Crop Insurance: ವಿಮೆ ಮಾಡಿಸುವ ಮುನ್ನವೇ ಬೆಳೆ ಹಾನಿ..!

*    ಬೆಳೆ ವಿಮೆಯಂತೂ ನಮಗೆ ಸಿಗಲ್ಲ
*    ಸರ್ಕಾರವಾದರೂ ಹೆಚ್ಚಿನ ಪರಿಹಾರ ಕೊಡಲಿ: ಬೆಳೆವಿಮೆ ಮಾಡಿಸದ ರೈತರ ಗೋಳು
*    ಎನ್‌ಡಿಆರ್‌ಎಫ್‌ ಪರಿಹಾರ
 

Crop Damage Before Insurance in Dharwad District grg

ಶಿವಾನಂದ ಗೊಂಬಿ

ಹುಬ್ಬಳ್ಳಿ(ನ.26):  ‘ಹಿಂಗಾರಿಗೆ ಬೆಳೆವಿಮೆ ಮಾಡಸಾಕ ನ. 30 ಕೊನೆದಿನ ಐತಿ. ಇನ್ನು ಸಮಯಾ ಐತಿ ಬಿಡು ಅಂತ ಮಾಡಿಸಿರಲಿಲ್ಲ. ಆದ್ರ ಈಗ ನೋಡಿದ್ರ ಬೆಳೆವಿಮೆ ಮಾಡಸುವುದರೊಳಗ ಬೆಳೆನೇ ಹಾಳಾಗೈತಿ. ಏನ ಮಾಡಬೇಕೋ ಗೊತ್ತಾಗವಲ್ದು..!’

ಇದು ಧಾರವಾಡ ಜಿಲ್ಲೆಯ ಬೆಳೆವಿಮೆ ಮಾಡಿಸದ ರೈತರ ಗೋಳು. ಹಿಂಗಾರು ಬಿತ್ತನೆ ಮಾಡಿ, ಅದರ ದೇಖರೇಖಿ ಮಾಡುವಲ್ಲಿ ನಿರತರಾಗಿದ್ದ ರೈತರಿಗೆ ಬೆಳೆವಿಮೆ ಮಾಡಿಸಲು ಸಾಧ್ಯವಾಗಿರಲಿಲ್ಲ. ಹಿಂಗಾರಿನ ಪ್ರಮುಖ ಬೆಳೆಗಳಿಗೆ ವಿಮೆ ಮಾಡಿಸಲು ನವೆಂಬರ್‌ 30 ಕೊನೆ ದಿನವಾಗಿತ್ತು. ಹೀಗಾಗಿ ಇನ್ನೂ ಸಮಯವಿದೆಯಲ್ಲ ಆಮೇಲೆ ಮಾಡಿಸಿದರಾಯಿತು ಎಂದುಕೊಂಡು ಸುಮ್ಮನಿದ್ದ ರೈತರೀಗ ಅಕಾಲಿಕ ಮಳೆಯಿಂದ ಬೆಳೆಹಾನಿ ಅನುಭವಿಸುವಂತಾಗಿದೆ.

ಧಾರವಾಡ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಬರೋಬ್ಬರಿ 1,94,059 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಬೆಳೆದಿದ್ದಾರೆ. ಅದರಲ್ಲಿ ಅತಿ ಹೆಚ್ಚು ಪ್ರದೇಶದಲ್ಲಿ ಅಂದರೆ, 1.17 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕಡಲೆ ಬೆಳೆಯಲಾಗಿದ್ದರೆ, ಜೋಳವನ್ನು 35395 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿದೆ. ಇನ್ನು ಗೋದಿ 20715 ಹೆ, ಕುಸುಬಿ 9189 ಹೆ, ಮೆಕ್ಕೆಜೋಳ, ಸೂರ್ಯಕಾಂತಿಯನ್ನು ತಲಾ 3 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿದೆ.

Crop Insurance for Farmers: 15 ದಿನದೊಳಗೆ ರೈತರಿಗೆ ಬೆಳೆ ವಿಮೆ

ಕುಸುಬಿ, ಹುರಳಿ, ಸೂರ್ಯಕಾಂತಿ ಬೆಳೆಗಳಿಗೆ ಬೆಳೆವಿಮೆ ಮಾಡಿಸಲು ನ. 15 ಕೊನೆ ದಿನವಿತ್ತು. ಹೀಗಾಗಿ ಅದನ್ನು ಬೆಳೆದವರು ವಿಮೆ ಮಾಡಿಸಿದ್ದಾರೆ. ಇನ್ನು ಅತಿ ಹೆಚ್ಚು ಬೆಳೆದಿರುವ ಕಡಲೆ, ಜೋಳ ಹಾಗೂ ಗೋದಿ ಬೆಳೆಗಳಿಗೆ ವಿಮೆ ಮಾಡಿಸಲು ನ. 30 ಕೊನೆ ದಿನವಿತ್ತು. ಈ ಹಿನ್ನೆಲೆಯಲ್ಲಿ ಇನ್ನೂ ಸಮಯವಿದೆಯೆಲ್ಲ, ಮಾಡಿಸಿದರಾಯ್ತು ಎಂದುಕೊಂಡು ರೈತರು ಸುಮ್ಮನೆ ಇದ್ದರು. ಆದರೆ, ಅಷ್ಟರೊಳಗೆ ಸತತ ನಾಲ್ಕೈದು ದಿನ ಮಳೆ ಸುರಿದು ಬೆಳೆಯೆಲ್ಲ ಹಾಳಾಗಿದೆ. ಅತ್ತ ಬೆಳೆವಿಮೆ ಮಾಡಿಸಿದ್ದರೆ ವಿಮೆ ದುಡ್ಡಾದರೂ ಬರುತ್ತಿತ್ತು ಎಂಬ ಬೇಸರ ರೈತರಲ್ಲಿ ಮನೆ ಮಾಡಿದೆ. ಹಾಗಂತ ಯಾವ ರೈತರೂ ಬೆಳೆ ವಿಮೆ ಮಾಡಿಸಿಯೇ ಇಲ್ಲ ಅಂತೇನೂ ಅಲ್ಲ. ಕೆಲವರು ಮಳೆಗಿಂತ ಮುಂಚಿತವಾಗಿಯೇ ವಿಮೆ ಮಾಡಿಸಿಕೊಂಡಿದ್ದಾರೆ. ಅವರೀಗ ತಾವು ಸೇಫ್‌ ಎಂಬ ಭಾವನೆಯಲ್ಲಿದ್ದರೆ, ವಿಮೆ ಮಾಡಿಸದವರು ನಾವು ಮುಂಚಿತವಾಗಿಯೇ ಮಾಡಿಸಿಬಿಡಬೇಕಿತ್ತು ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

ಎನ್‌ಡಿಆರ್‌ಎಫ್‌ ಪರಿಹಾರ:

ವಿಮೆ ಮಾಡಿಸದೆ ಬೆಳೆಹಾನಿ ಅನುಭವಿಸಿದ ರೈತರಿಗೆ ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ನಿಯಮದ ಪ್ರಕಾರ ಹೆಕ್ಟೇರ್‌ಗೆ .6800 ನಂತೆ ಗರಿಷ್ಠ ಎರಡು ಹೆಕ್ಟೇರ್‌ಗೆ ಮಾತ್ರ ಪರಿಹಾರ ಕೊಡಲು ಬರುತ್ತದೆ. ಇಷ್ಟುದುಡ್ಡನ್ನು ಕೊಡಬಹುದಷ್ಟೇ ಎಂದು ಕೃಷಿ ಇಲಾಖೆ ತಿಳಿಸುತ್ತದೆ. ಬೆಳೆವಿಮೆ ಮಾಡಿಸಿದ ರೈತರಿಗೆ ಉತ್ತಮ ಪರಿಹಾರ ದೊರೆಯುತ್ತದೆ. ಇದು ಸಂತಸದ ವಿಚಾರ. ಅದರಂತೆ ವಿಮೆ ಮಾಡಿಸದೇ ಬೆಳೆಹಾನಿ ಅನುಭವಿಸಿದ ರೈತರಿಗೆ ಎನ್‌ಡಿಆರ್‌ಎಫ್‌ ಅಂತೆಲ್ಲ ನೋಡದೇ ಎಕರೆಗೆ .30 ಸಾವಿರ ಪರಿಹಾರ ನೀಡಬೇಕೆಂಬುದು ರೈತರ ಒಕ್ಕೊರಲಿನ ಆಗ್ರಹ. ಒಟ್ಟಿನಲ್ಲಿ ಬೆಳೆವಿಮೆ ಮಾಡಿಸುವ ಮುನ್ನವೇ ಬೆಳೆಹಾನಿಯಾಗಿರುವುದು ರೈತರಲ್ಲಿ ಬೇಸರವನ್ನುಂಟು ಮಾಡಿರುವುದಂತೂ ಸತ್ಯ.

Crop Loss : ಕಣದಲ್ಲೇ ಕೊಳೆತ ಬೆಳೆಗಳಿಗೆ ಸಿಗಲ್ಲ ಸರ್ಕಾರದ ಪರಿಹಾರ!

ನಾವ್‌ ಕಡಲೆ ಬೆಳೆದಿದ್ದೀವಿ. 30ನೆಯ ತಾರೀಖಿನವರೆಗೂ ಬೆಳೆವಿಮೆ ಮಾಡಿಸೋಕೆ ಅವಕಾಶವಿದೆ. ನಂತರ ಮಾಡಿಸಿದರಾಯ್ತು ಎಂದುಕೊಂಡಿದ್ದೆವು. ಆದರೆ, ಅಷ್ಟರೊಳಗೆ ಮಳೆ ಬಂದು ಬೆಳೆಯೆಲ್ಲ ಹಾಳಾಗೈತಿ. ಇನ್ನು ಸರ್ಕಾರ ಎಷ್ಟು ಪರಿಹಾರ ಕೊಡತೈತೋ ನೋಡಬೇಕು ಎಂದು ಕಡಲೆ ಬೆಳೆದ ರೈತ ಕಲ್ಮೇಶ ಹುಲ್ಜತ್ತಿ ತಿಳಿಸಿದ್ದಾರೆ. 

ವಿಮೆ ಮಾಡಿಸದ ಕೆಲ ರೈತರ ಬೆಳೆ ಕೂಡ ಹಾನಿಯಾಗಿದೆ. ಅವರಿಗೆ ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ಮೂಲಕ ಪರಿಹಾರ ನೀಡಲಾಗುವುದು. ಅದಕ್ಕಾಗಿ ರೈತರು ಎಷ್ಟುಸಾಧ್ಯವೋ ಅಷ್ಟುಬೇಗನೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಧಾರವಾಡ ಪ್ರಭಾರಿ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಹೇಳಿದ್ದಾರೆ.  
 

Latest Videos
Follow Us:
Download App:
  • android
  • ios