ದೇವರಾಯನದುರ್ಗ ಮೀಸಲು ಅರಣ್ಯ ಭೂಮಿ ಒತ್ತುವರಿ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ದೇವರಾಯನದುರ್ಗ ಮೀಸಲು ಅರಣ್ಯ ಭೂಮಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರು (ಜ.7): ದೇವರಾಯನದುರ್ಗ ಮೀಸಲು ಅರಣ್ಯ ಭೂಮಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ದೇವರಾಯನದುರ್ಗ ಮೀಸಲು ಅರಣ್ಯ ಪ್ರದೇಶದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ತೆರವುಗೊಳಿಸಿ ಅರಣ್ಯ ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಉತ್ತರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಸಿಎ ಸೈಟ್ 5 ವರ್ಷದಲ್ಲಿ ಸ್ವಾಧೀನವಾಗದಿದ್ದರೆ ಮೀಸಲು ರದ್ದು: ಹೈಕೋರ್ಟ್ ಆದೇಶ, ಏನಿದು ಪ್ರಕರಣ?
ತುಮಕೂರು ತಾಲ್ಲೂಕು ಬೆಳ್ಳಾವಿ ಹೋಬಳಿ ವಕ್ಕೋಡಿ ಗ್ರಾಮದ ಮಾರಣ್ಣ ಪಾಳೇಗಾರ ಎಂಬುವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಅರ್ಜಿಯಲ್ಲಿ ಆರೋಪಿಸಲಾಗಿರುವ ವಿಷಯಗಳಿಗೆ ಉತ್ತರಿಸಿ ವರದಿ ಅಥವಾ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು 4 ವಾರ ಮುಂದೂಡಿತು.
ಅರ್ಜಿದಾರರ ಪರ ವಕೀಲ ಬಿ ವಿ ಕೃಷ್ಣ ಅವರು ತಮ್ಮ ವಾದ ಮಂಡಿಸುತ್ತಾ, 'ಮೀಸಲು ಅರಣ್ಯ ಪ್ರದೇಶದ ಒತ್ತುವರಿ ಬಗ್ಗೆ ಸಂಬಂಧಪಟ್ಟ ಅರಣ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಸಿವಿಲ್ ವ್ಯಾಜ್ಯವೊಂದರ ನೆಪ ಹೇಳಿ ಅರಣ್ಯಾಧಿಕಾರಿಗಳು ಮೌನವಾಗಿದ್ದಾರೆ. ಅಸಲಿಗೆ ಅರಣ್ಯಾಧಿಕಾರಿಗಳು ಹೇಳುತ್ತಿರುವ ಸಿವಿಲ್ ವ್ಯಾಜ್ಯಕ್ಕೂ, ಒತ್ತುವರಿಗೂ ಸಂಬಂಧವಿಲ್ಲ. ಆದ್ದರಿಂದ, ಒತ್ತುವರಿ ತೆರವಿಗೆ ಆದೇಶಿಸಬೇಕು' ಎಂದು ಮನವಿ ಮಾಡಿದರು.
ಲಂಚ ಕೇಳಿದ್ದಕ್ಕೂ, ಪಡೆದಿದ್ದಕ್ಕೂ ಸಾಕ್ಷ್ಯ ಬೇಕು: ಹೈಕೋರ್ಟ್
ಅರ್ಜಿಯಲ್ಲೇನಿದೆ?
ತುಮಕೂರು ತಾಲ್ಲೂಕು ಊರ್ಡಿಗೆರೆ ಹೋಬಳಿಯ ವ್ಯಾಪ್ತಿಯ ದೇವರಾಯನದುರ್ಗ ಮೀಸಲು ಅರಣ್ಯ ಪ್ರದೇಶದಲ್ಲಿ 3 ಎಕರೆ 20 ಗುಂಟೆ ಜಮೀನನ್ನು ಖಾಸಗಿ ವ್ಯಕ್ತಿ ಜೆ ಶ್ವೇತಕುಮಾರಿ ಒತ್ತುವರಿ ಮಾಡಿಕೊಂಡು, ಕಟ್ಟಡ ನಿರ್ಮಾಣ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ವಶಕ್ಕೆ ಪಡೆದುಕೊಳ್ಳಬೇಕು ಮತ್ತು ಅಲ್ಲಿ ನಿರ್ಮಿಸಿರುವ ಕಟ್ಟಡವನ್ನು ನೆಲಸಮ ಮಾಡಬೇಕು ಎಂದು ಕೋರಲಾಗಿದೆ. ಅದೇ ರೀತಿ ಶ್ವೇತಕುಮಾರಿ ಅವರು ಮುತ್ತಸಂದ್ರ ಗ್ರಾಮದ ಸರ್ವೆ ನಂಬರ್ 17 ಹಾಗೂ ವಡ್ಡರಹಳ್ಳಿ ಗ್ರಾಮದ ಸರ್ವೆ ನಂಬರ್ 26ರ ಗೋಮಾಳ ಜಾಗದಲ್ಲಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಯನ್ನು ತೆರವುಗೊಳಿಸಬೇಕು ಎಂದು ಸಹ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.