ಇದು ಅಂತಿಂಥಾ ಕುಲ್ಫೀ ಅಲ್ಲ, ಡೆಡ್ಲೀ ಕುಲ್ಫೀ!
ಕುಲ್ಫಿ ತಿನ್ನುವವರು ಎಚ್ಚರ ವಹಿಸಬೇಕಾದ ಸ್ಟೋರಿ ಇದು. ಯಾಕಂದ್ರೆ ಇದು ಅಂತಿಂಥಾ ಕುಲ್ಫಿ ಅಲ್ಲ. ಬದಲಾಗಿ ಡೆಡ್ಲಿ ಕುಲ್ಫಿ. ಮರದ ಕಡ್ಡಿ ಹಾಕಿರುವ ಕುಲ್ಫಿಯನ್ನು ನಾವು ನೋಡಿದ್ದೇವೆ. ಆದರೆ ಅದೇ ಕುಲ್ಫಿಯಲ್ಲಿ ಕಡ್ಡಿಯ ಜೊತೆ ಬ್ಲೇಡ್ ಇದ್ದರೆ ಹೇಗಾಗಬೇಡ!
ಮಡಿಕೇರಿ(ಫೆ.15): ಕುಲ್ಫಿ ತಿನ್ನುವವರು ಎಚ್ಚರ ವಹಿಸಬೇಕಾದ ಸ್ಟೋರಿ ಇದು. ಯಾಕಂದ್ರೆ ಇದು ಅಂತಿಂಥಾ ಕುಲ್ಫಿ ಅಲ್ಲ. ಬದಲಾಗಿ ಡೆಡ್ಲಿ ಕುಲ್ಫಿ. ಮರದ ಕಡ್ಡಿ ಹಾಕಿರುವ ಕುಲ್ಫಿಯನ್ನು ನಾವು ನೋಡಿದ್ದೇವೆ. ಆದರೆ ಅದೇ ಕುಲ್ಫಿಯಲ್ಲಿ ಕಡ್ಡಿಯ ಜೊತೆ ಬ್ಲೇಡ್ ಇದ್ದರೆ ಹೇಗಾಗಬೇಡ!
"
ಹೌದು, ಹೀಗೊಂದು ಅಚ್ಚರಿಯ ಹಾಗೂ ಭಯಾನಕವಾದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಮಡಿಕೇರಿ ತಾಲೂಕಿನ ಆವಂದೂರು ಗ್ರಾಮದಲ್ಲಿ ಇತ್ತೀಚೆಗೆ ಕಾರ್ಯಕ್ರಮವೊಂದು ನಡೆದಿತ್ತು. ಅಲ್ಲಿ ನೂರಾರು ಮಂದಿ ಜನ ಸೇರಿದ್ದರು. ವಾಹನವೊಂದರಲ್ಲಿ ಕುಲ್ಫಿ ಮಾರಾಟ ಮಾಡಲಾಗುತ್ತಿತ್ತು. ಮಹಿಳೆಯೊಬ್ಬರು ತಮ್ಮ ಮಕ್ಕಳಿಗೂ ಸೇರಿದಂತೆ ಒಟ್ಟು ಮೂರು ಕುಲ್ಫಿಯನ್ನು ಕೊಂಡುಕೊಂಡಿದ್ದಾರೆ.
ಪ್ರೇಮಿಗಳ ದಿನದಂದೇ ಹಾರಂಗಿಗೆ ಹಾರಿದ ಪ್ರೇಮಿಗಳು...!
ಮನೆಗೆ ತೆರಳಿ ಎರಡು ಕುಲ್ಫಿಯನ್ನು ತಮ್ಮ ಮಕ್ಕಳಿಗೆ ನೀಡಿ ಇನ್ನೊಂದನ್ನು ತಾವು ತಿನ್ನುತ್ತಿದ್ದರು. ಬಾಯಿ ಚಪ್ಪರಿಸಿಕೊಂಡು ಕುಲ್ಫೀ ಸವಿಯುತ್ತಿದ್ದ ಮಹಿಳೆಗೆ ಇದ್ದಕ್ಕಿದ್ದಂತೆ ಬಾಯಿಯೊಳಗೆ ಯಾವುದೋ ಚೂಪಾದ ವಸ್ತುವೊಂದು ಗೀರಿದಂತಹ ಅನುಭವವಾಗಿದೆ. ಇದೇನಿದು ಇದು ಎಂದು ಅವರು ತಕ್ಷಣ ತೆಗೆದು ನೋಡಿದರೆ ಕುಲ್ಫಿಯಲ್ಲಿ ಪೂರ್ಣ ಬ್ಲೇಡ್ ಪತ್ತೆಯಾಯಿತು. ಬ್ಲೇಡ್ ಗಮನಿಸದೆ ಹಾಗೇ ತಿಂದಿದ್ದರೆ ಮಹಿಳೆಯ ನಾಲಗೆಯೇ ಕಟ್ ಆಗುವ ಸಂಭವವಿತ್ತು. ಬಳಿಕ ಅವರು ನೆರೆಮನೆಯವರಿಗೆ ವಿಷಯ ತಿಳಿಸಿದ್ದು, ಗ್ರಾಮಸ್ಥರು ಕುಲ್ಫೀ ಮಾರುತ್ತಿದ್ದ ವ್ಯಕ್ತಿಗಾಗಿ ಹುಡುಕಾಟ ನಡೆಸಿದರು. ಆದರೆ ಕುಲ್ಫೀ ಮಾರುತ್ತಿದ್ದಾತ ಅಷ್ಟರಲ್ಲಾಗಲೇ ಜಾಗ ಖಾಲಿ ಮಾಡಿಯಾಗಿತ್ತು. ಕುಲ್ಫಿಯು ನಾಪೋಕ್ಲುವಿನ ಸಂಸ್ಥೆಯೊಂದಕ್ಕೆ ಸೇರಿದ್ದು ಎಂದು ಆ ಕುಲ್ಫಿಯ ಕವರ್‌ನಿಂದ ತಿಳಿದು ಬಂದಿದೆ.
ಕುಲ್ಫಿ ತಯಾರಿಕಾ ಘಟಕದ ಸಿಬ್ಬಂದಿ ನಿರ್ಲಕ್ಷ್ಯ:
ಕೊಡಗಿನ ನಾಪೋಕ್ಲುವಿನ ಕುಲ್ಫಿ ತಯಾರಿಕಾ ಘಟಕವೊಂದು ಈ ಕುಲ್ಫಿಯನ್ನು ತಯಾರಿಸಿದೆ. ಹಾಲಿನ ಪೊಟ್ಟಣವನ್ನು ಬ್ಲೇಡ್‌ನಿಂದ ಕತ್ತರಿಸಿದಾಗ ಬ್ಲೇಡ್ ಹಾಲಿನೊಳಗೆ ಬಿದ್ದಿದೆ. ಆದರೂ ಇದನ್ನು ಗಮನಿಸದೆ ಘಟಕದ ಸಿಬ್ಬಂದಿಯೊಬ್ಬ ನಿರ್ಲಕ್ಷ್ಯ ವಹಿಸಿ ಹಾಗೆಯೇ ಬಿಟ್ಟಿದ್ದಾನೆ. ಆತನ ಅಜಾಗರೂಕತೆಯಿಂದಾಗಿ ಕುಲ್ಫಿಯ ಕಡ್ಡಿಯ ಮಧ್ಯೆ ಬ್ಲೇಡ್ ಸಿಲುಕಿಕೊಂಡಿತ್ತು. ಎಚ್ಚರಿಕೆ ವಹಿಸಿದ ಹಿನ್ನೆಲೆಯಲ್ಲಿ ಬ್ಲೇಡ್ ಕುಲ್ಫಿಯ ಒಳಗೆ ಉಳಿದುಕೊಂಡಿದ್ದಾಗಿ ಸ್ವತಃ ಘಟಕದ ಮಾಲೀಕರೇ ತಪ್ಪೊಪ್ಪಿಕೊಂಡಿದ್ದಾರೆ.
ಎಚ್ಚರ ವಹಿಸಿ:
ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳಲ್ಲಿ ಕಸ ಕಡ್ಡಿಗಳು, ಹುಳಗಳು, ಕಲಬೆರಕೆ ಪದಾರ್ಥಗಳು ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ ಗ್ರಾಹಕರು ಯಾವುದೇ ಆಹಾರ ಪದಾರ್ಥವನ್ನು ಸೇವಿಸುವ ಮುನ್ನ ಹಾಗೂ ಸೇವಿಸುವಾಗ ಸೂಕ್ಷ್ಮವಾಗಿ ಗಮನಿಸಿ ತಿನ್ನಬೇಕು. ಇಲ್ಲದಿದ್ದರೆ ಅಪಾಯವಾಗಬಹುದು.
ಇತ್ತೀಚೆಗೆ ನಮ್ಮ ಊರಿನಲ್ಲಿ ಕಾರ್ಯಕ್ರಮವೊಂದು ನಡೆದಿತ್ತು. ಕುಲ್ಫಿಯನ್ನು ಖರೀದಿಸಿದ್ದೆ. ಎರಡು ಕುಲ್ಫಿ ಮಕ್ಕಳು ತಿಂದರು. ನಾನು ಕೂಡ ಅರ್ಧದಷ್ಟುತಿಂದಿದ್ದೆ. ಆದರೆ ಬಾಯಲ್ಲಿ ಏನೋ ಗೀರಿದಂತೆ ಅನುಭವವಾಯಿತು. ತೆಗೆದು ನೋಡಿದಾಗ ಅದರಲ್ಲಿ ಇಡೀ ಬ್ಲೇಡ್ ಇತ್ತು. ನೋಡಿ ಭಯ ಆಯಿತು. ಈ ಬಗ್ಗೆ ಸಂಬಂಧಪಟ್ಟವರು ಮುಂದೆ ಹೀಗಾಗದಂತೆ ಎಚ್ಚರವಹಿಸಬೇಕು ಎಂದು ಬ್ಲೇಡ್ ಇದ್ದ ಕುಲ್ಫಿ ಚಪ್ಪರಿಸಿದ್ದ ಆವಂದೂರು ಮಹಿಳೆ ರಮ್ಯಾ ಹೇಳಿದ್ದಾರೆ.
ಬಹು ಬೆಳೆ ಬೇಸಾಯ, ಉತ್ತಮ ಆದಾಯ: ಇದು 21 ವರ್ಷದ ಯುವ ರೈತನ ಚಮತ್ಕಾರ
ಹಾಲಿನ ಪೊಟ್ಟಣವನ್ನು ಬ್ಲೇಡ್‌ನಿಂದ ಕತ್ತರಿಸಿ ಕುಲ್ಫಿಗೆ ಮಿಶ್ರಣ ಮಾಡುವ ವೇಳೆ ಬ್ಲೇಡ್ ಹಾಲಿನಲ್ಲಿ ಬಿದ್ದಿದೆ. ಈ ಸಂದರ್ಭ ಹಾಲನ್ನು ಫಿಲ್ಟರ್ ಮಾಡಿ ತೆಗೆಯಬೇಕು. ಆದರೆ ಘಟಕದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯೊಬ್ಬ ಫಿಲ್ಟರ್ ಮಾಡದೆ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ಇದೀಗ ಫಿಲ್ಟರ್ ಮಾಡುವಾಗ ನೆಟ್‌ಬಳಕೆ ಮಾಡಲಾಗಿದೆ. ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ನಾಪೋಕ್ಲು ಕುಲ್ಫಿ ತಯಾರಿಕಾ ಘಟಕದ ಮಾಲೀಕ ಅಶ್ರಫ್ ಹೇಳಿದ್ದಾರೆ.
- ವಿಘ್ನೇಶ್ ಎಂ. ಭೂತನಕಾಡು