ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಕೊಪ್ಪಳದಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ ಉಂಟಾಗಿದ್ದು, ಅಕ್ಷರ ದಾಸೋಹ ಕೇಂದ್ರಕ್ಕೆ ಗ್ಯಾಸ್ ಸಮಸ್ಯೆ ತಟ್ಟಿದೆ. ಸಾವಿರಾರು ಮಕ್ಕಳಿಗೆ ಬಿಸಿಯೂಟ ತಯಾರಿಸಲು ಅಧಿಕಾರಿಗಳು ಗ್ಯಾಸ್ ಏಜೆನ್ಸಿ ಮುಂದೆ ಬೇಡಿದ್ರೂ, ಸ್ಟಾಕ್ ಇಲ್ಲದ ಕಾರಣ ಸಿಲಿಂಡರ್ ಸಿಕ್ಕಿಲ್ಲ.

ಕೊಪ್ಪಳ (ಮಾ.17) ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ನೇರವಾಗಿ ರಾಜ್ಯದ ಜನರ ಅಡುಗೆ ಮನೆಯ ಮೇಲೆ ಪರಿಣಾಮ ಬೀರಿದೆ. ಅಡುಗೆ ಅನಿಲ (LPG) ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ ಸಾಮಾನ್ಯ ಜನರು ಹಾಗೂ ಹೋಟೆಲ್‌ಗಳು ಸಂಕಷ್ಟಕ್ಕೆ ಸಿಲುಕಿದ್ದು, ಈಗ ಕೊಪ್ಪಳದ ಅಕ್ಷರ ದಾಸೋಹಕ್ಕೂ ಗ್ಯಾಸ್ ಸಮಸ್ಯೆ ತಟ್ಟಿದೆ.

Add Asianetnews Kannada as a Preferred SourcegooglePreferred

ಸಾವಿರಾರು ಮಕ್ಕಳಿಗೆ ನಿತ್ಯ ಅನ್ನದಾಸೋಹ ನಡೆಸುವ ಅಕ್ಷರ ದಾಸೋಹ ಕೇಂದ್ರಕ್ಕೆ ಕಳೆದ ಮೂರ್ನಾಲ್ಕು ದಿನಗಳಿಂದ ಸಿಲಿಂಡರ್ ಕೊರತೆ ಎದುರಾಗಿದೆ. ಕಮರ್ಷಿಯಲ್ ಸಿಲಿಂಡರ್‌ಗಳ ಪೂರೈಕೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಗ್ಯಾಸ್ ಇಲ್ಲದೆ ಬಿಸಿಯೂಟ ನಿಂತುಹೋಗುವ ಭೀತಿ ಎದುರಾಗಿದೆ.

ಏಜೆನ್ಸಿ ಮುಂದೆ ನಿಂತ ಅಧಿಕಾರಿಗಳು

ಸಿಲಿಂಡರ್ ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರು ಹಾಗೂ ಸಿಬ್ಬಂದಿ ಇಂದು ನೇರವಾಗಿ ಗ್ಯಾಸ್ ಏಜೆನ್ಸಿಗೆ ಬಂದಿದ್ದಾರೆ. ಕೊಪ್ಪಳದ ಹೊಸಪೇಟೆ ರಸ್ತೆಯಲ್ಲಿರುವ ಭಾರತ್ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ, ಹೇಗಾದರೂ ಮಾಡಿ ದಾಸೋಹಕ್ಕೆ ಸಿಲಿಂಡರ್ ಒದಗಿಸುವಂತೆ ಮನವಿ ಮಾಡಿದರು.

ಬರಿಗೈಲಿ ವಾಪಸ್ ಕಳಿಸಿದ ಏಜೆನ್ಸಿ ಮಾಲೀಕ!

ಅಧಿಕಾರಿಗಳು ಏಜೆನ್ಸಿ ಮುಂದೆ ಗ್ಯಾಸ್‌ಗೆ ಬೇಡಿದರೂ ಕೂಡ ತಕ್ಷಣಕ್ಕೆ ಸಿಲಿಂಡರ್ ನೀಡಲು ಮಾಲೀಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 'ಸದ್ಯಕ್ಕೆ ಸ್ಟಾಕ್ ಇಲ್ಲ, ಸಂಜೆ ನಾಲ್ಕು ಗಂಟೆಗೆ ಬನ್ನಿ ನೋಡೋಣ' ಎಂದು ಹೇಳಿ ಅಧಿಕಾರಿಗಳನ್ನು ವಾಪಸ್ ಕಳಿಸಿದ್ದಾರೆ. ಇದರಿಂದಾಗಿ ದಾಸೋಹದ ಸಿಬ್ಬಂದಿ ವಾಪಸ್ ಹೋಗಿದ್ದರಿಂದ ಸಿಲಿಂಡರ್ ಇಲ್ಲದೆ ಇಂದಿನ ಅಡುಗೆ ನಿರ್ವಹಣೆ ಹೇಗೆ ಎಂಬ ಪ್ರಶ್ನೆ ಎದುರಾಗಿದೆ.

ಸಾಮಾನ್ಯ ಜನರಿಗೂ ತಪ್ಪದ ಪರದಾಟ

ಅಕ್ಷರ ದಾಸೋಹ ಮಾತ್ರವಲ್ಲದೆ, ಜಿಲ್ಲೆಯಾದ್ಯಂತ ಎಲ್‌ಪಿಜಿ ಸಿಗದೆ ಹೋಟೆಲ್ ಮಾಲೀಕರು ಮತ್ತು ಸಾಮಾನ್ಯ ಜನರು ಪರದಾಡುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಸಂಘರ್ಷವು ಅಡುಗೆ ಅನಿಲದ ಸಪ್ಲೈ ಚೈನ್ ಕಡಿದುಹಾಕಿದ್ದು ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.