ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತುಂಗಾ ಮತ್ತು ಭದ್ರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದಾಗಿ ಕಳಸ-ಕಾರ್ಕಳ ಹೆದ್ದಾರಿ ಬಂದ್ ಆಗಿದ್ದು, ಶೃಂಗೇರಿಯ ದೇಗುಲದ ರಸ್ತೆ ಜಲಾವೃತಗೊಂಡಿದೆ.

ಚಿಕ್ಕಮಗಳೂರು (ಆ.1): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮಿತಿಮೀರಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಕಳಸ, ಶೃಂಗೇರಿ ಹಾಗೂ ಕುದುರೆಮುಖ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಪ್ರಮುಖ ನದಿಗಳಾದ ತುಂಗಾ ಮತ್ತು ಭದ್ರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಕಳಸ ತಾಲೂಕಿನ ಕುದುರೆಮುಖ ಹಾಗೂ ಕಳಸ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಜಾಂಬಳೆ ಗ್ರಾಮದ ಬಳಿ ಇರುವ ಪ್ರಮುಖ ಸೇತುವೆಯ ಮೇಲೆ ಭದ್ರಾ ನದಿಯ ಪ್ರವಾಹದ ನೀರು ಭಾರಿ ಪ್ರಮಾಣದಲ್ಲಿ ಹರಿಯುತ್ತಿದ್ದು, ಕಳಸ-ಕಾರ್ಕಳ ರಾಜ್ಯ ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ ಆಗಿದೆ. ಸೇತುವೆ ಮೇಲೆ 2 ಅಡಿಗೂ ಹೆಚ್ಚು ನೀರು ಹರಿಯುತ್ತಿದ್ದರೂ ಕೆಲ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಅಪಾಯಕಾರಿ ಸಾಹಸಕ್ಕೆ ಇಳಿಯುತ್ತಿರುವ ದೃಶ್ಯ ಕಂಡುಬಂದಿದೆ.

ಶೃಂಗೇರಿ ದೇಗುಲದ ರಸ್ತೆ ಜಲಾವೃತ, ಕೆರೆಕಟ್ಟೆಯಲ್ಲಿ ಪ್ರಳಯ ಸಾದೃಶ ಮಳೆ!

ಶೃಂಗೇರಿ ತಾಲೂಕು ಹಾಗೂ ಕೆರೆಕಟ್ಟೆ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದ ತುಂಗಾ ನದಿಯ ಒಳಹರಿವು ಹೆಚ್ಚಾಗಿದೆ. ನದಿಯ ಅಬ್ಬರಕ್ಕೆ ಶೃಂಗೇರಿ ಶ್ರೀ ಶಾರದಾಂಬೆ ದೇಗುಲದ ಪಾರ್ಕಿಂಗ್ ಲಾಟ್‌ಗೆ ತೆರಳುವ ಪ್ಯಾರಲಲ್ ರಸ್ತೆಯಲ್ಲಿ ಸುಮಾರು 3 ರಿಂದ 4 ಅಡಿ ನೀರು ನಿಂತಿದ್ದು, ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಮಾಕೋಡಿನಲ್ಲಿ ಕಾಲುಸಂಕ ಮುಳುಗಡೆ, ಜೋಗಿಕುಂಬ್ರಿಯಲ್ಲಿ ಭೂಕುಸಿತ!

ಕುದುರೆಮುಖ ಗುಡ್ಡಗಾಡು ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತೋಟ, ಗದ್ದೆ ಹಾಗೂ ರಸ್ತೆಗಳು ಜಲಾವೃತಗೊಂಡಿವೆ. ಕಳಸ ತಾಲೂಕಿನ ಸಂಸೆ ಸಮೀಪದ ಮಾಕೋಡು ಗ್ರಾಮದಲ್ಲಿ ಹರಿಯುವ ನದಿಯ ಅಬ್ಬರಕ್ಕೆ ಕಬ್ಬಿಣದ ಕಾಲುಸಂಕವೇ ಮುಳುಗಡೆಯಾಗಿದೆ. ಜೋಗಿಕುಂಬ್ರಿಯಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಸುರೇಶ್ ಹಾಗೂ ವೆಂಕಟೇಶ್ ಎಂಬುವರ ಅಡಿಕೆತೋಟಗಳಿಗೆ ಮಣ್ಣು ಜಾರಿಬಿದ್ದಿದೆ. ತೋಟಗಳಲ್ಲಿ ಬರೋಬ್ಬರಿ 2 ಅಡಿ ಎತ್ತರಕ್ಕೆ ನೀರು ನಿಂತಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಜಿಲ್ಲಾಡಳಿತದಿಂದ ಎಚ್ಚರಿಕೆ

ಮಲೆನಾಡು ಭಾಗದಲ್ಲಿ ಇನ್ನು ಕೆಲವು ದಿನಗಳ ಕಾಲ ಮಳೆ ಮುಂದುವರಿಯುವ ಮುನ್ಸೂಚನೆ ಇರುವುದರಿಂದ ನದಿ ತೀರದ ನಿವಾಸಿಗಳು, ತಗ್ಗು ಪ್ರದೇಶದಲ್ಲಿ ಇರುವವರು ಹಾಗೂ ವಾಹನ ಸವಾರರು ಸುರಕ್ಷಿತ ಸ್ಥಳಗಳಲ್ಲಿ ಇರಬೇಕು. ಅನಗತ್ಯವಾಗಿ ನೀರಿನ ಹರಿವಿನ ಬಳಿ ತೆರಳಬಾರದು ಎಂದು ಜಿಲ್ಲಾಡಳಿತ ಕಟ್ಟೆಚ್ಚರ ನೀಡಿದೆ.