ಕೇರಳದ ವೈನಾಡು ಮತ್ತು ಕೊಡಗಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕಬಿನಿ ಮತ್ತು ಹಾರಂಗಿ ಜಲಾಶಯಗಳು ಭರ್ತಿಯಾಗುವ ಹಂತ ತಲುಪಿವೆ. ಇದರಿಂದ ಕಾವೇರಿ ಜಲಾನಯನ ಪ್ರದೇಶದ ರೈತರಲ್ಲಿ ಸಂತಸ ಮೂಡಿದೆ.

ಮೈಸೂರು/ಮಡಿಕೇರಿ (ಆ.1): ತಮಿಳುನಾಡಿಗೆ ನೀರು ಹರಿಸುವ ವಿಚಾರದಲ್ಲಿ ಎದ್ದಿದ್ದ ‘ಕಾವೇರಿ ಕಿಚ್ಚು’ ತಣ್ಣಗಾಗುವ ಲಕ್ಷಣಗಳು ಗೋಚರಿಸುತ್ತಿವೆ. ನೆರೆಯ ಕೇರಳದ ವೈನಾಡು ಹಾಗೂ ಕೊಡಗಿನ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ಕಬಿನಿ ಹಾಗೂ ಹಾರಂಗಿ ಜಲಾಶಯಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಜಲಾಶಯಗಳು ಭರ್ತಿಯಾಗುವ ಹಂತ ತಲುಪಿವೆ. ಕೇರಳದ ವೈನಾಡಿನಲ್ಲಿ ಮಳೆರಾಯ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಹರಿಯುವ ಒಳಹರಿವಿನಲ್ಲಿ ಗಣನೀಯ ಏರಿಕೆಯಾಗಿದೆ. ಪ್ರಸ್ತುತ ಅಣೆಕಟ್ಟೆಗೆ ಭಾರಿ ಪ್ರಮಾಣದ ನೀರು ತಲುಪುತ್ತಿದ್ದು, ನದಿ ನೀರು ಹಂಚಿಕೆ ಸಂಘರ್ಷದ ನಡುವೆ ಕಾವೇರಿ ಜಲಾನಯನ ಪ್ರದೇಶದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಕಬಿನಿಯಿಂದ ಕೆಳಭಾಗಕ್ಕೆ ಹರಿಯಲಿದೆ 10 ಸಾವಿರ ಕ್ಯೂಸೆಕ್ ನೀರು!

19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಕಬಿನಿ ಜಲಾಶಯದಲ್ಲಿ ಪ್ರಸ್ತುತ 18 ಟಿಎಂಸಿ ನೀರು ಭರ್ತಿಯಾಗಿದೆ. ಜಲಾಶಯಕ್ಕೆ ಪ್ರಸ್ತುತ 15,500 ಕ್ಯೂಸೆಕ್ ಒಳಹರಿವಿದ್ದು, ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಬಿನಿ ಅಣೆಕಟ್ಟೆಯಿಂದ ನದಿಗೆ 8,000 ದಿಂದ 10,000 ಕ್ಯೂಸೆಕ್ ನೀರನ್ನು ಹೊರಬಿಡಲು ನಿರ್ಧರಿಸಿದ್ದಾರೆ.

ಇತ್ತ ಕೊಡಗು ಜಿಲ್ಲೆಯ ಹಾರಂಗಿ ಜಲಾಶಯಕ್ಕೂ ಹರಿಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಹಾರಂಗಿ ಅಣೆಕಟ್ಟೆಯ ಗರಿಷ್ಠ ಮಟ್ಟ 2,859 ಅಡಿ (8.5 ಟಿಎಂಸಿ) ಇದ್ದು, ಪ್ರಸ್ತುತ ನೀರಿನ ಮಟ್ಟ 2,857.83 ಅಡಿ (8.104 ಟಿಎಂಸಿ) ಗೆ ತಲುಪಿದೆ. ಜಲಾಶಯಕ್ಕೆ 9,896 ಕ್ಯೂಸೆಕ್ ಒಳಹರಿವಿದ್ದು, ಭದ್ರತೆಯ ದೃಷ್ಟಿಯಿಂದ 10,058 ಕ್ಯೂಸೆಕ್ ನೀರನ್ನು ನದಿಗೆ ಹೊರಬಿಡಲಾಗುತ್ತಿದೆ.

ಪ್ರವಾಹ ಮುನ್ನೆಚ್ಚರಿಕೆ: ನದಿ ಪಾತ್ರದ ಜನರಿಗೆ ಅಲರ್ಟ್

ಕಬಿನಿ ಮತ್ತು ಹಾರಂಗಿ ಎರಡೂ ಜಲಾಶಯಗಳಿಂದ ಯಾವುದೇ ಕ್ಷಣದಲ್ಲಾದರೂ ಹೊರಹರಿವಿನ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದ ಅಧಿಕಾರಿಗಳು ನದಿ ಪಾತ್ರದ ಜನರಿಗೆ ಪ್ರವಾಹ ಮುನ್ನೆಚ್ಚರಿಕೆ ಪ್ರಕಟಿಸಿದ್ದು, ನದಿ ದಂಡೆಯ ಸಾರ್ವಜನಿಕರು ಸುರಕ್ಷಿತ ಸ್ಥಳಗಳಿಗೆ ತೆರಳಲು ಮತ್ತು ಎಚ್ಚರಿಕೆಯಿಂದ ಇರಲು ಸೂಚಿಸಿದ್ದಾರೆ.