ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ತುಮಕೂರು ಜಿಲ್ಲೆಯನ್ನು ಜೆಡಿಎಸ್‌ ಕಿತ್ತುಕೊಂಡು ಪಾರುಪತ್ಯ ಮೆರೆದಿತ್ತು. ಈಗ ಮತ್ತೆ ಕಾಂಗ್ರೆಸ್‌ ಭರ್ತಿ 7 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಮತ್ತೆ ತನ್ನ ಕೋಟೆಯನ್ನು ಭದ್ರವಾಗಿಸಿಕೊಂಡಿದೆ.

ಉಗಮ ಶ್ರೀನಿವಾಸ್‌

 ತುಮಕೂರು : ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ತುಮಕೂರು ಜಿಲ್ಲೆಯನ್ನು ಜೆಡಿಎಸ್‌ ಕಿತ್ತುಕೊಂಡು ಪಾರುಪತ್ಯ ಮೆರೆದಿತ್ತು. ಈಗ ಮತ್ತೆ ಕಾಂಗ್ರೆಸ್‌ ಭರ್ತಿ 7 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಮತ್ತೆ ತನ್ನ ಕೋಟೆಯನ್ನು ಭದ್ರವಾಗಿಸಿಕೊಂಡಿದೆ.

ಕಳೆದ ಬಾರಿ 3 ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಗೆದ್ದಿದ್ದ ಕಾಂಗ್ರೆಸ್‌ ಈ ಬಾರಿ 7 ಕ್ಷೇತ್ರಗಳನ್ನು ಗೆದ್ದು ಬೀಗಿದೆ. ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ, ತಿಪಟೂರು, ಕುಣಿಗಲ್‌ ಹಾಗೂ ಗುಬ್ಬಿ ಕ್ಷೇತ್ರವನ್ನು ಗೆಲ್ಲುವ ಮೂಲಕ ಕೋಟೆಯನ್ನು ನಿರ್ಮಿಸಿದೆ. ಹಾಗೆ ನೋಡಿದರೆ ಗುಬ್ಬಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸಾಧನೆ ಅಷ್ಟೇನೂ ಇರಲಿಲ್ಲ. ಆದರೆ ಜೆಡಿಎಸ್‌ ಶಾಸಕರಾಗಿದ್ದ ಎಸ್‌.ಆರ್‌. ಶ್ರೀನಿವಾಸ್‌ ಕಾಂಗ್ರೆಸ್‌ಗೆ ಬಂದು ಅಭ್ಯರ್ಥಿಯಾಗಿ ಗೆಲ್ಲುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮತ್ತೆ ಜೀವ ತುಂಬಿದ್ದಾರೆ.

ಕಳೆದ ಬಾರಿ ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದ ಪರಮೇಶ್ವರ್‌ಗೆ ಇದು ಸತತ ಎರಡನೇ ಗೆಲುವು. ಅವರು ಜೆಡಿಎಸ್‌ನ ಸುಧಾಕರಲಾಲ್‌ ಅವರನ್ನು ಸೋಲಿಸಿ ಆಯ್ಕೆಯಾಗಿದ್ದಾರೆ. ಇನ್ನು ಮಧುಗಿರಿ ಕ್ಷೇತ್ರದಿಂದ ಕಳೆದ ಬಾರಿ ಜೆಡಿಎಸ್‌ನ ವೀರಭದ್ರಯ್ಯ ಆಯ್ಕೆಯಾಗಿದ್ದರು. ಈ ಬಾರಿ ಅವರನ್ನು ಹಿಮ್ಮೆಟ್ಟಿಸಿ ಭರ್ಜರಿ ಲೀಡ್‌ನೊಂದಿಗೆ ಕಾಂಗ್ರೆಸ್‌ನ ಕೆ.ಎನ್‌. ರಾಜಣ್ಣ ಗೆಲುವು ಸಾಧಿಸಿದ್ದಾರೆ.

ಶಿರಾ ಕ್ಷೇತ್ರದಿಂದ ಕಳೆದ ಬಾರಿ ಸೋತಿದ್ದ ಜಯಚಂದ್ರ ಈ ಬಾರಿ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ ಗೆದ್ದಿದ್ದ ಬಿಜೆಪಿ ಮೂರನೇ ಸ್ಥಾನಕ್ಕೆ ಹೋಗಿದೆ. ಇನ್ನು ಸಚಿವರ ಕ್ಷೇತ್ರವಾಗಿದ್ದ ಚಿಕ್ಕನಾಯಕನಹಳ್ಳಿಯಲ್ಲಿ ಬಿಜೆಪಿಯ ಮಾಧುಸ್ವಾಮಿ ಹಾಗೂ ತಿಪಟೂರಿನಿಂದ ಬಿ.ಸಿ. ನಾಗೇಶ್‌ ಸೋಲನ್ನು ಅನುಭವಿಸಿದ್ದಾರೆ. ಚಿಕ್ಕನಾಯಕನಹಳ್ಳಿಯಿಂದ ಜೆಡಿಎಸ್‌ನ ಸುರೇಶಬಾಬು ಹಾಗೂ ತಿಪಟೂರಿನಿಂದ ಕಾಂಗ್ರೆಸ್‌ನ ಕೆ. ಷಡಕ್ಷರಿ ಆಯ್ಕೆಯಾಗಿದ್ದಾರೆ. ಕುಣಿಗಲ್‌ನಿಂದ ಕಳೆದ ಬಾರಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಡಾ. ರಂಗನಾಥ್‌ ಈ ಬಾರಿಯೂ ಸಹ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಸತತ ಎರಡನೇ ಜಯ ದಾಖಲಿಸಿದ್ದಾರೆ.

ತುರುವೇಕೆರೆಯಿಂದ ಜೆಡಿಎಸ್‌ನ ಎಂ.ಟಿ. ಕೃಷ್ಣಪ್ಪ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ಅವರು ಬಿಜೆಪಿಯ ಮಸಾಲ ಜಯರಾಮ್‌ ಗೆಲುವು ದಾಖಲಿಸಿದ್ದರು. ತುಮಕೂರು ನಗರದಿಂದ ಕಳೆದ ಬಾರಿ ಗೆಲುವು ಸಾಧಿಸಿದ್ದ ಬಿಜೆಪಿಯ ಜ್ಯೋತಿ ಗಣೇಶ್‌ ಈ ಬಾರಿಯೂ ಗೆದ್ದಿದ್ದಾರೆ. ಹಾಗೆಯೇ ತುಮಕೂರು ಗ್ರಾಮಾಂತರದಿಂದ ಕಳೆದ ಬಾರಿ ಜೆಡಿಎಸ್‌ನ ಗೌರಿಶಂಕರ್‌ ಗೆದ್ದಿದ್ದರೆ ಈ ಬಾರಿ ಬಿಜೆಪಿಯ ಸುರೇಶಗೌಡ ಗೆಲುವು ದಾಖಲಿಸಿದ್ದಾರೆ.

ಕಳೆದ ಬಾರಿ 5 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಕೇವಲ 2 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಹಾಗೆಯೇ ಕಳೆದ ಬಾರಿ 3 ಕ್ಷೇತ್ರಗಳಲ್ಲಿ ಗೆದ್ದಿದ್ದ ಜೆಡಿಎಸ್‌ 2 ಸ್ಥಾನಕ್ಕೆ ಕುಸಿದಿದೆ. ಇನ್ನು ಕಾಂಗ್ರೆಸ್‌ ಕಳೆದ ಬಾರಿ 3 ಕ್ಷೇತ್ರದಲ್ಲಿ ಗೆದ್ದಿದ್ದರೆ ಈ ಬಾರಿ 7 ಸ್ಥಾನ ಗೆಲ್ಲುವ ಮೂಲಕ ಪಾರುಪತ್ಯ ಮೆರೆದಿದೆ. ಹಾಗೆ ನೋಡಿದರೆ ಘಟನಾಘಟಿ ನಾಯಕರೆಲ್ಲಾ ಗೆದ್ದು ಬೀಗಿದ್ದಾರೆ. ಮಾಜಿ ಡಿಸಿಎಂ ಆಗಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ. ಜಿ. ಪರಮೇಶ್ವರ್‌, ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿರುವ ಕೆ.ಎನ್‌. ರಾಜಣ್ಣ, 7 ನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜಯಚಂದ್ರ ಹೀಗೆ ದೊಡ್ಡ ದೊಡ್ಡ ನಾಯಕರೆಲ್ಲಾ ಗೆದ್ದು ಬೀಗಿದ್ದಾರೆ.

ಒಟ್ಟಾರೆಯಾಗಿ ಹಳೆ ಮೈಸೂರು ಪ್ರಾಂತ್ಯದಲ್ಲಿ ತುಮಕೂರು ಜೆಡಿಎಸ್‌ನ ಕೋಟೆಯಾಗಿತ್ತು. ಆದರೆ ಈ ಬಾರಿ ಅದರ ಕೋಟೆ ಪುಡಿ ಪುಡಿಯಾಗಿದೆ. ಹಿಂದೆ ಐದು ಕ್ಷೇತ್ರದಲ್ಲಿ ಗೆದ್ದಿದ್ದ ಬಿಜೆಪಿ ಕೇವಲ 2 ಸ್ಥಾನ ಗೆಲ್ಲುವ ಮೂಲಕ ತೀರ ಕಳಪೆ ಪ್ರದರ್ಶನ ಮಾಡಿದೆ.