ಸುಳ್ವಾಡಿ ವಿಷ ಪ್ರಸಾದ ದುರಂತದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿಯ ಮಧ್ಯಂತರ ಜಾಮೀನು ಅರ್ಜಿಯನ್ನು ಚಾಮರಾಜನಗರ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ. ಹೀಗಾಗಿ ನ್ಯಾಯಾಲಯಕ್ಕೆ ಶರಣಾಗಲೇಬೇಕಿದೆ.
ಚಾಮರಾಜನಗರ: ಸುಳ್ವಾಡಿ ವಿಷ ಪ್ರಸಾದ ದುರಂತದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಮದ್ಯಂತರ ಜಾಮೀನು ಅರ್ಜಿ ವಜಾಗೊಂಡಿದೆ. ವಿಷ ಪ್ರಸಾದ ದುರಂತದ ಎ-1 ಆರೋಪಿಯಾಗಿರುವ ಇಮ್ಮಡಿ ಮಹಾದೇವಸ್ವಾಮಿ ಅನಾರೋಗ್ಯದ ಕಾರಣ ನೀಡಿ ಮದ್ಯಂತರ ಜಾಮೀನು ಪಡೆದಿದ್ದ. ಚಾಮರಾಜನಗರ ಜಿಲ್ಲಾ ನ್ಯಾಯಾಲಯ ಒಂದು ವರ್ಷ ಅವಧಿಗೆ ಮದ್ಯಂತರ ಜಾಮೀನು ನೀಡಿತ್ತು. ಅದರಂತೆ 2026 ರ ನವೆಂಬರ್ 17 ರವರೆಗೆ ಮಾತ್ರ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿತ್ತು. ಹೀಗಾಗಿ ನವೆಂಬರ್ 17 ಕ್ಕೆ ನ್ಯಾಯಾಲಯಕ್ಕೆ ಶರಣಾಗಬೇಕಿರುವ ಹಿನ್ನೆಲೆಯಲ್ಲಿ ಮಹದೇವಸ್ವಾಮಿ ಮತ್ತೆ ಜಾಮೀನು ಮುಂದುವರಿಸುವಂತೆ ಅರ್ಜಿ ಸಲ್ಲಿಸಿದ್ದ. ಆದರೆ ಇದೀಗ ನ್ಯಾಯಾಲಯ ಮದ್ಯಂತರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
2018ರಲ್ಲಿ ಹನೂರು ತಾಲೂಕಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಾಲಯದಲ್ಲಿ ಬಿದರಹಳ್ಳಿ, ದೊಡ್ಡಾಣೆ, ಎಂ ಜಿ ದೊಡ್ಡಿ, ಸುಳ್ವಾಡಿ ಸೇರಿದಂತೆ ಸುತ್ತಮುತ್ತಲಿನ ಭಕ್ತಾದಿಗಳು ಹಾಗೂ ಓಂ ಶಕ್ತಿ ಮಾಲಾಧಾರಿಗಳು ಸೇರಿ ವಿಷಮಿಶ್ರಿತ ಪ್ರಸಾದ ಸೇವಿಸಿದ 17 ಜನರು ಸಾವನ್ನಪ್ಪಿದ್ದರು. ನೂರಾರು ಮಂದಿ ಅಸ್ವಸ್ಥರಾಗಿದ್ದ ಘಟನೆಗೆ ಸಂಬಂಧಿಸಿದಂತೆ ಇಮ್ಮಡಿ ಮಹದೇವಸ್ವಾಮಿ ಮೊದಲನೇ ಆರೋಪಿಯಾಗಿದ್ದಾನೆ. ಹನೂರು ತಾಲೂಕಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಪಾರಮ್ಯ ಸಾಧಿಸಲು 2018 ರ ಡಿ.14 ರಂದು ಪ್ರಸಾದಕ್ಕೆ ವಿಷ ಬೆರೆಸಲಾಗಿತ್ತು.
ವಿವಿಧ ನ್ಯೂನತೆಗಳಿಂದ ಬಳಲುತ್ತಿರುವ ಭಕ್ತರು
ವಿಷ ಪ್ರಸಾದ ಸೇವಿಸಿದ್ದ 17 ಮಂದಿ ಭಕ್ತರು ಸಾವನ್ನಪ್ಪಿ, 123 ಕ್ಕೂ ಅಧಿಕ ಮಂದಿ ತೀವ್ರ ಅಸ್ವಸ್ಥರಾಗಿದ್ದರು. ಇಂದಿಗೂ 150ಕ್ಕೂ ಹೆಚ್ಚು ಮಂದಿ ವಿವಿಧ ನ್ಯೂನತೆಗಳಿಂದ ಗುಣಮುಖರಾಗದೆ ಪರದಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಮಹಾದೇವಸ್ವಾಮಿ 2018 ರಿಂದಲೂ ಮೈಸೂರು ಕಾರಾಗೃಹದಲ್ಲಿ ವಿಚಾರಣಾ ಕೈದಿಯಾಗಿದ್ದಾನೆ. ದುರಂತದ ಬಳಿಕ ಸ್ವಾಮೀಜಿ ಖಾವಿ ಧರಿಸುವುದನ್ನು ಬಿಟ್ಟು ಸಂಪೂರ್ಣ ಶ್ವೇತ ವಸ್ತ್ರಧಾರಿಯಾಗಿದ್ದಾನೆ. ಈ ಹಿಂದೆ ಜಾಮೀನು ನೀಡಿದ್ದಕ್ಕೆ ಸುಳ್ವಾಡಿ ಸಂತ್ರಸ್ಥರ ಬೃಹತ್ ಪ್ರತಿಭಟನೆ ನಡೆದಿತ್ತು. ಕಿಡ್ನಿ ಸಮಸ್ಯೆಯ ಕಾರಣ ನೀಡಿ ಹೈಕೋರ್ಟ್ ನಿಂದ ಸ್ವಾಮೀಜಿ ಜಾಮೀನು ಪಡೆದಿದ್ದ ಬಳಿಕ ಪ್ರಕರಣವನ್ನು ಜಿಲ್ಲಾ ನ್ಯಾಯಾಲಯಕ್ಕೆ ವರ್ಗ ಮಾಡಲಾಗಿತ್ತು. ಇದೀಗ ಮದ್ಯಂತರ ಜಾಮೀನು ಅರ್ಜಿ ವಜಾಗೊಂಡಿರುವುದರಿಂದ ನ್ಯಾಯಾಲಯಕ್ಕೆ ಆರೋಪಿ ಶರಣಾಗಬೇಕಿದೆ.














