ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ನಿಯಮ ಉಲ್ಲಂಘಿಸಿದ ಪ್ರಸಿದ್ಧ ಫಿಟ್‌ನೆಸ್ ಸಂಸ್ಥೆ ಕಲ್ಟ್ ಫಿಟ್ ಮತ್ತು ಈ ಕಾವೀ ರೆಸ್ಟೋರೆಂಟ್‌ಗೆ ಒಟ್ಟು ₹35,000 ದಂಡ ವಿಧಿಸಲಾಗಿದೆ. ಕಸ ವಿಂಗಡಣೆ ಮಾಡದ ಮತ್ತು ನಿಷೇಧಿತ ಪ್ಲಾಸ್ಟಿಕ್ ಬಳಸಿದ ಕಾರಣಕ್ಕಾಗಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು (ನ.06): ನಗರದಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನವನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಈ ಕಾರ್ಯಾಚರಣೆಯ ಭಾಗವಾಗಿ ಘನತ್ಯಾಜ್ಯ ನಿರ್ವಹಣೆ ನಿಯಮ ಉಲ್ಲಂಘಿಸಿದ ಪ್ರಸಿದ್ಧ ಫಿಟ್‌ನೆಸ್ ಸಂಸ್ಥೆ ‘ಕಲ್ಟ್ ಫಿಟ್’ (CULT.FIT LTD) ಸೇರಿದಂತೆ ವಾಣಿಜ್ಯ ಮಳಿಗೆಗಳಿಗೆ ಪಾಲಿಕೆ ಮಾರ್ಷಲ್‌ಗಳು ಒಟ್ಟು ₹35,000 ದಂಡ ವಿಧಿಸಿದ್ದಾರೆ.

ಬೃಹತ್ ತ್ಯಾಜ್ಯ ಉತ್ಪಾದಕರು ಹಾಗೂ ವಾಣಿಜ್ಯ ಸಂಸ್ಥೆಗಳು ತ್ಯಾಜ್ಯವನ್ನು ಮೂಲದಲ್ಲೇ ವೈಜ್ಞಾನಿಕವಾಗಿ ವಿಂಗಡಿಸಬೇಕು ಮತ್ತು ಏಕಬಳಕೆಯ ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ಕಟ್ಟುನಿಟ್ಟಿನ ಮಾರ್ಗಸೂಚಿಯಿದ್ದರೂ, ನಿಯಮ ಪಾಲಿಸದ ಸಂಸ್ಥೆಗಳ ವಿರುದ್ಧ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಎಚ್‌ಎಸ್‌ಆರ್ ಲೇಔಟ್‌ ಕಲ್ಟ್ ಫಿಟ್‌ಗೆ ₹30,000 ದಂಡ!

ಪಾಲಿಕೆ ಅಧಿಕಾರಿಗಳು ಮತ್ತು ಮಾರ್ಷಲ್‌ಗಳ ತಂಡವು ಎಚ್‌ಎಸ್‌ಆರ್ ಲೇಔಟ್ (HSR Layout) ಸೆಕ್ಟರ್ 3ರಲ್ಲಿರುವ ‘ಕಲ್ಟ್ ಫಿಟ್’ ಸಂಸ್ಥೆಯಲ್ಲಿ ತಪಾಸಣೆ ನಡೆಸಿದಾಗ ಅಸಮರ್ಪಕ ತ್ಯಾಜ್ಯ ನಿರ್ವಹಣೆ ಬೆಳಕಿಗೆ ಬಂದಿದೆ. ಸಂಸ್ಥೆಯು ಉತ್ಪತ್ತಿಯಾಗುವ ಕಸವನ್ನು ಹಸಿ ಮತ್ತು ಒಣ ಕಸವಾಗಿ ಪ್ರತ್ಯೇಕಿಸದೆ, ಅವೈಜ್ಞಾನಿಕವಾಗಿ ಮಿಶ್ರ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದು ಪತ್ತೆಯಾಗಿದೆ. ಬೃಹತ್ ತ್ಯಾಜ್ಯ ಉತ್ಪಾದಕರ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದಕ್ಕಾಗಿ ಪಾಲಿಕೆ ಮಾರ್ಷಲ್‌ಗಳು ಕಲ್ಟ್ ಫಿಟ್ ಸಂಸ್ಥೆಗೆ ₹30,000 ಭಾರಿ ದಂಡ ವಿಧಿಸಿ ತಕ್ಷಣವೇ ವಸೂಲಿ ಮಾಡಿದ್ದಾರೆ.

'ಈ ಕಾವೀ ರೆಸ್ಟೋರೆಂಟ್‌'ಗೂ ಬಿತ್ತು ದಂಡದ ಬಿಸಿ

ಮತ್ತೊಂದೆಡೆ, ಜೆ.ಪಿ. ನಗರ 5ನೇ ಫೇಸ್ ವ್ಯಾಪ್ತಿಯ ಹೊರವರ್ತುಲ ರಸ್ತೆಯಲ್ಲಿರುವ ‘ಈ ಕಾವೀ ರೆಸ್ಟೋರೆಂಟ್’ (EE KAVII RESTAURANT) ಮೇಲೆಯೂ ತಪಾಸಣೆ ನಡೆಸಲಾಯಿತು. ಅಲ್ಲಿ ನಿಯಮಬಾಹಿರವಾಗಿ ಏಕಬಳಕೆಯ ನಿಷೇಧಿತ ಪ್ಲಾಸ್ಟಿಕ್ (SUPs) ಬಳಸುತ್ತಿರುವುದು ಕಂಡುಬಂದಿದ್ದರಿಂದ ಜಯನಗರ ವಿಭಾಗದ ಕಿರಿಯ ಆರೋಗ್ಯ ಪರಿವೀಕ್ಷಕರು ರೆಸ್ಟೋರೆಂಟ್‌ಗೆ ₹5,000 ದಂಡ ವಿಧಿಸಿದರು. ಈ ಎರಡು ಪ್ರತ್ಯೇಕ ತಪಾಸಣೆಗಳ ಮೂಲಕ ಪಾಲಿಕೆ ಅಧಿಕಾರಿಗಳು ಒಟ್ಟಾರೆಯಾಗಿ ₹35,000 ದಂಡ ವಸೂಲಿ ಮಾಡಿ ಉಲ್ಲಂಘನೆ ಎಸಗಿದ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ್ದಾರೆ.

ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಎಚ್ಚರಿಕೆ

ದಂಡ ವಿಧಿಸಿದ ಬಳಿಕ ಸಂಬಂಧಪಟ್ಟ ಸಂಸ್ಥೆಗಳ ಪ್ರತಿನಿಧಿಗಳಿಗೆ ತ್ಯಾಜ್ಯ ವಿಂಗಡಣೆಯ ಮಹತ್ವದ ಕುರಿತು ಅಧಿಕಾರಿಗಳು ಅರಿವು ಮೂಡಿಸಿದರು. ಪ್ರತಿಯೊಂದು ವಾಣಿಜ್ಯ ಸಂಸ್ಥೆಯು ಕಸವನ್ನು ಮೂಲದಲ್ಲೇ ಹಸಿ, ಒಣ ಹಾಗೂ ನೈರ್ಮಲ್ಯ ತ್ಯಾಜ್ಯವೆಂದು ಪ್ರತ್ಯೇಕಿಸಬೇಕು ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದು ಸೂಚಿಸಲಾಯಿತು.

ಈ ಕುರಿತು ಎಚ್ಚರಿಕೆ ನೀಡಿದ ಪಾಲಿಕೆ ಆಯುಕ್ತರಾದ ಶ್ರೀ ಕೆ.ಎನ್. ರಮೇಶ್ ಅವರು, ‘ಜಿಮ್‌ಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಇತರೆ ವಾಣಿಜ್ಯ ಸಂಸ್ಥೆಗಳು ಕಡ್ಡಾಯವಾಗಿ ಘನತ್ಯಾಜ್ಯ ನಿರ್ವಹಣೆ ಮತ್ತು ಪ್ಲಾಸ್ಟಿಕ್ ನಿಷೇಧದ ನಿಯಮ ಪಾಲಿಸಬೇಕು. ನಗರದ ನೈರ್ಮಲ್ಯಕ್ಕೆ ಧಕ್ಕೆ ತರುವ ಸಂಸ್ಥೆಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಹಾಗೂ ದಂಡ ವಿಧಿಸುವ ಪ್ರಕ್ರಿಯೆ ಮುಂದುವರಿಯಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಎಚ್‌ಎಸ್‌ಆರ್ ಲೇಔಟ್ ಹಾಗೂ ಜಯನಗರ ವಿಭಾಗದ ಮಾರ್ಷಲ್ ಸೂಪರ್‌ವೈಸರ್‌ಗಳು, ಕಿರಿಯ ಆರೋಗ್ಯ ಪರಿವೀಕ್ಷಕರು ಮತ್ತು ವಾರ್ಡ್ ಮಾರ್ಷಲ್‌ಗಳು ಉಪಸ್ಥಿತರಿದ್ದರು.