ಬೆಂಗಳೂರಿನ 'ಮಿ. ಆಂಧ್ರ ಮೀಲ್ಸ್' ಹೋಟೆಲ್, ಗ್ಯಾಸ್ ಕೊರತೆಯ ನೆಪವೊಡ್ಡಿ ಗ್ರಾಹಕರ ಬಿಲ್‌ನಲ್ಲಿ 'ಗ್ಯಾಸ್ ಶುಲ್ಕ' ವಿಧಿಸುತ್ತಿದೆ. ಈ ಅನ್ಯಾಯವನ್ನು ಗ್ರಾಹಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದು, ಈ ಸುಲಿಗೆ ಪಿಜಿಗಳಿಗೂ ವ್ಯಾಪಿಸಿದೆ.

ಬೆಂಗಳೂರು (ಮಾ.11): ಮಧ್ಯಪ್ರಾಚ್ಯ ಯುದ್ಧ ಹಾಗೂ ದೇಶದಲ್ಲಿ ಸಿಲಿಂಡರ್‌ ಕೊರತೆಯ ವಿಚಾರವನ್ನೇ ಇರಿಸಿಕೊಂಡು, ಬೆಂಗಳೂರಿನಲ್ಲಿ ಹೋಟೆಲ್ ಮಾಲೀಕರು ಅಕ್ಷರಶಃ ಹಗಲು ದರೋಡೆಗೆ ಇಳಿದಂತಿದೆ. ಪಶ್ಚಿಮ ಏಷ್ಯಾದ ಯುದ್ಧ ಹಾಗೂ ಎಲ್‌ಪಿಜಿ ಅಭಾವದ ಸುದ್ದಿಯನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಹೋಟೆಲ್‌ಗಳು, ಗ್ರಾಹಕರಿಂದ 'ಗ್ಯಾಸ್ ಶುಲ್ಕ'ದ ಹೆಸರಲ್ಲಿ ಹಗಲು ದರೋಡೆ ಮಾಡುತ್ತಿರುವ ಘಟನೆ ವರದಿಯಾಗಿವೆ. ಗ್ರಾಹಕರಿಗೆ ನೀಡುವ ಬಿಲ್‌ನಲ್ಲಿ ಗ್ಯಾಸ್‌ ಸಪ್ಲೈ ಚಾರ್ಜ್‌ ಕೂಡ ಹಾಕುತ್ತಿರುವುದು ಬೆಳಕಿಗೆ ಬಂದಿದೆ.

ನಗರದ 'ಮಿ. ಆಂಧ್ರ ಮೀಲ್ಸ್' ಹೋಟೆಲ್‌ನಲ್ಲಿ ಗ್ರಾಹಕರಿಂದ ಎಗ್ಗಿಲ್ಲದೆ ಹಣ ವಸೂಲಿ ಮಾಡಲಾಗುತ್ತಿದೆ. ನರೇಶ್ ಕುಮಾರ್ ಎಂಬ ಗ್ರಾಹಕರು ಇಲ್ಲಿ ಪ್ಲೇನ್ ದೋಸೆ ಮತ್ತು ಹಾಫ್ ಚಿಕನ್ ಕರಿ ಆರ್ಡರ್ ಮಾಡಿದ್ದರು. ಊಟ ಮುಗಿಸಿ ಬಿಲ್ ನೋಡಿದ ಅವರಿಗೆ ಶಾಕ್ ಕಾದಿತ್ತು. ಆಹಾರದ ಬೆಲೆಯ ಜೊತೆಗೆ ಹೆಚ್ಚುವರಿಯಾಗಿ 30 ರೂಪಾಯಿ 'ಗ್ಯಾಸ್ ಶುಲ್ಕ' (Gas Charge) ವಿಧಿಸಲಾಗಿತ್ತು! ಅಂದರೆ, ನಾವು ತಿನ್ನುವ ಪ್ರತಿ ತಟ್ಟೆ ಊಟದ ಮೇಲೂ ಹೋಟೆಲ್ ಮಾಲೀಕರು ತಮ್ಮ ಇಂಧನ ವೆಚ್ಚವನ್ನು ಗ್ರಾಹಕರ ತಲೆಗೆ ಕಟ್ಟುತ್ತಿದ್ದಾರೆ.

ಪಿಜಿಗಳಲ್ಲೂ ತಟ್ಟಿದ ಬಿಸಿ

ಈ ದರೋಡೆ ಕೇವಲ ಹೋಟೆಲ್‌ಗಳಿಗೆ ಸೀಮಿತವಾಗಿಲ್ಲ. ಇತ್ತ ನಗರದ ಪಿಜಿಗಳಲ್ಲೂ (PG) ಎಲ್‌ಪಿಜಿ ಅಭಾವದ ನೆಪ ಹೇಳಿ ಮೆನು ಕಡಿತಗೊಳಿಸಲಾಗಿದೆ. ವೆರೈಟಿ ತಿನಿಸುಗಳು ಸಿಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಅನಿವಾರ್ಯವಾಗಿ ಹೊರಗಿನ ಹೋಟೆಲ್‌ಗಳಿಗೆ ಹೋದರೆ, ಅಲ್ಲಿ ಗ್ಯಾಸ್ ಹೆಸರಲ್ಲಿ ಹೆಚ್ಚುವರಿ ಹಣ ಪೀಕಲಾಗುತ್ತಿದೆ.

ಬೆಂಗಳೂರು ಪೊಲೀಸರಿಗೆ ದೂರು

ಈ ಅನ್ಯಾಯವನ್ನು ಸಹಿಸದ ಗ್ರಾಹಕ ನರೇಶ್ ಕುಮಾರ್, ತಮ್ಮ ಬಿಲ್ ಪ್ರತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ಊಟಕ್ಕೆ ಬೆಲೆ ತೆರುವುದರ ಜೊತೆಗೆ ಗ್ಯಾಸ್‌ಗೂ ನಾವೇ ಹಣ ಕೊಡಬೇಕೇ?" ಎಂದು ಪ್ರಶ್ನಿಸಿರುವ ಅವರು, ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡುವ ಮೂಲಕ ಹೋಟೆಲ್ ಮಾಲೀಕರ ಲೂಟಿಗೆ ಬ್ರೇಕ್ ಹಾಕುವಂತೆ ಮನವಿ ಮಾಡಿದ್ದಾರೆ. ಮಾರುಕಟ್ಟೆಯಲ್ಲಿನ ಸಣ್ಣ ಕೊರತೆಯನ್ನು ದೊಡ್ಡದಾಗಿ ಬಿಂಬಿಸಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿರುವ ಹೋಟೆಲ್ ಮಾಲೀಕರ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Scroll to load tweet…