ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಸಮಸ್ಯೆ ಬಗೆಹರಿದಿದೆ ಎಂದು ಶಾಸಕ ಎ.ಎಸ್.ಪೊನ್ನಣ್ಣ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸರ್ಕಾರದ ಪ್ರಾರಂಭದಲ್ಲಿ ಇದೆಲ್ಲಾ ಇರುತ್ತದೆ.

ಮಡಿಕೇರಿ (ಜೂ.06): ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಸಮಸ್ಯೆ ಬಗೆಹರಿದಿದೆ ಎಂದು ಶಾಸಕ ಎ.ಎಸ್.ಪೊನ್ನಣ್ಣ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸರ್ಕಾರದ ಪ್ರಾರಂಭದಲ್ಲಿ ಇದೆಲ್ಲಾ ಇರುತ್ತದೆ. ರಾಮಲಿಂಗಾರೆಡ್ಡಿ ಹಿರಿಯ ಶಾಸಕರು. ಅವರಿಗೆ ನೋವಾಗುವುದಕ್ಕೆ ಕಾರಣವಿದೆ ಎಂಬುದನ್ನು ಸಿಎಂ ಕೂಡ ಹೇಳಿದ್ದಾರೆ. ಅದೆಲ್ಲವನ್ನೂ ಮೀರಿ ಡಿಕೆ ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಸುಗಮವಾಗಿ ಕೆಲಸ ಮಾಡುತ್ತದೆ ಎಂದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾವು ಜನರಿಗೆ ಕೊಟ್ಟಿರುವ ಭರವಸೆಗಳನ್ನು ಈಡೇರಿಸುವುದೊಂದೇ ನಮ್ಮ ಗುರಿಯಾಗಿರಬೇಕು. ಜನರು ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿರುವುದು ಕೆಲಸ ಮಾಡಲು. ಯಾರಿಗೆ ಯಾವ ಖಾತೆ ಸಿಗಬೇಕು ಎನ್ನುವುದು ಪಕ್ಷದ ಆಂತರಿಕ ವಿಚಾರ. ಅದನ್ನು ಸಿಎಂ, ಮಾಜಿ ಸಿಎಂ ಮತ್ತು ಹೈಕಮಾಂಡ್ ನಿರ್ಧರಿಸುತ್ತದೆ. ನಾವು ಅದರ ಬಗ್ಗೆ ಅಷ್ಟು ಗಮನ ಹರಿಸಬೇಕಾಗಿಲ್ಲ ಎಂದರು.

ರಾಮಲಿಂಗಾರೆಡ್ಡಿ ರಾಜೀನಾಮೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂಬ ಶಾಸಕ ಎಚ್ ಕೆ ಪಾಟೀಲ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಪಾಟೀಲರು ಹೇಳಿರುವುದು ಸರಿ ಇದೆ. ಈ ಸಮಸ್ಯೆಯನ್ನು ಸಿಎಂ, ಮಾಜಿ ಸಿಎಂ ಮತ್ತು ವರಿಷ್ಠರು ಬಗೆಹರಿಸುತ್ತಾರೆ ಎಂದರು.

ಯಾವ ಪರಿಸ್ಥಿತಿ ಇದೆ

ಕಾಂಗ್ರೆಸ್ ಸರ್ಕಾರ ಜನಸ್ನೇಹಿಯಾಗಿ ಕೆಲಸ ಮಾಡುತ್ತಿಲ್ಲ. ವಿಧಾನಸಭೆ ವಿಸರ್ಜಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಪೊನ್ನಣ್ಣ, ಇವರ ಸರ್ಕಾರ ಇದ್ದಾಗ ಎಷ್ಟು ಬಾರಿ ವಿಸರ್ಜಿಸಬೇಕಾಗಿತ್ತು. ಇವತ್ತು ದೇಶದಲ್ಲಿ ಯಾವ ಪರಿಸ್ಥಿತಿ ಇದೆ. ಕೇಂದ್ರದಲ್ಲಿ ಪಾರ್ಲಿಮೆಂಟ್ ವಿಸರ್ಜಿಸಲಿ. ನಾವು ಇಲ್ಲಿ ವಿಧಾನಸಭೆ ವಿಸರ್ಜಿಸುತ್ತೇವೆ. ಎಲ್ಲರೂ ಪುನಃ ಚುನಾವಣೆಗೆ ಹೋಗೋಣ ಎಂದರು.

ಜನಪ್ರತಿನಿಧಿಗಳು ಐದು ವರ್ಷಗಳಿಗೆ ಆಯ್ಕೆಯಾಗಿರುತ್ತಾರೆ. ಕೆಲ ಗೊಂದಲಗಳು ಇರುತ್ತವೆ. ಇದು ಪ್ರಜಾಪ್ರಭುತ್ವ ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅವರ ಪಕ್ಷದಲ್ಲಿ ನಾಲ್ಕು ಗುಂಪು ಅದನ್ನು ಸರಿಪಡಿಸುವ ಕಡೆ ಗಮನಹರಿಸಲಿ. ವಿರೋಧ ಪಕ್ಷ ತಮ್ಮ ಜವಾಬ್ದಾರಿಯನ್ನು ನಿಭಾಯಿಸಲಿ. ಅದನ್ನು ನಾವು ಸ್ವಾಗತ ಮಾಡುತ್ತೇವೆ. ಆಡಳಿತ ಪಕ್ಷ ಮಾಡುವ ತಪ್ಪುಗಳನ್ನು ಗುರುತಿಸಿ ಟೀಕೆ ಮಾಡುವುದು ಸ್ವಾಗತಾರ್ಹ. ಆದರೆ ಅದನ್ನೇ ಇಟ್ಟುಕೊಂಡು ಸರ್ಕಾರದಲ್ಲಿ ಗೊಂದಲ ಮಾಡುವುದು ಸರಿಯಲ್ಲ. ದಾರಿ ತಪ್ಪಿದರೆ ತಿದ್ದುವಂತಹ ಕೆಲಸ ಮಾಡಲಿ ಎಂದು ಪೊನ್ನಣ್ಣ ವಿಜಯೇಂದ್ರಗೆ ತಿರುಗೇಟು ನೀಡಿದರು.