ಭಟ್ಕಳದ ತೆಂಗಿನಗುಂಡಿ ಬಳಿ ದೋಣಿ ಮಗುಚಿ ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದ ಘಟನೆಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಉಳಿದವರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಜುಲೈ 30 ರಂದು ನಡೆದ ಈ ದುರಂತದಲ್ಲಿ ಇಬ್ಬರನ್ನು ರಕ್ಷಿಸಲಾಗಿತ್ತು.

ಭಟ್ಕಳ (ಆ.2): ಮೀನುಗಾರಿಕೆಗೆ ತೆರಳಿದ್ದ ನಾಲ್ಕು ಮಂದಿ ಮೀನುಗಾರರು ನಾಪತ್ತೆ ಪ್ರಕರಣದಲ್ಲಿ ಶನಿವಾರ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಇನ್ನೊಬ್ಬರ ಮೃತದೇಹಕ್ಕೆ ಹುಡುಕಾಟ ನಡೆಯುತ್ತಿದೆ. ಭಟ್ಕಳದ ಅಳ್ವೇಕೋಡಿ ಬಳಿ ಸಂಭವಿಸಿದ ದೋಣಿ ದುರಂತದಲ್ಲಿ ಕೇವಲ ಇಬ್ಬರನ್ನು ಮಾತ್ರವೇ ರಕ್ಷಣೆ ಮಾಡಲಾಗಿದೆ. ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಂಡಿ ಬಳಿ ಅರಬ್ಬೀ ಸಮುದ್ರದಲ್ಲಿ ಘಟನೆ ನಡೆದಿತ್ತು.

ಜುಲೈ 30 ರಂದು ಘಟನೆ ನಡೆದ ದಿನವೇ 40 ವರ್ಷದ ರಾಮಕೃಷ್ಣ ಮಂಜು ಮೊಗೇರ ಅವರ ಮೃತದೇಹ ಪತ್ತೆಯಾಗಿತ್ತು. ಉಳಿದ ಮೂವರಿಗಾಗಿ ಶೋಧ ಕಾರ್ಯ ನಡೆದಿತ್ತು. ಶನಿವಾರ ಇಬ್ಬರ ಮೃತದೇಹ ಗಂಗೊಳ್ಳಿ ಸಮೀಪದ ಸಮುದ್ರದಲ್ಲಿ ಪತ್ತೆಯಾಗಿದೆ. ನಿಶ್ಚಿತ್‌ ಮೊಗೇರ್‌ ಹಾಗೂ ಗಣೇಶ್ ಮೊಗೇರ್‌ ಅವರ ಮೃತದೇಹವನ್ನು ಪತ್ತೆ ಮಾಡಲಾಗಿದೆ. ಅಳ್ವೆಕೋಡಿ ಅಳಿವೆಯಲ್ಲಿ ದೋಣಿ ಮಗುಚಿ ನಾಲ್ವರು ನಾಪತ್ತೆಯಾಗಿದ್ದರು. ಮುಳುಗು ತಜ್ಞ ಈಶ್ವರ ಮಲ್ಪೆ ತಂಡದಿಂದಲೂ ಸಮುದ್ರದಲ್ಲಿ ಶೋಧ ಕಾರ್ಯ ನಡೆಯುತ್ತಿದೆ.

ಬುಧವಾರ ಭಟ್ಕಳದ ತೆಂಗಿನಗುಂಡಿಯಿಂದ ಮೀನುಗಾರಿಕೆಗೆ ತೆರಳಿದ್ದ ವೇಳೆ ದುರಂತ ನಡೆದಿತ್ತು. ನಾಪತ್ತೆಯಾಗಿದ್ದ ನಾಲ್ವರು ಮೀನುಗಾರರ ಪೈಕಿ ಓರ್ವನ ಮೃತದೇಹ ಅದೇ ದಿನ ಪತ್ತೆಯಾಗಿತ್ತು. ಅಲೆಗಳ ಹೊಡೆತಕ್ಕೆ ಬೋಟ್ ಮಗುಚಿ ಆರು ಮಂದಿ ಮೀನುಗಾರರು ನೀರು ಪಾಲಾಗಿದ್ದರು.

ಮಹಾಸತಿ ಗಿಲ್‌ನೆಟ್ ದೋಣಿಯಲ್ಲಿ ಮೀನು ಹಿಡಿಯಲು ತೆರಳಿದ್ದ 6 ಮಂದಿಯ ಪೈಕಿ ನಾಲ್ವರು ನಾಪತ್ತೆಯಾಗಿದ್ದರು. ಜಾಲಿಯ ಮನೋಹರ ಈರಯ್ಯ ಮೊಗೇರ (31) ಹಾಗೂ ರಾಮ ಮಾಸ್ತಿ ಖಾರ್ವಿ(43) ಅವರನ್ನು ರಕ್ಷಣೆ ಮಾಡಲಾಗಿತ್ತು.

ಆದರೆ. ರಾಮಕೃಷ್ಣ ಮಂಜು ಮೊಗೇರ (40), ಜಾಲಿಕೋಡಿ ಸತೀಶ್ ತಿಮ್ಮಪ್ಪ ಮೊಗೇರ (26), ಅಳ್ವೆಕೋಡಿ ಗಣೇಶ ಮಂಜುನಾಥ ಮೊಗೇರ (27) ಹಾಗೂ ಅಳ್ವೆಕೋಡಿ ನಿಶ್ಚಿತ್ ಮೊಗೇರ (30) ನಾಪತ್ತೆಯಾಗಿದ್ದರು.

ನಾಪತ್ತೆಯಾಗಿದ್ದ ನಾಲ್ವರ ಪೈಕಿ ರಾಮಕೃಷ್ಣ ಮಂಜು ಮೊಗೇರ ಮೃತದೇಹ ಮೊದಲಿಗೆ ಸಿಕ್ಕಿತ್ತು. ಮೃತದೇಹವನ್ನು ಆಂಬುಲೆನ್ಸ್ ಮೂಲಕ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಕರಾವಳಿ ಭದ್ರತಾ ಪಡೆ ಹಾಗೂ ಸ್ಥಳೀಯ ಮೀನುಗಾರರಿಂದ ನಾಪತ್ತೆಯಾದ ಉಳಿದ ಮೂವರಿಗಾಗಿ ಶೋಧ. ಯುವ ಮೀನುಗಾರರ ನಾಪತ್ತೆ ಹಾಗೂ ಓರ್ವನ ಸಾವಿನಿಂದ ಭಟ್ಕಳದಾದ್ಯಂತ ಆವರಿಸಿದ ಶೋಕ ಆವರಿಸಿದೆ.