ಸಾಗರ ತಾಲೂಕಿನ ವೀರಾಪುರ ಹಿರೇಮಠದಲ್ಲಿ ನೂತನ ಶಿಲಾಮಂಟಪವನ್ನು ಶ್ರೀಶೈಲ ಜಗದ್ಗುರುಗಳು ಲೋಕಾರ್ಪಣೆ ಮಾಡಿದರು. ಗದ್ದುಗೆಯೊಳಗಿರುವ ಚೈತನ್ಯ ಶಕ್ತಿಯ ಬಗ್ಗೆ ವಿವರಿಸಿದ ಅವರು ದೇವಸ್ಥಾನಗಳ ಮಹತ್ವವನ್ನು ಭಕ್ತರಿಗೆ ತಿಳಿಸಿದರು.
ಶಿವಮೊಗ್ಗ: ದೇವರು ಎಲ್ಲ ಕಡೆ ಇದ್ದರೂ ದರ್ಶನ ನೀಡುವುದು ದೇವಸ್ಥಾನಗಳಲ್ಲಿ ಮಾತ್ರ. ಮೂರ್ತಿಯ ಮೂಲಕ ದೇವರು ದರ್ಶನ ನೀಡುವುದರಿಂದ ದೇವಸ್ಥಾನಗಳು ಬೇಕು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಹೇಳಿದರು.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತ್ಯಾಗರ್ತಿ ಸಮೀಪದ ವೀರಾಪುರ ಹಿರೇಮಠದಲ್ಲಿ ಬುಧವಾರ ಲಿಂಗೈಕ್ಯ ಶ್ರೀ ಚನ್ನವೀರ ದೇಶಿಕೇಂದ್ರ ಶಿವಾಚಾರ್ಯರ ನಿರ್ವಿಕಲ್ಪ ಸಮಾಧಿಯ ನೂತನ ಶಿಲಾಮಂಟಪ ಹಾಗೂ ವೃಷಭ ಮಂಟಪವನ್ನು ಲೋಕಾರ್ಪಣೆ ಮಾಡಿ ನಂತರ ನಡೆದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಗದ್ದುಗೆಯಲ್ಲಿ ಏನಿರುತ್ತೆ ಎಂಬ ಉಡಾಫೆ ಬೇಡ
ಎಲ್ಲ ಮಠಗಳಿಗೆ ಗದ್ದುಗೆಯೇ ದೊಡ್ಡ ಸಂಪತ್ತಾಗಿದ್ದು, ಗದ್ದುಗೆಯಲ್ಲಿ ಏನಿರುತ್ತದೆ ಎಂದು ಉಡಾಫೆ ಮಾಡಬಾರದು. ಗದ್ದುಗೆ ಒಳಗಿರುವ ಚೈತನ್ಯ ಯಾರೊಬ್ಬ ವ್ಯಕ್ತಿಯ, ಸಮುದಾಯದ ಮೂಲಕ ಎಲ್ಲವನ್ನು ಮಾಡಿಸುತ್ತದೆ. ಸದರಿ ಮಠದಲ್ಲಿ ಮರುಳಸಿದ್ದ ಪಂಡಿತಾರಾಧ್ಯ ಶ್ರೀಗಳು ತಾವು ಪಟ್ಟಕ್ಕೆ ಬಂದ ನಂತರ ಮಠವನ್ನು ಇನ್ನಿಲ್ಲದಂತೆ ಅಭಿವೃದ್ಧಿ ಮಾಡಿದ್ದಾರೆ. ಅಪಾರ ಭಕ್ತರನ್ನು ಸಂಪಾದಿಸಿದ್ದಾರೆ. ಶ್ರೀಗಳ ಮೂಲಕ ಗದ್ದುಗೆಯೊಳಗಿರುವ ಶಕ್ತಿ ಎಲ್ಲ ಕೆಲಸವನ್ನು ಮಾಡಿಸಿಕೊಂಡಿದೆ. ಈಗ ಮಠಕ್ಕೆ ಕಲಶಪ್ರಾಯದಂತೆ ಶಿಲಾಮಯ ಮಂಟಪವನ್ನು ಶಾಸ್ತ್ರಬದ್ಧವಾಗಿ, ವೈಜ್ಞಾನಿಕ ತಳಹದಿಯ ಮೇಲೆ, ಜ್ಯೋತಿಷ್ಯಾಸ್ತ್ರದಂತೆ ನಿರ್ಮಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಜೊತೆಗೆ, ಶ್ರೀಶೈಲ ಮಠದಲ್ಲಿ ವಸತಿಗೃಹಗಳ ನಿರ್ಮಾಣಕ್ಕೆ ಸದ್ಭಕ್ತರು ಆರ್ಥಿಕ ಸಹಾಯ ನೀಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಹಲವು ಅಮೂಲ್ಯ ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು. ವೀರಾಪುರ ಹಿರೇಮಠದ ಡಾ.ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ರಾಜ್ಯದ ಬೇರೆ ಭಾಗಗಳ ವಿವಿಧ ವೀರಶೈವ ಮಠಗಳ 25ಕ್ಕೂ ಹೆಚ್ಚಿನ ಮಠಾಧೀಶರು, ಸಚಿವರಾದ ಲಕ್ಷ್ಮಣ ಸವದಿ, ರುದ್ರಪ್ಪ ಲಮಾಣಿ ಸೇರಿದಂತೆ ಹಲವು ಗಣ್ಯರು ಇದ್ದರು.














