ಹವ್ವಳ್ಳಿ ಗ್ರಾಮದಲ್ಲಿ ಹೊಯ್ಸಳ ದೊರೆ ವಿಷ್ಣುವರ್ಧನನ ಕಾಲದ ಕ್ರಿ.ಶ. 1142ರ ಐತಿಹಾಸಿಕ ವೀರಗಲ್ಲು ಶಾಸನ ಪತ್ತೆಯಾಗಿದೆ. ಈ ವೀರಗಲ್ಲು ಬೀರಣ್ಣಗೌಡ ಎಂಬ ವೀರ ಸೇನಾನಿಯ ಹೋರಾಟ ಮತ್ತು ವೀರಮರಣವನ್ನು ಸಾರುತ್ತದೆ. ಇದನ್ನು ಮೂಲಸ್ಥಾನದಲ್ಲೇ ಸಂರಕ್ಷಿಸಲು ಚರಿತ್ರೆ ಆಸಕ್ತರು ಆಗ್ರಹಿಸಿದ್ದಾರೆ.
ಜೋಸೆಫ್.ಎಂ.ಆಲ್ದೂರು
ಕರ್ನಾಟಕದ ಚರಿತ್ರೆಯಲ್ಲಿ ಅಗ್ರ ಕ್ರಮಣಿಕೆಯಲ್ಲಿ ನಿಲ್ಲುವ ರಾಜ ವಂಶಗಳಲ್ಲಿ ಒಂದಾದ ಹೊಯ್ಸಳ ಸಾಮ್ರಾಜ್ಯದ ಪ್ರಸಿದ್ಧ ದೊರೆ ಬಿಟ್ಟಿದೇವ (ವಿಷ್ಣುವರ್ಧನನ) ಮರಣದ ಮಾಹಿತಿ ಒಳಗೊಂಡ ವೀರಗಲ್ಲು ಅಪರೂಪದ ಶಾಸನ. ಇದನ್ನು ಸಂರಕ್ಷಿಸು ವುದರಿಂದ ನಮ್ಮ ಇತಿಹಾಸದ ಪುಟಕ್ಕೆ ಮತ್ತೊಂದು ವೀರ ಹೋರಾಟಗಾರನನ್ನು ದಾಖಲಿಸಿದಂತಾಗಲಿದೆ.
ಐತಿಹಾಸಿಕ ಘಟನೆಗೆ ಇದೇ ಶಾಸನ ಸಾಕ್ಷಿ
ಸ್ಥಳೀಯ ಪುರಾತನ ಗ್ರಾಮವಾದ ಹವ್ವಳ್ಳಿಯಲ್ಲಿರುವ ಈ ವೀರಗಲ್ಲು ಕ್ರಿ.ಶ. 1142 ನೇ ನಿರ್ಮಿತವಾಗಿದ್ದು ಈ ಶಾಸನವನ್ನು ಮೂಲ ಸ್ಥಾನದಲ್ಲೇ ಉನ್ನತೀಕರಿಸಿ ಸಂರಕ್ಷಿಸ ಬೇಕೆಂಬ ಕೂಗು ಚರಿತ್ರೆ ಆಸಕ್ತರಿಂದ ಕೇಳಿ ಬರುತ್ತಿದೆ. ಈ ವೀರಗಲ್ಲು ಸ್ಥಾಪನೆ ಇತಿಹಾಸವೇ ಅಪರೂಪದಲ್ಲಿ ಅಪರೂಪದ ಶಾಸನ ಇದೆಂಬುದನ್ನು ಸಾಕ್ಷಿಕರಿಸಿದೆ. ಕಾರಣ ಹೊಯ್ಸಳ ಸಾಮ್ರಾಜ್ಯದ ಪ್ರಸಿದ್ಧ ದೊರೆ ಬಿಟ್ಟಿದೇವ (ವಿಷ್ಣುವರ್ಧನನ) ಮರಣದ ನಂತರ ನಡೆದ ಐತಿಹಾಸಿಕ ಘಟನೆಗೆ ಇದೇ ಶಾಸನ ಸಾಕ್ಷಿಯಾಗಿರುವುದು ಇದರ ವಿಶೇಷತೆ ಮಾತ್ರವಲ್ಲ. ನಮ್ಮ ನಾಡಿನ ವೀರರ ದ್ಯೂತಕವಾಗಿದೆ ಎನ್ನಬಹುದು.
ಈ ವೀರಗಲ್ಲಿನಲ್ಲಿ ಹೊಯ್ಸಳ ಅರಸ ಬಿಟ್ಟಿದೇವ ಬಂಕಾಪುರದಲ್ಲಿ ಕೊನೆ ದಿನಗಳನ್ನು ಕಳೆಯುವಾಗ ಸಮೀಪದ ಕಂಚಿನ ಕಲ್ ದುರ್ಗ ಅವರ ಕೋಟೆಯಲ್ಲಿ ಮೃತ್ಯು ಹೊಂದುತ್ತಾರೆ. ಬಳಿಕ ಅವರನ್ನು ಹವ್ವಳ್ಳಿ ಗ್ರಾಮದ ಮಾರ್ಗವಾಗಿ ಸ್ವಸ್ಥಾನ ಮೂಡಿಗೆರೆ ಹಳೇಬೀಡಿಗೆ ತೆರಳುವಾಗ ಪಾರ್ಥಿವ ಶರೀರದೊಂದಿಗೆ (ರಾಜನೊಂದಿಗೆ) ಇದ್ದಂತಹ ಕಪ್ಪ ಕಾಣಿಕೆ ಮತ್ತು ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು, ಅರಸನ ಮೃತ ದೇಹವನ್ನು ವಶಕ್ಕೆ ಪಡೆದು ಶತ್ರುಗಳು ನಡೆಸಿದ ದಾಳಿಗೆ ಹವ್ವಳ್ಳಿ ಗ್ರಾಮದ ಬೀರಣ್ಣಗೌಡ ಎಂಬ ವೀರ ಸೇನಾನಿ ಹೋರಾಟ ನಡೆಸಿ ಸಂರಕ್ಷಿಸುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಅವರನ್ನು ನಂತರದಲ್ಲಿ ಮೋಸದಿಂದ ವೈರಿಗಳು ಕೊಲ್ಲುತ್ತಾರೆ.
ಅತ್ತ ಅರಸ ವಿಷ್ಣುವರ್ಧನನ ಮೃತ ದೇಹದ ಅಂತ್ಯಸಂಸ್ಕಾರದ ಬಳಿಕ ಆತನ ಪುತ್ರ ನರಸಿಂಗ ದೇವನಿಗೆ ವೀರ ಸೇನಾನಿ ಬೀರಣ್ಣಗೌಡ ರ ಪುತ್ರ ಭೂತಗೌಡ ಆ ನಾಡಿಗೆ ಪ್ರಭುಗಳಾದ ಮಂದೇಗೌಡ ಗ್ರಾಮದ ಮುಖ್ಯಸ್ಥರು, ಪಟೇಲರು ಮನವಿ ಮಾಡಿದಾಗ ಬೀರಣ್ಣಗೌಡರ ವೀರ ಪರಾಕ್ರಮದ ಯಶೋಗಾಥೆ ಸಾರುವ ವೀರಗಲ್ಲು ಪ್ರತಿಷ್ಠಾಪಿಸಲಾಗುತ್ತದೆ.
ಹಾಗೇಯೇ ಬೀರಣ್ಣಗೌಡರ ಪತ್ನಿ ಈಚಲಾ ದೇವಿಯವರ ಮಹಾ ಸತಿಗಲ್ಲಿನ ಗುಡಿಯನ್ನು ಹವ್ವಳ್ಳಿ ಗ್ರಾಮದ ಆರಂಭದಲ್ಲಿ ನಿರ್ಮಿಸಲಾಯಿತು. ಅಲ್ಲಿ ಅವರ ಸಮಾಧಿ ಮಾಡಲಾಗಿದೆ. ಗ್ರಾಮದಲ್ಲಿ ಪ್ರತಿವರ್ಷ ನಡೆಯುವ ಸುಗ್ಗಿ ಹಬ್ಬದ ಸಂದರ್ಭ ಬೀರಣ್ಣಗೌಡರ ವೀರಗಲ್ಲಿಗೆ ಮತ್ತು ಅವರ ಪತ್ನಿ ಮಹಾಸತಿ ಗುಡಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಬಾಲ್ಯದ ದಿನಗಳಿಂದಲೂ ವೀರಗಲ್ಲನ್ನು ಅದರ ಚರಿತ್ರೆಯನ್ನು ಹಿರಿಯರಿಂದ ಕೇಳುತ್ತಾ ಬಂದಿದ್ದು, ಚಿಕ್ಕಮಗಳೂರು ಜಿಲ್ಲೆಯ 63ನೇ ವೀರಗಲ್ಲು ಶಾಸನ ಇದಾಗಿದೆ ಎನ್ನುತ್ತಾರೆ ಗ್ರಾಮದ ಮುಖಂಡ ಎಚ್.ಎಸ್. ಗಿರೀಶ್. 1999ರಲ್ಲಿ ಚಿಕ್ಕಮಗಳೂರು ಒಕ್ಕಲಿಗ ಸಂಘದ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಶೋಧಕ ಮತ್ತು ಸಾಹಿತಿ ಮಾಕೋನಹಳ್ಳಿ ದೊಡ್ಡಪ್ಪ ಗೌಡ ರವರ ಭೈರವ ಬಾಗಿನ ಎಂಬ ಪುಸ್ತಕದಲ್ಲಿ ಈ ಶಾಸನ ದಲ್ಲಿರುವ ಹಳೆಗನ್ನಡದ ಮಾಹಿತಿಯನ್ನು ಹೊಸಗನ್ನಡಕ್ಕೆ ಲೇಖಕರು ತರ್ಜುಮೆ ಮಾಡಿದ್ದು ಗಮನಾರ್ಹವಾಗಿತ್ತು. ಬೀರಣ್ಣಗೌಡ ಈ ಗ್ರಾಮದ ಮೂಲಪುರುಷ ಮತ್ತು ಹೆಮ್ಮೆ ಎಂದು ಅಭಿಪ್ರಾಯ ಹಂಚಿಕೊಂಡ ಅವರುಇವರ ವೀರಗಲ್ಲಿಗೆ ಸ್ಥಳದಲ್ಲಿಯೇ ಅಚ್ಚುಕಟ್ಟಾಗಿ ಸೂರು ನಿರ್ಮಿಸಿ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ಉನ್ನತಿಕರಿಸಬೇಕೆಂದು ಮನವಿ ಮಾಡಿದರು.
ಐತಿಹಾಸಿಕ ಮಹತ್ವದ ಈ ವೀರಗಲ್ಲು ಹೊಯ್ಸಳ ವಂಶದ ಪ್ರಸಿದ್ಧ ದೊರೆ ವಿಷ್ಣುವರ್ಧನನ ಕ್ರಿ.ಶ.1142 ದುರ್ಮತಿ ಸಂವತ್ಸರದಲ್ಲಿ ಬಂಕಾಪುರದಲ್ಲಿದ್ದ ಆಕಸ್ಮಿಕ ಮರಣ ಹೊಂದಿದಾಗ ಅವನ ದಂಡನಾಯಕ ಬೊಪ್ಪದೇವ ದೊರೆ ಪಾರ್ಥೀವ ಶರೀರವನ್ನು ಬಂಕಾಪುರದಿಂದ ರಾಜಧಾನಿ ದ್ವಾರಸಮುದ್ರಕ್ಕೆ ಕೊಂಡೊಯ್ಯುವಾಗ ಮಾರ್ಗ ಮದ್ಯೆ ಮೂಡಿಗೆರೆಯಲ್ಲಿ ಶತ್ರುಗಳಿಂದ ನಡೆದ ದಾಳಿಯಲ್ಲಿ ಹೋರಾಡಿ ವೀರಮರಣ ಹೊಂದಿದ ಬೀರಣ್ಣಗೌಡವನ ನೆನಪಿಗಾಗಿ ಅವನ ಮಗ ಬೂತಗೌಡ ವೀರಗಲ್ಲು ನಿಲ್ಲಿಸುತ್ತಾನೆ. ಹೊಯ್ಸಳ ಇತಿಹಾಸದಲ್ಲಿ ಇದೊಂದು ಅಪರೂಪದ ವೀರಗಲ್ಲು ಇದನ್ನು ಯಥಾ ರೀತಿ ಸಂರಕ್ಷಿಸುವುದು ಸ್ಥಳೀಯರ ಹಾಗೂ ಪುರಾತತ್ವ ಇಲಾಖೆ ಅದ್ಯ ಕರ್ತವ್ಯ
ಎಚ್.ಆರ್.ಪಾಂಡುರಂಗ ಕಳಸ
ಕಾರ್ಯಕಾರಿ ಸಮಿತಿ ಸದಸ್ಯ, ಕರ್ನಾಟಕ ಇತಿಹಾಸ ಅಕಾಡೆಮಿ, ಬೆಂಗಳೂರು














