ಕೋಡಿಬೆಂಗ್ರೆ ದೋಣಿ ದುರಂತದಲ್ಲಿ ಮೂವರು ಪ್ರವಾಸಿಗರು ಮೃತಪಟ್ಟ ಹಿನ್ನೆಲೆಯಲ್ಲಿ, ಉಡುಪಿ ಜಿಲ್ಲಾಡಳಿತವು ಪ್ರವಾಸಿ ಬೋಟುಗಳಿಗೆ ಕಠಿಣ ಸುರಕ್ಷತಾ ನಿಯಮಗಳನ್ನು ಜಾರಿಗೊಳಿಸಿದೆ. 45 ದಿನಗಳೊಳಗೆ ನೋಂದಣಿ, ಕಡ್ಡಾಯ ಲೈಫ್ ಜಾಕೆಟ್ ಧಾರಣೆ ಸೇರಿದಂತೆ ಹಲವು ಸೂಚನೆಗಳನ್ನು ಜಿಲ್ಲಾಧಿಕಾರಿ ನೀಡಿದ್ದಾರೆ.
ಉಡುಪಿ: ಜಿಲ್ಲೆಯ ಕಡಲತೀರಗಳಲ್ಲಿ ಪ್ರವಾಸಿಗರನ್ನು ಸಾಗಿಸುವ ಎಲ್ಲಾ ಪ್ರವಾಸಿ ಬೋಟುಗಳು 45 ದಿನಗಳೊಳಗೆ ಕಡ್ಡಾಯವಾಗಿ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡು, ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅನುಮತಿ ಪಡೆಯಬೇಕು. ಅಗತ್ಯ ಪರವಾನಿಗೆ ಇಲ್ಲದೆ ಯಾವುದೇ ಪ್ರವಾಸಿ ಬೋಟ್ ಕಾರ್ಯಾಚರಣೆ ನಡೆಸಲು ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.
ಕೋಡಿಬೆಂಗ್ರೆಯಲ್ಲಿ ಸೋಮವಾರ ನಡೆದ ದೋಣಿ ದುರಂತದಲ್ಲಿ ಮೂವರು ಪ್ರವಾಸಿಗರು ಪ್ರಾಣ ಕಳೆದುಕೊಂಡ ಹಿನ್ನೆಲೆ, ಮಂಗಳವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಡಲತೀರ ಪ್ರವಾಸೋದ್ಯಮದ ಸುರಕ್ಷತೆ ಕುರಿತ ಮಹತ್ವದ ಸಭೆಗೆ ಅಧ್ಯಕ್ಷತೆ ವಹಿಸಿ ಅವರು ಈ ಸೂಚನೆ ನೀಡಿದರು.
ಎಲ್ಲ ಇಲಾಖೆಗಳ ಅನುಮತಿ ಕಡ್ಡಾಯ
ಉಡುಪಿ ಜಿಲ್ಲೆ ವಿಶೇಷವಾಗಿ ಕಡಲತೀರಗಳ ನೈಸರ್ಗಿಕ ಸೌಂದರ್ಯವನ್ನು ಸವಿಯಲು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಸಮುದ್ರ ವಿಹಾರಕ್ಕಾಗಿ ಪ್ರವಾಸಿಗರು ಪ್ರವಾಸಿ ಬೋಟುಗಳ ಮೇಲೆ ಅವಲಂಬಿತರಾಗಿದ್ದಾರೆ. ಈ ಹಿನ್ನೆಲೆ, ಜಿಲ್ಲೆಯಲ್ಲಿರುವ ಎಲ್ಲಾ ಪ್ರವಾಸಿ ಬೋಟುಗಳು ಬಂದರು ಇಲಾಖೆ, ಪೊಲೀಸ್ ಇಲಾಖೆ, ಕರಾವಳಿ ಕಾವಲು ಪಡೆ, ಸ್ಥಳೀಯ ಸಂಸ್ಥೆಗಳು ಹಾಗೂ ಪ್ರವಾಸೋದ್ಯಮ ಇಲಾಖೆಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಇದಲ್ಲದೆ, ಬೋಟು ಮಾಲೀಕರು ಪ್ರತಿವರ್ಷ ತಮ್ಮ ಪರವಾನಿಗೆಗಳನ್ನು ನವೀಕರಿಸಿಕೊಳ್ಳಬೇಕು. ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಕಾರ್ಯಾಚರಣೆ ನಡೆಸುವ ಬೋಟುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಲೈಫ್ ಜಾಕೆಟ್ ಧಾರಣೆ ಕಡ್ಡಾಯ
ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸೂಚಿಸಿದ ಜಿಲ್ಲಾಧಿಕಾರಿ, ಪ್ರವಾಸಿ ಬೋಟುಗಳಲ್ಲಿ ಪ್ರತಿಯೊಬ್ಬ ಪ್ರವಾಸಿಗರೂ ಕಡ್ಡಾಯವಾಗಿ ಲೈಫ್ ಜಾಕೆಟ್ ಧರಿಸುವಂತೆ ನೋಡಿಕೊಳ್ಳುವುದು ಬೋಟು ಚಾಲಕರು ಮತ್ತು ಮಾಲೀಕರ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದರು. ಎಲ್ಲ ಪ್ರವಾಸಿಗರೂ ಲೈಫ್ ಜಾಕೆಟ್ ಧರಿಸಿದ ನಂತರವೇ ಬೋಟು ಸಮುದ್ರಕ್ಕೆ ತೆರಳಬೇಕು ಎಂಬ ನಿಯಮವನ್ನು ಕಡ್ಡಾಯಗೊಳಿಸಬೇಕು ಎಂದು ಹೇಳಿದರು.
ಈ ನಿಯಮ ಪಾಲನೆಗೆ ಸಹಕಾರಿಯಾಗುವಂತೆ, “ಎಲ್ಲರೂ ಲೈಫ್ ಜಾಕೆಟ್ ಧರಿಸಿದ ಬಳಿಕವೇ ಬೋಟು ಮುಂದುವರಿಯಲಿದೆ” ಎಂಬ ಪ್ರೀ-ರೆಕಾರ್ಡೆಡ್ ಆಡಿಯೋ ಘೋಷಣೆಯನ್ನು ಎಲ್ಲಾ ಪ್ರವಾಸಿ ಬೋಟುಗಳಲ್ಲಿ ಪ್ರಸಾರ ಮಾಡಬೇಕು ಎಂದು ಸೂಚಿಸಿದರು.
ಬೋಟು ಮಾಲೀಕರು–ಚಾಲಕರ ಸಭೆ
ಶೀಘ್ರದಲ್ಲೇ ಜಿಲ್ಲೆಯ ಎಲ್ಲಾ ಪ್ರವಾಸಿ ಬೋಟು ಮಾಲೀಕರು ಹಾಗೂ ಚಾಲಕರ ಸಭೆಯನ್ನು ಆಯೋಜಿಸಿ, ಪರವಾನಿಗೆ ಪಡೆಯುವ ಪ್ರಕ್ರಿಯೆ, ಸುರಕ್ಷತಾ ಕ್ರಮಗಳ ಪಾಲನೆ, ವಿಮೆ ಸೌಲಭ್ಯಗಳು ಹಾಗೂ ತುರ್ತು ಪರಿಸ್ಥಿತಿಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜೀವ ರಕ್ಷಕ ಸಿಬ್ಬಂದಿಯೂ ಸಮುದ್ರದಲ್ಲಿ ಜೀವ ರಕ್ಷಣೆ, ಪ್ರಥಮ ಚಿಕಿತ್ಸೆ ಹಾಗೂ ತುರ್ತು ಸಂದರ್ಭಗಳ ನಿರ್ವಹಣೆಯ ಕುರಿತು ಸಮರ್ಪಕ ತರಬೇತಿ ಹೊಂದಿರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂಧ್ಯಾ ಎನ್.ಎಂ. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಕೋಡಿಬೆಂಗ್ರೆ ದೋಣಿ ದುರಂತ: ಮೃತರ ಸಂಖ್ಯೆ ಮೂರಕ್ಕೆ ಏರಿಕೆ
ಇತ್ತ, ಕೋಡಿಬೆಂಗ್ರೆ ಬೀಚ್‌ನಲ್ಲಿ ಸೋಮವಾರ ಸಂಭವಿಸಿದ ಪ್ರವಾಸಿ ದೋಣಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿದೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಮೈಸೂರು ಜಿಲ್ಲೆಯ ಉದಯಗಿರಿ ನಿವಾಸಿ ದಿಶಾ (26) ಅವರು ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೈಸೂರಿನ ಗೋಲ್ಡ್ ಕ್ರೆಸ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ 28 ಮಂದಿ ಉದ್ಯೋಗಿಗಳು ಪ್ರವಾಸಕ್ಕಾಗಿ ಉಡುಪಿ ಜಿಲ್ಲೆಗೆ ಆಗಮಿಸಿದ್ದರು. ಅವರಲ್ಲಿ 14 ಮಂದಿ ಖಾಸಗಿ ಪ್ರವಾಸಿ ಬೋಟೊಂದರಲ್ಲಿ ಸೈಂಟ್ ಮೇರಿಸ್ ದ್ವೀಪಕ್ಕೆ ತೆರಳುತ್ತಿದ್ದ ವೇಳೆ ಬೋಟು ಮಗುಚಿ ಅಪಘಾತ ಸಂಭವಿಸಿತ್ತು. ಪರಿಣಾಮವಾಗಿ ಎಲ್ಲರೂ ಸಮುದ್ರಕ್ಕೆ ಬಿದ್ದಿದ್ದರು.
ಸ್ಥಳೀಯರು ತಕ್ಷಣ ಧಾವಿಸಿ ಎಲ್ಲರನ್ನು ರಕ್ಷಿಸಿ ದಡಕ್ಕೆ ತಂದಿದ್ದರು. ಆದರೆ, ಉಪ್ಪು ನೀರು ಕುಡಿದು ಉಸಿರುಗಟ್ಟಿ ತೀವ್ರ ಅಸ್ವಸ್ಥಗೊಂಡಿದ್ದ ಚಾಮರಾಜನಗರ ಜಿಲ್ಲೆಯ ಹರವೆ ಗ್ರಾಮದ ಶಂಕರಪ್ಪ (27) ಹಾಗೂ ಮೂಗೂರು ನಿವಾಸಿ ಸಿಂಧು (25) ಅವರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದರು.
ಮಂಗಳವಾರ ಸಂಜೆ ದಿಶಾ ಅವರ ಸಾವಿನಿಂದ ಮೃತರ ಸಂಖ್ಯೆ ಮೂರಕ್ಕೆ ಏರಿದ್ದು, ಇನ್ನೊಬ್ಬ ಅಸ್ವಸ್ಥರಾದ ಧರ್ಮರಾಜ (26) ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು ಚಿಕಿತ್ಸೆ ಸ್ಪಂದಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ದುರಂತದ ಹಿನ್ನೆಲೆ, ಜಿಲ್ಲಾಡಳಿತವು ಸಮುದ್ರ ಪ್ರವಾಸೋದ್ಯಮದ ಸುರಕ್ಷತೆಯ ಕುರಿತು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರುವುದಾಗಿ ಸ್ಪಷ್ಟಪಡಿಸಿದೆ.


