪಿ-ಚಿಕ್ಕಮಗಳೂರು
ಕೃಷ್ಣ ಮಠಕ್ಕೆ ಅಶ್ವಿನಿ ವೈಷ್ಣವ್
ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಶುಕ್ರವಾರ ಬೆಳಗ್ಗೆ 8.45ಕ್ಕೆ ಉಡುಪಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಲಿದ್ದು 9 ಗಂಟೆಗೆ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಲಿದ್ದಾರೆ. ನಂತರ 10 ಗಂಟೆಗೆ ಉಡುಪಿ ಅಜ್ಜರಕಾಡಿನ ನೂತನ ಎಫ್ಎಂ ರೇಡಿಯೋ ಸ್ಟೇಷನ್ ಬಿಡುಗಡೆ ಮಾಡಿ ನಂತರ ಮಂಗಳೂರಿಗೆ ನಿರ್ಗಮಿಸಿ, ವಂದೇ ಭಾರತ್ ರೈಲಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ ಸಚಿವರ ಭೇಟಿಯ ಸಂಧರ್ಭ ಜಿಲ್ಲೆಯ ಶಾಸಕರು ಮತ್ತಿತರ ಗಣ್ಯರು ಸಚಿವರನ್ನು ಸ್ವಾಗತಿಸಲಿದ್ದಾರೆ ಎಂದು ಸಂಸದ ಕೋಟ ಹೇಳಿಕೆಯಲ್ಲಿ ತಿಳಿಸಿದ್ದಾರೆ.














