ಮಡಿಕೇರಿ(ಫೆ.16): ಜಿಲ್ಲೆಯ ಹಲವು ಪ್ರವಾಸಿ ತಾಣಗಳು ಅಭಿವೃದ್ಧಿ ಕಾಣುತ್ತಿದ್ದು, ಕುಶಾಲನಗರ ಸಮೀಪದ ಪ್ರವಾಸಿ ತಾಣ ಕಾವೇರಿ ನಿಸರ್ಗಧಾಮದಲ್ಲಿ ಅರಣ್ಯ ಇಲಾಖೆಯಿಂದ ಎರಡು ಹೊಸ ಕಾಟೇಜ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದೀಗ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು, ಸದ್ಯದಲ್ಲೇ ಪ್ರವಾಸಿಗರಿಗೆ ಮುಕ್ತವಾಗಲಿದೆ.

ಅರಣ್ಯ ಇಲಾಖೆಯಿಂದ ಎರಡು ಹೊಸ ಕಾಟೇಜ್‌ ಕಾಮಗಾರಿ ನಿಸರ್ಗಧಾಮದ ಸುಂದರ ಪರಿಸರದಲ್ಲಿ ನಡೆಯುತ್ತಿದ್ದು, ಒಂದು ಕಾಟೇಜ್‌ಗೆ 15 ಲಕ್ಷ ರು. ವೆಚ್ಚ ಮಾಡಲಾಗುತ್ತಿದೆ. ನದಿ ದಡದಲ್ಲಿ ಪಿಲ್ಲರ್‌ ಬಳಸಿ ಕಾಟೇಜ್‌ ನಿರ್ಮಾಣ ಮಾಡಲಾಗಿದ್ದು, ಮರ ಹಾಗೂ ಗಾಜನ್ನು ಬಳಸಲಾಗಿದೆ. ಪ್ರವಾಸಿಗರು ಕಾಟೇಜ್‌ನಲ್ಲಿ ಅರಣ್ಯ ಇಲಾಖೆ ನಿಗದಿ ಮಾಡುವ ಶುಲ್ಕ ನೀಡಿ ಮುಂದಿನ ದಿನಗಳಲ್ಲಿ ತಂಗಬಹುದಾಗಿದೆ.

ಮಡಿಕೇರಿಯಲ್ಲಿ ನಡೆದ ಫ್ಲವರ್ ಶೋ ಸಂಭ್ರಮ ಹೀಗಿತ್ತು..!

ಕಳೆದ ಆಗಸ್ಟ್‌ ತಿಂಗಳಲ್ಲಿ ಮಳೆ ಹೆಚ್ಚಾಗಿ ಸುರಿದ ಹಿನ್ನೆಲೆಯಲ್ಲಿ ನಿಸರ್ಗಧಾಮದಲ್ಲೂ ಅಪಾರ ಪ್ರಮಾಣದಲ್ಲಿ ಹಾನಿಯಾಗಿತ್ತು. ದುರಸ್ತಿಗೊಂಡಿದ್ದ ಕಾಟೇಜೊಂದನ್ನು 3 ಲಕ್ಷ ರುಪಾಯಿ ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ. ನಿಸರ್ಗಧಾಮದಲ್ಲಿ ನಿರ್ಮಿಸಲಾಗಿರುವ ಕೊಡವ, ಕೊಡವತಿಯರು ನೃತ್ಯ ಮಾಡುವ ಹಾಗೂ ಗ್ರಾಮೀಣ ಜನರ ಬದುಕಿನ ಚಿತ್ರಣ ಸಾರುವ ಕಲಾಕೃತಿಗೆ ಬಣ್ಣ ಬಳಿಯುವ ಮೂಲಕ ಮತ್ತಷ್ಟುಆಕರ್ಷಣೀಯವಾಗಿ ಮಾಡಲಾಗಿದೆ. ಇದಲ್ಲದೆ ಜಿಂಕೆ ವನವನ್ನು ಕೂಡ ದುರಸ್ತಿ ಮಾಡಲಾಗಿದೆ.

ನಿಸರ್ಗಧಾಮಕ್ಕೆ ಆಗಮಿಸುವ ಪ್ರವಾಸಿಗರು ಹಸಿರ ಪರಿಸರದಲ್ಲಿ ಕುಳಿತು ವಿಶ್ರಾಂತಿ ಪಡೆದುಕೊಳ್ಳಲು ಎರಡು ಪರಗೋಲಿನ ವ್ಯವಸ್ಥೆ ಮಾಡಲಾಗಿದ್ದು, ಒಂದೊಂದರಲ್ಲಿ ಪ್ರತ್ಯೇಕವಾಗಿ 60 ಮಂದಿ ಪ್ರವಾಸಿಗರು ಕುಳಿತುಕೊಳ್ಳಬಹುದಾಗಿದೆ. ಮಳೆಗಾಲದಲ್ಲೂ ಸುರಕ್ಷಿತವಾಗಿರಬಹುದಾಗಿದೆ. ಪ್ರವಾಸಿಗರು ನಡೆದಾಡುವ ಅಲ್ಲಲ್ಲಿ 20 ಗ್ರಾನೈಟ್‌ ಬೆಂಚ್‌ಗಳನ್ನು ಹಾಕಲಾಗಿದೆ. ಪ್ರವಾಸಿಗರು ದಾಹ ತೀರಿಸಿಕೊಳ್ಳಲು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಇದು ಅಂತಿಂಥಾ ಕುಲ್ಫೀ ಅಲ್ಲ, ಡೆಡ್ಲೀ ಕುಲ್ಫೀ!

ಉಳಿದಂತೆ ನಿಸರ್ಗಧಾಮದ ವಿವಿಧ ಕಡೆಗಳಲ್ಲಿ ಪ್ರವಾಸಿಗರು ತ್ಯಾಜ್ಯಗಳನ್ನು ಎಸೆಯದಂತೆ ಮರದ ಆಕೃತಿಯಲ್ಲಿ ಕಸದ ತೊಟ್ಟಿಗಳು, ಪ್ರವಾಸಿಗರಿಗೆ ಎಚ್ಚರಿಕೆಯ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.

ನಿಸರ್ಗಧಾಮದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಎದುರಿನಲ್ಲಿ ದೊಡ್ಡ ಪ್ರಮಾಣದ ವಾಣಿಜ್ಯ ಮಳಿಗೆಗಳೂ ಇದೆ. ಆದರೆ ನಿಸರ್ಗಧಾಮದ ಪ್ರಮುಖ ಆಕರ್ಷಣೆಯಾಗಿರುವ ಜಿಂಕೆವನದಲ್ಲಿ ಬೆರಳೆಣಿಕೆಯ ಜಿಂಕೆಗಳು ಮಾತ್ರ ಕಾಣಸಿಗುತ್ತಿದ್ದು, ಪ್ರವಾಸಿಗರಿಗೆ ನಿರಾಸೆಯಾಗಿದೆ. ಆದ್ದರಿಂದ ಹೆಚ್ಚಿನ ಜಿಂಕೆಗಳು ಹಾಗೂ ವಿವಿಧ ಬಗೆಯ ಪ್ರಾಣಿಗಳಿದ್ದರೆ ಪ್ರವಾಸಿಗರನ್ನು ಮತ್ತಷ್ಟುಆಕರ್ಷಿಸಬಹುದು.

BSNL ಕಚೇರಿಯಲ್ಲಿ ಒಬ್ಬರೇ ಸಿಬ್ಬಂದಿ, ಗ್ರಾಹಕರ ಪರದಾಟ

ಕಾವೇರಿ ನಿಸರ್ಗಧಾಮದಲ್ಲಿ ಇದೀಗ ಎರಡು ಹೊಸ ಕಾಟೇಜ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಈ ಹಿಂದೆ ಮಳೆಯಿಂದ ಹಾನಿಗೊಳಲಾಗಿದ್ದ ಒಂದು ಕಾಟೇಜ್‌ಗಳನ್ನು ನವೀಕರಣ ಮಾಡಲಾಗಿದೆ. ಇದಲ್ಲದೆ ಪ್ರವಾಸಿಗರು ಕುಳಿತಗೊಳ್ಳಲು ನಿಸರ್ಗಧಾಮದ ಒಳಭಾಗದ ಅಲ್ಲಲ್ಲಿ ಗ್ರಾನೈಟ್‌ ಚೇರ್‌, ಪರಗೋಲಿನ ವ್ಯವಸ್ಥೆ ಮಾಡಲಾಗಿದೆ ಎಂದು ದುಬಾರೆ ಆರ್‌ಎಫ್‌ಒ ಅನನ್ಯ ಕುಮಾರ್‌ ಹೇಳಿದ್ದಾರೆ.

-ವಿಘ್ನೇಶ್‌ ಎಂ. ಭೂತನಕಾಡು