ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಹಾಗೂ ಹಿಂದೂ ಮುಖಂಡ ಮಂಜುನಾಥ್ ಕೊಳ ಅವರ ಪತ್ನಿ ಲಕ್ಷ್ಮೀ ಮಂಜುನಾಥ್ ಕೊಳ ಅವರು ನಗರದ ಲಯನ್ಸ್ ಸರ್ಕಲ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ದುರಂತವಾಗಿ ಮೃತಪಟ್ಟಿದ್ದಾರೆ.
ಉಡುಪಿ (ಆ.1): ನಗರದ ಕೋರ್ಟ್ ರಸ್ತೆಯ ಲಯನ್ಸ್ ಸರ್ಕಲ್ ಬಳಿ ಶನಿವಾರ ಮಧ್ಯಾಹ್ನ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಹಾಗೂ ಹಿಂದೂ ಮುಖಂಡ ಮಂಜುನಾಥ್ ಕೊಳ ಅವರ ಪತ್ನಿ ಲಕ್ಷ್ಮೀ ಮಂಜುನಾಥ್ ಕೊಳ (37) ಸ್ಥಳದಲ್ಲೇ ದುರಂತವಾಗಿ ಮೃತಪಟ್ಟಿದ್ದಾರೆ. ಕಡಿಯಾಳಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಲಕ್ಷ್ಮೀ ಅವರು, ಬಳಿಕ ತಾಲೂಕು ಪಂಚಾಯತ್ ಕಟ್ಟಡದಲ್ಲಿರುವ ಉಡುಪಿ ಶಾಸಕರ ಕಚೇರಿಗೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಮನೆಗೆ ತೆರಳಲು ನಗರದ ನೈವೇದ್ಯ ಹೋಟೆಲ್ ಸಮೀಪದ ಲಯನ್ಸ್ ಸರ್ಕಲ್ ಬಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಖಾಸಗಿ ಬಸ್ ಅವರಿಗೆ ಭೀಕರವಾಗಿ ಢಿಕ್ಕಿ ಹೊಡೆದಿದೆ.
ಸ್ಥಳದಲ್ಲೇ ಕೊನೆಯುಸಿರೆಳೆದ ಮಾಜಿ ಉಪಾಧ್ಯಕ್ಷೆ
ಬಸ್ ಡಿಕ್ಕಿಯಾದ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಲಕ್ಷ್ಮೀ ಮಂಜುನಾಥ್ ಅವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಉಡುಪಿ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


