ಕಳೆಯಿಂದ ಕಲೆ, ಇಂಗ್ಲೆಂಡ್‌ನಲ್ಲೂ ಭಾರೀ ಬೆಲೆ!

ಅನುಪಯುಕ್ತ ಕಳೆ ಲಾಂಟಾನಕ್ಕೆ ಬಿಳಿಗಿರಿರಂಗನಬೆಟ್ಟಅರಣ್ಯದಲ್ಲಿರುವ ಬುಡಕಟ್ಟು ಜನರು ಕಲೆಯ ರೂಪ ಕೊಟ್ಟಿದ್ದಾರೆ. ಇದರಿಂದ ತಯಾರಾದ ವಸ್ತುಗಳಿಗೆ ವಿದೇಶದಲ್ಲಿ ಭಾರೀ ಬೆಲೆ ಇದೆ.

Tribes Use Lantana For furniture in biligiri rangana betta snr

ವರದಿ : ದೇವರಾಜು ಕಪ್ಪಸೋಗೆ

 ಚಾಮರಾಜನಗರ  (ಮಾ.22):  ಅದು ಅರಣ್ಯದಲ್ಲಿ ಬೆಳೆಯುವ ಅನುಪಯುಕ್ತ ಕಳೆ. ಅದಕ್ಕೆ ಬಿಳಿಗಿರಿರಂಗನಬೆಟ್ಟಅರಣ್ಯದಲ್ಲಿರುವ ಬುಡಕಟ್ಟು ಜನರು ಕಲೆಯ ರೂಪ ಕೊಟ್ಟಿದ್ದಾರೆ. ಇದರಿಂದಾಗಿ ದೇಶದಲ್ಲಷ್ಟೇ, ಅಲ್ಲ ವಿದೇಶದಲ್ಲೂ ಬೆಲೆ ಬಂದಿದೆ.!

ಅರಣ್ಯದಲ್ಲಿ ಈ ಗಿಡ ಬೆಳೆಯುವುದರಿಂದ ಇತರೆ ಗಿಡಗಳು ನಾಶವಾಗುತ್ತವೆ. ಪ್ರಾಣಿ ಪ್ರಕ್ಷಿಗಳಿಗೆ ಆಹಾರಕ್ಕೆ ತೀವ್ರವಾದ ಆಹಾರ ಸಮಸ್ಯೆ ಎದುರಾಗುತ್ತಿದೆ. ಇಂತಹದೊಂದು ಮಾರಕವಾದ ಗಿಡವನ್ನು ನಾಶ ಮಾಡ ಬೇಕು ಎಂದು ಅರಣ್ಯ ಇಲಾಖೆ, ವಿಜ್ಞಾನಿಗಳು ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ಸಂಶೋಧನೆ ಮಾಡಿದರೂ ಪ್ರಯೋಜನವಾಗಿಲ್ಲ. ಆದರೆ, ಅದೇ ಗಿಡದಿಂದ ಬುಡಕಟ್ಟು ಜನರು ಬಗೆ ಬಗೆಯ ಪಿಠೋಪಕರಣ ತಯಾರಿ ಮಾಡುತ್ತಿದ್ದಾರೆ. ಇಲ್ಲಿ ತಯಾರಾಗುವ ಪಿಠೋಪಕರಣ ವಿದೇಶಗಳಿಗೂ ರಫ್ತಾಗುತ್ತಿವೆ.

ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಚಾಮರಾಜನಗರ ತಾಲೂಕಿನ ಬೆಲ್ಲವತ್ತ ಗ್ರಾಮದಲ್ಲಿ ಬುಡಕಟ್ಟು ಜನರು ‘ಲಂಟಾನ’ದಿಂದ ಪಿಠೋಪಕರಣ ಜೊತೆಗೆ ಆನೆ ಸೇರಿದಂತೆ ವಿವಿಧ ಮಾದರಿಗಳನ್ನು ತಯಾರು ಮಾಡುವ ಮೂಲಕ ಕಳೆದ ನಾಲ್ಕು ತಿಂಗಳಲ್ಲಿ ಸುಮಾರು 17 ಆನೆಗಳನ್ನು ತಯಾರಿಸಿ ಇಂಗ್ಲೆಂಡ್‌ಗೆ ಕಳುಹಿಸಿ ಕೊಟ್ಟಿದ್ದಾರೆ. ಯಾವುದೇ ಬಣ್ಣ ಉಪಯೋಗಿಸದೆ ಬುಡಕಟ್ಟು ಜನರು ನ್ಯಾಚುರಲ್‌ ಆಗಿ ಪಿಠೋಪಕರಣ ತಯಾರಿಸುತ್ತಾರೆ.

ಬಿಳಿಗಿರಿರಂಗನ ಬೆಟ್ಟದಲ್ಲಿ ಸುವರ್ಣ ನ್ಯೂಸ್ - ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ .

ಮೊದಲೇ ಬುಕ್‌ ಮಾಡಿ ಬಣ್ಣ ಬೇಕು ಎಂದು ಹೇಳಿದರೆ ಆ ಬಣ್ಣವನ್ನು ಬಳಿದು ಮಾಲೀಕರಿಗೆ ಕೊಡುತ್ತಾ ಬಂದಿದ್ದಾರೆ. ವರ್ಷಪೂರ್ತಿ ಪಿಠೋಪಕರಣ ತಯಾರಿಕೆಯಲ್ಲಿ ಸುಮಾರು 20 ಕುಟುಂಬಗಳು ತೊಡಗಿವೆ. ಕೆಲವೊಂದು ಸಮಯ ಆರ್ಡರ್‌ ಪೂರೈಕೆ ಮಾಡಲು ಸಾಧ್ಯವಾಗದ ದಿನಗಳು ಇವೆ.

ಹೇಗೆ ತಯಾರಿಸುತ್ತಾರೆ?

ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೃಹತ್‌ ಪ್ರಮಾಣದಲ್ಲಿ ಬೆಳೆದಿರುವ ‘ಲಂಟಾನ’ದಿಂದಲೇ ಬಗೆ ಬಗೆಯ ಪಿಠೋಪಕರಣಗಳನ್ನು ಬುಡಕಟ್ಟು ಜನರು ತಯಾರಿಸುತ್ತಿದ್ದಾರೆ. ತಿಂಗಳಿಗೆ ಎರಡು ಬಾರಿ ಅರಣ್ಯಕ್ಕೆ ಹೋಗುವ ಬುಡಕಟ್ಟು ಜನರು ಒಂದು ತಿಂಗಳಿಗೆ ಬೇಕಾದ ‘ಲಂಟಾನ’ ಗಿಡವನ್ನು ಕತ್ತರಿಸಿ ಕೊಂಡು ವಾಹನದ ಮೂಲಕ ತರುತ್ತಾರೆ. ಇದಾದ ಬಳಿಕ ಮನೆಯ ಬಳಿ ದೊಡ್ಡ ಕಟಾಯಿಯೊಂದರ ನೀರಿನಲ್ಲಿ ಮುಳುಗಿಸಿ ಸುಮಾರು 5 ಗಂಟೆಗಳ ಕಾಲ ಸುಡುವ ನೀರಿನಲ್ಲಿ ಬೇಯಿಸುತ್ತಾರೆ. ನಂತರ ಹೊರ ತೆಗೆದ ‘ಲಂಟಾನ’ದ ಸಿಪ್ಪೆಯನ್ನು ಬಿಡಿಸಿ ನಂತರ ಪಿಠೋಪಕರಣ ತಯಾರು ಮಾಡುತ್ತೇವೆ ಎನ್ನುತ್ತಾರೆ ಬೆಲ್ಲವತ್ತ ಗ್ರಾಮದ ನಾಗಮ್ಮ.

ಬಣ್ಣ ರಹಿತವಾಗಿ ನಿರ್ಮಾಣಗೊಂಡಿರುವ ವಿವಿಧ ಬಗೆಯ ಪಿಠೋಪಕರಣಗಳು. ಹತ್ತು ಅಡಿಗೂ ಎತ್ತರವಾಗಿ ನಿರ್ಮಾಣವಾಗಿರುವ ಆನೆ. ಇವುಗಳ ಮಧ್ಯೆ ಒಂದಿಷ್ಟುಮಂದಿ ಕಾರ್ಮಿಕರು ಪಿಠೋಪಕರಣ ತಯಾರಿಕೆಯ ವಿವಿಧ ಹಂತದಲ್ಲಿ ತೊಡಗಿ ಕೊಂಡಿದ್ದಾರೆ. ಈ ಪಿಠೋಪಕರಣಗಳನ್ನು ನೋಡಿದರೆ ಇದ್ಯಾವುದೋ ಕಿರು ಬಿದಿರಿನಿಂದ ತಯಾರಿಸಿದ ಪಿಠೋಪಕರಣಗಳು, ಇಲ್ಲವೇ. ಬೆಲೆ ಬಾಳುವ ಮರಗಳಿಂದ ತಯಾರಿಸಿದ ಪಿಠೋಪಕರಣ ಎಂದೇನಿಸುವುದು ಸಾಮಾನ್ಯ. ಆದರೆ, ಇವ್ಯಾವುಗಳಿಂದಲೂ ಈ ಪಿಠೋಪಕರಣ ತಯಾರಾಗಿಲ್ಲ. ಬದಲಿಗೆ ಅರಣ್ಯದಲ್ಲಿ ಸಿಗುವ ‘ಲಂಟಾನ’ದಿಂದ ಈ ಪಿಠೋಪಕರಣ ತಯಾರಾಗಿವೆ.

ಅರಣ್ಯಕ್ಕೆ ಮಾರಿ, ಇದರಿಂದಲೇ ತಯಾರಿ!

ಅರಣ್ಯ ನಾಶ ಮಾಡುತ್ತಿರುವ ಈ ‘ಲಂಟಾನ’ವನ್ನು ನಾಶ ಮಾಡಲು ಅರಣ್ಯ ಇಲಾಖೆ ಕೋಟಿ ಕೋಟಿ ಖರ್ಚು ಮಾಡಿದೆ. ಇಡೀ ಸಂತತಿಯನ್ನ ನಿರ್ವಂಶ ಮಾಡಲು ವಿಜ್ಞಾನಿಗಳು ಎಷ್ಟೇ ಪ್ರಯತ್ನ ಪಟ್ಟರು ಸಾಧ್ಯವಾಗಿಲ್ಲ. ಈ ಅರಣ್ಯದ ಮಧ್ಯೆ ಈ ‘ಲಂಟಾನ’ ಗಿಡ ಬೆಳೆಯುವುದರಿಂದ ಈ ಗಿಡದ ನೆರಳಿನಲ್ಲಿ ಬೇರೆ ಯಾವುದೇ ಸಸ್ಯ ಬೆಳೆಯಲು ಬಿಡುವುದಿಲ್ಲ. ಹೀಗಾಗಿ ಅರಣ್ಯದಲ್ಲಿ ವನ್ಯಜೀವಿಗಳಿಗೆ, ಪಕ್ಷಿಗಳಿಗೆ ಆಹಾರಕ್ಕೆ ಸಮಸ್ಯೆ ಆಗುತ್ತಿದೆ. ಜೊತೆಗೆ ಅರಣ್ಯ ಪ್ರಮಾಣ ಕುಂಠಿತವಾಗುತ್ತಾ ಬಂದಿದೆ. ಅರಣ್ಯ ಸರ್ವನಾಶಕ್ಕೆ ಕಾರಣವಾಗಿರುವ ಈ ಗಿಡವನ್ನು ಸರ್ವನಾಶ ಮಾಡಲು ಎಷ್ಟೇ ಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ. ಆದರೆ, ಇದೇ ‘ಲಂಟಾನ’ವನ್ನು ಬಳಸಿ ಕೊಂಡು ಬುಡಕಟ್ಟು ಜನರು ಹಲವು ವರ್ಷಗಳಿಂದ ಜೀವನ ಸಾಗಿಸಿ ಕೊಂಡು ಬಂದಿದ್ದಾರೆ. ಅಂದ ಹಾಗೇ ಮಂಚ, ಬೃಹತ್‌ ಗಾತ್ರದ ಆನೆ, ಸೋಫಾ ಸೆಟ್‌, ಚೇರ್‌, ಟೇಬಲ್‌ ಹೀಗೆ ಬಗೆ ಬಗೆಯ ಪಿಠೋಪಕರಣಗಳು ತಯಾರಾಗಿರುವುದು ಇದೇ ‘ಲಂಟಾನ’ ಗಿಡದಿಂದ. ಈ ಪಿಠೋಪಕರಣಗಳು ಸುಮಾರು ಏಳುವರೆ ಸಾವಿರದಿಂದ ಆರಂಭವಾಗುತ್ತಿದ್ದು, ಯಾರಿಗೆ ಎಷ್ಟುಮೊತ್ತದ್ದು ಬೇಕೋ ಅಷ್ಟಕ್ಕೆ ಮಾಡಿಕೊಡಲಾಗುತ್ತದೆ.

ಒಟ್ಟಿನಲ್ಲಿ ಅರಣ್ಯಕ್ಕೆ ಮಾರಿಯಾದ ‘ಲಂಟಾನ’ ಬುಡಕಟ್ಟು ಜನರ ಪಾಲಿಗೆ ಅನ್ನದಾತವಾಗಿದೆ. ಕೂಲಿ ಕೆಲಸ ಅರಸಿ ಕೊಂಡು ಹತ್ತಾರು ಕಿಲೋಮೀಟರ್‌ ದೂರ ಹೋಗುತ್ತಿದ್ದ ಬುಡಕಟ್ಟು ಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ಸಿಕ್ಕಿದೆ. ಸಣ್ಣ ಪ್ರಮಾಣದಲ್ಲಿ ಇರುವ ಪಿಠೋಪಕರಣ ತಯಾರಿಕಾ ಘಟಕವನ್ನ ವಿಸ್ತರಣೆ ಮಾಡಲು ಸರ್ಕಾರ ಅನುದಾನ ನೀಡ ಬೇಕು ಎಂದು ಆಗ್ರಹಿಸಿದ್ದಾರೆ. ದೊಡ್ಡ ಪ್ರಮಾಣ ಯೂನಿಟ್‌ ಸ್ಥಾಪನೆಯಾದ್ರೆ ನೂರಾರು ಮಂದಿಗೆ ಉದ್ಯೋಗ ಕೊಡುವುದರ ಜೊತೆಗೆ ಹೊಟ್ಟೆಬಟ್ಟೆಗೆ ಸರಿಯಾಗಿರುವ ಕೂಲಿ ಮುಂದಿನ ದಿನಗಳಲ್ಲಿ ಕೈತುಂಬ ಹಣ ಸಂಪಾದನೆ ಮಾಡ ಬಹುದು ಎಂಬುದು ಬುಡಕಟ್ಟು ಜನರ ಅಗ್ರಹವಾಗಿದೆ.

Latest Videos
Follow Us:
Download App:
  • android
  • ios