ಗಿರೀಶ್ ಮಟ್ಟಣ್ಣವರ್ ಅವರು, ನಿಗೂಢ ಸಾವುಗಳಂತಹ ಗಂಭೀರ ವಿಷಯಗಳನ್ನು ಮುಚ್ಚಿಹಾಕಲು ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಸರ್ಕಾರವು SIT ವರದಿಯನ್ನು ಮುಚ್ಚಿಡುತ್ತಿದ್ದು, ಅದನ್ನು ಬಹಿರಂಗಪಡಿಸಬೇಕು ಮತ್ತು ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಗೆ ಹೊಸ SIT ರಚಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. 'ರಾಷ್ಟ್ರ ರಕ್ಷಣಾ ಪಡೆ' ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳ ವಿರುದ್ಧವೂ ಅವರು ಧ್ವನಿ ಎತ್ತಿದ್ದಾರೆ.
ಚಿತ್ರದುರ್ಗ:"ನಾವು ಸತ್ಯಕ್ಕಾಗಿ ಮತ್ತು ಸಂತ್ರಸ್ತರಿಗೆ ನ್ಯಾಯ ಸಿಗಬೇಕೆಂದು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಆದರೆ, ಪ್ರಶ್ನೆ ಮಾಡುವವರ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡಿ, ತೇಜೋವಧೆ ಮಾಡುವ ಕೆಟ್ಟ ಸಂಸ್ಕೃತಿ ರಾಜ್ಯದಲ್ಲಿ ನಡೆಯುತ್ತಿದೆ. ದಾವಣಗೆರೆಯ ಅಕ್ರಮ ಮೀಟರ್ ಬಡ್ಡಿ ದಂಧೆಯ ವಿರುದ್ಧ ನಾವು ಧ್ವನಿ ಎತ್ತಿದಾಗ ನಮಗೆ ತೀವ್ರ ಅವಮಾನ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಕೆಟ್ಟ ಕಾಮೆಂಟ್‌ಗಳ ಮೂಲಕ ನಿಂದಿಸಲಾಯಿತು. ರಮಾ ನಾಗರಾಜ್ ಅವರು ಮೊದಲಿನಿಂದಲೂ ಸಮಾಜದಲ್ಲಿ ಗೌರವಾನ್ವಿತ ಸ್ಥಾನದಲ್ಲಿದ್ದವರು ಮತ್ತು ಓಬವ್ವನ ನಾಡಾದ ಚಿತ್ರದುರ್ಗದ ಮಣ್ಣಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಇಡೀ ಗೊಂದಲದ ಜಾಲದಲ್ಲಿ ರಮಾ ನಾಗರಾಜ್ ಮತ್ತು ನಟ ಪ್ರಕಾಶ್ ರಾಜ್ ಅವರು ಅನಗತ್ಯವಾಗಿ ಎಳೆದು ತರಲಾಗಿದೆಯೇ ಹೊರತು, ಅವರು ಈ ಯಾವುದೇ ನೆಗೆಟಿವ್ ವಿಷಯಗಳ ಭಾಗವಾಗಿಲ್ಲ. ಪ್ರಕಾಶ್ ರಾಜ್ ಅವರು ಹಿರಿಯ ನಟರು ಮಾತ್ರವಲ್ಲದೆ, ಸದಾ ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವವರು. ಅವರು ಈ ಹಿಂದೆ 'ಕಾಕ್ರೋಚ್ ಪಾರ್ಟಿ' ಹೋರಾಟದಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರು. ಆದರೆ, ಮೂಲ ವಿಷಯವನ್ನು ಡೈವರ್ಟ್ ಮಾಡಲು ಕೆಲವು ಕೆಟ್ಟ ಹಿತಾಸಕ್ತಿಗಳು ಹೊಂಚು ಹಾಕಿ ಷಡ್ಯಂತ್ರ ರೂಪಿಸುತ್ತಿವೆ," ಎಂದು ಗಿರೀಶ್ ಮಟ್ಟಣ್ಣವರ್ ಆಕ್ರೋಶ ಹೊರಹಾಕಿದ್ದಾರೆ.
ಮುಚ್ಚಿಹಾಕಲ್ಪಟ್ಟ ಸತ್ಯಗಳು
"ರಾಜ್ಯದಲ್ಲಿ ಭೀಕರ ಮತ್ತು ನಿಗೂಢ ಘಟನೆಗಳು ನಡೆಯುತ್ತಿದ್ದರೂ ಅವುಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದೆ. ಒಂದೇ ದಿನದಲ್ಲಿ ಆರು ಜನ ನಿಗೂಢವಾಗಿ ಸಾವನ್ನಪ್ಪುತ್ತಾರೆ ಮತ್ತು ಅದೇ ದಿನ ಯಾವುದೇ ಸುದ್ದಿಯಾಗದಂತೆ ಅವರನ್ನು ಹೂತು ಹಾಕಲಾಗುತ್ತದೆ. ಇಂತಹ ಗಂಭೀರ ವಿಷಯಗಳ ಕಡೆಗೆ ಸಾರ್ವಜನಿಕ ಗಮನ ಹರಿದಂತೆ ಮಾಡಲು ಬೇರೆ ಬೇರೆ ವಿವಾದಗಳನ್ನು ಸೃಷ್ಟಿಸಿ ಡೈವರ್ಟ್ ಮಾಡಲಾಗುತ್ತಿದೆ. ಆದರೆ ನೆನಪಿರಲಿ, ಸತ್ಯಕ್ಕೆ ಯಾವತ್ತಿದ್ದರೂ ನ್ಯಾಯ ಸಿಕ್ಕೇ ಸಿಗುತ್ತದೆ. ಚಿನ್ನಯ್ಯ ಎಂಬುವವರು ಹಾಕಿದ್ದ ಅರ್ಜಿಯನ್ನು (ಪಿಟೀಷನ್) ನ್ಯಾಯಾಲಯವು ರದ್ದುಗೊಳಿಸಿದೆ. ಆ ಜಾಗದಲ್ಲಿ ಏನೂ ಸಿಕ್ಕಿಲ್ಲ, ಯಾವುದೇ ಅಕ್ರಮ ನಡೆದಿಲ್ಲ ಎಂದು ಕೆಲವರು ಈಗ ಕಟ್ಟುಕಥೆಗಳನ್ನು ಹೇಳುತ್ತಾ ಜನರ ದಿಕ್ಕು ತಪ್ಪಿಸುತ್ತಿದ್ದಾರೆ.
ಆದರೆ ವಾಸ್ತವವೇ ಬೇರೆ ಇದೆ. ಈಗ ಪತ್ತೆಯಾಗಿರುವ ಅಸ್ಥಿಪಂಜರ ಹಾಗೂ ಶವಗಳಿಗೆ DNA ಮ್ಯಾಚ್ ಆಗುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಕೇವಲ ಪುರುಷರ ಶವಗಳು ಮಾತ್ರ ಸಿಗುತ್ತಿವೆ ಎಂದು ಸುಳ್ಳು ಮಾಹಿತಿ ಪ್ರಸಾರ ಮಾಡಲಾಗುತ್ತಿತ್ತು, ಆದರೆ ಈಗ ಮಹಿಳೆಯರ ಶವಗಳೂ ಸಹ ಪತ್ತೆಯಾಗುತ್ತಿವೆ. ಆದಿಶೇಷ ಎಫ್‌ಎಸ್‌ಎಲ್ (FSL) ವರದಿಯಲ್ಲಿ ಮೃತದೇಹಗಳ ಬುರುಡೆ, ಕೈ ಮತ್ತು ಮೂಳೆಗಳು ಸಿಕ್ಕಿರುವುದು ಸಾಬೀತಾಗಿದೆ. ಇದು ನಾನಾಗಿ ಸೃಷ್ಟಿಸುತ್ತಿರುವ ಕಥೆಯಲ್ಲ, ಸ್ವತಃ ವಿಧಿವಿಜ್ಞಾನ ಪ್ರಯೋಗಾಲಯ (FSL) ನೀಡಿರುವ ಅಧಿಕೃತ ವರದಿ. 22 ವರ್ಷದ ತರುಣನೊಬ್ಬನ ತಲೆಯ ಒಳಗಡೆ ಕೈ ಮತ್ತು ಮೂಳೆಗಳು ಪತ್ತೆಯಾಗಿವೆ ಎಂದರೆ ಇದು ಸ್ಪಷ್ಟವಾಗಿ ಕೊಲೆಯಲ್ಲವೇ? ಕಾಣೆಯಾದವರ ಬಗ್ಗೆ ದೂರು ಕೊಟ್ಟವರ ಮತ್ತು DNA ಮ್ಯಾಚಿಂಗ್ ಆಗಿರುವ ಮೂವರು ಸಂತ್ರಸ್ತರೇ ಇದಕ್ಕೆ ಸಾಕ್ಷಿ ನುಡಿಯುತ್ತಿದ್ದಾರೆ. ಆದರೂ ಕೆಲವರು ಇದನ್ನು 'ಬುರಡೆ ಗ್ಯಾಂಗ್' ಮತ್ತು ಕೇವಲ ಒಂದು ಷಡ್ಯಂತ್ರ ಎಂದು ಹಗುರವಾಗಿ ಮಾತನಾಡುತ್ತಿದ್ದಾರೆ," ಎಂದು ಮಟ್ಟಣ್ಣವರ್ ವರದಿಗಳ ಸಮೇತ ಪ್ರಶ್ನಿಸಿದ್ದಾರೆ.
ಸರ್ಕಾರದ ನಡೆ ಹಾಗೂ ತನಿಖಾ ವರದಿಗಳ ಗೌಪ್ಯತೆ ಕುರಿತು ಪ್ರಶ್ನೆ
"ನಮ್ಮ ಮೇಲೆ ಯಾವುದೇ ಕಾನೂನಾತ್ಮಕ ಕೇಸ್ ದಾಖಲಾಗಿಲ್ಲ ಮತ್ತು ನಾವು ಯಾವುದೇ ದೇವಸ್ಥಾನದ ವಿರುದ್ಧ ಷಡ್ಯಂತ್ರ ನಡೆಸಿಲ್ಲ. ರಾಜ್ಯದಲ್ಲಿ ಎಷ್ಟು ಜನ ನಿಗೂಢವಾಗಿ ಮಿಸ್ಸಿಂಗ್ (ಕಾಣೆಯಾಗಿದ್ದಾರೆ) ಆಗಿದ್ದಾರೆ ಎನ್ನುವುದಕ್ಕೆ ನಮ್ಮ ಬಳಿ ಸ್ಪಷ್ಟ ದಾಖಲೆಗಳಿದ್ದು, ಅವುಗಳನ್ನು ಬಿಡುಗಡೆ ಮಾಡಲು ನಾವು ಸಿದ್ಧರಿದ್ದೇವೆ. ಎರಡು ವರ್ಷದ ಹೆಣ್ಣು ಮಗು ಕಾಲು ಜಾರಿ ಬಿದ್ದು ಸಾವನ್ನಪ್ಪಿದೆ ಎಂದು ವರದಿ ತಯಾರಿಸಲಾಗಿದೆ. ಹಾಗೆಯೇ, ಮುಡಿ ಕೊಟ್ಟ 10 ವರ್ಷದ ಸಣ್ಣ ಹೆಣ್ಣು ಮಗಳು ಮೋಕ್ಷಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ? ನಾವು ಸಮಾಜದಲ್ಲಿ ನಡೆಯುತ್ತಿರುವ ಈ ಅನ್ಯಾಯಗಳನ್ನು ಪ್ರಶ್ನೆ ಮಾಡುತ್ತಿದ್ದೇವೆಯೇ ಹೊರತು, ಯಾರನ್ನೂ ಅಪಮಾನಿಸುವ ಅಥವಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಮಾಡುತ್ತಿಲ್ಲ. ಸಾರ್ವಜನಿಕ ವಲಯದಲ್ಲಿ ಎದ್ದಿರುವ ಹಲವು ಪ್ರಶ್ನೆಗಳಿಗೆ ಸಂಬಂಧಿಸಿದಂತೆ SIT (ವಿಶೇಷ ತನಿಖಾ ತಂಡ) ವರದಿ ಎಲ್ಲಿದೆ ಎಂದು ಮಹಿಳಾ ಹೋರಾಟಗಾರ್ತಿಯೊಬ್ಬರು ಕೇಳಿದ್ದಾರೆ. ಆ ವರದಿಯನ್ನು ಮಹಿಳಾ ಆಯೋಗಕ್ಕೆ ಸಲ್ಲಿಕೆ ಮಾಡಲಾಗಿದ್ದು, ಸಾರ್ವಜನಿಕರು ಅಥವಾ ಸಂಬಂಧಪಟ್ಟವರು ಮಹಿಳಾ ಆಯೋಗದಿಂದ ಅದನ್ನು ಪಡೆದುಕೊಳ್ಳಬಹುದು.
ಆದರೆ, ಇಷ್ಟೊಂದು ಸೂಕ್ಷ್ಮ ಹಾಗೂ ಗಂಭೀರವಾಗಿರುವ ತನಿಖಾ ವರದಿಯನ್ನು ಸರ್ಕಾರ ಏಕೆ ಜನರಿಂದ ಮುಚ್ಚಿಟ್ಟುಕೊಂಡಿದೆ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು. ಈ ಇಡೀ ಪ್ರಕರಣಕ್ಕೆ ರಾಜ್ಯ ಸರ್ಕಾರ ಮತ್ತು ಗೃಹ ಸಚಿವರೇ ನೇರವಾಗಿ ಉತ್ತರಿಸಬೇಕು. ನಮ್ಮನ್ನು ಕೇವಲ 'ಬುರುಡೇ ಗ್ಯಾಂಗ್' ಎಂದು ಕರೆದು, ಇಡೀ ಹೋರಾಟವನ್ನು ಹತ್ತಿಕ್ಕಲು ನಾವು ಬಿಡುವುದಿಲ್ಲ. ನೇತ್ರಾವತಿ ಎನ್ನುವುದು ಸಣ್ಣ ಕೆರೆಯಲ್ಲ, ಅದೊಂದು ವಿಶಾಲವಾದ ನದಿ. ಅಲ್ಲಿ ಏನಾದರೂ ಬಿದ್ದರೆ ಅಥವಾ ಎಸೆದರೆ ಕಿಲೋಮೀಟರ್‌ಗಳಷ್ಟು ದೂರದವರೆಗೆ ಶವಗಳು ತೇಲಿಕೊಂಡು ಹೋಗುತ್ತವೆ. ಅಲ್ಲಿ ಅಪ್ಪ ಮತ್ತು ಮಗಳಿಬ್ಬರ ಮೃತದೇಹಗಳು ಸಿಕ್ಕಿದ್ದರೂ, ಅದನ್ನು ಕೇವಲ 'ಅನಾಥ ಶವ'ಗಳೆಂದು ದಾಖಲಿಸಿ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ. ಇಂತಹ ಗಂಭೀರ ಲೋಪಗಳನ್ನು ಸರ್ಕಾರ ಏಕೆ ಮುಚ್ಚಿಡುತ್ತಿದೆ? ಮಹಿಳಾ ಆಯೋಗದವರು ಈ ಬಗ್ಗೆ ಏಕೆ ಮೌನ ವಹಿಸಿದ್ದಾರೆ? ಚೌಧರಿ ಅವರು ತನಿಖೆಯ ದಾಖಲೆಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲು ಏಕೆ ಹಿಂಜರಿಯುತ್ತಿದ್ದಾರೆ? ಹಿಂದೆ ಉಗ್ರಪ್ಪ ಅವರ ವರದಿಯನ್ನು ಮುಚ್ಚಿಟ್ಟಂತೆ, ಈ ವರದಿಯನ್ನು ಮೂಲೆಗೆ ತಳ್ಳಲು ನಾವು ಬಿಡುವುದಿಲ್ಲ. ಈ ಸತ್ಯದ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ನಾವು ದೆಹಲಿಯವರೆಗೂ ಹೋಗಿ ಪ್ರತಿಭಟನೆ ನಡೆಸಲು ಸಿದ್ಧರಿದ್ದೇವೆ. ತನಿಖೆಯ ಹೆಸರಿನಲ್ಲಿ ಎಷ್ಟೋ ಸುಳ್ಳುಗಳನ್ನು ಬರೆದು ಪ್ರಕರಣದ ದಿಕ್ಕು ತಪ್ಪಿಸಲಾಗಿದೆ, ಇನ್ನಾದರೂ ಸರ್ಕಾರ ಸತ್ಯವನ್ನು ಮುಚ್ಚಿಡದೇ ತನಿಖಾ ವರದಿಗಳನ್ನು ಅಧಿಕೃತವಾಗಿ ರಿಲೀಸ್ ಮಾಡಬೇಕು "ಸುಳ್ಳುಗಳ ಸರಣಿಯಿಂದ ಸತ್ಯವನ್ನು ಶಾಶ್ವತವಾಗಿ ಮುಚ್ಚಿಡಲು ಸಾಧ್ಯವಿಲ್ಲ. ಸರ್ಕಾರ ಕೂಡಲೇ SIT ವರದಿಯನ್ನು ಬಹಿರಂಗಪಡಿಸಬೇಕು." ಎಂದು ಗಿರೀಶ್ ಮಟ್ಟಣ್ಣವರ್ ಒತ್ತಾಯಿಸಿದರು.
'ರಾಷ್ಟ್ರ ರಕ್ಷಣಾ ಪಡೆ' ಹೆಸರಿನಲ್ಲಿ ಅಕ್ರಮ ದಂಧೆ ಆರೋಪ
ಸಂಘಟನೆಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಗಿರೀಶ್, ರಾಜ್ಯಾದ್ಯಂತ 'ರಾಷ್ಟ್ರ ರಕ್ಷಣಾ ಪಡೆ' ಹೆಸರಿನಲ್ಲಿ ಕೆಲವು ವ್ಯಕ್ತಿಗಳು ಹಾವಳಿ ಎಬ್ಬಿಸುತ್ತಿದ್ದಾರೆ. ಪುನೀತ್ ಕೆರೆಹಳ್ಳಿ ಮತ್ತು ಅವರ ಟೀಮ್ ದೇಶಭಕ್ತಿಯ ಮುಖವಾಡ ಧರಿಸಿ ಬ್ಲಾಕ್‌ಮೇಲ್ ಮಾಡುವ ಮೂಲಕ ದೊಡ್ಡ ಮಟ್ಟದ ವಸೂಲಿ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಹಾಗೂ ಗಿಳಿಯಾರ್ ಅವರಂತಹ ವ್ಯಕ್ತಿಗಳು ಇವರ ಬೆಂಬಲಕ್ಕೆ ನಿಂತಿದ್ದಾರೆ. ಇತ್ತೀಚೆಗೆ ಕಲ್ಬುರ್ಗಿಯಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ಕಿರುಕುಳ ನಡೆದಿದೆ, ಅದು ಸ್ವತಃ ಗೃಹ ಸಚಿವರ ತವರು ಜಿಲ್ಲೆಯಲ್ಲೇ ನಡೆದಿರುವುದು ದುರ್ದೈವ. ಅಷ್ಟಕ್ಕೂ ಈ ರಕ್ಷಣಾ ಪಡೆ ಎನ್ನುವುದು ಯಾವುದೋ ಅಧಿಕೃತ ಸಂಸ್ಥೆಯೇ? ಇವರು ಸರ್ಕಾರದಿಂದ ಅಥವಾ ಕಾನೂನಿನಿಂದ ಏನಾದರೂ ಪರ್ಮಿಷನ್ ತಗೊಂಡಿದ್ದಾರಾ? ನಾವು ಸಮಾಜದಲ್ಲಿ ಇವರು ಮಾಡುತ್ತಿರುವ ತಪ್ಪುಗಳನ್ನು ಪ್ರಶ್ನೆ ಮಾಡಿದರೆ, ನಮಗೆ 'ಪಾಕಿಸ್ತಾನಿ ಫಂಡ್', 'ಚೈನಾ ಫಂಡ್' ಬರುತ್ತಿದೆ ಎಂದು ಸುಳ್ಳು ಆಪಾದನೆ ಹೊರಿಸುತ್ತಾರೆ. ಇವರು ಮಾತ್ರ ದೇಶದಲ್ಲಿರುವ ಮಹಾನ್ ದೇಶಭಕ್ತರಂತೆ ಬಿಂಬಿಸಿಕೊಳ್ಳುತ್ತಿದ್ದಾರೆ.
ಇದಲ್ಲದೆ, ಇವರು ಪೂಜಾ ಸಾಮಗ್ರಿಗಳನ್ನು ಮಾರುವ 'ಗ್ರಂಥಿಕೆ ಅಂಗಡಿ' ಎಂದು ಬೋರ್ಡ್ ಹಾಕಿ ಒಳಗಡೆ ಕಾನೂನುಬಾಹಿರವಾಗಿ ಮಾಂಸ ಮಾರಾಟ ಮಾಡುವ ದಂಧೆ ನಡೆಸುತ್ತಿದ್ದಾರೆ. ಪುನೀತ್ ಕೆರೆಹಳ್ಳಿ ಮತ್ತು ಅವರ ಗ್ಯಾಂಗ್ ಸಮಾಜದ ಸಾಕಷ್ಟು ಹೆಣ್ಣು ಮಕ್ಕಳಿಗೆ ಮೋಸ ಮಾಡಿ ಅನ್ಯಾಯ ಎಸಗುತ್ತಿದ್ದಾರೆ. ಸಮಾಜದ ಶಾಂತಿ ಕದಡುತ್ತಿರುವ ಇವರೆಲ್ಲ ಯಾರು? ಇವರ ವಿರುದ್ಧ ಸರ್ಕಾರ ಮತ್ತು ಪೊಲೀಸ್ ಇಲಾಖೆ ಏಕೆ ಇದುವರೆಗೂ ಕಠಿಣ ಕ್ರಮ ಕೈಗೊಂಡಿಲ್ಲ? ಗೋ ರಕ್ಷಣೆಯ ಪವಿತ್ರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಗಳ ಬಿಸಿನೆಸ್ ಮತ್ತು ದಂಧೆ ಮಾಡುತ್ತಿರುವ ಇವರ ವಿರುದ್ಧ ಗೃಹ ಸಚಿವರು ಕೂಡಲೇ ಕಾನೂನು ಕ್ರಮ ಜರುಗಿಸಬೇಕು," ಎಂದು ಆಗ್ರಹಿಸಿದರು.
ಸೌಜನ್ಯ ಕೊಲೆ ಪ್ರಕರಣಕ್ಕೆ ಮರುಜೀವ ನೀಡಲು ಒತ್ತಾಯ
"ವರ್ಷಗಳ ಹಿಂದೆ ನಡೆದ ಸೌಜನ್ಯ ಕೊಲೆ ಪ್ರಕರಣದ ನ್ಯಾಯಕ್ಕಾಗಿ ನಟ ಯಶ್, ಐಶ್ವರ್ಯ ರೈ, ದುನಿಯಾ ವಿಜಯ್ ಸೇರಿದಂತೆ ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್‌ನ ಹಲವು ಗಣ್ಯರು ಪ್ರಕರಣ ನಡೆದ ಆರಂಭದಲ್ಲೇ ಟ್ವೀಟ್ ಮಾಡಿ ಧ್ವನಿ ಎತ್ತಿದ್ದರು. ಆದರೆ, ಈಗ ಹಠಾತ್ತನೆ ಈ ಪ್ರಕರಣದೊಳಗೆ ಪ್ರಕಾಶ್ ರಾಜ್ ಹಾಗೂ ರಮಾ ನಾಗರಾಜ್ ಅವರ ಹೆಸರನ್ನು ತೇಲಿಬಿಟ್ಟಿರುವುದು ಹೇಗೆ? ದೆಹಲಿಯಲ್ಲಿ ಸೌಜನ್ಯ ಪ್ರಕರಣಕ್ಕೆ ನ್ಯಾಯ ಕೋರಿ ಮತ್ತೆ ಹೋರಾಟ ಕಾವೇರುತ್ತಿರುವ ಸರಿಯಾದ ಸಮಯದಲ್ಲೇ ಈ ಇಬ್ಬರ ಹೆಸರುಗಳನ್ನು ವಿವಾದಕ್ಕೆ ಎಳೆದು ತಂದು ಇಡೀ ವಿಷಯವನ್ನು ಹಳ್ಳ ಹಿಡಿಸಲು ಷಡ್ಯಂತ್ರ ಹೂಡಲಾಗಿದೆ.
ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ರಚನೆ ಮಾಡಲು ಸುಪ್ರೀಂ ಕೋರ್ಟ್ ಈಗಾಗಲೇ ಮಹತ್ವದ ಸೂಚನೆ ನೀಡಿದೆ. ಸ್ವತಃ ಈ ಹಿಂದಿನ ತನಿಖಾಧಿಕಾರಿಗಳೇ 'ಬಂಗಲೇ ಗುಡ್ಡ' ಪ್ರದೇಶದಲ್ಲಿ ನಡೆದಿರುವ ಅಕ್ರಮ ಹಾಗೂ ನಿಗೂಢ ಸಂಗತಿಗಳ ಬಗ್ಗೆ ಸಂಪೂರ್ಣವಾಗಿ ಬರೆದಿದ್ದಾರೆ. ಆದ್ದರಿಂದ, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ ಕೂಡಲೇ ಹೊಸದಾಗಿ ಸಮರ್ಥ ಅಧಿಕಾರಿಗಳನ್ನೊಳಗೊಂಡ SIT ರಚನೆ ಮಾಡಿ, ಸೌಜನ್ಯ ಆತ್ಮಕ್ಕೆ ಮತ್ತು ಆಕೆಯ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು. ಕನಿಷ್ಠ ಇಷ್ಟೆಲ್ಲಾ ಬೆಳವಣಿಗೆಗಳ ಆದ ಮೇಲಾದರೂ ನಮಗೆ ಯಾವುದೇ ವಿದೇಶಿ ಫಂಡ್ (ಫಾರಿನ್ ಫಂಡ್) ಬಂದಿಲ್ಲ ಎನ್ನುವ ಸತ್ಯ ವಿರೋಧಿಗಳಿಗೆ ತಿಳಿಯುವಂತಾಗಿದೆ. ಸೌಜನ್ಯ ಪ್ರಕರಣ ಮುಗಿದ ಅಧ್ಯಾಯ ಎಂದು ಹೇಳಿ ಮುಚ್ಚಿಹಾಕಲು ಯತ್ನಿಸಿದವರಿಗೆ ಈಗ ಪ್ರಕರಣ ಮತ್ತೆ ಜೀವ ಪಡೆದುಕೊಂಡಿರುವುದು ನಡುಕ ಹುಟ್ಟಿಸಿದೆ. ಸರ್ಕಾರ ಇನ್ನಾದರೂ ವಿಳಂಬ ಮಾಡದೆ ಈ ಹೋರಾಟಕ್ಕೆ ತಾರ್ಕಿಕ ಅಂತ್ಯ ಹಾಡಬೇಕು," ಎಂದು ಮಟ್ಟಣ್ಣವರ್ ಸರ್ಕಾರಕ್ಕೆ ಬಲವಾಗಿ ಮನವಿ ಮಾಡಿದರು.


