ಮಡಿಕೇರಿ(ಫೆ.15): ಸುಂಟಿಕೊಪ್ಪದ ಬಿಎಸ್‌ಎನ್‌ಎಲ್‌ ನೌಕರರು ಕೇಂದ್ರ ಸರ್ಕಾರದ ಸೂಚನೆಯಂತೆ ಸ್ವಯಂ ನಿವೃತ್ತಿ ತೆಗೆದುಕೊಂಡಿರುವುದರಿಂದ ಸುಂಟಿಕೊಪ್ಪ ಭಾಗದ ಬಿಎಸ್‌ಎನ್‌ಎಲ್‌ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ.

ಕೊಡಗಿನ ಗುಡ್ಡಗಾಡು ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಮಂದಿ ಇಂದಿಗೂ ಬಿಎಸ್‌ಎನ್‌ಎಲ್‌ ಸೇವೆಯನ್ನೇ ನೆಚ್ಚಿಕೊಂಡಿದ್ದು, ನೂರಾರು ಸಮಸ್ಯೆಗಳು ಎದುರಿಸುತ್ತಿದ್ದರೂ ಕೊಡಗಿನ ಜನತೆಯು ಅದರ ಬಳಕೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಸ್ಥಿರ ದೂರವಾಣಿ ಸಂಪರ್ಕ ಹಾಗೂ ಬ್ರಾಡ್‌ಬ್ಯಾಂಡ್‌ ಸೌಲಭ್ಯಗಳನ್ನು ಹೊಂದಿದ್ದಾರೆ.

 

ಸುಂಟಿಕೊಪ್ಪ ಬಿಎಸ್‌ಎನ್‌ಎಲ್‌ ಕಚೇರಿಯಲ್ಲಿ 17 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ನೌಕರರ ಸ್ವಯಂ ನಿವೃತ್ತಿಯಿಂದ ಈಗ ಜೆಟಿಒ ಒಬ್ಬರೇ ಕೆಲಸ ನಿರ್ವಹಿಸುತ್ತಿದ್ದಾರೆ. ಸುಂಟಿಕೊಪ್ಪ ವ್ಯಾಪ್ತಿಗೆ 7ನೇ ಹೊಸಕೋಟೆ, ಗರಗಂದೂರು, ಮಾದಾಪುರ, ಕಂಬಿಬಾಣೆ, ಕಾನ್‌ಬೈಲ್‌ ಉಪಕೇಂದ್ರಗಳನ್ನು ಹೊಂದಿದೆ. ಈ ಉಪಕೇಂದ್ರಗಳ ನಿರ್ವಹಣೆ ಕೆಲಸವು ಒಬ್ಬರಿಂದಲೇ ಆಗಬೇಕಿದೆ. ಅವರು ಬೇರೆ ಉಪಕೇಂದ್ರಗಳಿಗೆ ತೆರಳಿದರೆ ಸುಂಟಿಕೊಪ್ಪ ಕಚೇರಿಗೆ ಬೀಗ ಮುದ್ರೆ ಬೀಳುತ್ತದೆ.

ಮಾಸಿಕ ಬಿಲ್‌ ಪಾವತಿಸಲು, ಸಿಮ್‌ ಖರೀದಿಸಲು ಹಾಗೂ ನೂತನ ಆಧಾರ್‌ಕಾರ್ಡ್‌ ಮತ್ತು ಅದರಲ್ಲಿರುವ ಲೋಪಗಳನ್ನು ತಿದ್ದುಪಡಿಗೊಳಿಸಲು ಬರುವ ಗ್ರಾಹಕರು ಮುಚ್ಚಿದ ಬಾಗಿಲಿನ ದರ್ಶನ ಪಡೆದು ಮನದಲ್ಲಿ ಗೊಣಗಿಕೊಳ್ಳುತ್ತ ವಾಪಾಸ್ಸು ಹೋಗುತ್ತಿರುವ ದೃಶ್ಯ ಕಾಣಬಹುದಾಗಿದೆ.

 

ಈ ಹಿಂದೆ 7ನೇ ಹೊಸಕೋಟೆ, ಗರಗಂದೂರು, ಮಾದಾಪುರ, ಕಂಬಿಬಾಣೆ, ಕಾನ್‌ಬೈಲ್‌ ಉಪಕೇಂದ್ರಗಳಲ್ಲಿ ಸಣ್ಣ ಪುಟ್ಟಸಮಸ್ಯೆಗಳು ಉಲ್ಬಣಗೊಂಡಾಗ ಕಚೇರಿಯ ಲೈನ್‌ಮ್ಯಾನ್‌ ದುರಸ್ತಿಗೆ ಮುಂದಾಗುತ್ತಿದ್ದರು. ಇದೀಗ ಸಿಬ್ಬಂದಿ ನಿವೃತ್ತಿಗೊಂಡಿದ್ದರಿಂದ ಮತ್ತಷ್ಟುಸಮಸ್ಯೆಯನ್ನು ಈ ಭಾಗದ ಜನತೆಯು ಎದುರಿಸುವಂತಾಗಿದೆ.

ಇಲ್ಲಿನ ಅಂಚೆ ಕಚೇರಿಯಲ್ಲಿ ಬಿಎಸ್‌ಎನ್‌ಎಲ್‌ನ ಬಿಲ್‌ ಪಾವತಿಸುವ ವ್ಯವಸ್ಥೆ ಇನ್ನೂ ಆರಂಭಗೊಂಡಿಲ್ಲ. ಆನ್‌ಲೈನ್‌ನಲ್ಲಿ ಹೇಗೆ ಪಾವತಿಸುವುದು ಎಂಬ ಮಾಹಿತಿ ಎಲ್ಲ ಗ್ರಾಹಕರಿಗೆ ಇಲ್ಲದಿರುವುದೂ ಮತ್ತೊಂದು ಸಮಸ್ಯೆ.

 

ಸ್ಥಿರ ದೂರವಾಣಿ ಹಾಗೂ ಬ್ರಾಡ್‌ಬ್ಯಾಂಡ್‌ ಸೇವೆಯನ್ನೇ ಕೊಡಗಿನ ಗುಡ್ಡಗಾಡು ಗ್ರಾಮೀಣ ಪ್ರದೇಶ ಜನರು ಅಲಂಬಿಸಿದ್ದಾರೆ. ಸಂಸ್ಥೆಯಲ್ಲಿ ಸ್ವಯಂ ನಿವೃತ್ತಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಆರಿವಿದ್ದರೂ ಬದಲಿ ನೇಮಕಾತಿಗೊಳಿಸದೆ ಗ್ರಾಹಕರಿಗೆ ಮೂಲಸೌಕರ್ಯಕ್ಕೆ ಅಡೆತಡೆ ನೀಡುತ್ತಿರುವುದು ಸರ್ಕಾರವು ಖಾಸಗಿ ಸಂಸ್ಥೆಗಳೊಂದಿಗೆ ಶಾಮಿಲಾಗಿದ್ದೆಯೇ ಎಂಬ ಸಂಶಯಕ್ಕೆ ಎಡೆಮಾಡಿ ಕೊಟ್ಟಿದೆ ಎಂದು ಸ್ಥಳೀಯ ನಿವಾಸಿ ವಹೀದ್‌ ಜಾನ್‌ ಹೇಳಿದ್ದಾರೆ.

 

ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನ್‌ಬೈಲ್‌ ಬಿಎಸ್‌ಎನ್‌ಎಲ್‌ ಕಚೇರಿ ಹೊಂದಿದೆ. ಪಂಚಾಯಿತಿ ವ್ಯಾಪ್ತಿಯ 11 ಗ್ರಾಮಗಳ ಜನತೆಯು ಅತಿ ಹೆಚ್ಚಾಗಿ ಬಿಎಸ್‌ಎನ್‌ಎಲ್‌ ಸಿಂ ಹಾಗೂ ಸ್ಥಿರ ದೂರವಾಣಿಯನ್ನು ಬಳಸುತ್ತಿದ್ದಾರೆ.

ಆದರೆ ಕಳೆದ ಒಂದೂವರೆ ತಿಂಗಳಿನಿಂದ ಗ್ರಾಹಕರಿಗೆ ನಿತ್ಯ ಕಿರಿಕಿರಿ ಉಂಟಾಗಿದೆ ವಿದ್ಯುತ್‌ ಸ್ಥಗಿತಗೊಂಡಾಗ ಜನರೇಟರ್‌ ಚಾಲನೆಗೊಳ್ಳದೆ ದೂರವಾಣಿ ಮೊಬೈಲ್‌ಗಳು ಸ್ಥಗಿತಗೊಳ್ಳುತ್ತಿದೆ. ಕೂಡಲೇ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಬೇಕು ಎಂದು ತಾಲೂಕು ಪಂಚಾಯತು ಮಾಜಿ ಉಪಾಧ್ಯಕ್ಷ ಶಂಕರನಾರಾಯಣ ಹೇಳಿದ್ದಾರೆ. ಸರ್ಕಾರ ಸದ್ಯದಲ್ಲೇ ಸಿಬ್ಬಂದಿಯನ್ನು ನೇಮಿಸಲಿದೆ. ಇದರಿಂದ ಸಿಬ್ಬಂದಿ ಸಮಸ್ಯೆ ಪರಿಹಾರವಾಗಲಿದೆ ಎಂದು ಸುಂಟಿಕೊಪ್ಪ ಜೆಟಿಒ ಪಂಕಜ್‌ ಹೇಳಿದ್ದಾರೆ.