ಸಾವು ಹೇಗೆಲ್ಲ ಬರುತ್ತಪ್ಪಾ! ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೆರಾಂಜೆಯಲ್ಲಿ ಆಘಾತಕಾರಿ ಘಟನೆ ನಡೆದುಹೋಗಿದೆ. ತಾಯಿಯ ಕಂಕುಳಲ್ಲಿದ್ದ ಒಂದೂವರೆ ವರ್ಷದ ಮಗುವಿನ ತಲೆ ಮೇಲೆ ತೆಂಗಿನಕಾಯಿ ಬಿದ್ದು ದಾರುಣ ಸಾವು. ಮನೆ ಮುಂದೆ ತೆಂಗಿನಮರ ಇರಬಾರದು, ತೆಂಗಿನಮರದ ಕೆಳಗೆ ಯಾಕೆ ಓಡಾಡಬಾರದು ಅನ್ನೋದು ಇದಕ್ಕೆ!
ಉಡುಪೀಲಿ ದುರ್ಘಟನೆ । 1.5 ವರ್ಷದ ಮಗು ಸಾವು
ಬ್ರಹ್ಮಾವರ (ಉಡುಪಿ): ತಾಯಿಯ ಕಂಕುಳಲ್ಲಿದ್ದ ಒಂದೂವರೇ ವರ್ಷದ ಬಾಲಕನ ತಲೆ ಮೇಲೆ ತೆಂಗಿನಕಾಯಿ ಬಿದ್ದು ಮೃತಪಟ್ಟ ದಾರುಣ ಘಟನೆ ಉಡುಪಿ ಜಿಲ್ಲೆಯ ಬ್ಮಹ್ಮಾವರ ತಾಲೂಕಿನ ಹೇರಂಜೆ ಗ್ರಾಮದಲ್ಲಿ ನಡೆದಿದೆ.
ತಾಯಿಯ ಕಂಕುಳಲ್ಲಿದ್ದಾಗಲೇ ಮಗು ಮೃತ್ಯು!
ದಕ್ಷ್ ಪೂಜಾರಿ(Daksh poojary) (1.5) ಮೃತ ಬಾಲಕ. ಈತ ಹೆರಂಜೆಯ ಪ್ರಶಾಂತ್ ಪೂಜಾರಿ ಹಾಗೂ ಸುಚಿತ್ರ ಪೂಜಾರಿ ದಂಪತಿಯ ಪುತ್ರ, ಮಂಗಳವಾರ ಬೆಳಗ್ಗೆ ಸುಮಾರು 8.15 ಗಂಟೆಗೆ ಸುಚಿತ್ರಾ ಅವರು ಮಗಳು ದಿಯಾಳನ್ನು ಶಾಲಾ ಬಸ್ಸಿಗೆ ಕಳುಹಿಸಲು, ಮನೆ ಸಮೀಪದ ತೋಟದ ಪಕ್ಕದ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತಿದ್ದರು. ಈ ವೇಳೆ ಮಗುವನ್ನು ಸೊಂಟದ ಮೇಲೆ ಕುಳ್ಳಿರಿಸಿಕೊಂಡಿದ್ದರು. ಕಾಕತಾಳೀಯವಾಗಿ ಇದೇ ವೇಳೆ ತೋಟದಲ್ಲಿದ್ದ ಸುಮಾರು 40 ಅಡಿ ಎತ್ತರದ ತೆಂಗಿನ ಮರದಿಂದ ಕಾಯಿ ದಕ್ಷ್‌ನ ತಲೆಗೆ ಬಿದ್ದಿದೆ.
ಚಿಕಿತ್ಸೆ ಫಲಿಸದೇ ಸಾವು
ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ತಕ್ಷಣ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ, ಶಸ್ತ್ರಚಿಕಿತ್ಸೆ ನಡೆಸಲಾಯಿತಾದರೂ ಮೆದುಳಿಗೆ ತೀವ್ರ ಪೆಟ್ಟಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.


