*  ರೈತರ ಹೆಸರಲ್ಲಿ ಬೆಳೆವಿಮೆ ಕಂತು ಅನ್ಯವ್ಯಕ್ತಿಯಿಂದ ಪಾವತಿ *  ಬೆಳೆವಿಮೆ ಪರಿಹಾರ ಲಪಟಾಯಿಸಲು ಸಂಚು*  ನ್ಯಾಯ ಕೊಡಿಸುವಂತೆ ರೈತರಿಂದ ದೂರು 

ಗದಗ(ಡಿ.13): ರೈತರು(Farmers) ಬೆಳೆವಿಮೆ(Crop Insurance) ಕಂತು ತುಂಬದಿದ್ದರೂ ಅವರ ಹೆಸರಿನಲ್ಲಿ ಬೇರೊಬ್ಬರು ಪ್ರೀಮಿಯಂ ಪಾವತಿಸಿದ್ದು, ಆ ಮೂಲಕ ರೈತರ ಬೆಳೆವಿಮೆ ಪರಿಹಾರವನ್ನು ಬೇರೊಬ್ಬರು ಲಪಟಾಯಿಸಲು ಯತ್ನಿಸುವ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತು ನ್ಯಾಯ ಕೊಡಿಸುವಂತೆ ರೈತರೊಬ್ಬರು ಕೃಷಿ ಇಲಾಖೆಯ ಅಧಿಕಾರಿಗಳಿಗೆ(Department of Agriculture) ದೂರು ನೀಡಿ ಅಳಲು ತೋಡಿಕೊಂಡಿದ್ದಾರೆ.

ಡಂಬಳ ಹೋಬಳಿ ವ್ಯಾಪ್ತಿಯ ಡೋಣಿ ಗ್ರಾಮದ ರೈತರೊಬ್ಬರು ಮುಂಗಾರು ಹಂಗಾಮಿನ ಬೆಳೆವಿಮೆ ಕಟ್ಟದೇ ಹಾಗೆಯೇ ಬಿಟ್ಟಿದ್ದರು. ಆದರೆ ಅವರ ಸಂಬಂಧಿಗಳು ಬೆಳೆವಿಮೆ ಮಾಡಿಸಬೇಕು, ಅದರಿಂದ ನಿಮಗೆ ಹೆಚ್ಚಿನ ಅನುಕೂಲ ಎಂದು ತಿಳಿಸಿದ್ದಾರೆ. ಆ ರೈತ ಬೆಳೆವಿಮೆ ಪ್ರೀಮಿಯಂ(Crop Insurance Premium) ಭರ್ತಿ ಮಾಡಲು ಹೋದ ಸಂದರ್ಭದಲ್ಲಿ ಅನ್ಯವ್ಯಕ್ತಿಗಳು ಇವರ ಹೆಸರಿನಲ್ಲಿ ಬೆಳೆವಿಮೆ ಕಂತು ಪಾವತಿ ಮಾಡಿರುವುದು ಪತ್ತೆಯಾಗಿದೆ. ಇದರಿಂದ ಆಶ್ಚರ್ಯಗೊಂಡ ರೈತ ಈ ಕುರಿತು ಕೃಷಿ ಇಲಾಖೆ ಅಧಿಕಾರಿಗಳಿಗೆ ಡಿ. 9ರಂದು ದೂರು(Complaint) ಸಲ್ಲಿಸಿದ್ದಾರೆ.

Crop Insurance: ವಿಮೆ ಮಾಡಿಸುವ ಮುನ್ನವೇ ಬೆಳೆ ಹಾನಿ..!

ಡೋಣಿ ಗ್ರಾಮದ ರೈತ ಬಸಯ್ಯ ಗ್ವಾಲಗೇರಿಮಠ ಎಂಬ ರೈತರು ಈ ಕುರಿತು ಕೃಷಿ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಬಸಯ್ಯ ಅವರ ಜಮೀನಿನ(Land) ಸರ್ವೆ ನಂ. 214/1ರಲ್ಲಿ 2021-22ನೇ ಸಾಲಿನ ಮುಂಗಾರು(Monsoon) ಹಂಗಾಮಿನ ಬೆಳೆವಿಮೆ ಕಂತನ್ನು ರೈತರಿಗೆ ಗೊತ್ತಿಲ್ಲದಂತೆ ಯಾರೋ ಭರ್ತಿ ಮಾಡಿದ್ದಾರೆ. ಬೆಳೆವಿಮೆ ಕಂತನ್ನು ರೈತರು ಅಥವಾ ಅವರ ಪರವಾಗಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖದೀಮರು ವಿಮೆ ಕಂತನ್ನು ತಮ್ಮ ಬ್ಯಾಂಕ್‌ ಖಾತೆಗಳ ದಾಖಲೆಗಳನ್ನು ಅಪ್‌ಲೋಡ್‌ ಮಾಡಿದ್ದು, ಇದರಿಂದಾಗಿ ರೈತರಿಗೆ ವಿಮೆ ಹಣ ಭರ್ತಿ ಮಾಡಿರುವ ಮಾಹಿತಿಯಾಗಲಿ ಅಥವಾ ಬೆಳೆವಿಮೆ ಹಣ ಬಿಡುಗಡೆ ಕುರಿತು ಯಾವುದೇ ಮಾಹಿತಿಯೇ ಲಭ್ಯವಾಗುವುದಿಲ್ಲ. ಹಾಗಾಗಿ ಇದೊಂದು ಭಾರೀ ಮೋಸದ(Fraud) ಕೆಲಸವಾಗಿದ್ದು, ಇದರಿಂದ ನೇರವಾಗಿ ರೈತರೇ ಶೋಷಣೆಗೆ ಒಳಗಾಗುತ್ತಿದ್ದಾರೆ. ಬಸಯ್ಯ ಅವರಂತೆ ಹಲವು ರೈತರಿಗೆ ಮೋಸ ಮಾಡಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂಬ ಮಾತುಗಳು ರೈತರಿಂದ ಕೇಳಿಬರುತ್ತಿವೆ.

ವಿಮಾ ಕಂಪನಿ ನೌಕರರದ್ದೇ ಕರಾಮತ್ತು

ಡೋಣಿ ಗ್ರಾಮದಲ್ಲಿ ನಡೆದಿರುವ ಈ ಪ್ರಕರಣ ಇದೊಂದು ಉದಾಹರಣೆ ಮಾತ್ರ. ಇದೇ ರೀತಿ ಡಂಬಳ ಹೋಬಳಿ ವ್ಯಾಪ್ತಿಯಲ್ಲಿ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬೆಳೆವಿಮೆ ಅನುಷ್ಠಾನಕ್ಕೆ ನಿಯುಕ್ತಿಯಾಗಿರುವ ವಿಮಾ ಕಂಪನಿಯಲ್ಲಿ(Insurance company) ಕೆಲಸ ಮಾಡುವ ಸಿಬ್ಬಂದಿ, ಕೆಲ ಹಿರಿಯ ಅಧಿಕಾರಿಗಳು ನೇರವಾಗಿ ಇದರಲ್ಲಿ ಶಾಮೀಲಾಗಿದ್ದಾರೆ ಎಂಬುದು ರೈತರ ಆರೋಪ. ವಿಮೆ ಮಾಡಿಸಿದ ರೈತರ ಸರ್ವೇ ನಂಬರ್‌ಗಳನ್ನು ದುರ್ಬಳಕೆ ಮಾಡಿಕೊಂಡು ತಾವೇ ವಿಮೆ ತುಂಬಿದ್ದಾರೆ. ಅಲ್ಲದೇ ಕೋಟ್ಯಂತರ ರು. ಪಡೆಯುತ್ತಿದ್ದಾರೆ. ಅದಕ್ಕಾಗಿ ಜಿಲ್ಲಾಡಳಿತ ಈ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆಯನ್ನು ನಡೆಸಬೇಕು. ರೈತರಿಗೆ ನ್ಯಾಯ ಕೊಡಿಸಬೇಕು ಎನ್ನುವುದು ಡೋಣಿ ಸೇರಿದಂತೆ ಜಿಲ್ಲೆಯ ಬಹುತೇಕ ರೈತರ ಒತ್ತಾಯವಾಗಿದೆ.

ರೈತರಿಗೆ ಇನ್ನೂ ಬಾರದ ಬೆಳೆವಿಮೆ ಪರಿಹಾರ: ಅನ್ನದಾತರ ಆಕ್ರೋಶ

ಗೊತ್ತಿದ್ದವರ ಕೆಲಸ

ಡೋಣಿ ಗ್ರಾಮದ ರೈತ ತನ್ನ ಜಮೀನಿನಲ್ಲಿ ಬೆಳೆದಿರುವುದು ಗೋವಿನಜೋಳವನ್ನು. ಆದರೆ ವಿಮೆ ಕಂತು ತುಂಬಿರುವ ಕದೀಮರು ಕೆಂಪು ಮೆಣಸಿನಕಾಯಿ ಎಂದು ಭರ್ತಿ ಮಾಡಿದ್ದಾರೆ. ಅಂದರೆ ಮೆಣಸಿನಕಾಯಿ ಬೆಳೆ ಈ ಬಾರಿ ಹೆಚ್ಚು ಮಳೆಯಾಗಿ ಹಾನಿಯಾಗಿದೆ, ಅದಕ್ಕೆ ಪರಿಹಾರ ಬರುತ್ತದೆ ಎಂದು ರೈತ ಬೆಳೆಯದೇ ಇದ್ದ ಬೆಳೆಯನ್ನು ಬೆಳೆದಿದ್ದಾರೆ ಎಂದು ವಿಮೆ ಕಂತು ತುಂಬಿ ಹಣ ಲಪಟಾಯಿಸುತ್ತಿದ್ದಾರೆ. ಇದನ್ನೆಲ್ಲ ಗಮನಿಸಿದಲ್ಲಿ ಗೊತ್ತಿದ್ದವರೇ ಮಾಡಿರುವ ಕೆಲಸವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ಈಗಾಗಲೇ ನಾನು ಕೃಷಿ ಇಲಾಖೆ ಅಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಿದ್ದೇನೆ. ನನ್ನಂತೆ ಜಿಲ್ಲೆಯ ಇನ್ನುಳಿದ ರೈತರಿಗೂ ಅನ್ಯಾಯವಾಗಬಾರದು. ಜಿಲ್ಲಾಡಳಿತ ಕೂಡಲೇ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಅಂತ ರೈತ ಬಸಯ್ಯ ಗ್ವಾಲಗೇರಿಮಠ ತಿಳಿಸಿದ್ದಾರೆ.

ಡೋಣಿ ಗ್ರಾಮದ ರೈತರು ವಿಮೆ ಪರಿಹಾರದ ಕುರಿತು ಲಿಖಿತವಾಗಿ ದೂರು ನೀಡಿದ್ದು, ಈ ಕುರಿತು ಪರಿಶೀಲನೆ ನಡೆಸಲಾಗುವುದು ಅಂತ ಕೃಷಿ ಇಲಾಖೆ ಪ್ರಭಾರ ಅಧಿಕಾರಿ ವೀರೇಶ ಎಚ್‌ ಹೇಳಿದ್ದಾರೆ.