ತುಮಕೂರಿನ ದೇವರಾಯನದುರ್ಗದಲ್ಲಿ ಕಾಡುಜನರು ಕಾಣಿಸಿಕೊಂಡಿದ್ದಾರೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ, ತುಮಕೂರು ಪೊಲೀಸರು ತನಿಖೆ ನಡೆಸಿ ಸ್ಪಷ್ಟೀಕರಣ ನೀಡಿದ್ದಾರೆ. ಜೊತೆಗೆ, ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ತುಮಕೂರು (ಅ.14): ಕಳೆದ ಕೆಲವು ದಿನಗಳಿಂದ "ತುಮಕೂರು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಮತ್ತು ಐತಿಹಾಸಿಕ ತಾಣ ದೇವರಾಯನದುರ್ಗದಲ್ಲಿ ಇದ್ದಕ್ಕಿದ್ದಂತೆ ಇಬ್ಬರು ಕಾಡು ಜನರು ಕಾಣಿಸಿಕೊಂಡಿದ್ದರು. ಅವರಿಗೆ ನಾವು ಯಾವುದೇ ತೊಂದರೆ ಕೊಡದೇ ಅವರು ಮುಂದೆ ಹೋಗುವವರೆಗೂ ಸುಮ್ಮನಿದ್ದೆವು" ಎಂದು ಬರೆದುಕೊಂಡು ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಆದರೆ, ಗಂಭೀರವಾಗಿ ಪರಿಗಣಿಸಿದ ತುಮಕೂರು ಜಿಲ್ಲಾ ಪೊಲೀಸ್ ಸಿಬ್ಬಂದಿ ತನಿಖೆ ನಡೆಸಿದ್ದಾರೆ.
ಸುಳ್ಳು ಸುದ್ದಿ ಎಂದು ತಿಳಿಸಿದ ಪೊಲೀಸರು
ನಂತರ ಈ ವಿಡಿಯೋವನ್ನು ಫ್ಯಾಕ್ಟ್ ಚೆಕ್ ಮಾಡಿದ ಅದು ಸುಳ್ಳು ಸುದ್ದಿ ಹಾಗೂ ಫೇಕ್ ವಿಡಿಯೋ ಎಂಬುದು ತಿಳಿದುಬಂದಿದೆ. ನಂತರ ಪೊಲೀಸರು ಫ್ಯಾಕ್ಟ್ ಚೆಕ್ ವರದಿಯನ್ನು ಜನರ ಮುಂದಿಟ್ಟಿದ್ದಾರೆ. ದೇವರಾಯನ ದುರ್ಗದಲ್ಲಿಕಾಡುಜನರು ಕಾಣಿಸಿಕೊಂಡಿದ್ದಾರೆ ಎಂಬುದು ಸುಳ್ಳು ಸುದ್ದಿ. "ತುಮಕೂರು ದೇವರಾಯನದುರ್ಗದಲ್ಲಿ ಯಾವುದೇ ಈ ರೀತಿಯ ಘಟನೆ ನಡೆದಿರುವುದಿಲ್ಲ. ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಬರುವ ಈ ರೀತಿಯ ಯಾವುದೇ ಸುಳ್ಳು ಸುದ್ದಿ ನಂಬಬೇಡಿ" ಎಂದು ತಿಳಿಸಿದ್ದಾರೆ.
ಎಚ್ಚರಿಕೆ : ಈರೀತಿಯ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತುಮಕೂರು ಜಿಲ್ಲಾ ಪೊಲೀಸರು ಎಚ್ಚರಿಕೆಯನ್ನು ರವಾನಿಸಿದ್ದಾರೆ.
ಕೊಪ್ಪಳದಲ್ಲಿ ಹುಲಿ ಬಂದಿತ್ತು ಎಂದು ಕಥೆ ಕಟ್ಟಿದ್ದ ಯುವಕ:
ಕೊಪ್ಪಳ ಜಿಲ್ಲೆಯ ಕವಳಿ ಗ್ರಾಮದ ಈರಣ್ಣ ಹೊನ್ನುಂಚಿ ಎಂಬ ಯುವಕ ಯಾವುದೇ ದುಡಿಮೆ ಮಾಡದೇ ಮನೆಯಲ್ಲಿದ್ದ ಕಾರಣ, ಅವರ ಮನೆಯವರು ಹೊಲಕ್ಕೆ ಹೋಗು, ಕೂಲಿ ಕೆಲಸ ಮಾಡು ಎಂದು ಹೇಳಿದ್ದಾರೆ. ಆದರೆ, ಕೆಲಸಕ್ಕೆ ಹೋಗಲು ಇಷ್ಟವಿಲ್ಲದ ಯುವಕ ನಮ್ಮೂರಿನ ಗುಡ್ಡದಮೇಲೆ ಹುಲಿ ಬಂದಿದೆ ಎಂದು ಎಐ ಚಿತ್ರದ ಮೂಲಕ ಹುಲಿ ಇರುವುದನ್ನು ತೋರಿಸಿದ್ದಾನೆ. ಜೊತೆಗೆ, ಇದೇ ವಿಡಿಯೋವನ್ನು ಸೋಶಿಯಲ್ ಮೀಡಿಯಾಕ್ಕೆ ಅಪ್ಲೋಡ್ ಮಾಡುವ ಮೂಲಕ ಆತಂಕ ಸೃಷ್ಟಿಸಿದ್ದನು. ಇದನ್ನು ನೋಡಿದ ಅರಣ್ಯ ಇಲಾಖೆ ಕಾಡಿನ ಸುತ್ತಲೂ ಹುಡುಕಾಡಿದ್ದಾರೆ. ಜೊತೆಗೆ, ಬೋನು ಇರಿಸಿ ಮೂರ್ನಾಲ್ಕು ದಿನಗಳ ಕಾಲ ಹುಡುಕಿದರೂ ಎಲ್ಲಿಯೂ ಹುಲಿಯ ಗುರುತು ಸಿಗದ ಕಾರಣ ಯುವಕನನ್ನು ಕರೆಸಿ ವಿಚಾರಣೆ ಮಾಡಿದ್ದಾರೆ.

ಬಸ್ಕಿ ಹೊಡೆದಿ ಎಚ್ಚರಿಕೆ ಕೊಟ್ಟಿದ್ದ ಅರಣ್ಯ ಇಲಾಖೆ
ಕೊನೆಗೆ ವಿಡಿಯೋ ಬಗ್ಗೆ ಅನುಮಾನ ಬಂದು ಯುವಕ ಈರಣ್ಣನನ್ನು ತಮ್ಮದೇ ಸ್ಟೈಲ್ನಲ್ಲಿ ವಿಚಾರಣೆ ಮಾಡಿದಾಗ ತಾನೇ ಕೆಲಸಕ್ಕೆ ಹೋಗಲಾಗದೇ ಎಐನಲ್ಲಿ ಬೆಟ್ಟದ ಮೇಲೆ ಹುಲಿ ಇರುವ ವಿಡಿಯೋ ಸೃಷ್ಟಿಸಿ ವೈರಲ್ ಮಾಡಿದದ್ದಾಗಿ ತಿಳಿಸಿದ್ದಾನೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳು, ಆತ ಸೃಷ್ಟಿ ಮಾಡಿದ ಎಐ ಚಿತ್ರದಲ್ಲಿರುವ ಗುಡ್ಡದ ಬಳಿ ಕರೆದುಕೊಂಡು ಹೋಗಿ ಆತನ ಮೂಲಕವೇ ಆತನು ಮಾಡಿದ ತಪ್ಪನ್ನು ಹೇಳಿಸಿದ್ದಾರೆ. ಅಷ್ಟೇ ಅಲ್ಲ ಯುವಕನಿಗೆ 50 ಬಸ್ಕಿ ಹೊಡಿಸಿ ಮುಂದೆ ಹೀಗೆ ಮಾಡದಂತೆ ಎಚ್ಚರಿಕೆಯನ್ನು ಕೊಟ್ಟು ಕಳುಹಿಸಿದ್ದರು.


